ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ನ ಅತ್ತಿಗೆ ರಾಧಿಕಾಳಾಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿರುವ ಅನುಷಾ ರಾವ್ ಕಿರುತೆರೆಯ ನಂತರ ಇದೀಗ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ರಾಧಿಕಾ ಆಗಿ ಕನ್ನಡ ಕಿರುತೆರೆಯಲ್ಲಿ ಫೇಮಸ್ಸು ಆಗಿರುವ ಅನುಷಾ ರಾವ್ ಇಂದಿಗೂ ವೀಕ್ಷಕರ ಪಾಲಿನ ಪ್ರೀತಿಯ ರಾಧಿಕಾ. ಅಗ್ನಿಸಾಕ್ಷಿ ಧಾರಾವಾಹಿ ಮುಗಿದು ಒಂದೂವರೆ ವರ್ಷಗಳಾಗುತ್ತಾ ಬಂದರೂ ಇಂದಿಗೂ ಅನುಷಾ ಅವರನ್ನು ಕಂಡಾಗ ಜನ ಗುರುತಿಸುವುದು ರಾಧಿಕಾ ಆಗಿ. ಅಸಲಿಗೆ ಅವರ ನಿನವಾದ ಹೆಸರು ಅನುಷಾ ಎಂಬುದು ಹಲವರಿಗೆ ತಿಳಿದಿಲ್ಲ. ಶಿರಸಿ ಮೂಲದ ಅನುಷಾ ರಾವ್ ಅಚಾನಕ್ ಆಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಎಂಎಸ್ಸಿ ಸೈಕಾಲಜಿ ಕಲಿತು ಆಸ್ಪತ್ರೆಯಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿದ್ದ ಅನುಷಾ ಇಂದು ಆಕಸ್ಮಿಕವಾಗಿ ಬಂದ ಅವಕಾಶದಿಂದ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದು, ಇಂದು ಇಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ಪಯಣ ಶುರು ಮಾಡಿದ ಆಕೆ ಮುಂದೆ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ಮಹೇಶನ ಅಮ್ಮನ ಪಾತ್ರಕ್ಕೆ ಆಡಿಶನ್ ಇದೆ ಪ್ರಯತ್ನಿಸಿ ಎಂದಾಗ ಏಕಾಗಬಾರದು ಎಂದು ಹೋದರು. ಆದರೆ ತುಂಬಾ ಚಿಕ್ಕವಳ ಹಾಗೆ ಕಾಣಿಸುತ್ತಿದ್ದಾರೆ ಎಂಬ ಕಾರಣದಿಂದ ಅನುಷಾ ಆಯ್ಕೆ ಆಗಿರಲಿಲ್ಲ.
ಆದಾಗಲೆ ಅನುಷಾ ರಾವ್ ಫೋಟೋಶೂಟ್ ಮಾಡಿಸಿಕೊಂಡಿದ್ದು ದುರ್ಗಾ ಧಾರಾವಾಹಿಯಲ್ಲಿ ನಟಿಸುವ ಅವಕಾಸದ ಪಡೆದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಧಾರವಾಹಿಯಲ್ಲಿ ಅಭಿನಯಿಸಿದ ಅನುಷಾಗೆ ಮುಂದೆ ಒಂದಷ್ಟು ಆಫರ್ ಗಳು ಸಿಗಲಾರಂಭಿಸಿತು. ದುರ್ಗಾ ಧಾರಾವಾಹಿಯ ನಂತರ
ಸುಬ್ಬಲಕ್ಷ್ಮೀ ಸಂಸಾರ, ದೊಡ್ಮನೆ ಸೊಸೆ, ಮನೆಯೇ ಮಂತ್ರಾಲಯ ಧಾರಾವಾಹಿಗಳಲ್ಲಿ ನಟಿಸಿದ್ದ ಅನುಷಾಗೆ ಹೆಸರು ತಂದುಕೊಟ್ಟಿದ್ದು, ಜನಪ್ರಿಯತೆ ದೊರಕಿದ್ದು ಅಗ್ನಿಸಾಕ್ಷಿಯ ರಾಧಿಕಾ ಪಾತ್ರದಿಂದ. ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲೂ ಮೋಡಿ ಮಾಡುತ್ತಿರುವ ಅನುಷಾ ರಾವ್ ಸಿನಿರಂಗದಲ್ಲೂ ಛಾಪು ಮೂಡಿಸಿದ್ದಾರೆ.
ಚಿತ್ರಕಥಾ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅನುಷಾ ರಾವ್ ಮುಂದೆ ಮನರೂಪ, ನಕ್ಷೆ, ಮಹಾ ಕರ್ಮ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನುಷಾ ಅಭಿನಯದ ಮನರೂಪ ಸಿನಿಮಾ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದು, ಇದೀಗ ಅವರು ಯೋಗರಾಜ್ ಭಟ್ ಅವರ ಬ್ಯಾನರ್ನ ಪದವಿ ಪೂರ್ವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿರುವ ಅನುಷಾ ರಾವ್ ಗೆ ಖಳನಾಯಕಿಯಾಗಿ ನಟಿಸಬೇಕೆಂಬುದೊಂದೇ ಕನಸು.
ತೆಲುಗು ಕಿರುತೆರೆಯಲ್ಲಿ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಅನುಷಾ ರಾವ್ ಗೆ ಕನ್ನಡ ಕಿರುತೆರೆಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಮಹಾದಾಸೆ.
– ಅಹಲ್ಯಾ