ಬಿಡದ ಬಂಧನಕೆ ಬೇಡಿಯ ತೊಡಕು

in ಕನ್ನಡ ಮಾಹಿತಿ 240 views

ಅಕ್ಕನೆಡೆಗೆ

Advertisement

ವಚನ 34

Advertisement

ಬಿಡದ ಬಂಧನಕೆ ಬೇಡಿಯ ತೊಡಕು

Advertisement

ಪಂಚೇಂದ್ರಿಯಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ?
ಸಪ್ತವ್ಯಸನಂಗಳೊಳಗೆ
ಒಂದಕ್ಕೆ ಪ್ರಿಯನಾದಡೆ ಸಾಲದೆ?
ರತ್ನದ ಸಂಕಲೆಯಾದಡೇನು
ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ.

Advertisement

 

 

ಅಕ್ಕಮಹಾದೇವಿಯು ಆಧ್ಯಾತ್ಮ ಸಾಧನೆಯ ಸಾತ್ವಿಕ ಮಾರ್ಗದಲ್ಲಿ ನಡೆದವಳು. ಆದರೂ ಆ ಹಾದಿಯಲ್ಲಿ ಸಾಗುವಾಗ ಈ ಪ್ರಪಂಚದ ಅನೇಕ ಕಷ್ಟ ಸುಖಗಳನ್ನು ಮೆಟ್ಟಿ ನಡೆಯ ಬೇಕಾಗುತ್ತದೆ. ಲೌಕಿಕವನ್ನು ಗೆದ್ದು ಅಲೌಕಿಕದೆಡೆಗೆ ಸಾಗುವಾಗ, ತನಗಾದ ಅನುಭವಗಳನ್ನು ಈ ಭವದ ಜನರಿಗಾಗಿ ಬಿಟ್ಟು ಹೋಗಿದ್ದಾಳೆ. ಅದರಲ್ಲಿ ನೀತಿಯಿದೆ, ನ್ಯಾಯವಿದೆ, ಕಿವಿ ಮಾತಿದೆ, ಬುದ್ಧಿ ಪಾಠವಿದೆ. ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕಷ್ಟೆ.

ಅಕ್ಕನ ಸಂದೇಶಗಳು ಉಪದೇಶದಂತೆ ಇರದೆ ನಿವೇದನೆಯಂತಿರುವುದು ಅವಳ ಕಾವ್ಯದ ವೈಶಿಷ್ಟ್ಯ. ಚೆನ್ನಮಲ್ಲಿಕಾರ್ಜುನನಿಗೆ ತನ್ನನ್ನು ತಾನು ಪರಿಪೂರ್ಣವಾಗಿ ಸಮರ್ಪಿಸಿಕೊಂಡ ಪರಿಣಾಮವೇ ಈ ತರಹದ ರಚನೆಗೆ ಕಾರಣವಾಗುತ್ತದೆ. ಅಕ್ಕ ವೈಯಕ್ತಿಕ ನೆಲೆಯಲ್ಲಿ ಹೇಳಿದ ಈ ವಚನವು ಮನುಕುಲಕ್ಕೆ ಬಹುದೊಡ್ಡ ಸಂದೇಶವನ್ನು ರವಾನಿಸುತ್ತದೆ. ಮನುಷ್ಯ ಹೇಗೆ ಈ ಭವದ ಬಂಧನಕ್ಕೊಳಗಾಗುತ್ತಾನೆ? ಅದರಿಂದ ಹೇಗೆ ಹೊರಬರಬಹುದು ಎನ್ನುವುದನ್ನು ಈ ವಚನ ಬಹಳ ಸೂಕ್ಷ್ಮವಾಗಿ ಸೂಚಿಸುತ್ತದೆ. ಅಕ್ಕನ ಉಪದೇಶವಲ್ಲದ ಈ ಭಾವವನ್ನು ಅರಿತು ನಡೆಯುವುದೇ ಮನುಕುಲೋದ್ಧಾರ.

 

 

ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ?

ಮನುಷ್ಯ ಪಂಚೇಂದ್ರಿಯಗಳಿಂದ ಕೂಡಿರುವುದು ಎಲ್ಲರಿಗೂ ತಿಳಿದಿದೆ. ಪಂಚ ಇಂದ್ರಿಯಗಳು ಅಂದರೆ ಐದು ಇಂದಿಯಗಳು. ಕಣ್ಣು, ಕಿವಿ, ಮೂಗು, ಬಾಯಿ ಮತ್ತು ಚರ್ಮ ಸೇರಿ ಪಂಚೇಂದ್ರಿಯವಾಗುತ್ತದೆ. ಕಣ್ಣುಗಳಿಂದ ನೋಡುವುದು, ಮೂಗಿನಿಂದ ಆಘ್ರಾಣಿಸುವುದು, ಕಿವಿಯಿಂದ ಕೇಳುವುದು, ಬಾಯಿಂದ ರುಚಿ ನೋಡುವುದು ಹಾಗೂ ಮಾತನಾಡುವುದು, ಚರ್ಮದಿಂದ ಸ್ಪರ್ಶಿಸುವುದು, ಹೀಗೆ ಪಂಚೇಂದ್ರಿಯಗಳು ಕಾರ್ಯ ನಿರ್ವಹಿಸುತ್ತವೆ.

