ಬರೋಬ್ಬರಿ 40 ವರ್ಷಗಳಿಗೆ ಒಮ್ಮೆ ಮಾತ್ರ ದರ್ಶನ ನೀಡುವ ಈ ದೇವರ ಬಗ್ಗೆ ನಿಮಗೆ ಗೊತ್ತೇ…?

in ಕನ್ನಡ ಮಾಹಿತಿ 327 views

ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದಾದ ತಮಿಳುನಾಡಿನ ಕಂಚಿ ವರದರಾಜಸ್ವಾಮಿ ದೇವಾಲಯದ ವಿಶೇಷತೆಗಳ ಬಗ್ಗೆ ಎಲ್ಲರೂ ತಿಳಿದಿರಲೇಬೇಕು. ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಹೊಂದಿರುವ ಈ ದೇವಾಲಯವು 108 ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ಒಂದು. ಈ ದೇವಾಲಯದ ವೈಶಿಷ್ಟ್ಯವೆಂದರೆ ದೇವಾಲಯದ ವರದರಾಜಸ್ವಾಮಿ ಮೂಲ ವಿಗ್ರಹವು ನಾಲ್ಕು ದಶಕಗಳಿಗೆ ಒಮ್ಮೆ ಮಾತ್ರ ದರ್ಶನ ನೀಡುವುದು. ಅಂದರೆ 40 ವರ್ಷಗಳಿಗೆ ಒಮ್ಮೆ ಮಾತ್ರ ಈ ದೇವರ ದರ್ಶನ ಪಡೆಯಲು ಸಾಧ್ಯ. ಅದು ಕೂಡ ಕೇವಲ 48 ದಿನಗಳಕಾಲ ಮಾತ್ರ. 40 ವರ್ಷಗಳಿಗೆ ಒಮ್ಮೆ ಮಾತ್ರ ದರ್ಶನ ನೀಡುವ ಕಂಚಿ ವರದರಾಜಸ್ವಾಮಿ ದೇವರ ಮೂಲ ವಿಗ್ರಹವನ್ನು ಉಳಿದ ದಿನಗಳಲ್ಲಿ ದೇವಾಲಯದ ಕಲ್ಯಾಣಿಯಲ್ಲಿ ಬೆಳ್ಳಿಪೆಟ್ಟಿಗೆಯಲ್ಲಿ ವಿಗ್ರಹವನ್ನು ಭದ್ರವಾಗಿ ಇರಿಸಲಾಗುತ್ತದೆ. ಸದಾಕಾಲ ನೀರಿನಲ್ಲಿ ಮುಳುಗಿರುವ ಕಂಚಿಯ ವರದರಾಜಸ್ವಾಮಿ ದೇವಾಲಯದ ಬಗ್ಗೆ ಇನ್ನು ಅನೇಕ ಕುತೂಹಲಕರ ಸಂಗತಿಗಳಿವೆ. ಕಂಚಿಯ ಈ ವರದರಾಜಸ್ವಾಮಿ ದೇವಾಲಯವನ್ನು ವಾಡಿಕೆಯಲ್ಲಿ ಕರೆಯುವುದು ಅತ್ತಿ ವರದರಾಜ ಅಥವಾ ಅತ್ತಿ ವರದಾನ್ ಎಂದು. ಹೀಗೆ ಈ ದೇವಾಲಯನ್ನು ಕರೆಯಲು ಕಾಂಚಿಪುರಂನಲ್ಲಿ ಈ ಹಿಂದೆ ಇದ್ದ ಅತ್ತಿಮರಗಳಂತೆ.

