ಮುಖವಾಡದ ಹಿಂದಿನ ಮುಖ

in ಕನ್ನಡ ಮಾಹಿತಿ 582 views

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ
ಆಗು ಮಾಡ ಬಂದವರಲ್ಲ
ಮನದ ಮೇಲೆ ಬಂದು ನಿಂದು ಜರೆದು ನುಡಿದು
ಪಥವ ತೋರಬಲ್ಲಾತನೇ ಸಂಬಂಧಿ
ಹಾಗಲ್ಲದೆ ಅವರಿಚ್ಛೆಯ ನುಡಿದು ತನ್ನುದರವ ಹೊರೆವ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ.

Advertisement

ಅಕ್ಕಮಹಾದೇವಿಯು ಆಧ್ಯಾತ್ಮ ಮಾರ್ಗವನ್ನು ಆಯ್ಕೆ ಮಾಡಿಕೊಂಡರೂ, ಆ ಪಥದಲ್ಲಿ ಸಾಗುವಾಗ ಕಂಡು ಬಂದ ಅನೇಕ ಸಾಮಾಜಿಕ ಆಯಾಮಗಳನ್ನು ಪರಿಗಣಿಸುತ್ತ ವಚನ ರಚಿಸಿರುವುದು ಗಮನಾರ್ಹ. ಈ ಲೌಕಿಕದ ವ್ಯಾಪಾರವೂ ಬಹಳಷ್ಟು ಕಾಡಿರುವುದನ್ನು ಅನೇಕ ವಚನಗಳಲ್ಲಿ ಕಾಣುತ್ತೇವೆ. ಅದೇ ತರಹದ ವಚನವಿದು.

Advertisement

 

Advertisement

Advertisement

 

ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗು ಮಾಡ ಬಂದವರಲ್ಲ

‘ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತೆ’, ‘ಮುಖ ನೋಡಿ ಮಣೆ ಹಾಕ್ತಾರೆ’, ‘ದುಡ್ಡಿದ್ದವನೇ ದೊಡ್ಡಪ್ಪ’, ‘ರಾಜ ಇರೋತನಕ ರಾಣಿ ಭೋಗ’ ಮುಂತಾದ ಗಾದೆಗಳು ಪ್ರಚಲಿತವಾಗಿವೆ. ಅವು ಪ್ರಪಂಚದಲ್ಲಿರುವ ಭೌತಿಕ (Materialistic) ವಾದುದನ್ನೆಲ್ಲಾ ಜ್ಞಾಪಿಸುತ್ತದೆ.

ಹಣ, ಐಶ್ವರ್ಯ, ಸಂಪತ್ತು, ಆಸ್ತಿಪಾಸ್ತಿಗಳು ನೋಡುವವರ ಕಣ್ಣಿಗೆ ಕುಕ್ಕುತ್ತವೆ. ಅದನ್ನೇ ನೋಡಿ ಸ್ನೇಹ, ಸಂಬಂಧ ಬೆಳೆಸಲು ಮುಂದಾಗುವ ಜನರಿಗೇನೂ ಕಡಿಮೆ ಇಲ್ಲ. ಬಂಧು ಬಾಂಧವರು ಸಿರಿವಂತರಾದರೆ ಅವರ ಸುತ್ತಲೂ ನೆರೆಯುವ ಬಳಗದವರು ಅನೇಕರು.

 

 

ಉದಾಹರಣೆಗೆ ಒಬ್ಬ ಸುಪ್ರಸಿದ್ಧ ವ್ಯಕ್ತಿಯು ಸಂಬಂಧಿಕನಾಗಿದ್ದರೆ, ಅವನ ಪದವಿಯನ್ನೇ ಉಲ್ಲೇಖಿಸುತ್ತ, ಆ ವ್ಯಕ್ತಿಯೊಂದಿಗಿನ ಬಾದರಾಯಣ ಸಂಬಂಧವನ್ನು ಅನವಶ್ಯಕವಾಗಿ ಹೇಳಿಕೊಳ್ಳುವುದೇ ಪ್ರತಿಷ್ಟೆಯಾಗಿ ಬಿಡುತ್ತದೆ.

