‘ಪುಟ್ಟಗೌರಿ ಮದುವೆ’ ಧಾರಾವಾಹಿ ನಿಮಗೆ ನೆನಪಿರಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸುಧೀರ್ಘ ವರ್ಷಗಳ ಕಾಲ ಪ್ರಸಾರವಾದ ಈ ಧಾರಾವಾಹಿ ಈಗ ಮಂಗಳಗೌರಿ ಮದುವೆ ಆಗಿ ಬದಲಾಗಿದೆ. ಬಾಲ್ಯವಿವಾಹದ ಬಗ್ಗೆ ತೆಗೆಯಲಾದ ಈ ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರದಲ್ಲಿ ರಂಜನಿ ರಾಘವನ್ ನಟಿಸಿದ್ದರು. ಆ ಧಾರಾವಾಹಿ ಮೂಲಕವೇ ರಂಜನಿ ರಾಜ್ಯದ ಜನರಿಗೆ ಮತ್ತಷ್ಟು ಹತ್ತಿರವಾದರು. ರಂಜನಿ ಈಗ ಕಿರುತೆರೆಯೊಂದಿಗೆ ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ. ಸಿನಿಮಾ ಚಿತ್ರೀಕರಣವಾಗಲೀ, ಧಾರಾವಾಹಿ ಚಿತ್ರೀಕರಣವಾಗಲಿ ಅಲ್ಲಿ ಒಟ್ಟಿಗೆ ಕೆಲಸ ಮಾಡುವ ಕಲಾವಿದರು ಒಂದು ಕುಟುಂಬದಂತೆ ಇರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆ ಕಲಾವಿದರ ಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ. ಬೆಳಗ್ಗೆ ಸೆಟ್ಗೆ ಬಂದರೆ ಇವರು ಮತ್ತೆ ಮನೆಗೆ ವಾಪಸಾಗುವುದು ರಾತ್ರಿಯೇ. ಅಲ್ಲಿವರೆಗೂ ಇವರೆಲ್ಲಾ ಒಟ್ಟಿಗೆ ಇರುತ್ತಾರೆ. ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ಹರಟೆ ಹೊಡೆಯುತ್ತಾರೆ. ಆದರೆ ಧಾರಾವಾಹಿ ಮುಗಿದ ನಂತರ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗುವ ಇವರು ಮತ್ತೆ ಭೇಟಿ ಆಗುವುದೇ ಅಪರೂಪ. ಯಾವುದಾದರೂ ಕಾರ್ಯಕ್ರಮದಲ್ಲಿ ಭೇಟಿ ಮಾಡುವ ಅವಕಾಶವಿರುತ್ತದೆ. ಆದರೆ ಮತ್ತೆ ಕೆಲವರು ನಿರಂತರ ಸಂಪರ್ಕದಲ್ಲಿರುತ್ತಾರೆ.
‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಅಪ್ಪ-ಮಗಳ ಪಾತ್ರ ಮಾಡಿದ್ದ ರಂಜನಿ ರಾಘವನ್ ಹಾಗೂ ಗೋಪಾಲಕೃಷ್ಣ ಕೂಡಾ ಬಹಳ ದಿನಗಳ ನಂತರ ಭೇಟಿ ಆಗಿದ್ದಾರೆ. ಬೆಂಗಳೂರಿನ ಕೆಫೆಯೊಂದರಲ್ಲಿ ಆನ್ಸ್ಕ್ರೀನ್ ಅಪ್ಪನನ್ನು ಭೇಟಿಯಾಗಿರುವ ರಂಜನಿ ರಾಘವನ್ ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಸೂಕ್ತ ವ್ಯಕ್ತಿಗಳೊಂದಿಗೆ ಮಾಡುವ ಧೀರ್ಘ ಸಂಭಾಷಣೆ ಎಂದಿಗೂ ಅತ್ಯಮೂಲ್ಯ, ನನ್ನ ಬೆಸ್ಟ್ ಫ್ರೆಂಡ್ ಗೋಪಾಲಕೃಷ್ಣ ಅವರನ್ನು ಇಂದು ಭೇಟಿ ಮಾಡಿದ್ದೆ” ಎಂದು ರಂಜನಿ ತಾವು ಹಂಚಿಕೊಂಡಿರುವ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ರಂಜನಿ ಫೋಟೋಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ರಂಜನಿ ತಾಯಿ ಭಾಗ್ಯ ಪಾತ್ರ ಮಾಡಿದ್ದ ಹರಿಣಿ ಶ್ರೀಕಾಂತ್ “ನೀವಿಬ್ಬರೇ ಮೀಟ್ ಮಾಡಿದ್ದೀರಾ,ಇರಲಿ” ಎಂದು ಬೇಸರ ವ್ಯಕ್ತಪಡಿಸುವಂತೆ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಂಜನಿ “ನಿಮ್ಮನ್ನು ಬಹಳ ಮಿಸ್” ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ” ಅಪ್ಪ-ಮಗಳು ಜೊತೆ ಸೇರಿ ನಿಮ್ಮನ್ನು ಮರೆತಿದ್ದಾರೆ ನೋಡಿ” ಎಂದು ಅಭಿಮಾನಿಯೊಬ್ಬರು ಹರಿಣಿ, ರಂಜನಿ ಹಾಗೂ ಗೋಪಾಲಕೃಷ್ಣ ಅವರ ಕಾಲೆಳೆದಿದ್ದಾರೆ. ಗೋಪಾಲಕೃಷ್ಣ ಕೂಡಾ ಈ ಪೋಸ್ಟ್ಗೆ ಕಮೆಂಟ್ ಮಾಡಿ “ನಿಮ್ಮನ್ನು ಭೇಟಿ ಆಗಿದ್ದು ಖುಷಿ ಆಯ್ತು ಮೇಡಂ’ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ರಂಜನಿ ರಾಘವನ್ ಈಗ ಕಿರುತೆರೆಯೊಂದಿಗೆ ಬೆಳ್ಳಿತೆರೆಯಲ್ಲೂ ಬಹಳ ಬ್ಯುಸಿ ಆಗಿದ್ದಾರೆ. ಸದ್ಯಕ್ಕೆ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರ ಮಾಡುತ್ತಿದ್ದಾರೆ. ಇದರೊಂದಿಗೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಅವಸ್ಥಾಂತರ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ.