ಅಲ್ಲಮ ಸಿನೆಮಾ ಮತ್ತು ಬಸವ ಅನುಯಾಯಿಗಳು

in ಸಿನಿಮಾ 421 views

ಟಿ.ಎಸ್.ನಾಗಾಭರಣ ನಿರ್ದೇಶನದ ‘ಅಲ್ಲಮ’ ಮತ್ತೊಮ್ಮೆ ನೋಡಿದೆ. ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಚಿತ್ರ ತಂಡದೊಂದಿಗೆ ನೋಡಿ ಬರೆದಿದ್ದೆ ಕೂಡ.

Advertisement

ಇತ್ತೀಚಿಗೆ ಅಲ್ಲಮನ ವಚನಗಳ ವ್ಯಾಖ್ಯಾನ ಮತ್ತು ವೈಯಕ್ತಿಕ ಧ್ಯಾನಾಸಕ್ತಿಯ ಕಾರಣದಿಂದ ಅಲ್ಲಮ ಮತ್ತು ಶರಣರು ಇನ್ನೂ ಹೆಚ್ಚು ಹತ್ತಿರವಾಗುತ್ತಿದ್ದಾರೆ. ವೈಚಾರಿಕ ಒತ್ತಡಗಳ ಅಭಿಪ್ರಾಯ ಭರದಲ್ಲಿ ಶರಣರ ಆಧ್ಯಾತ್ಮಿಕ ಮೌಲ್ಯಗಳನ್ನು ಅರಿಯಲು ನಾವು ಬಹುತೇಕ ವಿಫಲರಾಗುತ್ತಿದ್ದೇವೆ.  ಜಾತ್ಯಾತೀತ ಮತ್ತು ಸಮಾನತೆ ಜೊತೆಗೆ ಶರಣರು ಸಮಾಜ ಕಟ್ಟಲು ಶಿವಯೋಗದ ಮೂಲಕ ಕುಂಡಲಿನಿ ಧ್ಯಾನಕ್ಕೆ ಹೆಚ್ಚು ಮಹತ್ವ ನೀಡಿ ಅನುಭವ ಮಂಟಪದ ಪ್ರಮುಖ ಅರ್ಹತೆ ಎಂದು ಪರಿಗಣಿಸಿದ್ದರು.

Advertisement

 

Advertisement

Advertisement

 

ಅಧ್ಯಾತ್ಮ ಶಕ್ತಿ ಮೂಲಕ ಶರಣರು ತಮ್ಮ ಆತ್ಮಬಲ ಹೆಚ್ಚಿಸಿಕೊಂಡಿದ್ದರು.‌ ಕೇವಲ ಸಾಮಾಜಿಕ ಚಳುವಳಿ, ಬುದ್ಧಿಮತ್ತೆ ಮತ್ತು ವೈಚಾರಿಕ ಹೋರಾಟ ಎಂಬ ಭ್ರಮೆ ಇರಲಿಲ್ಲ.
ಪ್ರತಿಯೊಂದು ಕಾಲದ ಧಾರ್ಮಿಕ ಯುಗಕ್ಕೆ ತಾತ್ಕಾಲಿಕ ಅಂತ್ಯ ಇದೆ ಎಂಬುದನ್ನು ಬೌದ್ಧ ಧರ್ಮದ ಬೆಳವಣಿಗೆಯಿಂದ ಅರ್ಥ ಮಾಡಿಕೊಂಡಿದ್ದರು. ಎಲ್ಲ ಕಾಲದಲ್ಲಿ ಇರುವ ಧಾರ್ಮಿಕ ಮೂಲಭೂತವಾದಿಗಳು ಪ್ರಗತಿಪರ ವಿಚಾರಗಳನ್ನು ಮುಗಿಸಲು ರಾಜಸತ್ತೆಯನ್ನು ಬಳಸಿಕೊಳ್ಳುತ್ತಾರೆ ಎಂಬ ಸತ್ಯ ಬಸವಣ್ಣ ಮತ್ತು ಶರಣರಿಗೆ ಗೊತ್ತಿತ್ತು. ವರ್ಣಸಂಕರ ಒಂದು ನೆಪ ಅಷ್ಟೇ.

