ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕಸ್ತೂರಿ ನಿವಾಸದಲ್ಲಿ ನಾಯಕಿ ಮೃದುಲಾ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆ ಅಮೃತಾ ರಾಮಮೂರ್ತಿ ಅಭಿನಯಕ್ಕೆ ಮನಸೋಲದವರಿಲ್ಲ. ಮನೋಜ್ಞ ಅಭಿನಯದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಅಮೃತಾ ಇದೀಗ ಮೃದುಲಾ ಪಾತ್ರದಿಂದ ಹೊರಬಂದಿದ್ದಾರೆ. ಈ ವಿಚಾರವನ್ನು ಸ್ವತಃ ಅಮೃತಾ ರಾಮಮೂರ್ತಿ ಅವರೇ ಹಂಚಿಕೊಂಡಿದ್ದಾರೆ. ” ನಾನು ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ ಏಳು ವರ್ಷಗಳು ಕಳೆದು ಹೋಯಿತು. ಏಳು ವರ್ಷಗಳಿಂದ ನಟನೆಯಲ್ಲಿ ಬ್ಯುಸಿಯಾಗಿರುವ ನಾನು ಇದೀಗ ಒಂದಷ್ಟು ಸಮಯಗಳ ಕಾಲ ಕುಟುಂಬದ ಜೊತೆ ಆರಾಮವಾಗಿ ಕಾಲ ಕಳೆಯಬೇಕು ಎಂದುಕೊಂಡಿದ್ದೇನೆ. ಅದೇ ಕಾರಣದಿಂದ ನಟನಾ ಜಗತ್ತಿನಿಂದ ಇದೀಗ ಕೊಂಚ ಬ್ರೇಕ್ ತೆಗೆದುಕೊಳ್ಳಬೇಕು ಎಂದು ಅಂದುಕೊಂಡೆ. ಅದೇ ಕಾರಣದಿಂದ ಇದೀಗ ಮೃದುಲಾ ಪಾತ್ರದಿಂದ ಹೊರಬಂದೆ” ಎಂದು ಹೇಳುತ್ತಾರೆ ಅಮೃತಾ ರಾಮಮೂರ್ತಿ.
ಹಳೆ ಸಂಪ್ರದಾಯ ಹಾಗೂ ಹೊಸ ವಿಚಾರಧಾರೆಗಳ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ಹೊಂದಿರುವ ‘ಕಸ್ತೂರಿ ನಿವಾಸ’ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಈ ಮೊದಲು ವರ್ಷ ಕಾಂತರಾಜ್ ಅಭಿನಯಿಸುತ್ತಿದ್ದರು. ಮುಂದೆ ತೆಲುಗಿನ ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆತಾಗ ಕಸ್ತೂರಿ ನಿವಾಸ ಧಾರಾವಾಹಿಯಿಂದ ಹೊರಬಂದರು. ಆ ಸಮಯದಲ್ಲಿ ಅಮೃತಾ ಅವರಿಗೆ ಮೃದುಲಾ ಆಗಿ ಕಾಣಿಸಿಕೊಳ್ಳುವ ಅವಕಾಶ ದೊರಕಿತು.
ಇದೀಗ ಅಮೃತಾ ಅವರು ಕೂಡಾ ಮೃದುಲಾ ಪಾತ್ರದಿಂದ ಹೊರಬರುತ್ತಿದ್ದು, ಅದೇ ಕಾರಣದಿಂದ ಕಸ್ತೂರಿ ನಿವಾಸ ಧಾರಾವಾಗಿ ತಂಡ ನಾಯಕಿ ಮೃದುಲಾ ಪಾತ್ರವನ್ನೇ ಅಂತ್ಯಗೊಳಿಸುವ ನಿರ್ಧಾರ ಮಾಡಿದ್ದಾರೆ. ನಾಯಕಿ ಮೃದುಲಾಳೇ ತನ್ನ ಜೀವ, ಪ್ರಾಣ ಎಂದು ಅಂದುಕೊಂಡಿದ್ದ ನಾಯಕನ ಬಾಳಲ್ಲಿ ಮೃದುಲಾಳ ನಂತರ ಯಾರ ಆಗಮನವಾಗಲಿದೆ ಎಂಬ ಕುತೂಹಲದ ಸಂಗತಿಗೆ ಉತ್ತರ ಸಿಗಬೇಕಿದೆ.
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಸ್ವತಿ ಲಕ್ಷ್ಮಿ ಪ್ರಿಯೆ ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿ ಆಗಿ ನಟಿಸುವ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಗುಂಗುರು ಕೂದಲಿನ ಕುವರಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಮುಂದೆ ಮೇಘ ಮಯೂರಿ ಧಾರಾವಾಹಿಯಲ್ಲಿ ಮಯೂರಿ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಅಮೃತಾ ರಾಮಮೂರ್ತಿ ಮುಂದೆ ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ನಾಯಕಿ ಐಶ್ವರ್ಯಾ ಆಗಿ ನಟಿಸಿ ಸೈ ಎನಿಸಿಕೊಂಡರು.
ತದ ನಂತರ ಕುಲವಧು ಧಾರಾವಾಹಿಯ ವಚನಾ ಆಗಿ ಕಾಣಿಸಿಕೊಂಡ ಅಮೃತಾ ಸೀರಿಯಲ್ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡರು. ಕುಲವಧು ಧಾರಾವಾಹಿ ಮುಗಿದು ವರ್ಷ ಎರಡಾಗುತ್ತಾ ಬಂದರೂ ಅಮೃತಾ ಹೆಸರು ಕೇಳಿದ ಕೂಡಲೇ ವೀಕ್ಷಕರಿಗೆ ಥಟ್ ಎಂದು ನೆನಪಾಗುವುದು ವಚನಾ ಪಾತ್ರ. ಅಷ್ಟರ ಮಟ್ಟಿಗೆ ಅದು ವೀಕ್ಷಕರ ಮನ ಸೆಳೆದಿದೆ.
ಕುಲವಧು ಧಾರಾವಾಹಿಯ ನಂತರ ಕಸ್ತೂರಿ ನಿವಾಸದ ಮೃದುಲಾ ಆಗಿ ಬದಲಾದ ಅಮೃತಾ ಪರಭಾಷೆಯ ಕಿರುತೆರೆಯಲ್ಲೂ ನಟನಾ ಕಂಪು ಪಸರಿಸಿದ್ದಾರೆ. ತೆಲುಗಿನ ಪುಟ್ಟಿಂಟಿ ಪಟ್ಟುಚೀರ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿ ಮಿಂಚಿದ ಈಕೆ ಕುಟುಂಬ ಗೌರವಂ ಎಂಬ ತೆಲುಗು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ
– ಅಹಲ್ಯಾ