ಶಿವಮೊಗ್ಗದ ಪುಟ್ಟ ಹಳ್ಳಿಯಿಂದ ಗಾಂಧಿನಗರದವರೆಗೆ….ಅನಿತಾ ಸಿನಿಜರ್ನಿ ಸ್ಟೋರಿ ಇದು

in ಮನರಂಜನೆ/ಸಿನಿಮಾ 2,999 views

ಚಿತ್ರರಂಗದಲ್ಲಿ ಇಂದು ಹೆಸರು ಮಾಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ನಟ-ನಟಿಯರಲ್ಲಿ ಕೆಲವರು ಚಿಕ್ಕಂದಿನಿಂದ ಸಿನಿಮಾ ಕನಸು ಕಂಡು ಆ ಕನಸನ್ನು ನನಸು ಮಾಡಿಕೊಂಡವರು. ಆದರೆ ಮತ್ತೆ ಕೆಲವರು ಸಿನಿಮಾ ಬಗ್ಗೆ ಸ್ವಲ್ಪವೂ ಯೋಚಿಸದೆ, ಸಿನಿಮಾ ಬಗ್ಗೆ ಏನೂ ಕೂಡಾ ತಿಳಿಯದೆ ಇರುವವರು. ಈ ರೀತಿ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದು ಚಿತ್ರರಂಗದಲ್ಲಿ ಹೆಸರು ಮಾಡಿ ತಮ್ಮದೇ ಆದ ಪ್ರೊಡಕ್ಷನ್ ಸಂಸ್ಥೆಯನ್ನು ಹುಟ್ಟುಹಾಕಿದ ಕೆಲವೇ ಕೆಲವು ನಟಿಯರಲ್ಲಿ ಅನಿತಾ ಭಟ್ ಕೂಡಾ ಒಬ್ಬರು. ‘ಸೈಕೋ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅನಿತಾ ಭಟ್ ಆ್ಯಕ್ಟಿಂಗ್ ಜೊತೆಗೆ ಗ್ಲ್ಯಾಮರ್​​​​​​​ಗೆ ಕೂಡಾ ಹೆಸರಾದವರು. ಶಿವಮೊಗ್ಗದ ಸಾಗರದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅನಿತಾ ಭಟ್ ಗಾಂಧಿನಗರದವರೆಗೂ ಬಂದ ಕಥೆ ರೋಚಕವಾದುದು. ಅನಿತಾ ಭಟ್ ಎಂದಿಗೂ ಸಿನಿಮಾ ಬಗ್ಗೆ ಕನಸು ಕಂಡವರಲ್ಲ. ಜೀವನದಲ್ಲಿ ಬೇರೆಯವರ ಮೇಲೆ ಅವಲಂಬಿತವಾಗದೆ ತಾನೇ ಏನಾದರೂ ಸಾಧಿಸಬೇಕು. ತನ್ನ ಕಾಲ ಮೇಲೆ ತಾವು ನಿಲ್ಲಬೇಕು, ವಿದ್ಯಾಭ್ಯಾಸ ಮುಂದುವರೆಸಬೇಕು ಎಂದು ನಿರ್ಧರಿಸಿ ಬೆಂಗಳೂರು ಹಾದಿ ಹಿಡಿದ ಅನಿತಾ ಭಟ್ ಅವರನ್ನು ಚಿತ್ರರಂಗ ಸ್ವಾಗತಿಸಿತು.

Advertisement

Advertisement

2005 ರಲ್ಲಿ ಜೀ ವಾಹಿನಿ ಆರಂಭವಾದ ಸಮಯದಲ್ಲಿ ಅನಿತಾಗೆ ಸ್ನೇಹಿತರೊಬ್ಬರ ಸಹಾಯದಿಂದ ನಿರೂಪಣೆ ಮಾಡಲು ಅವಕಾಶ ದೊರೆಯಿತು. ಅಲ್ಲಿಂದ ಧಾರಾವಾಹಿಯಲ್ಲೂ ಕೂಡಾ ನಟಿಸಿದ ಅನಿತಾಗೆ ‘ಸೈಕೋ’ ಚಿತ್ರತಂಡದಲ್ಲಿದ್ದ ಮಂಜು ಎಂಬ ಸ್ನೇಹಿತ ಆ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಟ್ರೈ ಮಾಡುವಂತೆ ಹೇಳಿದರು. ‘ಸೈಕೋ’ ಎಂಬ ಹೆಸರು ಕೇಳಿ ಅನಿತಾಗೆ ಚಿತ್ರದ ಬಗ್ಗೆ ಅಷ್ಟೇನೂ ಇಂಪ್ರೆಸ್ ಆಗಲಿಲ್ವಂತೆ. ನಾಯಕಿ ಪಾತ್ರಕ್ಕೆ ಅನಿತಾ ಅವರಿಗಿಂತ ಮೊದಲು ಸುಮಾರು 40 ಹುಡುಗಿಯರು ಆಡಿಷನ್​​​​​​​​ ನೀಡಿದ್ದರೂ ಅನಿತಾ ಆ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ಧಾರೆ. ಬೆಂಗಳೂರಿನ ಬಗ್ಗೆ, ಸಿನಿಮಾ, ಆ್ಯಕ್ಟಿಂಗ್ ಬಗ್ಗೆ ಏನೂ ತಿಳಿಯದ ಅನಿತಾಗೆ ‘ಸೈಕೋ’ ಚಿತ್ರತಂಡ ಪ್ರೋತ್ಸಾಹ ನೀಡಿದೆ. 2008 ರಲ್ಲಿ ಈ ಸಿನಿಮಾ ಬಿಡುಗಡೆಯಾಯ್ತು. ಅಲ್ಲಿಂದ ಈಚೆಗೆ ಅನಿತಾ ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಇಂದಿಗೂ ಅವರ ಹೆಸರು ಹೇಳಬೇಕೆಂದರೆ ಎಲ್ಲರೂ ಸೈಕೋ ಖ್ಯಾತಿಯ ಅನಿತಾ ಎಂದೇ ಗುರುತಿಸುವುದು. ಆ ಸಿನಿಮಾ ಅನಿತಾಗೆ ದೊಡ್ಡ ಮಟ್ಟದಲ್ಲಿ ಹೆಸರು ನೀಡಿತು ಎನ್ನುವುದಕ್ಕೆ ಇದೇ ಸಾಕ್ಷಿ.