ಮಾನವನ ಸಹಜ ಗುಣ ದೌರ್ಬಲ್ಯ. ಆ ದೌರ್ಬಲ್ಯ ಮೆಟ್ಟಿ ನಿಲ್ಲುವುದೇ ಬದುಕಿನ ಸವಾಲು. ಆದರೂ ಅನೇಕ ಬಾರಿ ಯಾವುದಾದರೊಂದು ದೌರ್ಬಲ್ಯದಲ್ಲಿ ಸಿಲುಕಿ ನರಳುತ್ತಾನೆ.

ಅಕ್ಕಮಹಾದೇವಿ ಆ ಕಾಲದಲ್ಲಿ ಮನುಷ್ಯನಿಗಿರುವ ಯಾವ ಯಾವ ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿರಬಹುದೆಂದು ಇಂದು ನಮಗೆ ಗೊತ್ತಿಲ್ಲದೆ ಇರಬಹುದು. ಆದರೆ ಇವತ್ತಿನ ದಿನಮಾನಗಳಲ್ಲಿ ನಿಂತು ಆಲೋಚಿಸಿದರೆ, ಪಂಚೇಂದ್ರಿಯಗಳಿಗೆ ಒಳ್ಳೆಯದನ್ನು ಅನುಭವಿಸುವುದಕ್ಕಿಂತ ಕೆಟ್ಟದ್ದು ಬಹಳ ಸರಳವಾಗಿ ಲಭ್ಯವಿರುವುದು ದುರಂತ. ಈ ಮೇಲಿನ ಸಾಲಿನಲ್ಲಿ ಕೆಟ್ಟದ್ದನ್ನು, ನೋಡುತ್ತಲೇ ಇರುವುದಾಗಲಿ, ಕೇಳುತ್ತಲೇ ಇರುವುದಾಗಲಿ, ಹೇಳುತ್ತಲೇ ಇರುವುದಾಗಲಿ, ಅಘ್ರಾಣಿಸುತ್ತಲೇ ಇರುವುದಾಗಲಿ, ಸ್ಪರ್ಶಿಸುತ್ತಲೇ ಇರುವುದಾಗಲಿ, ಇವುಗಳಲ್ಲಿ ಯಾವುದಾದರೊಂದಕ್ಕೆ ಬಲಿಯಾದರೂ ಸಾಕಲ್ಲವೆ? ಎಂದು ಅಕ್ಕ ಪ್ರಶ್ನಿಸುತ್ತಾಳೆ.

 

 

ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ?

‘ಸಪ್ತ’ ಎಂದರೆ ಏಳು. ‘ವ್ಯಸನ’ ಎಂದರೆ ದುರಭ್ಯಾಸ, ಕೆಟ್ಟ ಚಟ. ಒಳ್ಳೆಯ ಅಭ್ಯಾಸವಾದರೆ ಹವ್ಯಾಸ, ಅಭಿರುಚಿ ಎನಿಸಿಕೊಳ್ಳುತ್ತದೆ. ಆದರೆ ಮನುಷ್ಯನ ಜೀವನಕ್ಕೆ ಕೆಟ್ಟದಾಗುವಂತಿದ್ದರೆ ಚಟ ಎನಿಸಿಕೊಳ್ಳುತ್ತದೆ.

