ಸಿಂಪಲ್ ದಸರೆಯ ಖರ್ಚು, ವೆಚ್ಚ ಎಷ್ಟ್ ಗೊತ್ತಾ..?

in ಕನ್ನಡ ಮಾಹಿತಿ/ಮನರಂಜನೆ 144 views

ಬೆಂಗಳೂರು: ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಹಬ್ಬವನ್ನು ಆಚರಿಸಲಾಯಿತು. ಇದಕ್ಕೆ ತಗುಲಿದ ವೆಚ್ಚ 10 ಕೋಟಿ ರೂ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ದಸರಾ ಆಯೋಜಿಸಲು ಸರ್ಕಾರದಿಂದ 10‌ ಕೋಟಿ ರೂ. ಅನುದಾನ ಮತ್ತು ಮುಡಾದಿಂದ 5 ಕೋಟಿ ರೂ. ಅನುದಾನ ಒದಗಿಸುವುದು ಎಂದು ನಿರ್ಧಾರವಾಗಿತ್ತು. ಆದರೆ ದಸರಾವನ್ನು ಸರ್ಕಾರ ನೀಡಿದ 10 ಕೋಟಿ ರೂ. ಅನುದಾನದಲ್ಲೇ ಪೂರ್ಣಗೊಳಿಸಲಾಗಿದ್ದು, ಮುಡಾ ಘೋಷಿಸಿದ್ದ 5 ಕೋಟಿ ರೂ. ಅನುದಾನವನ್ನು ಪಡೆದಿರುವುದಿಲ್ಲ. ಸರ್ಕಾರದ ಅನುದಾನದಲ್ಲೂ ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ನವೆಂಬರ್ 1ರಂದು ತಿಳಿಸಲಾಗುವುದು ಎಂದರು. ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2020ರ ಕಾರ್ಯಕ್ರಮವು ಸರಳವಾಗಿ, ಸಂಪ್ರದಾಯದಂತೆ ಬಹಳ ಅಚ್ಚುಕಟ್ಟಾಗಿ ನೆರವೇರಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಿ ದಸರಾ ಆಚರಿಸುವಂತೆ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಮಾರ್ಗಸೂಚಿಯಂತೆ ಸೀಮಿತ ಸಂಖ್ಯೆಯಲ್ಲಿ ಸೇರಿ ಆಚರಿಸಲಾಯಿತು. ಸರಳವಾಗಿ ದಸರಾ ಆಚರಿಸಿದ್ದರೂ ಸಹ ಅರ್ಥಪೂರ್ಣವಾಗಿ ದಸರಾ ಆಚರಿಸಿದ್ದೇವೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ಯೋಧರಿಗೆ ಗೌರವ ಸಲ್ಲಿಸುವ ಕೆಲಸ ಕೂಡ ಈ ಬಾರಿ ಮಾಡಲಾಯಿತು ಎಂದರು.

Advertisement

Advertisement

ಚಾಮುಂಡಿಬೆಟ್ಟ ಹಾಗೂ ಅರಮನೆ ಆವರಣಕ್ಕೆ ಸೀಮಿತವಾಗಿ ಈ ಬಾರಿ ದಸರಾ ಆಚರಿಸಲು ತೆಗೆದುಕೊಂಡ ನಿರ್ಧಾರದಂತೆ ಈ ಎರಡು ಸ್ಥಳಗಳಲ್ಲಿ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿದೆ. ಪ್ರತಿವರ್ಷ ಸುಮಾರು 12 ರಿಂದ 15 ಆನೆಗಳು ಜಂಬುಸವಾರಿಯಲ್ಲಿ ಭಾಗವಹಿಸುತ್ತಿದ್ದವು. ಈ ವರ್ಷ ಸರಳವಾಗಿ ಆಚರಿಸಿದ್ದರಿಂದ 5 ಆನೆಗಳನ್ನು ಮಾತ್ರ ಕರೆಸಲಾಗಿತ್ತು. ಇದೆ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ಜಂಬುಸವಾರಿ ನಡೆಸಿಕೊಟ್ಟಿದೆ. ಕಳೆದ ವರ್ಷ 100 ಕಿ.ಮೀ. ಉದ್ದದ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ವರ್ಷ ಸುಮಾರು 50 ಕಿ.ಮೀ.ಗೆ ಇಳಿಸಲಾಯಿತು. ನವರಾತ್ರಿಯ ದಿನಗಳಲ್ಲಿ ಹೆಚ್ಚು ಜನ ಒಂದೆಡೆ ಸೇರದಂತೆ ಎಲ್ಲಾ ಮುಂಜಾಗೃತಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಯಿತು. ಪರೀಕ್ಷೆ ಪ್ರಮಾಣ ಹೆಚ್ಚಾದರೂ ಸೋಂಕಿತರ ಸಂಖ್ಯೆಗೆ ಸೆಪ್ಟೆಂಬರ್‌ಗೆ ಹೋಲಿಸಿದರೆ ಕಡಿಮೆ ಬರುತ್ತಿರುವುದು ಸಮಾಧಾನಕರ ಸಂಗತಿ.ಜಂಬುಸವಾರಿ ಮೆರವಣಿಗೆಯಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಒಂದು ಸ್ತಬ್ದಚಿತ್ರವನ್ನು ಸಹ ಸೇರಿಸಲಾಯಿತು.
ಈ ಸಾಲಿನ ದಸರಾವನ್ನು “ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್‌” ದಸರಾ ಎಂದು ಕರೆಯಲಾಗಿದೆ. ಅದರಂತೆ ಎಲ್ಲಾ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ವರ್ಚುವಲ್ ಆಗಿ ಪ್ರಸಾರ ಮಾಡಲಾಯಿತು. ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೆಸ್‌ಬುಕ್ ಒಂದರಲ್ಲೇ ಜಂಬುಸವಾರಿ ಕಾರ್ಯಕ್ರಮವನ್ನು ಲಕ್ಷಾಂತರ ಜನ ನೋಡಿದ್ದಾರೆ. ಒಟ್ಟು ವಾರ್ತ ಇಲಾಖೆಯ ಫೇಸ್‌ಬುಕ್ ಪೇಜ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳು ಸೇರಿ ಸುಮಾರು 6 ಲಕ್ಷ ವೀವ್ಸ್ ಆಗಿದೆ ಎಂದರು.

Advertisement

Advertisement
Share this on...