Advertisement

Advertisement

ಫ್ಯಾಷನ್ ಡಿಸೈನಿಂಗ್​​​ ಮಾಡುತ್ತಿದ್ದ ಅನಿತಾ ಸಿನಿಮಾ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲವಾದರೂ ಅವಕಾಶಗಳು ಅವರನ್ನು ಹುಡುಕಿ ಬಂತು. ಸಿಲ್ಕ್​ ಸಖತ್ ಹಾಟ್ ಮಗಾ, ನಗೆಬಾಂಬ್, ಪರಪಂಚ, ಟಗರು, ಡೇಸ್ ಆಫ್ ಬೋರಾಪುರ, ಹೊಸ ಕ್ಲೈಮ್ಯಾಕ್ಸ್​​​ ಚಿತ್ರಗಳಲ್ಲಿ ಅನಿತಾ ನಟಿಸಿದ್ದಾರೆ. 2013 ರಲ್ಲಿ ಮ್ಯಾಗಜಿನ್​​ವೊಂದರ​​​ ಕವರ್ ಫೋಟೋಗಾಗಿ ಅನಿತಾ ಮಾಡಿಸಿದ ಫೋಟೋಶೂಟ್​​​​ ದೊಡ್ಡ ಸುದ್ದಿಯಾಗಿತ್ತು. ಅಲ್ಲಿಂದ​​​​​ ಬಿಗ್​ಬಾಸ್ ಸೀಸನ್ 2 ಸ್ಪರ್ಧಿಯಾಗಿ ಹೋಗಿಬಂದ ನಂತರ ಕೂಡಾ ಅನಿತಾಗೆ ಒಳ್ಳೆ ಅವಕಾಶಗಳು ದೊರೆಯಿತು. ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಹೆಚ್ಚಾಯ್ತು. ಅಲ್ಲಿಂದ ಬಂದ ನಂತರ ಜನರು ನನ್ನನ್ನು ಮೊದಲಿಗಿಂತ ಹೆಚ್ಚು ಗೌರವಿಸುತ್ತಾರೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ ಅನಿತಾ.

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಿರುವ ಈ ಸೈಕೋ ಚೆಲುವೆ, ತಮ್ಮ ಡ್ರೆಸ್​ ಸೆನ್ಸ್ ಬಗ್ಗೆ ಮಾತನಾಡುವವರಿಗೆ ಖಡಕ್ ಉತ್ತರ ನೀಡುತ್ತಾ ಬಂದಿದ್ದಾರೆ. ಬಟ್ಟೆಯಿಂದ ವ್ಯಕ್ತಿತ್ವ ಅಳೆಯುವ ಸಮಾಜ ನಮ್ಮದು ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ನಾಯಕಿಯರ ಸಂಭಾವನೆ ಬಗ್ಗೆ ಕೂಡಾ ಅನಿತಾಗೆ ಬೇಸರ ಇದೆಯಂತೆ. ಇತರ ಚಿತ್ರರಂಗಗಳಿಗೆ ಹೋಲಿಸಿದರೆ ನಮ್ಮ ಚಿತ್ರರಂಗದಲ್ಲಿ ನಾಯಕಿಯರಿಗೆ ಯಾವಾಗಲೂ ಕಡಿಮೆ ಸಂಭಾವನೆ ಕಡಿಮೆ ಎನ್ನುತ್ತಾರೆ ಅನಿತ.

