ಪೊಲೀಸ್ ಆಫೀಸರ್ ಆಗಬೇಕೆಂದು ಕನಸು ಕಂಡಿದ್ದ ಹುಡುಗ ಭಾರತದ ಬ್ರೂಸ್ಲಿ ಆದ ರೋಚಕ ಕಥೆ..!

in ಮನರಂಜನೆ/ಸಿನಿಮಾ 242 views

ಶ್ರೀನಿವಾಸ ಸರ್ಜಾ ಅಲಿಯಸ್ ಅಶೋಕ್ ಬಾಬು ಅಲಿಯಾಸ್ ಅರ್ಜುನ್ ಸರ್ಜಾ ಆಗಸ್ಟ್ 15, 1962 ರಲ್ಲಿ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಜನಿಸಿದರು. ನಮಗೆಲ್ಲ ತಿಳಿದಿರುವ ಕನ್ನಡದ ಖ್ಯಾತ ನಟ ಹಾಗೂ ಪೋಷಕ ನಟರಾಗಿದಂತಹ ಶಕ್ತಿಪ್ರಸಾದ್ ಅವರು. ಇವರ ತಾಯಿ ಲಕ್ಷ್ಮೀದೇವಮ್ಮ. ಇವರು ಆರ್ಟ್ ಟೀಚರ್ ಆಗಿದ್ದರು. ಇನ್ನೂ ಇವರ ಅಣ್ಣ ಕನ್ನಡ ಹಾಗೂ ನಿರ್ದೇಶಕ ದಿವಂಗತ ಕಿಶೋರ್ ಸರ್ಜಾ ಅವರು. ಇವರ ತಂಗಿ ನಟ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಅವರ ತಾಯಿ ಚಿಕ್ಕದೇವಮ್ಮ ಅಮ್ಮಾಜಿ ಅವರು. ಅರ್ಜುನ್ ಸರ್ಜಾ ಅವರ ಮೂಲ ಸ್ಥಳ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿಕೆನಹಳ್ಳಿ. ತಮ್ಮ 14ನೇ ವಯಸ್ಸಿನಲ್ಲಿಯೇ ತಮ್ಮ ಮಗ ಅರ್ಜುನ್ ಸರ್ಜಾ ಅವರನ್ನು ತಂದೆ ಶಕ್ತಿಪ್ರಸಾದ್ ಅವರು ಹನುಮಾನ್ ಗರಡಿ ವ್ಯಾಯಾಮ ಶಾಲೆಯಲ್ಲಿ ಸೇರಿಸುತ್ತಾರೆ. ಆ ವಯಸ್ಸಿನಲ್ಲಿ ಹನುಮಂತನ ಪರಮ ಭಕ್ತರಾಗಿದ್ದ ಅರ್ಜುನ್ ಸರ್ಜಾ ಅವರ ಆ ಗರಡಿ ಮನೆಯಲ್ಲಿದ್ದ ಆಂಜನೇಯನ ದೊಡ್ಡ ಫೋಟೋವಿನ ಮುಂದೆ ದಂಡ ಹೊಡೆದು ಶಾಶ್ಟಾಂಗ ನಮಸ್ಕಾರ ಹಾಕಿ ತಮ್ಮ ಕಸರತ್ತನ್ನು ಆರಂಭಿಸುತ್ತಿದ್ದರು.

