2017 ರಲ್ಲಿ ಬಿಡುಗಡೆಯಾದ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ಎಸಿಪಿ ಪಾತ್ರ ಮಾಡಿದ್ದ ನಟ ಆದಿತ್ಯ, ಆ ಚಿತ್ರದ ನಂತರ ಮತ್ತೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. 2 ವರ್ಷಗಳ ನಂತರ ಆದಿತ್ಯ ‘ಮುಂದುವರೆದ ಅಧ್ಯಾಯ’ ಚಿತ್ರವನ್ನು ಒಪ್ಪಿಕೊಂಡರು. ಕೊರೊನಾ ಲಾಕ್ಡೌನ್ ಕಾರಣ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ತಡವಾಗಿತ್ತು. ಇದೀಗ ಸಿನಿಮಾ ಕೆಲಸಗಳು ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರವರಿ 23 ರಂದು ‘ಮುಂದುವರೆದ ಅಧ್ಯಾಯ’ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಸಖತ್ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಈ ಡೈಲಾಗ್ ಟೀಸರ್ ಬಿಡುಗಡೆಯಾಗಿದೆ. ಕಳೆದ ವರ್ಷವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಸ್ನೇಹಿತ ಆದಿತ್ಯ ಚಿತ್ರಕ್ಕೆ ಶುಭ ಕೋರಿದ್ದರು.
ಬಹಳ ದಿನಗಳಿಂದ ಬ್ರೇಕ್ಗಾಗಿ ಕಾಯುತ್ತಿದ್ದ ಆದಿತ್ಯಗೆ ಈ ಸಿನಿಮಾ ಒಳ್ಳೆ ಹೆಸರು ತಂದುಕೊಡಲಿದೆ ಎಂದು ಸಿನಿಪ್ರಿಯರು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಕೂಡಾ ಆದಿತ್ಯ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1.31 ನಿಮಿಷ ಅವಧಿಯ ಈ ಟೀಸರ್ನಲ್ಲಿ ಆದಿತ್ಯ ಅವರ ಡೈಲಾಗ್ ಇದೆ. “ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನು ಬೈತೀವಿ, ನಮ್ಮನ್ನು ಕಾಯೋ ಪೊಲೀಸರನ್ನು ಬೈತೀವಿ. ಸುದ್ದಿ ಮುಟ್ಟಿಸೋ ವಾಹಿನಿಗಳನ್ನು ಬೈತೀವಿ, ಕಷ್ಟ ನಿವಾರಿಸೋ ಡಾಕ್ಟರ್ಗಳನ್ನ ಬೈತೀವಿ, ಅನ್ನ ಹಾಕೋ ರೈತ, ಪಾಠ ಮಾಡೋ ಮೇಷ್ಟ್ರು, ಊಟ ಕೊಡೋ ಹೋಟ್ಲು, ಮನೆ ತಲುಪಿಸೋ ಡ್ರೈವರ್, ನಮ್ಮನ್ನು ತಿದ್ದೋ ಕಲಾವಿದ ಹೀಗೆ ಎಲ್ರನ್ನೂ ಬೈತೀವಿ, ಆದ್ರೆ ಇವ್ರಲ್ಲಿ ನಾವೂ ಒಬ್ಬರಾಗಿರ್ತೀವಿ ಅನ್ನೋದನ್ನ ಮರಿತೀವಿ.
ಬದಲಾವಣೆ ಬರುವುದಿಲ್ಲ, ನಾವ್ ಬದಲಾಗಬೇಕು, ಎಷ್ಟೋ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆ, ಈ ನನ್ನ ‘ಮುಂದುವರೆದ ಅಧ್ಯಾಯ” ಎಂಬ ಡೈಲಾಗ್ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಈ ಟೀಸರ್ನಿಂದಲೇ ಸಿನಿಮಾ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ ಎಂಬ ವಿಚಾರ ತಿಳಿಯುತ್ತದೆ. “ಟೀಸರ್ ನೋಡುತ್ತಿದ್ದರೆ ಇದೊಂದು ಭರವಸೆಯ ಸಿನಿಮಾ ಎನ್ನಿಸುತ್ತಿದೆ, ಸಿನಿಮಾ ನೋಡಲು ಕಾಯುತ್ತಿದ್ದೇವೆ, ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ ಎಂದು ಸಿನಿಪ್ರಿಯರು ಆದಿತ್ಯ ಅವರಿಗೆ ಶುಭ ಕೋರಿದ್ದಾರೆ.
ಆದಿತ್ಯ ಪ್ರತಿಭಾವಂತ ನಟ, ಆದರೆ ಕನ್ನಡ ಚಿತ್ರರಂಗ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಮತ್ತೆ ಕೆಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಅವರಿಗೆ ಒಳ್ಳೆ ಹೆಸರು ತಂದುಕೊಡಲಿ” ಎಂದು ಎಲ್ಲರೂ ಹಾರೈಸಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು ಈಗಾಗಲೇ ಬಿಡುಗಡೆಯಾಗಿರುವ ನೀ ಮಾಯಾ ಸಂಚಾರಿ…, ಶಿವಂ ಶಿವಂ… ಹಾಡುಗಳು ಸಂಗೀತ ಪ್ರಿಯರಿಗೆ ಮೆಚ್ಚುಗೆಯಾಗಿವೆ. ಚಿತ್ರದ ಹಾಡುಗಳಿಗೆ ಜಾನಿ-ನಿತಿನ್ ಸಂಗೀತ ನೀಡಿದ್ದಾರೆ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಇದೆ.
ಕಣಜ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಬಾಲು ಚಂದ್ರಶೇಖರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆದಿತ್ಯ ಜೊತೆಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್, ಅಜಯ್ ರಾಜ್, ವಿನಯ್ ಕೃಷ್ಣ ಸ್ವಾಮಿ, ಆಶಿಕಾ ಸೋಮಶೇಖರ್, ಸಂದೀಪ್ ಕುಮಾರ್, ಚಂದನ ಗೌಡ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಮಾರ್ಚ್ 18 ರಂದು ‘ಮುಂದುವರೆದ ಅಧ್ಯಾಯ’ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.