ಮನುಷ್ಯನಲ್ಲಿ ಏಳು ಬಗೆಯ ವ್ಯಸನಗಳಿರುತ್ತವೆ:
೧. ಸಾಮಾಜಿಕ ಮನ್ನಣೆ ಸಿಗದ, ಅನೈತಿಕ ಎನಿಸಿಕೊಳ್ಳುವ ಹೆಣ್ಣು, ಗಂಡುಗಳ ಸಂಬಂಧ.
೨. ಶ್ರೀಮಂತಿಕೆ ಇರಲಿ ಇಲ್ಲದಿರಲಿ ಹೇಗಾದರೂ ಮಾಡಿ ಹಣ ಹೊಂದಿಸಿಕೊಂಡು, ದುಡ್ಡಿಟ್ಟು ಆಡುವ ಜೂಜಾಟ.
೩. ಹಿಂಸೆ ಮಾಡುತ್ತ ಮೂಕಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಅವುಗಳನ್ನು ಸೆರೆಹಿಡಿದು ಬಂಧನದಲ್ಲಿಡುವುದು.
೪. ಕುಡಿತಕ್ಕೆ ಬಲಿಯಾಗಿ ಇಡೀ ಮನೆಯನ್ನೇ ಹಾಳುಗೆಡವುದು.
೫. ಇತರರಿಗೆ ಕೆಟ್ಟ ಮಾತುಗಳನ್ನಾಡಿ ಮಾನಸಿಕವಾಗಿ ನೋಯಿಸುವುದು.
೬. ಇತರರನ್ನು ದೈಹಿಕವಾಗಿ ದಂಡಿಸಿ ಹಿಂಸಿಸುವುದು.
೭. ಕಳ್ಳತನ, ಮೋಸ, ವಂಚನೆ ಮಾಡುತ್ತ ಇತರರ ಆಸ್ತಿ ಲಪಟಾಯಿಸುವುದು.

 

 

ಇವುಗಳಲ್ಲಿ ಯಾವುದಾದರೊಂದು ವ್ಯಸನವಿದ್ದರೂ ಸಾಕಲ್ಲವೆ? ಎಂದು ಅಕ್ಕ ಪ್ರಶ್ನಿಸುತ್ತಾಳೆ. ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ. ಇಲ್ಲಿ ರತ್ನ ಎಂದರೆ ಬೆಲೆ ಬಾಳುವ ಹರಳು ಅಥವಾ ವಜ್ರ ಅಥವಾ ಮಣಿ ಎಂದರ್ಥ. ಸಂಕಲೆ ಎಂದರೆ ಬೇಡಿ. ಅತ್ಯಂತ ದುಬಾರಿಯಾದ ರತ್ನದ ಬೇಡಿ ಇದ್ದರೂ, ಅದು ಬಂಧನಕ್ಕೊಳಪಡಿಸುತ್ತದೆ. ಕಬ್ಬಿಣದ ಕೋಳವಿದ್ದರೂ ಅದು ಬಂಧನಕ್ಕೊಳಪಡಿಸುತ್ತದೆ. ಬಂಧಿಯಾಗುವ ಸತ್ಯವನ್ನು ಅಕ್ಕ ಹೊರಹಾಕುತ್ತಾಳೆ. ಈಗ ವಚನವನ್ನು ಇಡಿಯಾಗಿ ಗ್ರಹಿಸಿದರೆ ಒಟ್ಟಾರೆ ಆಶಯವನ್ನು ತಲುಪುತ್ತೇವೆ.

ಐದು ಇಂದ್ರಿಯಗಳಲ್ಲಿ ಯಾವುದಾದರೊಂದನ್ನು ಬಳಸಿಕೊಂಡು ದುರಭ್ಯಾಸಕ್ಕೆ ಬಲಿಯಾಗುವುದು. ಏಳು ಚಟಗಳಲ್ಲಿ ಯಾವುದಾದರೊಂದಕ್ಕೆ ಈಡಾಗುವುದು. ಆಗ ಆ ಕೆಟ್ಟ ಅಭ್ಯಾಸವು ಕ್ಷಣಿಕ ಸುಖ ನೀಡುತ್ತ ಬಹಳ ಆನಂದವನ್ನುಂಟು ಮಾಡುತ್ತದೆ. ಈ ಆನಂದವು ರತ್ನದ ಬೇಡಿ ಇದ್ದಂತೆ. ಮನುಷ್ಯ ಹೇಗೆ ದುರಭ್ಯಾಸದ ದಾಸನಾಗುತ್ತಾನೆಂದು ತಿಳಿದು ಬರುತ್ತದೆ. ಅದೊಂದು ಬಂಧನವಾಗಿ ಅದರಿಂದ ಮುಕ್ತಿ ಪಡೆಯುವುದೇ ಅಸಾಧ್ಯವಾಗುತ್ತದೆ. ಸುಂದರ ಬದುಕು ಬೇಕಾದಲ್ಲಿ ಇಂತಹ ವ್ಯಸನಗಳಿಗೆ ಬಲಿಯಾಗದಿರುವುದೇ ಜಾಣತನ. ಸದ್ವಿಚಾರ, ಸಾತ್ವಿಕ ಆಹಾರ, ಪರಿಶುದ್ಧ ನಡೆನುಡಿಗಳನ್ನು ರೂಢಿಸಿಕೊಳ್ಳುವುದರಿಂದ ಬದುಕು ಹಸನಾಗುತ್ತದೆ.