Advertisement

Advertisement

ಅರ್ಜುನ್ ಸರ್ಜಾ ಅವರನ್ನು ಕೆಲವರು ಭಾರತದ ಬ್ರೂಸ್ಲಿ ಎಂದು ಸಹ ಕರೆಯುವುದುಂಟು. ಅರ್ಜುನ್ ಸರ್ಜಾ ಅವರ ತಮ್ಮ 17 ನೇ ವಯಸ್ಸಿನಲ್ಲಿಯೇ ಉತ್ತಮ ಮೈಕಟ್ಟನ್ನು ಹೊಂದಿದ್ದರು. ಶಕ್ತಿ ಪ್ರಸಾದ್ ಅವರು ತನ್ನ ಮಗ ಅರ್ಜುನ್ ಸರ್ಜಾ ಅವರನ್ನು ಪೊಲೀಸ್ ಆಫೀಸರ್ ಆಗಿ ಮಾಡಬೇಕು ಎಂಬ ಮಹದಾಸೆಯನ್ನು ಹೊಂದಿದ್ದರು. ಇನ್ನು ಅರ್ಜುನ್ ಸರ್ಜಾ ಅವರಿಗೂ ಸಿನಿಮಾ ನಟನಾಗಬೇಕೆಂಬ ಆಸೆ ಅಷ್ಟಾಗಿ ಇರಲಿಲ್ಲ. ಆದರೆ ಪೊಲೀಸ್ ಆಫೀಸರ್ ಆಗಬೇಕೆಂಬ ಆಸೆ ಅರ್ಜುನ್ ಸರ್ಜಾ ಅವರಿಗೆ ಕೂಡ ಇತ್ತಂತೆ. ಪುಟಾಣಿ ಏಜೆಂಟ್ 123 ಸಿನಿಮಾಗೆ ಅರ್ಜುನ್ ಸರ್ಜಾ ಅವರಿಗೆ ಬಾಲನಟರಾಗಿ ಅವಕಾಶ ಬರುತ್ತದೆ. ಆದರೆ ಅವರ ತಂದೆ ಶಕ್ತಿಪ್ರಸಾದ್ ಅವರು ಆಸಕ್ತಿ ತೋರುವುದಿಲ್ಲ. ನಂತರ ಆ ಸಿನಿಮಾ ಬಿಡುಗಡೆಯಾಗಿ ದೊಡ್ಡ ಹಿಟ್ ಆಗುತ್ತದೆ. ಈ ಸಿನಿಮಾ ನೋಡಿದ ಅರ್ಜುನ್ ಸರ್ಜಾ ನಾನೇ ಈ ಸಿನಿಮಾದಲ್ಲಿ ಆಕ್ಟ್ ಮಾಡಿದ್ದರೆ ಚೆನ್ನಾಗಿತ್ತು ಅಂತ ಅಂದುಕೊಳ್ಳುತ್ತಾರೆ.

Advertisement

ನಂತರ ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸಿಂಹದ ಮರಿ ಸೈನ್ಯ ಎಂಬ ಸಿನಿಮಾ ಮಾಡಲು ತಯಾರಿ ನಡೆಸುತ್ತಿರುತ್ತಾರೆ. ಇನ್ನು ಆ ಸಿನಿಮಾಗೆ ನಾಯಕನ ಹುಡುಕಾಟದಲ್ಲಿದ್ದ ನಿರ್ದೇಶಕರಿಗೆ ನಟ ಶಕ್ತಿ ಪ್ರಸಾದ್ ಅವರ ಮಗ ನೋಡಲು ತುಂಬಾ ಚೆನ್ನಾಗಿದ್ದಾನೆ ಹುಡುಗ ಒಳ್ಳೆಯ ಮೈಕಟ್ಟನ್ನು ಹೊಂದಿದ್ದಾನೆ ಎಂದು ಯಾರೋ ಹೇಳುತ್ತಾರೆ. ಅರ್ಜುನ್ ಸರ್ಜಾ ಅವರನ್ನು ನೋಡಿದ ನಿರ್ದೇಶಕರು ಏನಪ್ಪ ನಿನ್ನ ಹೆಸರು ಎಂದು ಕೇಳಿದಾಗ ಅಶೋಕ್ ಎಂದು ಅರ್ಜುನ್ ಸರ್ಜಾ ಅವರು ಹೇಳುತ್ತಾರೆ. ಸಿನಿಮಾದಲ್ಲಿ ಆಕ್ಟ್ ಮಾಡುತ್ತೀಯಾ ಎಂದು ಕೇಳಿದಾಗ ನಮ್ಮ ತಂದೆ ಒಪ್ಪಿಕೊಂಡರೆ ನಟಿಸುತ್ತೇನೆ ಎಂದು ಅರ್ಜುನ್ ಸರ್ಜಾ ಹೇಳುತ್ತಾರೆ.

