ಸಿನೆಮಾ, ಭಾವಗೀತೆ, ಭಕ್ತಿಪ್ರಧಾನಸಂಗೀತ, ಸುಗಮಸಂಗೀತ ಹೀಗೆ ಯಾವುದೇ ಸಂಗೀತವಾಗಿರಲಿ, ಹಾಡುಗಳ ಸುಧೆಯನ್ನು ಹರಿಸಿದ ಖ್ಯಾತಿ ಲಹರಿ ಆಡಿಯೋ ಸಂಸ್ಥೆಗೆ ಸಲ್ಲುತ್ತದೆ. ದಶಕಗಳಿಂದ ಈ ಸಂಸ್ಥೆ ಕನ್ನಡದಲ್ಲಿ ಅನೇಕ ಹಿಟ್ ಹಾಡುಗಳನ್ನು ನೀಡುವ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ. ಈಗಾಗಲೇ ಅದರ ಸಾಧನೆಗೆ ಕಿರೀಟವೆಂಬಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಅದಕ್ಕೆ ಸೇರ್ಪಡೆಯೇನೋ ಎಂಬಂತೆ ಈಗ ಯೂಟ್ಯೂಬ್ನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಹೌದು. ಲಹರಿ ಆಡಿಯೋ ಸಂಸ್ಥೆಗೆ 1.18 ಕೋಟಿ ಜನ ಚಂದಾದಾರರಾಗಿದ್ದಾರೆ. ಅದಕ್ಕಾಗಿ ಯೂಟ್ಯೂಬ್ನಿಂದ ಕೊಡಮಾಡುವ ಪ್ರತಿಷ್ಠಿತ ‘ಡೈಮಂಡ್ ಅವಾಡ್೯’ ಸಿಕ್ಕಿದೆ.”ಇದು ಸಮಸ್ತ ಕನ್ನಡಿಗರಿಗೆ ಸಲ್ಲಬೇಕಾದ ಗೌರವ. ಅವರ ಪ್ರೋತ್ಸಾಹ, ಸಹಕಾರಕ್ಕೆ ಸಂದ ಜಯ. ಸಣ್ಣ ಸಂಸ್ಥೆಯೊಂದನ್ನು ಆರುುಕೋಟಿ ಕನ್ನಡಿಗರು ಪೋಷಿಸಿದ ಫಲವಾಗಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ.
ಹಾಗಾಗಿ ಈ ಪ್ರಶಸ್ತಿಯನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇವೆ ಎಂದು ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಹೇಳುತ್ತಾರೆ. ಈಗಾಗಲೇ ಯೂಟ್ಯೂಬ್ನಿಂದ ಲಹರಿ ಸಂಸ್ಥೆಗೆ ಎರಡು ಪ್ರಶಸ್ತಿಗಳು ಸಿಕ್ಕಿದೆ. ಒಂದು ಲಕ್ಷ ಚಂದಾದಾರರಾಗುತ್ತಿದ್ದಂತೆ ಸಿಲ್ವರ್, 50 ಲಕ್ಷ ಚಂದಾದಾರರ ಸಂಖ್ಯೆ ಏರುತ್ತಿದ್ದಂತೆ ಗೋಲ್ಡನ್ ಹಾಗೂ 1 ಕೋಟಿ ಚಂದಾದಾರರನ್ನು ತಲುಪಿದರೆ ಡೈಮಂಡ್ ಬಟನ್ ದೊರೆಯುತ್ತದೆ. ಅದರಲ್ಲೂ ಈ ಕೊರೋನಾ ಸಂದರ್ಭದಲ್ಲಿ ಜನರು ಮನೆಯಲ್ಲೇ ಕುಳಿತಿದ್ದರಿಂದ ಹೆಚ್ಚು ಜನ ಹಾಡುಗಳನ್ನು ಕೇಳುವ ಹುಚ್ಚು ಬೆಳೆಸಿಕೊಂಡರು. ಬೆಂಗಳೂರು ಮೂಲದ ಲಹರಿ ಮ್ಯೂಸಿಕ್ ಸಂಸ್ಥೆಗೆ ಈ ನಡೆ ಒಂದು ವರದಾನವೇ ಆಯಿತು.