ಸಂಸ್ಕೃತದಲ್ಲಿ ಒಂದು ಮಾತಿದೆ,

‘ನ ವಿದ್ಯಯಾ ನೈವ ಕುಲೇನ ಗೌರವಂ
ಜನಾನುರಾಗೋ ಧನಿಕೇಷು ಸರ್ವದಾ
ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ
ಪ್ರಯಾತಿ ರತ್ನಾಕರಮೇವ ಸರ್ವಾದಾ’

 

 

ಅಂದರೆ, ‘ವಿದ್ಯೆ, ಅರಿವು ಪಡೆದರೂ ಮನೆತನಕ್ಕೆ ಹಿರಿಮೆ ತರಲಾರವು. ಎಂದಿಗೂ ಹಣ ಉಳ್ಳವರೇ ಜನರ ಒಲುಮೆಗೆ ಪಾತ್ರರಾಗುತ್ತಾರೆ. ಶಿವನ ತಲೆಯ ಮೇಲೆ ಗಂಗೆ ಇದ್ದರೂ, ಕೊನೆಗೆ ಸೇರುವುದು ಸಾಗರದಲ್ಲಿ. ಅಂದರೆ ಸಮುದ್ರದಲ್ಲಿರುವ ಬೆಲೆ ಬಾಳುವ ಮುತ್ತು ರತ್ನಗಳಲ್ಲಿಯೇ ಗಂಗೆಯು ಲೀನವಾಗುತ್ತಾಳೆ’.

ಮನುಷ್ಯನ ಸಹಜ ಗುಣವಾಗಿ ಹಣದತ್ತ ಆಕರ್ಷಣೆ ಹೊಂದಿರುತ್ತದೆ. ‘ನೀ ರೊಕ್ಕದ ಮಾರಿ ನೋಡ್ ಬಂದಿದಿ, ಮನುಷ್ಯನ್ ಮನ್ಸ್ ನೋಡ್ ಬಂದಿಲ್ಲ’ ಎಂದು ಗ್ರಾಮೀಣ ಜನರು ನೇರವಾಗಿ ಹೇಳುವುದನ್ನು ಕೇಳಿರುತ್ತೇವೆ. ಹಾಗೆಯೇ ಹಣಕ್ಕಿಂತ ಮುಖ್ಯವಾದುದು ‘ವ್ಯಕ್ತಿ’ ಮತ್ತು ‘ಮನಸು’. ಯಾರು ಹಣ ನೋಡಿ ಬಂದಿರುತ್ತಾರೋ ಅವರು ಒಳಿತನ್ನು ಮಾಡಲಾರರು.

ಮನದ ಮೇಲೆ ಬಂದು ನಿಂದು ಜರೆದು ನುಡಿದು ಪಥವ ತೋರ ಬಲ್ಲಾತನೇ ಸಂಬಂಧಿ

ಮನುಷ್ಯನಲ್ಲಿರುವ ಅರಿಷಡ್ವರ್ಗಗಳು ಅವನ ಮನಸಿನ ಶಾಂತಿ ಕದಡುವಂಥವು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವೇ ಆ ಆರು ನಕಾರಾತ್ಮಕ ಗುಣಗಳು. ಇದರಲ್ಲಿರುವ ಕೊನೆಯದಾದ ‘ಮತ್ಸರ’ವು ಇತರರ ಒಳಿತನ್ನು ಬಯಸುವುದಿಲ್ಲ.

