ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಹೊಸ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಭಾನುವಾರ ಸಂಜೆ ಹುಬ್ಬಳ್ಳಿಯಲ್ಲಿ ಬಹಳ ಅದ್ಧೂರಿಯಾಗಿ ನಡೆದಿದೆ. ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲು ನಟ ದರ್ಶನ್ ಕಾರಣ ಎನ್ನುವುದನ್ನು ಸ್ವತಃ ನಿರ್ಮಾಪಕರೇ ಹೇಳಿದ್ದಾರೆ. ಇನ್ನು ಪ್ರಿ- ರಿಲೀಸ್ ಕಾರ್ಯಕ್ರಮ ಮಾಡುವುದಾದರೇ ಅದು ಹುಬ್ಬಳ್ಳಿಯಲ್ಲೇ ಆಗಬೇಕು ಎಂದು ನಿರ್ಮಾಪಕರ ಬಳಿಕ ಬೇಡಿಕೆಯಿಟ್ಟಿದ್ದರಂತೆ ಡಿ ಬಾಸ್.ಉತ್ತರ ಕರ್ನಾಟಕದ ಮಂದಿಗೆ ಬಹಳ ದಿನಗಳಿಂದ ಸಿಗದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪ್ರಿ-ರಿಲೀಸ್ ಶೋ ಮಾಡಿದ್ರೆ ಆ ನೆಪದಲ್ಲಾದರೂ ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂಬ ಉದ್ದೇಶ ದರ್ಶನ್ ಅವರದ್ದಾಗಿತ್ತು. ಹಾಗಾಗಿ ಅದ್ದೂರಿಯಾದ ಕಾರ್ಯಕ್ರಮಕ್ಕೆ ಇಡೀ ಹುಬ್ಬಳ್ಳಿ ಜನರೇ ಸಾಕ್ಷಿಯಾಗಿದ್ದರು.ಅದರಂತೆ ಭರ್ಜರಿಯಾಗಿ ಕಾರ್ಯಕ್ರಮ ನೆರವೇರಿದೆ. ಇನ್ನು ವಿಶೇಷ ಎಂಬಂತೆ ಈ ಕಾರ್ಯಕ್ರಮ ಮುಗಿದ ಬಳಿಕ ಹುಬ್ಬಳ್ಳಿ ಅಭಿಮಾನಿಯೊಬ್ಬರು ಡಿ ಬಾಸ್ಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ.
ಜೊತೆಗೆ ಉತ್ತರ ಕರ್ನಾಟಕದಲ್ಲಿ ತಮ್ಮ ಸಿನಿಮಾದ ಕಾರ್ಯಕ್ರಮ ಮಾಡಿದ್ದಕ್ಕೆ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಹಾಗಾಗಿ, ಗದಗ ಜಿಲ್ಲೆಯ ತೂಗುದೀಪ ಸಮಿತಿ ಅಭಿಮಾನಿ ಬಳಗ ಸದಸ್ಯ, ಗದಗ ತಾಲೂಕಿನ ಕಣವಿ ಹೊಸೂರಿನ ಯುವಕ ಶಂಭು ಗಡಗಿ, ದರ್ಶನ್ ಅವರಿಗೆ ಟಗರು ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ತಿಳಿದು ಬಂದಿದೆ.ಅಂದಹಾಗೆ, ಈ ಶಂಭು ಯಾರು ಎಂಬ ಕುತೂಹಲ ಎಲ್ಲರಿಗೂ ಮೂಡುವುದು ಸಹಜ.
ಈ ಶಂಭು ಗದಗನ ಶಿರಸಂಗಿ ಮೊಬೈಲ್ ಶಾಫ್ ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಅವರ ಅಪ್ಪಟ ಅಭಿಮಾನಿ. ಸುಮಾರು ಎರಡೂವರೆ ವರ್ಷಗಳಿಂದ ತಾನು ಅತೀ ಪ್ರೀತಿಯಿಂದ ಸಾಕಿದ್ದ ಟಗರನ್ನು ದರ್ಶನ್ ಗೆ ಕೊಡುವುದರ ಮೂಲಕ ಅಭಿಮಾನ ಮೆರೆದಿದ್ದಾನೆ. ಆದರೆ ದರ್ಶನ್ ಟಗರನ್ನು ಡಿ ಬಾಸ್ ತೆಗೆದುಕೊಂಡು ಹೋಗಿಲ್ಲ. ಆದರೆ ಅಭಿಮಾನಿ ಶಂಭುಗೆ ಮೈಸೂರಿನ ತಮ್ಮ ಫಾರ್ಮ್ ಹೌಸ್ ಗೆ ಆಹ್ವಾನ ನೀಡಿದ್ದಾರಂತೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಹುಬ್ಬಳ್ಳಿಯಲ್ಲಿ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಮುಗಿಸಿ ಬೆಂಗಳೂರಿನತ್ತ ಮರಳುತ್ತಿದ್ದ ಡಿ ಬಾಸ್ ಅವರನ್ನು ಅಭಿಮಾನಿಗಳು ಭೇಟಿ ಮಾಡಿದ್ದಾರೆ. ಮಾರ್ಗಮಧ್ಯೆ ಅಭಿಮಾನಿಗಳನ್ನು ನೋಡಿದ ದಾಸ ಕಾರಿನಿಂದ ಇಳಿದು ಉಡುಗೊರೆಯನ್ನು ಖುಷಿಯಿಂದ ಸ್ವೀಕಾರ ಮಾಡಿದ್ದಾರೆ. ಅದರ ಜೊತೆಗೆ ಅಭಿಮಾನಿಗೆ ಮೈಸೂರು ಫಾರ್ಮ್ ಹೌಸ್ಗೆ ಬರಲು ಆಹ್ವಾನ ನೀಡಿದ ದರ್ಶನ್ ಒಂದು ವಾಹನ ಕಳಿಸುವುದಾಗಿ ತಿಳಿಸಿದ್ದು, ಆ ವಾಹನದಲ್ಲಿ ಟಗರು ಮತ್ತು ನೀನು ಇಬ್ಬರು ಬನ್ನಿ ಎಂದು ಸೂಚಿಸಿದರಂತೆ.
ಆದರೆ ಈ ವೇಳೆ ಆ ಅಭಿಮಾನಿಯ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಬ್ಯುಸಿ ಶೆಡ್ಯೂಲ್ ಕಾರಣದಿಂದ ಟಗರನ್ನು ಫಾರ್ಮ್ ಹೌಸ್ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಹೀಗಾಗಿ ನೀನೆ ಬಾ ಅಂತ ತಿಳಿಸಿದ್ದಾರೆ ಅಂತ ಖುಷಿಯಿಂದ ಶಂಭು ಹೇಳಿಕೊಂಡಿದ್ದಾನೆ. ಒಟ್ಟಿನಲ್ಲಿ ಅಭಿಮಾನಿಯು ಕೊಟ್ಟ ಉಡುಗೊರೆಯನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ ಡಿ ಬಾಸ್.