Advertisement

ಅರ್ಜುನ್ ಸರ್ಜಾ ಅವರ ಮೈಕಟ್ಟನ್ನು ನೋಡಿದ ನಿರ್ದೇಶಕರು ಈ ಸಿನಿಮಾಗೆ ಅವರನ್ನೇ ಫಿಕ್ಸ್ ಮಾಡುತ್ತಾರೆ. ಮನೆಗೆ ಬಂದು ಅರ್ಜುನ್ ಸರ್ಜಾ ಅವರು ತಮ್ಮ ತಂದೆಗೆ ಈ ವಿಷಯ ತಿಳಿಸಿದರು. ಅವರು ಸರಿ ಎಂದು ಒಪ್ಪಿಕೊಂಡರು. ಹೀಗೆ 1981 ರಲ್ಲಿ ತೆರೆಕಾಣುವ ಸಿಂಹದ ಮರಿ ಸೈನ್ಯ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡುತ್ತಾರೆ. ಸಿಂಹದ ಮರಿ ಸೈನ್ಯ ಒಂದು ಅಡ್ವೆಂಚರ್ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಅವರು ಡೂಪ್ ಇಲ್ಲದೆ ನಟಿಸಿದ್ದರು.
ಸಿಂಹದ ಮರಿ ಸೈನ್ಯ ಚಿತ್ರದಲ್ಲಿ ಅರ್ಜುನ್ ಎಂಬ ಪಾತ್ರದಲ್ಲಿ ನಟಿಸುವ ಮೂಲಕ ಅಶೋಕ್ ಸರ್ಜಾ ಅವರು ಅರ್ಜುನ್ ಸರ್ಜಾ ಎಂದು ಸಿನಿಮಾರಂಗಕ್ಕೆ ಪರಿಚಯವಾಗುತ್ತಾರೆ. ನಂತರ 1983 ರಲ್ಲಿ ಆಶಾ, ಪ್ರೇಮಯುದ್ಧ ಹಾಗೂ 1984 ಪೂಜಾಫಲ, ಪ್ರೇಮಜ್ಯೋತಿ, ಮಳೆ ಬಂತು ಮಳೆ ಪ್ರಳಯಾಂತಕ ಚಿತ್ರಗಳಲ್ಲಿ ನಟಿಸುತ್ತಾರೆ.

ನಂತರ 1984 ರಲ್ಲಿ ತಮಿಳಿನಲ್ಲಿ ನಟಿಸಲು ಅವಕಾಶ ಬರುತ್ತದೆ. ಆದರೆ ಅರ್ಜುನ್ ಸರ್ಜಾ ಅವರಿಗೆ ತಮಿಳಿನಲ್ಲಿ ನಟಿಸಲು ಇಷ್ಟವಿರುವುದಿಲ್ಲ. ಆದರೆ ಅರ್ಜುನ್ ಸರ್ಜಾ ಅವರ ತಂದೆ ಶಕ್ತಿಪ್ರಸಾದ್ ಅವರು ತಮಿಳಿನಲ್ಲಿ ನಟಿಸಲು ಪ್ರೋತ್ಸಾಹಿಸುತ್ತಾರೆ. ತಮಿಳು ನಿರ್ದೇಶಕ ರಾಮ್ ನಾರಾಯಣ್ ಎಂಬುವವರ ನಂದ್ರಿ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಅರ್ಜುನ್ ಸರ್ಜಾ ಅವರು ನಟಿಸುತ್ತಾರೆ. ನಂತರ ಕೆಲವು ತಮಿಳು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಾರೆ. ಇದಾದ ನಂತರ ಇವರಿಗೆ ತೆಲುಗಿನಲ್ಲಿಯೂ ಆಫರ್ ಬರುತ್ತದೆ. ನಂತರ ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಾಪಿಲ್ಲೆಯ ಗೋಪಾಲುಡು ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ತೆಲುಗಿನಲ್ಲಿ ನಟಿಸುತ್ತಾರೆ. ಕನ್ನಡ ಸಿನಿಮಾಗಳಿಗಿಂತಲೂ ತೆಲುಗು-ತಮಿಳಿನಲ್ಲಿ ಆಫರ್ ಗಳು ಹೆಚ್ಚಾಗಿ ಬರುತ್ತದೆ.

ಇದೇ ಸಮಯದಲ್ಲಿ ರಥಸಪ್ತಮಿ ಚಿತ್ರದ ನಟಿ ಹಾಗೂ ಕನ್ನಡದ ಹಿರಿಯ ನಟ ರಾಜೇಶ್ ಅವರ ಪುತ್ರಿ ನಿವೇದಿತಾರವರ ಪರಿಚಯವಾಗುತ್ತದೆ. ಅರ್ಜುನ್ ಸರ್ಜಾ ಅವರು ನಿವೇದಿತ ಅವರನ್ನು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ನಂತರ ಅರ್ಜುನ್ ಸರ್ಜಾ ಅವರು ತಮಿಳಿನಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯುತ್ತಾರೆ. ಇನ್ನೂ ಅರ್ಜುನ್ ಸರ್ಜಾ ಅವರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹೀಗೆ ಮೂರು ಕಡೆಗಳಲ್ಲಿ ಒಂದೇ ದಿನ 7 ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಇವರ ಈ ಡೆಡಿಕೇಷನ್ ಅನ್ನು ಎಲ್ಲರೂ ಮೆಚ್ಚಲೇಬೇಕು.