 

 

ಸರ್ವಜ್ಞನ ವಚನವೊಂದಿದೆ. ‘ಕಚ್ಛೆ ಕೈ ಬಾಯಿಗಳು ಇಚ್ಛೆಯಿಂದಿದ್ದಿಹರೆ ಅಚ್ಚುತನಪ್ಪ ಅಜನಪ್ಪ ಲೋಕದೊಳು ನಿಶ್ಚಿಂತನಪ್ಪ ಸರ್ವಜ್ಞ’ ಇದೂ ಕೂಡ ಅದೇ ಭಾವವನ್ನು ಬಿಂಬಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ನೂರಕ್ಕೆ ಅರ್ಧದಷ್ಟೂ ಆರೋಗ್ಯಕರ ವಾತಾವರಣವಿಲ್ಲ. ಆಧುನಿಕ ತಂತ್ರ ಜ್ಞಾನದಿಂದಾಗಿ ಅನೇಕ ವೆಬ್ಸೈಟ್ ಗಳು ಸುಲಭವಾಗಿ ವೀಕ್ಷಣೆಗೆ ಕೈಗೆಟುಕುವುದರಿಂದ, ಮತ್ತೆ ಮತ್ತೆ ಕಣ್ಣುಗಳು ಕೆಟ್ಟದ್ದನ್ನು ನೋಡುವಂತಾಗಿದೆ, ಕೇಳುವಂತಾಗಿದೆ. ಅದರ ಪರಿಣಾಮ ಚಿತ್ತ ಚಂಚಲವಾಗಿ, ಮನಸು ವಿಕಾರವಾಗಿ, ಮನುಷ್ಯ ಕ್ರೌರ್ಯದೆಡೆಗೆ ಸಾಗುತ್ತಿರುವುದು ಇಂದಿನ ಸಾಮಾಜಿಕ ಪಿಡುಗು. ಹಾಡ ಹಗಲೇ ಹೆಣ್ಣಿನ ಮೇಲೆ ಅತ್ಯಾಚಾರ, ಶೋಷಣೆ, ಹಿಂಸೆ ನಡೆಯುತ್ತಲೇ ಇದೆ.

ವ್ಯಸನಕ್ಕೆ ಸರಿಯಾದ ಉದಾಹರಣೆ ಎಂದರೆ, ‘ಡ್ರಗ್ಸ್’ ತೆಗೆದುಕೊಳ್ಳುವವರು. ಅದರ ಜಾಲದಲ್ಲಿ ಸಿಲುಕಿದವರು ಹೊರ ಬರುವುದೇ ಕಷ್ಟ. ಡ್ರಗ್ ಅಡಿಕ್ಟ್ ಆಗಿ ಅದರಲ್ಲೇ ಬದುಕು ನಾಶವಾಗಿರುವುದನ್ನು ನೋಡಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಯುವ ಜನತೆ ಇದಕ್ಕೆ ಬಲಿಯಾಗಿದ್ದು ಖೇದವೆನಿಸುತ್ತದೆ. ಪುರಂದರದಾಸರು, ‘ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ, ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೆ’ ಎಂದು ಹೇಳಿದ್ದು ಇದೇ ಅರ್ಥದಲ್ಲಿ ಎನ್ನುವುದನ್ನು ಮರೆಯುವಂತಿಲ್ಲ.

 

 

ಸಾಮಾನ್ಯವಾಗಿ ಮನುಷ್ಯನ ಸ್ವಭಾವ ಕುರಿತು ಅನೇಕ ಗಾದೆ ಮಾತುಗಳು ಪ್ರಚಲಿವಾಗಿವೆ. ‘ಹುಟ್ಟು ಗುಣ ಸುಟ್ಟರೂ ಹೋಗದು’, ‘ಹುಟ್ಟು ಗುಣ ಹೂಳುವ ತನಕ’, ‘ಚಟ್ಟ ಏರಿದರೂ ಚಟ ತೀರುವುದಿಲ್ಲ’ ಹೀಗೆಲ್ಲಾ ಹೇಳುವ ಮಾತುಗಳು ಮನುಷ್ಯನ ದೌರ್ಬಲ್ಯವನ್ನು ತೋರಿಸುತ್ತದೆ. ಅಕ್ಕ ಮೇಲಿನ ವಚನದಲ್ಲಿ ಬಹಳ ಕಡಿಮೆ ಶಬ್ದಗಳನ್ನು ಬಳಸಿ, ಮಹತ್ತರವಾದ ವಿಷಯವನ್ನು ಮಂಡಿಸಿರುವುದು ಅದ್ಭುತ. ಸ್ತ್ರೀ ಕುಲಕ್ಕೆ ಮಾದರಿಯಾಗಿ ಬದುಕಿದ ಅಕ್ಕ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಆಗ ನಮ್ಮ ಬದುಕು ಸಾರ್ಥಕವಾಗುತ್ತದೆ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)

Advertisement
Share this on...