Advertisement

Advertisement

ಇಲ್ಲಿಗೆ ಬರುವ ಭಕ್ತರು ವಿಶೇಷವಾಗಿ ಅತ್ತಿಹಣ್ಣನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಅಲ್ಲದೇ ಇಲ್ಲಿನ ಅತ್ತಿವರದರಾಜ ಎಂದು ಕರೆಯಲ್ಪಡುವ ವಿಷ್ಣುವಿನ ವಿಗ್ರಹವನ್ನು ಅತ್ತಿಮರದಿಂದಲೇ ನಿರ್ಮಿಸಿರುವುದು ಎಂಬುದು ವಿಶೇಷ. ಈ ವಿಗ್ರಹ ಸುಮಾರು ಹತ್ತು ಅಡಿಗಳಷ್ತು ಎತ್ತರವಾಗಿದೆ. ಈ ದೇವರ ಮೂರ್ತಿಯನ್ನು 40 ವರ್ಷಗಳಿಗೆ ಒಮ್ಮೆ ಅನಂತಸರಸ್ ಎಂಬ ಕಲ್ಯಾಣಿಯಿಂದ ಹೊರಗೆ ತೆಗೆದು ಶುದ್ಧಗೊಳಿಸಲಾಗುತ್ತದೆ. 48 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. 24 ದಿನಗಳ ಕಾಲ ಮಲಗಿದ ಭಂಗಿಯಲ್ಲಿ ದರ್ಶನ ನೀಡುವ ಈ ದೇವರು ಉಳಿದ 24 ದಿನಗಳ ಕಾಲ ನಿಂತ ಭಂಗಿಯಲ್ಲಿ ದರ್ಶನ ನೀಡುತ್ತಾರೆ. ಹೀಗೆ 48 ದಿನಗಳ ಕಾಲ ದರ್ಶನದ ಬಳಿಕ ಅತ್ತಿವರದರಾಜ ದೇವರು ಮತ್ತೆ 40 ವರ್ಷಗಳ ಕಾಲ ಸುದೀರ್ಘ ನಿದ್ರೆಯಲ್ಲಿರುತ್ತಾರೆ. ಈ 40 ವರ್ಷಗಳ ಅವಧಿಯಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಮೂಲ ವಿಗ್ರಹವನ್ನೇ ಹೋಲುವ ವಿರದರಾಜಸ್ವಾಮಿ ವಿಗ್ರಹವನ್ನಿಟ್ಟು ಪೂಜೆ ಸಲ್ಲಿಸಲಾಗುತ್ತದೆ.

Advertisement

ಈ ಹಿಂದೆ ವರದಾರಜ ಸ್ವಾಮಿ ಮೂರ್ತಿಯನ್ನು 1939ರ ಆಷಾಡದಲ್ಲಿ ದರ್ಶನಕ್ಕೆ ಇಡಲಾಗಿತ್ತು. ನಂತರ 1979ರ ಆಷಾಡದಲ್ಲಿ ಮೂರ್ತಿಯ ದರ್ಶನ ದೊರಕಿತ್ತು. ಇತ್ತೀಚೆಗೆ 2019ರ ಜುಲೈನಲ್ಲಿ ದೇಗುಲದ ಕಲ್ಯಾಣಿಯಿಂದ ಈ ದಿವ್ಯ ಮೂರ್ತಿಯನ್ನು ಹೊರತೆಗೆದು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತ್ತೆ ಈ ಅಪರೂಪದ ಈ ವರದರಾಜಸ್ವಾಮಿ ವಿಷ್ಣುದೇವರ ಮೂರ್ತಿ ದರ್ಶನ ಪಡೆಯಬೇಕೆಂದರೆ 2059ರ ಆಷಾಡವರೆಗೆ ಕಾಯಲೇಬೇಕು.