 

 

ಕಾಲಜ್ಞಾನಿ ಅಲ್ಲಮನ ಆಳವಾದ ತಂತ್ರ ವಿದ್ಯೆಗಳನ್ನು ಒಪ್ಪದವರೂ ಇದ್ದರು, ಆದರೆ ಅಲ್ಲಮನ ಜ್ಞಾನದ ಹರವು ಬಸವಣ್ಣನಿಗೆ ಗೊತ್ತಿತ್ತು.  ಕರ್ಮ ಮಾರ್ಗದ ಜೊತೆಗೆ ಅಲ್ಲಮನ ಭಕ್ತಿ ಮಾರ್ಗದ ಪಥ ಕೂಡ ಅಷ್ಟೇ ಪ್ರಮುಖ ಎಂಬುದನ್ನು ಬಸವಣ್ಣ ಅರ್ಥ ಮಾಡಿಕೊಂಡಿದ್ದ. ಅದೇ ಎಳೆ ಹಿಡಿದು ಮತ್ತೊಮ್ಮೆ ಅಲ್ಲಮ ಸಿನೆಮಾ ವೀಕ್ಷಿಸಿದೆ. ಸಿನಿಮಾ ಮಾಧ್ಯಮ ನೀಟಾದ ಚಿತ್ರಕಥೆ ಬೇಡುತ್ತದೆ. ಕಾದಂಬರಿ ತರಹ ವಿಸ್ತಾರವಾದ ವಿವರಣೆ ಸಿನಿಮಾಕ್ಕೆ ಅಸಾಧ್ಯ. ಕಾಲ ಪರಿಮಿತ ಇಟ್ಟುಕೊಂಡು ಸಿನಿಮಾ ಮಾಡುವುದು ಅನಿವಾರ್ಯ.

 

 

ಹತ್ತಾರು ಮೂಲಗಳಿಂದ ಅಲ್ಲಮ ಚಿತ್ರಕಥೆ ಹೆಣೆಯಲಾಗಿದೆ. ಬಹು ವಿಸ್ತಾರವಾದ ಆಯಾಮ ಹೊಂದಿರುವ ಜೀವನವನ್ನು ಅವಸರದಲ್ಲಿ ಕಟ್ಟಿ ಕೊಡುವುದು ಸಿನೆಮಾದ ಮಿತಿ.
ಅದ್ಭುತ ಆಧುನಿಕ ತಂತ್ರಜ್ಞಾನದ ಗ್ರಾಫಿಕ್ಸ್ ಬಳಸಿ ಶ್ರೀಮಂತಿಕೆ ಹೆಚ್ಚಿಸಲಾಗಿದೆ. ಒಟ್ಟು ಅಲ್ಲಮನ ಮೇರು ವ್ಯಕ್ತಿತ್ವ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಸಿನಿಮಾ ಬಿಡುಗಡೆ ಆದ ಮೇಲೆ ಕೆಲವು ದೋಷಗಳ ವೈಭವೀಕರಿಸಿ ಕೆಲವು ಅಭಿಮಾನಿಗಳು ಸಿನೆಮಾ ನೋಡದ ವಾತಾವರಣ ಸೃಷ್ಟಿ ಮಾಡಿದರು. ಒಮ್ಮೆ ನೋಡಲೇಬೇಕಾದ ಜವಾಬ್ದಾರಿ ಕಳೆದುಕೊಂಡರು.

 

 

ಅಲ್ಲಮ ಬಲಗೈಯಲ್ಲಿ ಲಿಂಗ ಹಿಡಿದಿದ್ದು ಮತ್ತು ಮಾಯೆ ಅಲ್ಲಮನ ರೋಮ್ಯಾಂಟಿಕ್ ಸನ್ನಿವೇಶವನ್ನು ಕೆಲವರು ಸಹಿಸಿಕೊಳ್ಳಲಿಲ್ಲ, ಆದರೆ ಈ ಹಿಂದೆ ಮಾತಾಜಿ ತಯಾರಿಸಿದ ಬಸವಣ್ಣ ಸಿನೆಮಾದ ಡ್ಯುಯಟ್ ಹಾಡಿಗೆ ಇವರು ಮೌನವಾಗಿದ್ದರು. ಇಲ್ಲಿ ಈ ದೃಶ್ಯ ಅಲ್ಲಮನ ಸಹನೆಯನ್ನು ಗ್ರಹಿಸಲು ನೆರವಾಗುತ್ತದೆ ಜೊತೆಗೆ ಕಮರ್ಷಿಯಲ್ ಉದ್ದೇಶವೂ ಇರಬಹುದು ಆದರೆ ತಕರಾರು ತೆಗೆಯುವಷ್ಟು ಭೀಕರ ಅಲ್ಲವೇ ಅಲ್ಲ. ಆ ದೃಶ್ಯದಲ್ಲಿ ಇರುವುದು ಅಲ್ಲಮ ಅಲ್ಲ ಅವನ ಗೆಳೆಯ ಬಹುರೂಪಿ ಎಂಬುದು ಗೊತ್ತಾದ ಮೇಲಾದರೂ ಸಹಿಸಿಕೊಳ್ಳಬಹುದಿತ್ತು.

