ಪರಭಾಷೆಯಲ್ಲಿ ಮಿಂಚುತ್ತಿರುವ ಬೆಂಗಳೂರಿನ ಚೆಲುವೆ…’ಅಗ್ನಿಸಾಕ್ಷಿ’ಯ ತನು ಬಗ್ಗೆ ನಿಮಗೆಷ್ಟು ಗೊತ್ತು…?

in ಮನರಂಜನೆ/ಸಿನಿಮಾ 609 views

ಕನ್ನಡ ಕಿರುತೆರೆ, ಬೆಳ್ಳಿತೆರೆ ಮೂಲಕ ಕರಿಯರ್ ಆರಂಭಿಸಿದ ಎಷ್ಟೋ ನಟ-ನಟಿಯರು ಇಂದು ಪರಭಾಷೆಗಳಲ್ಲಿ ಕೂಡಾ ಮಿಂಚುತ್ತಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ನಟಿ ಕೂಡಾ ಇದೀಗ ಪರಭಾಷೆಯಲ್ಲಿ ಸಖತ್ ಹೆಸರು ಮಾಡಿದ್ದಾರೆ. ಕಲರ್ಸ್​ ಕನ್ನಡ ಚಾನೆಲ್​​​ನಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಪಾತ್ರದಲ್ಲಿ ನಟಿಸುತ್ತಿದ್ದ ಈ ಚೆಲುವೆ ನಿಮಗೆ ನೆನಪಿರಬಹುದು. ಅಂದಹಾಗೆ ಈಕೆ ಹೆಸರು ಶೋಭಾಶೆಟ್ಟಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶೋಭಾಗೆ ಚಿಕ್ಕಂದಿನಿಂದ ನಟನೆಯಲ್ಲಿ ಆಸಕ್ತಿ. ಇದಕ್ಕೆ ಕಾರಣ ಶೋಭಾ ಅವರ ತಾಯಿ. ಶೋಭಾ ತಾಯಿಗೆ ನನ್ನ ಮಗಳು ನಟಿಯಾಗಿ ಹೆಸರು ಮಾಡಬೇಕೆಂಬ ಆಸೆ. ಅದರಂತೆ ಶೋಭಾ ಅಮ್ಮನ ಆಸೆಯನ್ನು ಈಗ ನೆರವೇರಿಸಿದ್ದಾರೆ.

Advertisement

Advertisement

ಶೋಭಾ ತಮಗೆ ಬಂದ ಯಾವುದೇ ಅವಕಾಶಗಳನ್ನೂ ನಿರಾಕರಿಸಲಿಲ್ಲ. ಅದರಂತೆ ‘ಪಡುವಾರಳ್ಳಿ ಪಡ್ಡೆಗಳು’ ಧಾರಾವಾಹಿ ಮೂಲಕ ಶೋಭಾ ಬಣ್ಣದ ಪಯಣ ಆರಂಭಿಸಿದರು. ನಂತರ ಗುರು ರಾಘವೇಂದ್ರ ವೈಭವ, ‘ದೀಪವೂ ನಿನ್ನದೇ ಗಾಳಿಯು ನಿನ್ನದೇ’, ‘ಗೃಹಲಕ್ಷ್ಮಿ’ ಮತ್ತು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಅಭಿನಯಿಸಿದರು. ಇದರಲ್ಲಿ ಶೋಭಾಗೆ ಹೆಸರು ತಂದುಕೊಟ್ಟದ್ದು ‘ಅಗ್ನಿಸಾಕ್ಷಿ’ಯ ತನು ಪಾತ್ರ. ಈ ಧಾರಾವಾಹಿಯಲ್ಲಿ ನಟಿಸುವಾಗಲೇ ಪುನೀತ್​ ರಾಜ್​​ಕುಮಾರ್ ಜೊತೆ ಅಂಜನಿಪುತ್ರ ಚಿತ್ರದಲ್ಲಿ ತಂಗಿಯಾಗಿ ನಟಿಸುವ ಅವಕಾಶ ದೊರೆಯಿತು. ಮತ್ತೆ ಕಿರುತೆರೆಗೆ ಬಂದ ಶೋಭಾ ‘ಕಾವೇರಿ’ ಧಾರಾವಾಹಿಯಲ್ಲಿ ಅಭಿನಯಿಸಿದರು.

Advertisement

Advertisement

ತೆಲುಗಿನಲ್ಲಿ ಕೂಡಾ ಅವಕಾಶ ಪಡೆದ ಶೋಭಾಶೆಟ್ಟಿ ಸ್ಟಾರ್ ಮಾ ಚಾನೆಲ್​​​ನಲ್ಲಿ ಪ್ರಸಾರವಾಗುತ್ತಿದ್ದ ‘ಅಷ್ಟಚಮ್ಮ’ ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಬಂದರು. ಈ ಧಾರಾವಾಹಿಯ ಪಾತ್ರಕ್ಕೆ ಅವರಿಗೆ ಉತ್ತಮ ನಟಿ ಪ್ರಶಸ್ತಿ ಕೂಡಾ ಲಭಿಸಿದೆ. ನಂತರ ಅಭಿನಯಿಸಿದ ‘ಕಾರ್ತಿಕ ದೀಪಂ’ ಶೋಭಾಗೆ ಬಹಳ ಹೆಸರು ನೀಡಿತು. ಈಗ ತೆಲುಗು ಜನರು ಶೋಭಾರನ್ನು ‘ಕಾರ್ತಿಕ ದೀಪಂ’ ಮೌನಿತಾ ಎಂದೇ ಗುರುತು ಹಿಡಿಯುತ್ತಾರೆ. ಸದ್ಯಕ್ಕೆ ಈಟಿವಿ ತೆಲುಗಿನ ‘ಲಹಿರಿ ಲಹಿರಿ ಲಹಿರಿಯೊ’ ಧಾರಾವಾಹಿಯಲ್ಲಿ ಶೋಭಾ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

ಕಲಾದೇವಿ ನನಗೆ ಒಲಿದಿರುವುದು ನನ್ನ ಅದೃಷ್ಟ. ಚಿಕ್ಕಂದಿನಿಂದ ಕಂಡಿದ್ದ ಕನಸು ಇಂದು ನನಸಾಗಿದೆ. ಮುಂದೆ ಇನ್ನೂ ಒಳ್ಳೆ ಪಾತ್ರಗಳನ್ನು ಮಾಡುವ ಆಸೆ ಇದೆ. ಅವಕಾಶ ದೊರೆತರೆ ಸಿನಿಮಾಗಳಲ್ಲಿ ಕೂಡಾ ನಟಿಸುತ್ತೇನೆ ಎನ್ನುತ್ತಾರೆ ಈ ಚೆಲುವೆ.

Advertisement
Share this on...