ಸಿಂಹದ ಮರಿ ಸೈನ್ಯ, ಪ್ರೇಮಯುದ್ಧ, ಪ್ರಳಯಾಂತಕ, ನಾ ನಿನ್ನ ಪ್ರೀತಿಸುವೆ, ಪ್ರೇಮಾಗ್ನಿ, ಪೊಲೀಸ್ ಲಾಕಪ್, ಅಳಿಮಯ್ಯ, ವಾಯುಪುತ್ರ, ಅಟ್ಟಹಾಸ ಹಾಗೂ ಕುರುಕ್ಷೇತ್ರ ಇವರು ಕನ್ನಡದಲ್ಲಿ ನಟಿಸಿದ ಮುಖ್ಯ ಚಿತ್ರಗಳು. ಇನ್ನು ಸಿನಿಮಾ ನಿರ್ದೇಶಕರಾಗಿಯೂ ಸಹ ಗುರುತಿಸಿಕೊಂಡಿರುವ ಇವರು ತಮಿಳು, ಕನ್ನಡ ಹಾಗೂ ತೆಲುಗಿನಲ್ಲಿ ಸುಮಾರು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು 2018 ರಲ್ಲಿ ಕನ್ನಡದಲ್ಲಿ ಪ್ರೇಮಬರಹ ಸಿನಿಮಾವನ್ನು ನಿರ್ದೇಶಿಸಿದರು. ತಮಿಳು,ತೆಲುಗು, ಕನ್ನಡದ 9 ಚಿತ್ರಗಳಿಗೆ ನಿರ್ಮಾಪಕರಾಗಿದ್ದಾರೆ. 1998 ರಲ್ಲಿ ಕನ್ನಡದಲ್ಲಿ ಇವರ ಅಣ್ಣ ಕಿಶೋರ್ ಸರ್ಜಾ ಅವರು ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾ ತುತ್ತ-ಮುತ್ತ ಸೇರಿದಂತೆ ಕನ್ನಡದ 3 ಸಿನಿಮಾಗಳಿಗೆ ಅರ್ಜುನ್ ಸರ್ಜಾ ಅವರು ನಿರ್ಮಾಪಕರಾಗಿದ್ದಾರೆ.

ಹೀಗೆ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಹಂಚಿಕೆದಾರರಾಗಿ ಅರ್ಜುನ್ ಸರ್ಜಾ ಸೌತ್ ಇಂಡಿಯನ್ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಇನ್ನು ಅರ್ಜುನ್ ಸರ್ಜಾ ಹಾಗೂ ನಿವೇದಿತಾ ಅವರಿಗೆ ಎರಡು ಹೆಣ್ಣುಮಕ್ಕಳು. ಐಶ್ವರ್ಯ ಹಾಗೂ ಅಂಜನಾ. ಇನ್ನು ಇವರ ತಂಗಿಯ ಮಕ್ಕಳಾದ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಅವರು ಅರ್ಜುನ್ ಸರ್ಜಾ ಅವರ ಸಲಹೆ ಹಾಗೂ ಪ್ರೋತ್ಸಾಹದಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆದಿದ್ದಾರೆ. ಇನ್ನು ಕಳೆದ ಐದು ತಿಂಗಳ ಹಿಂದೆ ನಿಧನರಾದ ಚಿರಂಜೀವಿ ಸರ್ಜಾ ಅವರ ಸಾವಿನಿಂದ ಅರ್ಜುನ್ ಸರ್ಜಾ ಅವರು ತುಂಬಾ ನೊಂದಿದ್ದರು. ಅರ್ಜುನ್ ಸರ್ಜಾ ಅವರು ಚಿರು ಹಾಗೂ ಧ್ರುವ ಅವರನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು.

– ಸುಷ್ಮಿತಾ

Advertisement
Share this on...