 

 

ವೈಯಕ್ತಿಕವಾಗಿ ನನಗೆ ಎರಡನೇ ಭಾಗ ತುಂಬಾ ಅವಸರ ಎನಿಸಿತು,ಅನುಭವ ಮಂಟಪದ ಸನ್ನಿವೇಶದಲ್ಲಿ ಶರಣರ ಸಂಖ್ಯೆ ತುಂಬಾ ಕಡಿಮೆ ಎನಿಸಿ, ಅದರ ವೈಶಾಲ್ಯತೆ ಗೋಚರವಾಗುವುದಿಲ್ಲ.
ಅಲ್ಲಮನನ್ನು ಅನುಭವ ಮಂಟಪಕ್ಕೆ ಕರೆ ತರುವಾಗಲೂ ಆ ಕೊರತೆ ಎದ್ದು ಕಾಣಿಸಿತು. ಅಕ್ಕಮಹಾದೇವಿ ಪಾತ್ರ ಪೋಷಣೆ ಕೂಡ ಗಟ್ಟಿ ಇರಲಿಲ್ಲ. ಇದನ್ನು ಹೊರತು ಪಡಿಸಿ ಅಲ್ಲಮನ ಘನ ವ್ಯಕ್ತಿತ್ವದ ವಿಶಾಲತೆ ಅರ್ಥ ಮಾಡಿಕೊಳ್ಳಲು ಎಲ್ಲ ಮಿತಿಗಳ ಮರೆತು ಸಿನೆಮಾ ನೋಡಬೇಕಿತ್ತು.

ಪ್ರತಿಯೊಂದನ್ನು ಪೂರ್ವಗ್ರಹದ ಜೊತೆಗೆ, ವಿಪರೀತ ವೈಚಾರಿಕ ಮಾನದಂಡ ಬಳಸಿ ನೋಡುವ ಮನೋಧರ್ಮ ಅಕ್ಷಮ್ಯ. ಸಿನೆಮಾ ನೋಡುವಾಗ ಕಾದಂಬರಿ ಓದುವ ಕಲ್ಪನೆ ಇಟ್ಟುಕೊಳ್ಳಬಾರದು. ಅದು ಕೇವಲ ಸಿನೆಮಾ ಅಷ್ಟೇ.

 

 

ಅಲ್ಲಮನ ಪಾತ್ರಧಾರಿ ಡಾಲಿ ಧನಂಜಯನ ಅಭಿನಯ ಅದ್ಭುತ. ಪ್ರತಿಯೊಂದನ್ನು ಅನುಭವಿಸಿ ನಟಿಸಿದ್ದಾನೆ. ಉಳಿದ ಪಾತ್ರಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಹೋಗಲಿ ಆವಾಗ ನೀವು ದೊಡ್ಡ ಪರದೆ ಮೇಲೆ ಸಿನೆಮಾ ನೋಡಲಿಲ್ಲ ಈಗ ಕೊರೋನಾ ರಜೆಯಲ್ಲಿ ಮನೆಯಲ್ಲಿ ಇರುವ ಅವಕಾಶ ಬಳಸಿಕೊಂಡು YouTube ನಲ್ಲಿ ಸಿನೆಮಾ ನೋಡಿ ಅಲ್ಲಮ ಮತ್ತು ಆಧ್ಯಾತ್ಮದ ಹರವು ಗ್ರಹಿಸಿಕೊಳ್ಳಲು ನಿವೇದಿಸಿಕೊಳ್ಳುತ್ತೇನೆ.

#ಸಿದ್ದು_ಯಾಪಲಪರವಿ.

Advertisement
Share this on...