Advertisement

ಪುರಾಣದ ಪ್ರಕಾರ ಇಲ್ಲಿನ ವರದರಾಜಸ್ವಾಮಿ ದೇವರ ಮೂರ್ತಿಯನ್ನು ಕೃತಯುಗದಲ್ಲಿ ಚರ್ತುರ್ಮುಖ ಬ್ರಹ್ಮ ರಚಿಸಿದ್ದಾರೆ ಎನ್ನಲಾಗುತ್ತದೆ. ಬ್ರಹ್ಮ ಹಾಗೂ ಸರಸ್ವತಿ ನಡುವೆ ಭಿನಾಭಿಪ್ರಾ ಮೂಡಿದಾಗ ಸರಸ್ವತಿ ಬ್ರಹ್ಮದೇವರನ್ನು ತೊರೆದು ಭೂಲೋಕಕ್ಕೆ ಬರುತ್ತಾಳೆ. ಇದಕ್ಕೆ ಬ್ರಹ್ಮ, ವಿಷ್ಣುವಿನ ಬಳಿ ಪರಿಹಾರ ಕೇಳಿದಾಗ ವಿಷ್ಣು ಸಾವಿರ ಅಶ್ವಮೇಧ ಯಾಗ ಮಾಡಬೇಕು ಎಂದು ಹೇಳುತ್ತಾರೆ. ಒಂದು ಅಶ್ವಮೇಧ ಯಾಗ ಮಾಡುವುದೇ ಕಷ್ಟ ಇನ್ನು ಸಾವಿರ ಅಶ್ವಮೇಧ ಯಾಗ ಮಾಡಲು ಹೇಗೆ ಸಾಧ್ಯ ಎಂದು ಕೇಳಿದಾಗ ಈಗಿನ ಕಾಂಚಿಪುರಂ ಪ್ರದೇಶದಲ್ಲಿ ಒಂದು ಅಶ್ವಮೇಧಯಾಗ ಮಾಡಿದರೆ ಸಾಕು ಎಂದು ವಿಷ್ಣು ಸೂಚಿಸುತ್ತಾರೆ. ಬ್ರಹ್ಮ ಇಲ್ಲಿ ಯಾಗವನ್ನು ಆರಂಭಿಸಿದಾಗ ಸರಸ್ವತಿ ಇನ್ನಷ್ಟು ಕೋಪಗೊಂಡು ವೇಗವತಿ ಎಂಬ ನದಿಯಾಗಿ ರಭಸದಿಂದ ಹರಿಯತೊಡಗುತ್ತಾಳೆ. ಆಗ ಬ್ರಹ್ಮ ಮಾಡಿದ ಯಾಗ ನಾಶವಾಗಬಾರದೆಂದು ವಿಷ್ಣು ನದಿಯ ಮಧ್ಯೆ ವರದರಾಜಸ್ವಾಮಿಯಾಗಿ ಅವತರಿಸಿ ವೇಗವತಿ ನದಿಯ ವೇಗ ತಡೆಯುತ್ತಾನೆ. ಆಗ ಬ್ರಹ್ಮನ ಯಾಗ ನಿರಾತಂಕವಾಗಿ ನೆರವೇರುತ್ತದೆ.

ಇದರಿಂದ ಸಂತಸಗೊಂಡ ಬ್ರಹ್ಮದೇವರು ದೇವಶಿಲ್ಪಿ ವಿಶ್ವಕರ್ಮನಿಂದ ಅತ್ತಿಮರದಲ್ಲಿ ವಿಷ್ಣುವಿನ ರೂಪದ ವರದರಾಜಸ್ವಾಮಿ ಮೂರ್ತಿ ಕೆತ್ತಲು ಹೇಳುತ್ತಾರೆ. ಹೀಗೆ ಕೆತ್ತಲ್ಪಟ್ಟ ವಿಗ್ರಹವನ್ನು ಕೃತಯುಗದಲ್ಲಿ ಬ್ರಹ್ಮ ಪೂಜಿಸುತ್ತಿದ್ದರು. ತ್ರೇತಾಯುಗದಲ್ಲಿ ಗಜೇಂದ್ರನಿಂದಲೂ, ದ್ವಾಪರಾಯುಗದಲ್ಲಿ ಮಹರ್ಷಿ ಬ್ರಹಸ್ಪತಿಯಿಂದಲು ಹಾಗೂ ಕಲಿಯುಗದಲ್ಲಿ ಅನಂತಶೇಷರಿಂದಲು ಪೂಜಿಸ್ಪಡುತ್ತಿದೆ.

