ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಸಮಾರಂಭ ಗಂಡು ಮೆಟ್ಟಿದ ನಾಡು ಎಂದೇ ಖ್ಯಾತಿ ಪಡೆದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದ್ದು, ಇಡೀ ರಾಬರ್ಟ್ ಚಿತ್ರತಂಡ ಉತ್ತರ ಕರ್ನಾಟಕದ ಜನತೆಯ ಜೊತೆ ಸಂಭ್ರಮಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಬರ್ಟ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ವೇದಿಕೆಯ ಮೇಲೆ ಚಪ್ಪಲಿ ಕಳಚಿಟ್ಟು ಮಾತನಾಡಿದ್ದಾರೆ. ಚಾಲೇಂಜಿಂಗ್ ಸ್ಟಾರ್ ಎರಡು ಬಾರಿ ಮಾತನಾಡುವಾಗಲೂ ಚಪ್ಪಲಿ ಕಳಚಿಟ್ಟು ಗೌರವಿಸಿದ್ದು ಯಾಕೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಇದಕ್ಕೆ ಸ್ವತ: ದರ್ಶನ್ ಅವರೇ ಉತ್ತರಿಸಿದ್ದಾರೆ. ಉತ್ತರ ಕರ್ನಾಟಕದ ಜನರ ಮೇಲೆ ತಮಗೆ ಹಾಗೂ ತಮ್ಮ ಇಡೀ ಕುಟುಂಬಕ್ಕೆ ಇರುವ ಗೌರವ, ಪ್ರೀತಿ ಬಗ್ಗೆ ಡಿ ಬಾಸ್ ಮನಬಿಚ್ಚಿ ಮಾತನಾಡಿದ್ದಾರೆ. ಉತ್ತರ ಕರ್ನಾಟಕದವರ ಜೊತೆ ಮಾತನಾಡುವಾಗ ಚಪ್ಪಲಿ ಬಿಟ್ಟು ಮಾತನಾಡಿದರೆನೇ ಅದಕ್ಕೊಂದು ಗೌರವ, ಮರ್ಯಾದೆ ಎಂದು ದರ್ಶನ್ ಹೇಳಿದ್ದಾರೆ. ಯಾವ ಕಾರ್ಯಕ್ರಮದಲ್ಲೂ ನಾನು ಚಪ್ಪಲಿ ಬಿಟ್ಟು ಮಾತನಾಡಲ್ಲ. ಆದ್ರೆ ಉತ್ತರ ಕರ್ನಾಟಕಕ್ಕೆ ಬಂದ್ರೆ ಚಪ್ಪಲಿ ಹಾಕಿಕೊಂಡು ವೇದಿಕೆ ಮೇಲೆ ಮಾತಾಡಲ್ಲ. ಇಲ್ಲಿ ನಾನು ಚಪ್ಪಲಿ ಹಾಕಿಕೊಂಡು ಮಾತನಾಡುವುದು ಮರ್ಯಾದೆ ಅಲ್ಲ ಎಂದು ಹೇಳಿದ್ದಾರೆ.
ಇದು ಸಂಗೊಳ್ಳಿ ರಾಯಣ್ಣ ಹುಟ್ಟಿದ ನಾಡು…ಇದೇ ಉತ್ತರ ಕರ್ನಾಟಕದಲ್ಲಿ ಸಂಗೊಳ್ಳಿ ರಾಯಣ್ಣ ಸಿನಿಮಾದ ವಿಜಯ ಯಾತ್ರೆ ಮಾಡುವಾಗ ಎಲ್ಲರೂ ಗೌರವ ತೋರುತ್ತಿದ್ದರು. ಹೆಣ್ಣುಮಕ್ಕಳು ಸೀರೆ ಸೆರಗು ಹೊದ್ದುಕೊಂಡು, ಚಪ್ಪಲಿ ಬಿಟ್ಟು ನಮಸ್ಕಾರ ಮಾಡಿದ್ದರು. ಆಗ ಅಂದುಕೊಂಡೆ ಇದಕ್ಕೆ ನಾನು ಅರ್ಹನಿದ್ದೀನಾ? ಅವತ್ತು ನೀವೆಲ್ಲ ತೋರಿಸಿದ ಆ ಪ್ರೀತಿಗೆ ಇವತ್ತು ನಾವು ಚಪ್ಪಲಿ ಬಿಟ್ಟು ಮಾತನಾಡಿದರೆ ಗೌರವ. ಚಪ್ಪಲಿ ಬಿಟ್ಟು ಉತ್ತರ ಕರ್ನಾಟಕದ ಅಭಿಮಾನಿಗಳ ಪಾದಗಳಿಗೆ ನಾವು ಚಪ್ಪಲಿಯಾಗಬೇಕು ಎಂದರು.
ಅಷ್ಟೇ ಅಲ್ಲ ನನ್ನ ತಂದೆಗೆ ಒಂದು ವರ್ಷ ಕೆಲಸವೇ ಇರಲಿಲ್ಲ. ಆಗ ನಮ್ಮ ಡ್ರಾಮಾ ಕಂಪನಿ ಇತ್ತು. ಯಾಕೋ ಸಿನಿಮಾದವರು ಕರೆಯುತ್ತಿಲ್ಲ. ನಾಟಕ ಮಾಡಿಕೊಂಡು ಬರೋಣ ಅಂತ ಉತ್ತರ ಕರ್ನಾಟಕ್ಕೆ ಬಂದ್ರು. 6 ತಿಂಗಳು ಮನೆ ಬಿಟ್ಟು ಇಲ್ಲೇ ಇದ್ದರು. ಆಗ ಉತ್ತರ ಕರ್ನಾಟಕದ ಜನ ನಾಟಕ ನೋಡಲು ಬಂದಾಗ ಕೊಟ್ಟ ಎರಡುವರೆ ರೂಪಾಯಿ, 5 ರೂಪಾಯಿ ಹಾಗೇ 10 ರೂಪಾಯಿ ಹೀಗೆ ಹಣ ನೀಡಿದ್ದರು. ಆ 6 ತಿಂಗಳಲ್ಲಿ ದುಡಿದ ದುಡ್ಡಲ್ಲೇ ಮೈಸೂರಿನಲ್ಲಿ ಮನೆ ಕಟ್ಟಿದ್ವಿ. ಮೈಸೂರಿನಲ್ಲಿರುವ ನಮ್ಮ ಮನೆ ಉತ್ತರ ಕರ್ನಾಟಕದ ಜನರು ನಮಗೆ ಕೊಟ್ಟಿದ್ದು ಎಂದು ದರ್ಶನ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.