 

 

ಮನುಷ್ಯ ಮನುಷ್ಯನ ನಡುವೆ ಮಾನವೀಯ ಸಂಬಂಧವಿದ್ದರೆ ಮಾತ್ರ ಇತರರನ್ನು ತಿದ್ದಲು ಸಾಧ್ಯ. ಇಲ್ಲವಾದರೆ ಪರರ ಚಿಂತೆ ನಮಗೇಕೆ? ಎಂದುಕೊಂಡು ಹಾಳಾಗುತ್ತಿದ್ದರೂ ಸುಮ್ಮನಿರುವ ಜನರದೆಷ್ಟೊ? ಅದು ಸುಸಂಸ್ಕೃತ ಲಕ್ಷಣವಲ್ಲ. ನಮ್ಮವರಿಗೆ ಹಾನಿಯಾಗುತ್ತಿದ್ದರೆ, ಅವರಿಗೆ ತಿಳಿಸಿ ಹೇಳಬೇಕು. ಅವರಿಗಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು. ತಿಳಿಯದಿದ್ದರೆ ಬೈದು ಹೇಳಬೇಕು. ಹಾಗೆ ಕಠೋರವಾಗಿ ನಡೆದುಕೊಳ್ಳುವವರೇ ನಿಜವಾದ ಸಂಬಂಧಿಕರಾಗಿರುತ್ತಾರೆ. ಹಿತೈಷಿಗಳು ಎನಿಸಿಕೊಳ್ಳುತ್ತಾರೆ.

ಶರಣರು ಹೇಳುವಂತೆ, ‘ಬೈದವರೆನ್ನ ಬಂಧುಗಳೆನ್ನಿ’ ಎನ್ನುವ ಮಾತು ಅಕ್ಷರಶಃ ಸತ್ಯ.

 

 

ಹಾಗಲ್ಲದೆ ಅವರಿಚ್ಛೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ

ಇದಕ್ಕೊಂದು ಉದಾಹರಣೆಯಾಗಿ ಸಣ್ಣ ಕತೆಯಿದೆ.

ಇಬ್ಬರು ಸಂಬಂಧಿಕರು ಸಿದ್ದಪ್ಪ ಮತ್ತು ರಾಜಪ್ಪ, ಕಾಲ್ನಡಿಗೆಯಲ್ಲಿ ಹತ್ತಿರದ ತಮ್ಮೂರಿಗೆ ಹೊರಟಿರುತ್ತಾರೆ. ಸಿದ್ದಪ್ಪ ಕೈಯಲ್ಲಿ ಕೋಲು ಹಿಡಿದು ಅದರ ಸಹಾಯದಿಂದ ಅರಾಮಾಗಿ ನಡೆಯುತ್ತಾನೆ. ಮಾರ್ಗ ಮಧ್ಯೆ ಸ್ವಲ್ಪ ದೂರದವರೆಗೆ ಕಾಡಿನಲ್ಲೇ ಹೋಗಬೇಕಾಗುತ್ತದೆ. ದಟ್ಟ ಮರಗಳ ನಡುವೆ, ನಿರ್ಜನವಾದ ಆ ಪ್ರದೇಶದಿಂದ ಸಾಗುತ್ತಿರುವಾಗ ಇಬ್ಬರಿಗೂ ಭಯವಾಗುತ್ತದೆ. ಹಾಗೇ ಮಾತನಾಡಿಕೊಂಡು ಮುಂದೆ ಮುಂದೆ ಹೋಗಲೇ ಬೇಕು.

 

 

ಅಷ್ಟರಲ್ಲಿ ಕರಡಿ ಬರುತ್ತಿರುವಂತೆ ಭಾಸವಾಗಿ ರಾಜಪ್ಪ ಭಯಭೀತನಾಗಿ,
‘ಸಿದ್ದಪ್ಪ ಕರಡಿ ಬರ್ತಾ ಇದೆ. ನಾನು ಓಡಿ ಹೋಗಿ ಮರ ಹತ್ತುವೆ. ನೀನು ಜೋಪಾನ’ ಎಂದವನೆ ಸಿದ್ದಪ್ಪನನ್ನು ಅಲ್ಲೇ ಬಿಟ್ಟು, ಅವನ ಉತ್ತರಕ್ಕೂ ಕಾಯದೆ, ಅವಸರದಿಂದ ಹೋಗುತ್ತಾನೆ.