ಇತಿಹಾಸದ ಪ್ರಕಾರ 16ನೇ ಶತಮಾನದವರೆಗೂ ವರದರಾಜಸ್ವಾಮಿ ಮೂರ್ತಿಯನ್ನು ದೇವಾಲಯದಲ್ಲಿಟ್ಟು ಪೂಜಿಸಲಾಗುತ್ತಿತ್ತು. ಆದರೆ 16ನೇ ಶತಮಾನದಲ್ಲಿ ಮೊಘಲರ ದಾಳಿ ವೇಳೆ ದೇವಾಲಯದ ಅರ್ಚಕರು ವರದರಾಜಸ್ವಾಮಿ ವಿಗ್ರಹವನ್ನು ದೇವಾಲಯದ ಕಲ್ಯಾಣಿಯಲ್ಲಿ ಬಚ್ಚಿಡುತ್ತಾರೆ. ಆದರೆ ಅರ್ಚಕರು ಮರಣವಪ್ಪಿದ್ದರಿಂದ ದೇವರ ಮೂರ್ತಿ ರಹಸ್ಯ ಹಾಗೆಯೇ ಅವರಲ್ಲಿ ಉಳಿದುಬಿಡುತ್ತದೆ. ದೇವರಿಲ್ಲದ ಗರ್ಭಗುಡಿಯಲ್ಲಿ ಸ್ಥಳೀಯರು ಪದ್ಮಗಿರಿಯಿಂದ ಕಲ್ಲು ತಂದು ವಿಗ್ರಹ ಕೆತ್ತಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದರು. ಬಳಿಕ ಹಲವು ವರ್ಷಗಳ ಬಳಿಕ ದೇವಾಲಯದ ಕಲ್ಯಾಣಿ ಸ್ವಚ್ಚ ಮಾಡಲು ಮುಂದಾದಾಗ ದೇವರ ಮೂಲ ವಿಗ್ರಹ ಪತ್ತೆಯಾಗುತ್ತದೆ. ಆಗ ಈಗಾಗಲೇ ಗರ್ಭಗುಡಿಯಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿರುವುದರಿಂದ ಮೂಲ ವಿಗ್ರಹವನ್ನು ಎಲ್ಲಿ ಇಟ್ಟು ಪೂಜಿಸುವುದು ಎಂದು ಚಿಂತಾಕ್ರಾಂತರಾದಾಗ ದೇವರು ಅರ್ಚಕರ ಕನಸಿನಲ್ಲಿ ಬಂದು ತನ್ನನ್ನು 48 ದಿನಗಳ ಕಾಲ ಪೂಜೆ ಮಾಡಿ ಬಳಿಕ 40 ವರ್ಷಗಳ ಕಾಲ ನೀರಿನಲ್ಲಿ ಇರಿಸುವಂತೆ ಸೂಚಿಸಿದರಂತೆ. ಹಾಗಾಗಿ ಅಂದಿನಿಂದ ಇಂದಿನವರೆಗೂ 40 ವರ್ಷಗಳಿಗೆ ಒಮ್ಮೆ ಮಾತ್ರ ದೇವರನ್ನು ನೀರಿನಿಂದ ಹೊರತೆಗೆದು 48 ದಿನಗಳ ಕಾಲ ಪೂಜಿಸಲಾಗುತ್ತದೆ. ಬಳಿಕ ಮತ್ತೆ ನೀರಿನಲ್ಲಿ ಇರಿಸಲಾಗುತ್ತದೆ.

ಇನ್ನು ಕಂಚಿ ವರದರಾಜಸ್ವಾಮಿ ದೇವಾಲಯದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಇನ್ನಷ್ಟು ವಿಶೇಷತೆಗಳಿವೆ ಅವುಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ

Advertisement
Share this on...