ಬುದ್ಧನ ಸಂದೇಶಗಳ ಪಾಲನೆಯಲ್ಲಿದೆ ಮನುಷ್ಯ ಜೀವನದ ಸಾರ್ಥಕತೆ…!

in ಕನ್ನಡ ಮಾಹಿತಿ 658 views

(ಇಂದು ಬುದ್ಧ ಪೂರ್ಣಿಮೆಯ ನಿಮಿತ್ತ ಈ ಲೇಖನ )

Advertisement

“ಬುದ್ಧ” ಎಂಬ ದಿವ್ಯ ಚೇತನ ಇಡೀ ಮನುಕುಲಕ್ಕೆ ನಂದಾದೀಪ. ಎಲ್ಲರ ಬಾಳಿನ ಬೆಳಕು,ಆಶಾಕಿರಣ, ಅಮರಜ್ಯೋತಿಯಾಗಿದೆ.
ಎರಡು ಸಾವಿರದ ಆರು ನೂರು ವರ್ಷಗಳ ಹಿಂದೆ ಗೌತಮ ಬುದ್ಧ ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯಗಳಾಗಿವೆ.ಬುದ್ಧನ ಜೀವನದ ಅದ್ಭುತವೆಂದರೆ ವೈಶಾಖ ಪೂರ್ಣಿಮೆಯಂದು ಜನಿಸಿದ್ದು, ವೈಶಾಖ ಪೂರ್ಣಿಮೆಯೆ೦ದೆ ಗೌತಮ ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದದ್ದು ಹಾಗೂ ಬುದ್ಧನು ಪರಿನಿರ್ವಾಣ ಹೊಂದಿದ್ದು ವೈಶಾಖ ಪೂರ್ಣಿಮೆಯಂದೆ.

Advertisement

 

Advertisement

Advertisement

ಬುದ್ಧನಿಗೆ ರಾಜವೈಭವ ಸುಂದರವಾದ ಹೆಂಡತಿ ಮುದ್ದಾದ ಮಗು ಎಲ್ಲವೂ ಇದ್ದಾಗಲೂ ಸಹ ಅವನ ಜೀವನದಲ್ಲಿ ನಡೆದ ಮೂರು ನೋಟಗಳು ಬಹಳಷ್ಟು ಬದಲಾವಣೆಯನ್ನು ಮಾಡಿದವು. ಒಬ್ಬ ಮುದುಕ ಒಂದು ರೋಗಿ ಒಂದು ಶವ ಈ ಮೂರು ದೃಶ್ಯಗಳನ್ನು ನೋಡಿದಾಗ, ಬುದ್ಧ ತನಗೂ ಒಂದು ದಿನ ಮುಪ್ಪು ಬರುತ್ತದೆ ರೋಗ ಬರುತ್ತದೆ ಸಾವು ಬರುತ್ತದೆ ಎಂಬ ಸತ್ಯವನ್ನು ಅರಿತುಕೊಂಡ, ಇಂದಿನ ಎಲ್ಲ ಭೋಗ ಭಾಗ್ಯಗಳು ಕ್ಷಣಿಕವಾದ ವುಗಳು. ಹಾಗಾದರೆ ಈ ಲೋಕದಲ್ಲಿ ಈ ಅನಂತ ದುಃಖಕ್ಕೆ ಕಾರಣ ಏನು? ಇದನ್ನು ಹೋಗಲಾಡಿಸಲು ಸಾಧ್ಯವೇ? ಹೇಗೆ? ಜನನ ಮರಣಗಳ ರಹಸ್ಯ ಏನು? ಪ್ರಾಣಿಗಳೆಲ್ಲವೂ ಈ ದುಃಖಕ್ಕೆ ಒಳಗಾಗುವುದು ಅನಿವಾರ್ಯವೇ ? ಬುದ್ಧಿಜೀವಿ ಎನಿಸಿಕೊಂಡ ಮಾನವ ತನ್ನ ಬುದ್ಧಿಶಕ್ತಿಯಿಂದ ಇದನ್ನು ಜಯಿಸಲು ಹಾಗೂ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲವೇ? ಈ ಎಲ್ಲ ಪ್ರಶ್ನೆಗಳು ಸಿದ್ಧಾರ್ಥನ ಹೃದಯವನ್ನು ಕಲಕಿದವು.ದಿನ ಕಳೆದಂತೆ ಸಿದ್ಧಾರ್ಥನ ವಿರಕ್ತ ಭಾವನೆ ಹೆಚ್ಚಾಗತೊಡಗಿತು ಜಗತ್ತಿನಲ್ಲಿ ಮನುಷ್ಯರು ಪಡುವ ಇಷ್ಟೆಲ್ಲ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಹುಡುಕಲೇ ಬೇಕೆಂಬ ಛಲ ಹೆಚ್ಚಾಯಿತು, ಅಂದು ವೈಶಾಖ ಪೂರ್ಣಿಮೆ ದಿನ ಸಕಲ ರಾಜ ವೈಭವ ತಂದೆ ತಾಯಿ ಸುಂದರ ಹೆಂಡತಿ ಮುದ್ದಾದ ಮಗು ಎಲ್ಲವನ್ನೂ ತೊರೆದು ದೃಢ ಸಂಕಲ್ಪವನ್ನು ಮಾಡಿ ದಿವ್ಯ ಅನ್ವೇಷಣೆಗೆ ಸಿದ್ಧಾರ್ಥ ತೊಡಗಿದ.