ಸಿದ್ದಪ್ಪನಿಗೆ ಒಂದು ವಿಷಯ ಗೊತ್ತಿತ್ತು. ಕರಡಿಗಳು ಸತ್ತವರಿಗೆ ಏನೂ ಮಾಡುವುದಿಲ್ಲವೆಂದು. ಅದಕ್ಕೆ ಅವನು ತನಗಂತೂ ಓಡಿ ಹೋಗಲು ಸಾಧ್ಯವಿಲ್ಲ. ಇಲ್ಲೇ ಸತ್ತಂತೆ ಮಲಗಿ ಜೀವ ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ. ‘ಶಕ್ತಿಗಿಂತ ಯುಕ್ತಿ ಮೇಲೆ’ ಎಂಬಂತೆ ಬುದ್ಧಿವಂತಿಕೆ ಉಪಯೋಗಿಸಿದ.

 

 

ಸಿದ್ದಪ್ಪ ಮಲಗುವ ಹೊತ್ತಿಗೆ ಕರಡಿ ಹತ್ತಿರ ಬಂದಾಗಿತ್ತು. ಅದು ಅವನನ್ನು ಮೂಸಿ ಮೂಸಿ ನೋಡುತ್ತದೆ. ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡಂತೆ, ಉಸಿರು ಬಿಗಿಹಿಡಿದು, ಹಾಗೇ ತಟಸ್ಥನಾಗಿರುತ್ತಾನೆ. ಅವನಿಗೆ ಏನೂ ಮಾಡದೆ ಕರಡಿ ಹಾಗೇ ಮುಂದೆ ಹೋಗಿ ಬಿಡುತ್ತದೆ. ಆಗ ನಿಟ್ಟುಸಿರು ಬಿಡುತ್ತ ಮೇಲೆದ್ದು, ತನ್ನ ಕೋಲಿನ ಸಹಾಯದಿಂದ ಮುಂದೆ ಹೊರಡುತ್ತಾನೆ.

ಆಗ ಧಾವಿಸುತ್ತ ಬಂದ ರಾಜಪ್ಪ, ‘ಕ್ಷಿಮಿಸು ಸಿದ್ದಪ್ಪ. ಕರಡಿ ನಿನಗೆ ಏನೂ ಮಾಡಲಿಲ್ಲ ತಾನೆ? ಪಾರಾದೆವು. ಒಳ್ಳೆಯದಾಯಿತು. ನಿನ್ನ ಜೀವಕ್ಕೆ ಅಪಾಯ ಇತ್ತು. ಕಂಟಕ ಪರಿಹಾರವಾಯಿತು ಬಿಡು. ಆ ಕರಡಿ ನಿನ್ನ ಕಿವಿಯಲ್ಲಿ ಏನೋ ಹೇಳುತಿತ್ತು? ಏನದು?’ ಎಂದು ಕುತೂಹಲದಿಂದ ಕೇಳುತ್ತಾನೆ.

 

 

ರೋಸಿ ಹೋದ ಸಿದ್ದಪ್ಪ, ‘ಕರಡಿ ಹೇಳಿತು ಕೆಟ್ಟ ಸಂಬಂಧಿಕರ ಜೊತೆ ಹೋಗಬೇಡ. ಅವರು ನಿನ್ನನ್ನು ರಕ್ಷಿಸುವುದಿಲ್ಲ, ಹಾಗೆ ಒಳಿತನ್ನು ಬಯಸುವುದಿಲ್ಲ’.

ರಾಜಪ್ಪನ ಮುಖ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು. ಸ್ನೇಹದ ಮುಖವಾಡ ಧರಿಸಿ, ಆಪತ್ತಿನಲ್ಲಿ ಸಿಲುಕಿದಾಗ ಓಡಿ ಹೋದುದಕ್ಕಾಗಿ ಸಿದ್ದಪ್ಪನ ಕಣ್ಣಲ್ಲಿ ಸಣ್ಣವನಾಗ ಬೇಕಾಯಿತು.

