snnidhi

ಬಹುಕೃತ ವೇಷಂ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ ಅಗ್ನಿಸಾಕ್ಷಿ ಸನ್ನಿಧಿ

in ಮನರಂಜನೆ/ಸಿನಿಮಾ 740 views

ಕಿರುತೆರೆ ವೀಕ್ಷಕರಿಗೆ ಈಕೆಯದು ಪರಿಚಿತ ಮುಖ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕಿ ಸನ್ನಿಧಿ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಗುಳಿ ಕೆನ್ನೆಯ ಚೆಲುವೆ ವೈಷ್ಣವಿ ಗೌಡ ಇಂದಿಗೂ ಪ್ರೇಕ್ಷಕರ ಪಾಲಿನ ಪ್ರೀತಿಯ ಸನ್ನಿಧಿ! ಧಾರಾವಾಹಿ ಮುಗಿದು ಸಮಯವಾದರೂ ಸನ್ನಿಧಿಯ ಪಾತ್ರವನ್ನು ಜನ ಇಂದಿಗೂ ಮರೆತಿಲ್ಲ. ಅಷ್ಟರ ಮಟ್ಟಿಗೆ ಸನ್ನಿಧಿ ಪಾತ್ರ ಜನರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಎಂಟು ವರ್ಷಗಳಿಂದ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಿದ್ದ ವೈಷ್ಣವಿ ಇದೀಗ ಹಿರಿತೆರೆಯತ್ತ ಮುಖ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ವೈಷ್ಣವಿ ಬಯಸದೇ ಈ ಕ್ಷೇತ್ರಕ್ಕೆ ಬಂದ ಚೆಲುವೆ. ದೇವಿ ಧಾರಾವಾಹಿಯ ನಂತರ ಸನ್ನಿಧಿ ಆಗಿ ಕಾಣಿಸಿಕೊಂಡ ವೈಷ್ಣವಿಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು, ಮಾತ್ರವಲ್ಲದೇ ಇಡೀ ಕರ್ನಾಟಕದಾದ್ಯಂತ ಆಕೆ ಮನೆ ಮಾತಾದರು.

Advertisement

Advertisement

ಗಿರಿಗಿಟ್ಲೆ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ವೈಷ್ಣವಿ ಇದೀಗ ಬಹುಕೃತ ವೇಷ ಧರಿಸಿ ನಿಮ್ಮ ಮುಂದೆ ಬರಲಿದ್ದಾರೆ. ಬಹುಕೃತ ವೇಷಂ ಎಂಬ ಸಿನಿಮಾದಲ್ಲಿ ವೈಷ್ಣವಿ ಗೌಡ ನಕ್ಷತ್ರಾ ಎಂಬ ಪಾತ್ರದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ” ಬಹುಕೃತ ವೇಷಂ ನಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗಿಯೊಬ್ಬಳ ಜೀವನದಲ್ಲಿ ನಡೆಯುವ ಘಟನೆಗಳು ಆಕೆಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಅದರಿಂದ ಅವಳ ಜೀವನದಲ್ಲಿ ಆಗುವ ಬದಲಾವಣೆಗಳೇನು ಎಂಬ ಕತೆ ಇದು. ಒಟ್ಟಿನಲ್ಲಿ ನಕ್ಷತ್ರಾ ಪಾತ್ರ ತುಂಬಾ ಸ್ಟ್ರಾಂಗ್ ಮಾತ್ರವಲ್ಲ ಇಂಡಿಪೆಂಡೆಂಟ್ ಆಗಿರುವ ಪಾತ್ರ ಹೌದು. ವಿಭಿನ್ನ ರೀತಿಯ ಸ್ಟೋರಿ ಮೂಲಕ ತೆರೆ ಮೇಲೆ ಬರುತ್ತಿರುವುದಕ್ಕೆ ಖುಷಿ ಆಗುತ್ತಿದೆ” ಎನ್ನುತ್ತಾರೆ ವೈಷ್ಣವಿ ಗೌಡ.

Advertisement

ಕಿರುತೆರೆಯ ಮೂಲಕ ಮನೆ ಮಾತಾಗಿರುವ ಡಿಂಪಲ್ ಬೆಡಗಿ ಇದೀಗ ಹಿರಿತೆರೆಯಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗೆ ಮುನ್ನಾಗಿದ್ದಾರೆ. “ಕಲಾವಿದೆ ಎಂದ ಮೇಲೆ ಹಿರಿತೆರೆಯಾದರೇನು? ಕಿರುತೆರೆಯಾದರೇನು? ನಟಿಸಲು ಅವಕಾಶ ಸಿಗಬೇಕು ಅಷ್ಟೇ.‌ ಅಂದ ಹಾಗೇ ನನ್ನ ಪ್ರಕಾರ ಕಿರುತೆರೆ ಮತ್ತು ಹಿರಿತೆರೆಗೆ ಹೇಳುವಂತಹ ವ್ಯತ್ಯಾಸವೇನಿಲ್ಲ. ಯಾವುದೇ ಪಾತ್ರ ಸಿಗಲಿ, ಅದಕ್ಕೆ ನ್ಯಾಯ ಸಿಗುವಂತೆ ನಟಿಸುವುದು ಮಾತ್ರ ನಮ್ಮ ಕೆಲಸ” ಎಂದು ನಗುನಗುತ್ತಾ ಹೇಳುತ್ತಾರೆ ವೈಷ್ಣವಿ ಗೌಡ.

Advertisement

“ಇಂದು ನಾನು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ನಿಜವಾಗಿಯೂ ತುಂಬಾನೇ ಸಂತಸವಾಗುತ್ತಿದೆ. ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದ ನಾನು ಇದೀಗ ಇಲ್ಲಿ ಬರೋಬ್ಬರಿ ಹತ್ತು ವರ್ಷ ಪೂರೈಸಿದ್ದೇನೆ. ಹಿಂತಿರುಗಿ ನೋಡಿದಾಗ ಸುಂದರ ಪಯಣವೇ ಕಣ್ಣ ಮುಂದೆ ಬರುತ್ತದೆ. ಆಗೆಲ್ಲಾ ಇದೊಂದು ಪವಾಡವೇನೋ ಎಂದೆನಿಸುತ್ತದೆ” ಎನ್ನುತ್ತಾರೆ ವೈಷ್ಣವಿ ಗೌಡಗೆ ಒಂದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಬದಲಿಗೆ ಬೇರೆ ಬೇರೆ ರೀತಿಯ ಪಾತ್ರಗಳಿಗೆ ಜೀವ ತುಂಬುವ ಬಯಕೆ.
– ಅಹಲ್ಯಾ

Advertisement
Share this on...