ಅನಿತಾ ಭಟ್ ಮೊದಲ ಸಿನಿಮಾದಿಂದ ಇಂದಿಗೂ ಸಖತ್ ಫಿಟ್ ಹಾಗೂ ಗ್ಲ್ಯಾಮರಸ್ ಆಗಿ ಕಾಣಲು ಕಾರಣ ಯೋಗ. ಸಿನಿಮಾದಷ್ಟೇ ಅವರು ಯೋಗಕ್ಕೂ ಕೂಡಾ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿದಿನ ತಪ್ಪದೆ ಯೋಗ ಮಾಡುತ್ತಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅನಿತಾ ಭಟ್ ಬಹಳ ವರ್ಷಗಳ ಕನಸಾದ ತಮ್ಮದೇ ಪ್ರೊಡಕ್ಷನ್ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ.

ವಿಜಯದಶಮಿಯ ಶುಭ ದಿನದಂದು ಎಬಿ ಕ್ರಿಯೇಷನ್ಸ್ ಎಂಬ ಸಂಸ್ಥೆ ಆರಂಭಿಸಿರುವ ಅನಿತಾ ಭಟ್ ಇದರ ಮೂಲಕ ಅವಕಾಶ ವಂಚಿತರಾಗಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಮುಂದಾಗಿದ್ದಾರೆ. ಈ ಸಂಸ್ಥೆ ಮೂಲಕ ಈಗಾಗಲೇ ಅನಿತಾ ಕಿರುಚಿತ್ರವನ್ನು ತಯಾರಿಸಿದ್ದಾರೆ. ಕ್ಲೈಮ್ಯಾಕ್ಸ್ ಹೆಸರಿನ ಈ ಕಿರುಚಿತ್ರದ ಫಸ್ಟ್​​​​ಲುಕ್ ಈಗಾಗಲೇ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಿರುಚಿತ್ರ ಕೂಡಾ ರಿಲೀಸ್ ಆಗಲಿದೆ. ಮುಂದಿನ ದಿನಗಳಲ್ಲಿ ತಮ್ಮ ಕ್ರಿಯೇಷನ್ಸ್​​ ಮೂಲಕ ಸಿನಿಮಾಗಳನ್ನು ಮಾಡುವ ಆಸೆ ಕೂಡಾ ಅವರಿಗಿದೆ.

ಇಷ್ಟು ಮಾತ್ರವಲ್ಲದೆ ಅನಿತಾ ಆಗ್ಗಾಗ್ಗೆ ಮಹಿಳೆಯರಿಗೆ ಉಚಿತವಾಗಿ ಸೆಲ್ಫ್​ ಡಿಫೆನ್ಸ್ ಕ್ಲಾಸ್ ಆಯೋಜಿಸುತ್ತಾರೆ. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತಾ, ಪೆಟ್ಸ್ ಜೊತೆ ಆಡುತ್ತಾ, ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಾರೆ. ಸದ್ಯಕ್ಕೆ ಅನಿತಾ ಭಟ್ ಅವರ ಕಲಿವೀರ, ಕನ್ನೇರಿ ಹಾಗೂ ಬೆಂಗಳೂರು 69, ಮೂರು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಅದರಲ್ಲಿ ‘ಬೆಂಗಳೂರು 69’ ಚಿತ್ರದಲ್ಲಿ ಅನಿತಾ ಭಟ್ ಇತರ ಸಿನಿಮಾಗಳಿಗಿಂತ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಈ ಸೋಷಿಯಲ್ ಥ್ರಿಲ್ಲರ್ ಚಿತ್ರವನ್ನು ಜಾಕೀರ್ ಹುಸೇನ್ ಕರೀಂಖಾನ್ ನಿರ್ಮಿಸಿದ್ದು ಕ್ರಾಂತಿ ಚೈತನ್ಯ ನಿರ್ದೇಶಿಸಿದ್ದಾರೆ. ಕೊರೊನಾ ಇಲ್ಲದಿದ್ದರೆ ಈಗಾಗಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಮುಂದಿನ ವರ್ಷ ‘ಬೆಂಗಳೂರು 69’ ಬಿಡುಗಡೆಯಾಗಲಿದ್ದು ಈ ಸಿನಿಮಾ ಹಲವು ವಿಶೇಷತೆಗಳನ್ನು ಹೊಂದಿಗೆ ಎನ್ನಲಾಗಿದೆ.

ಅನಿತಾ ಭಟ್ ಅವರಿಗೆ ಸಿನಿಮಾಗಳಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ದೊರೆಯುವಂತಾಗಲಿ, ಅವರ ಸಿನಿಮಾ ಕರಿಯರ್ ಹಾಗೂ ವೈಯಕ್ತಿಕ ಬದುಕು ಚೆನ್ನಾಗಿರಲಿ, ಅದೇ ರೀತಿ ತಮ್ಮ ಎಬಿ ಕ್ರಿಯೇಷನ್ಸ್ ಮೂಲಕ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನು ನೀಡುವಂತಾಗಲಿ ಎಂದು ಹಾರೈಸೋಣ.

Advertisement
Share this on...