ಆದರೂ ಅಲ್ಲಲ್ಲಿ ಎಲ್ಲಾ ಸಂಸ್ಥೆಗಳಂತೆ ಕಷ್ಟವನ್ನು ಅನುಭವಿಸಿದರೂ ಶೀಘ್ರದಲ್ಲೇ ಮೈ ಕೊಡವಿ ನಿಂತಿತು. ಒಂದು ಕೋಟಿ ಚಂದಾದಾರರನ್ನು ತಲುಪಿತು. ಈಗ ಲಹರಿ ಬತ್ತಳಿಕೆಯಲ್ಲಿ ಬರೋಬ್ಬರಿ 1.26 ಲಕ್ಷ ವಿಡಿಯೋಗಳಿವೆ. ದೇಶದಲ್ಲಿ ಟಿ-ಸೀರೀಸ್ ಬಳಿಕ ಅತಿ ದೊಡ್ಡ ರೆಕಾರ್ಡಿಂಗ್ ಸಂಸ್ಥೆ ಅನ್ನುವ ಹೆಗ್ಗಳಿಕೆ ಲಹರಿ ಸಂಸ್ಥೆಗಿದೆ. ಲಹರಿ 45 ವರ್ಷಗಳ ಹಿಂದೆ ಮನೋಹರ್ ನಾಯ್ಡು ಎಂಬ ವ್ಯಕ್ತಿಯ ಕನಸಿನ ಕೂಸಾಗಿ ಮೂಡಿಬಂತು. ಕ್ಯಾಸೆಟ್ಗಳ ಕಾಲದಿಂದ ಆನ್ಲೈನ್ ಪ್ರಸಾರದವರೆಗೂ ಲಹರಿ ಸಂಸ್ಥೆ ನಡೆದು ಬಂದ ಹಾದಿ ಬಹಳ ಅದ್ಭುತ. ರವಿಚಂದ್ರನ್ ಅವರ ‘ಪ್ರೇಮಲೋಕ’ದ ಕ್ಯಾಸೆಟ್ಗಳು ಈ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದು ಅತ್ಯಧಿಕ ಸಂಖ್ಯೆಯಲ್ಲಿ ಬಿಕರಿಗೊಂಡಾಗ ಲಹರಿಯ ಪ್ರಸಿದ್ಧತೆ ಇನ್ನೂ ಹೆಚ್ಚಿತು.
ಬಹುಷಃ ಈಗ ಇರುವ ದಕ್ಷಿಣ ಭಾರತದ ರೆಕಾರ್ಡಿಂಗ್ ಸಂಸ್ಥೆಗಳಲ್ಲಿ ಅದು ಪರಭಾಷೆಯಲ್ಲಾಗಿರಲಿ, ಇಷ್ಟು ಸಂಖ್ಯೆಯಲ್ಲಿ ಚಂದಾದಾರರನ್ನು ಹೊಂದಿರುವ ಸಂಸ್ಥೆ ಇಲ್ಲ. ಲಹರಿ ಯೂಟ್ಯೂಬ್ ಚಾನೆಲ್ ಪ್ರಾರಂಭವಾಗಿ 10 ವರ್ಷಗಳು ಸಂದಿವೆ. ಕನಿಷ್ಟ ಅಂದ್ರೆ ಒಂದು ತಂಡದಲ್ಲಿ 25ರಷ್ಟು ಕೆಲಸಗಾರರಿದ್ದಾರೆ. ಈ ಸಂಸ್ಥೆಯ ಮಾಲಕರಿಬ್ಬರಿಗೂ ಕರ್ನಾಟಕ ಸರ್ಕಾರ ಕೊಡುವ ಪ್ರತಿಷ್ಟಿತ ‘ರಾಜ್ಯೋತ್ಸವ’ ಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲೇ ಲಹರಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
– ಅಹಲ್ಯಾ