 

ಮುಂದೆ ಜ್ಞಾನೋದಯವಾಗಿ ಬುದ್ಧನಾಗಿ ಇಡೀ ಲೋಕ ಸಂಚಾರವನ್ನು ಮಾಡುತ್ತಾ ಲೋಕದ ಕಲ್ಯಾಣಕ್ಕಾಗಿ ತನ್ನನ್ನು ತಾನು ತೊಡಗಿಸಿದ. ಬುದ್ಧ ಕೊಟ್ಟಂಥ ಸಂದೇಶಗಳು ಎಲ್ಲರ ಜೀವನದ ವಾಸ್ತವ ಸತ್ಯಗಳು. ಬುದ್ಧ ಜಗತ್ತಿಗೆ ನೀಡಿದ ನಾಲ್ಕು ಸತ್ಯಗಳು ,ಅಷ್ಟಾಂಗ ಮಾರ್ಗಗಳು ಎಲ್ಲರ ಜೀವನವನ್ನು ಸಾರ್ಥಕ ಗೊಳಿಸುವಲ್ಲಿ ಪ್ರಥಮ ಹೆಜ್ಜೆಗಳಾಗಿವೆ. ಜೀವನವು ದುಃಖ ಮಯವಾಗಿದೆ, ಆಸೆಯೇ ದುಃಖಕ್ಕೆ ಮೂಲ ಕಾರಣ, ದುಃಖ ನಿವಾರಣೆಗಾಗಿ ಆಸೆಗಳನ್ನು ತ್ಯಜಿಸಬೇಕು, ಪ್ರತಿಯೊಬ್ಬರೂ ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು.

 

” ತೃಷೆ ” ಎಂದರೆ ಆಸೆ, ಆಸೆಯೇ ಎಲ್ಲ ಅನರ್ಥಗಳಿಗೆ ಮೂಲ, ಪ್ರತಿಯೊಬ್ಬ ಮನುಷ್ಯ ಶುದ್ಧವಾದ ಜೀವನದಿಂದ ಬುದ್ಧಿಶಕ್ತಿ ವೃದ್ಧಿಸಿಕೊಂಡು ಕ್ಷುದ್ರ ಬಯಕೆಗಳನ್ನು ಜಯಿಸಿ ನಿವಾ೯ಣ ಪಥವನ್ನು ಸಾಧಿಸಬೇಕು. ನಿವಾ೯ಣ ಪಡೆದ ಮನುಷ್ಯ ದುಃಖಗಳಿಗೆ ರೋಗಗಳಿಗೆ ಮರಣಕ್ಕೆ ದೂರವಾಗುತ್ತಾನೆ ಇಂತಹ ಬಂಧನಗಳು ಆತನನ್ನು ಬಂಧಿಸಲಾರವು.ಹಾಗಾದರೆ ಮನುಷ್ಯ ನಿವಾ೯ಣವನ್ನು ಹೊಂದಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು. ಅಂದರೆ ಸರಿಯಾದ ದೃಷ್ಟಿ, ಯೋಚನೆ , ಮಾತು, ಜೀವನ ವಿಧಾನ, ಕ್ರಿಯೆ, ಕೃಷಿ ,ಸ್ಮೃತಿ ಹಾಗೂ ಗುರಿ .ಹೀಗೆ ಈ ಎಲ್ಲ ಅಷ್ಟಾಂಗ ಮಾರ್ಗಗಳನ್ನು ಮನುಷ್ಯ ಸರಿಯಾಗಿ ಅನುಸರಿಸುವ ಮೂಲಕ ಜೀವನವನ್ನು ಸಾರ್ಥಕ ಪಥದಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ.

 

ಬುದ್ಧನು ,ಮನುಷ್ಯ ತನ್ನ ಏಳು ಬಿಳುಗಳಿಗೆ ತಾನೇ ಹೊಣೆಗಾರ, ಹುಟ್ಟಿನಿಂದ ಯಾರೂ ಉತ್ತಮರಲ್ಲ ಅಥವಾ ಯಾರೂ ಕೀಳೂ ಅಲ್ಲ ಮನುಷ್ಯ ತನ್ನ ಒಳಗಿನ ಬೆಳಕನ್ನು ಸರಿಪಡಿಸಿಕೊಳ್ಳಬೇಕು. ಅರಿಷಡ್ವರ್ಗಗಳನ್ನು ದೂರ ಮಾಡಿ ,ಆಸೆಗಳನ್ನು ಬಿಟ್ಟು ನಿರ್ಭಯ ನಾಗಿರಬೇಕು, ಸಕಲರಲಿ ದಯೆಯನ್ನು ಬೆಳೆಸಿಕೊಳ್ಳಬೇಕು, ಇತರರಿಗೆ ನೆರವಾಗುವ ಗುಣವಿರಬೇಕು,ಒಳ್ಳೆಯ ಚಿಂತನೆಗಳನ್ನು ಮೂಡಿಸಿಕೊಳ್ಳುವ ಮೂಲಕ ಬದುಕಿನ ಸವಾಲುಗಳನ್ನು ಎದುರಿಸಬೇಕು. ಹೀಗೆ ಬುದ್ಧನು ತೋರಿಸಿದ ಮಾರ್ಗವನ್ನು ನಾವೆಲ್ಲ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಬುದ್ಧನ ಉಪದೇಶಗಳು ಹಾಗೂ ಬುದ್ಧನ ಬದುಕನ್ನು ಒಟ್ಟಾಗಿ ನೋಡಬೇಕು ಅಂದಾಗ “ಬುದ್ಧನ ಬದುಕೇ ಒಂದು ಸಂದೇಶವಾಗಿ” ನಮಗೆ ಕಾಣುತ್ತದೆ.

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ: ಗದಗ .

Advertisement
Share this on...