ಇದೇ ವಚನವನ್ನು ಇನ್ನೊಂದು ಅರ್ಥದಲ್ಲಿಯೂ ಗ್ರಹಿಸಬಹುದು.

ಅಂದೇನು ಇಂದೇನು ಪೌರೋಹಿತ್ಯ ಮಾಡುವವರು ಸದಾ ಕಾಲ ಇದ್ದೇ ಇದ್ದಾರೆ. ಇವರೇ ಬಚ್ಚಣಿಗರು. ತಮ್ಮ ಉದರಕ್ಕಾಗಿ ಬಡಿದಾಡುವವರು. ಸಿರಿವಂತರ ಮನೆಗಳಿಗೆ ಹೋಗಿ ಪೂಜೆ ಪುನಸ್ಕಾರದ ನೆಪದಲ್ಲಿ, ಹಣ ಮತ್ತು ವಸ್ತುಗಳನ್ನು ಪಡೆಯುವುದಕ್ಕೆ ಲೆಕ್ಕವೇ ಇಲ್ಲ. ಅಂಥವರನ್ನು ನೋಡಿ ಖಂಡಿಸಿಯೂ ಹೇಳಿರಬಹುದು ಎನಿಸುತ್ತದೆ. ಹೀಗೆ ಇನ್ನೊಬ್ಬರಿಂದ ಹಣ ಸೆಳೆಯುತ್ತ, ಮೇಲ್ನೋಟಕ್ಕೆ ದೇವ ಕಾರ್ಯ ಮಾಡುತ್ತ, ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸುಖಕ್ಕಾಗಿ ಜೀವಿಸುವವರನ್ನು ಅಕ್ಕ ವಿರೋಧಿಸುತ್ತಾಳೆ.

 

 

ಅಂಥವರನ್ನೇ ಬಚ್ಚಣಿಗಳು ಎನ್ನುತ್ತಾರೆ. ಒಳಗೊಂದು ಹೊರಗೊಂದು ರೀತಿ ನಡೆದುಕೊಳ್ಳುವ ಎರಡು ತಲೆಯ ಹಾವಿನಂತೆ ಬದುಕುತ್ತಾರೆ.

ಪ್ರಸ್ತುತ ಸಮಾಜದಲ್ಲಿಯೂ ಇಂತಹ ಅನೇಕ ಪ್ರಸಂಗಗಳನ್ನು ಕೇಳಿದ್ದೇವೆ, ಕಂಡಿದ್ದೇವೆ. ಇಂದಿನ ಬಹಳಷ್ಟು ಮಠ, ಮಂದಿರಗಳು ಅನೇಕ ಗೋಮುಖ ವ್ಯಾಘ್ರಗಳಿಂದ ಕೂಡಿರುವುದು ವಿಷಾದಕರ.

ದೇವರು ಮತ್ತು ಮೂಢನಂಬಿಕೆಯ ಹೆಸರಿನಲ್ಲಿ ಜನರನ್ನು ಲೂಟಿ ಮಾಡುತ್ತಿರುವುದು ಅಮಾಯಕ ಜನತೆಯ ಅರಿವಿಗೆ ಬಾರದಿರುವುದೇ ವಿಚಿತ್ರ. ಅಕ್ಕನ ಈ ವಚನದಿಂದ ಜನಸಾಮಾನ್ಯರು ಖಂಡಿತ ಜಾಗ್ರತರಾಗಬೇಕಾಗಿದೆ. ಈ ಜಾಗ್ರತಿಯ ಸಂದೇಶವನ್ನು ಎಲ್ಲೆಡೆ ತಲುಪಿಸುವ ಜವಾಬ್ದಾರಿಯು ಪ್ರತಿಯೊಬ್ಬರದಾಗಿರುತ್ತದೆ.

ಸಿಕಾ
(ಕಾವ್ಯಶ್ರೀ ಮಹಾಗಾಂವಕರ)
All rights reserved Namma Kannada.

Advertisement
Share this on...