‘ಅಮೃತಮತಿ’ ಆಸ್ಟ್ರೀಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ..

in ಸಿನಿಮಾ 70 views

ದಿನದಿಂದ ದಿನಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ. ಜನರು ಆತಂಕದ ಸ್ಥಿತಿಯಲ್ಲಿದ್ದಾರೆ. ಇದೆಲ್ಲದರ ನಡುವೆ ಕನ್ನಡ ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿಯೊಂದಿದೆ. ಹೌದು, ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್’ನ ಪುಟ್ಟಣ್ಣನವರು ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಕನ್ನಡ ಚಲನಚಿತ್ರವು ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮೊದಲಿಗೆ ಆನ್ ಲೈನ್ ಸ್ಕ್ರೀನಿಂಗ್ ಮೂಲಕ ಚಿತ್ರೋತ್ಸವ ಆಯೋಜಿಸಲಾಗಿದ್ದು, ಇದು ಜುಲೈ 22 ರಿಂದ ಆಗಸ್ಟ್ 5ರ ವರೆಗೆ ನಡೆಯಲಿದೆ. ಆನ್ ಲೈನ್ ಸ್ಕ್ರೀನಿಂಗ್ ಮಾಡಲ್ಪಟ್ಟ ಚಿತ್ರಗಳು ಸ್ಪರ್ಧಾಕಣದಲ್ಲೂ ಇದ್ದು, ಫಲಿತಾಂಶವನ್ನು ಆನಂತರ ಪ್ರಕಟಿಸಿ ನೇರ ಪ್ರತ್ಯಕ್ಷ ಸಮಾರಂಭ ಆಯೋಜಿಸಲಾಗುತ್ತದೆ. ಆನ್ ಲೈನ್ ಸ್ಕ್ರೀನಿಂಗ್ ಆಗುವ ಚಿತ್ರಗಳ ಪಟ್ಟಿಯಲ್ಲಿ ‘ಅಮೃತಮತಿ’ಯೂ ಸ್ಥಾನ ಪಡೆದಿದೆ.

Advertisement

 

Advertisement


‘ಅಮೃತಮತಿ’ ಚಿತ್ರವು 13ನೇ ಶತಮಾನದಲ್ಲಿ ಕನ್ನಡದ ಖ್ಯಾತ ಕವಿ ಜನ್ನ ರಚಿಸಿದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದೆ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನಿಸಿ, ಮರುಸೃಷ್ಟಿ ಮಾಡಲಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ಯುವರಾಜ ಯಶೋಧರನ ಪತ್ನಿ ಅಮೃತಮತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲ, ನೋಯ್ಡಾದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ‘ಅಮೃತಮತಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಹರಿಪ್ರಿಯಾ ಅವರು ಶ್ರೇಷ್ಠ ನಟಿ ಸಹ ಪಡೆದುಕೊಂಡಿದ್ದಾರೆ. ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.

Advertisement

Advertisement

ಉಳಿದಂತೆ ಸುಂದರರಾಜ್, ಪ್ರಮೀಳಾ ಜೋಷಾಯ್, ತಿಲಕ್ , ಸುಪ್ರಿಯಾ ರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ, ಭೂಮಿಕಾ ಲಕ್ಷ್ಮೀ ನಾರಾಯಣ್ ತಾರಗಣದಲ್ಲಿದ್ದಾರೆ. ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ. ಅರಮನೆಯಲ್ಲಿದ್ದರೂ, ಅಷ್ಟೈಶ್ವರ್ಯಗಳಿದ್ದರೂ ಅಮೃತಮತಿ ಮನಸ್ಸಿಗೆ ನೆಮ್ಮದಿ, ಖುಷಿ ಇರುವುದಿಲ್ಲ. ಇದೇ ವೇಳೆ ಒಮ್ಮೆ ಕುದುರೆ ಲಾಯದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದ ಕೆಲಸದ ಆಳು ಅಷ್ಟಾವಂಕನ ಹಾಡನ್ನು ಕೇಳಿದ ಅಮೃತಮತಿ ಅವನ ಪ್ರೀತಿಯಲ್ಲಿ ಬೀಳುತ್ತಾಳೆ. ಮುಂದೆ ಏನಾಗುತ್ತದೆ ಎನ್ನುವ ಅಮೃತಮತಿಯ ಪಾತ್ರದ ಸುತ್ತ ಸಾಗುವ ಕಥೆಯನ್ನು ಬರಗೂರು ದೃಶ್ಯರೂಪದಲ್ಲಿ ತೆರೆಮೇಲೆ ತರುತ್ತಿದ್ದಾರೆ.

Advertisement
Share this on...