ಫ್ಲಾಶ್ ಬ್ಯಾಕ್ ಆಡಿಯೋ: ಕನ್ನಡ ಚಿತ್ರರಂಗ, ನಟನೆಯ ರಹಸ್ಯ ಹಂಚಿಕೊಂಡಿದ್ದ ಡಾ.ರಾಜ್

in ಸಿನಿಮಾ 36 views

ಇಂದಿಗೂ ಕನ್ನಡ ಚಿತ್ರರಂಗವೆಂದರೆ ಪ್ರತಿಯೊಬ್ಬರ ಬಾಯಲ್ಲಿ ಬರುವ ಏಕೈಕ ಹೆಸರು ಡಾ.ರಾಜ್ ಕುಮಾರ್. ಇದುವರೆಗೂ ಅವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಾಗಿಲ್ಲ. ಅಷ್ಟರಮಟ್ಟಿಗೆ ತಮ್ಮ ಛಾಪನ್ನು ಮೂಡಿಸಿದ್ದಾರೆ ಧೃವತಾರೆ ಅಭಿಮಾನಿಗಳ ನೆಚ್ಚಿನ ಅಣ್ಣಾವ್ರು, ಅಪ್ಪಾಜಿ. ಈಗಲೂ ಅವರ ಚಿತ್ರಗಳು ಚಿತ್ರಮಂದಿರಲ್ಲಿ ಪ್ರದರ್ಶನ ಕಂಡರೆ ಹೌಸ್ ಫುಲ್ ಆಗುತ್ತದೆ ಎಂದರೆ ಅವರ ಶಕ್ತಿ ಎಷ್ಟಿದೆ ಎಂಬುದು ನಮಗೆ ಗೊತ್ತಾಗುತ್ತದೆ.

Advertisement

 

Advertisement

Advertisement

 

Advertisement

ಅಂದಹಾಗೆ ಇತ್ತೀಚೆಗೆ ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದ ಅಣ್ಣಾವ್ರು ಹಾಗೂ ಚಿ. ಉದಯ್ ಶಂಕರ್ ನಡುವೆ ನಡೆದ ಮನದಾಳದ ಮಾತಿನ ಆಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅಪ್ಪಾಜಿ ಅಂದಿನ ಕನ್ನಡ ಚಿತ್ರರಂಗ ಹಾಗೂ ಅವರ ನಟನೆ ಹೇಗಿತ್ತು ಎಂಬುದರ ಕುರಿತು ಕೆಲವು ರಹಸ್ಯಗಳನ್ನು ಹಂಚಿಕೊಂಡಿದ್ದು ಅದರ ಸಾರಾಂಶ ಹೀಗಿದೆ ನೋಡಿ.

 

 

“ಚಿತ್ರರಂಗಕ್ಕೆ ಹೋದಾಗ ನಾನು ತುಂಬಾ ಸಣಕಲಾಗಿದ್ದೆ ಹಾಗೂ ನಾಟಕ ಕಂಪೆನಿಯಿಂದ ಹೋದವನಾಗಿದ್ದೆ. 2 ತಿಂಗಳು ಏನು ಕೆಲಸ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಒಳ್ಳೆ ರಸಕವಳವಿತ್ತು. ತಿಂದುಂಡು ಒಳ್ಳೆಯ ಮೈ ಬಂತು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಅಭಿಮಾನಿಗಳು ಹೇಗೆ ನೋಡುತ್ತಾರೋ ಹಾಗೆ ಕಾಣುತ್ತೇವೆ. ಒಂದು ಸಾರಿ ನಾನು ಪಾರ್ವತಿ ಜೊತೆ ಸಿನಿಮಾ ನೋಡಲು ಶಿವಾಜಿ ನಗರಕ್ಕೆ ಹೋಗಿದ್ದೆ. ಆಗ ನಾನು ಚಿತ್ರಮಂದಿರಕ್ಕೆ ಬಂದಿದ್ದು, ಅಭಿಮಾನಿಗಳಿಗೆ ಹೇಗೋ ಗೊತ್ತಾಗಿತ್ತು. ಅವರು ನನ್ನನ್ನು ರಾಜ್ ಕುಮಾರ್ ಅವರು ಎಲ್ಲಿದ್ದರು ಬರಬೇಕು ಎಂದು ಕರೆದರು.

 

 

ಆಗ ನನಗೆ ನನ್ನ ಪಾತ್ರ ಸರಿಯಾಗಿ ಬಂದಿಲ್ಲವೇನೋ ಅದಕ್ಕಾಗಿ ಕರೆಯುತ್ತಿದ್ದಾರೇನೋ ಅಂದುಕೊಂಡೆ. ನನ್ನನ್ನು ನಾಟಕದಲ್ಲಿ ಕೋಳಿ ಕಳ್ಳ ಎನ್ನುತ್ತಿದ್ದರು. ಇಲ್ಲೂ ಎಲ್ಲಿ ಹಾಗೆ ಕರೆಯುತ್ತಾರೋ ಅಂದುಕೊಂಡಿದ್ದೆ. ಆಮೇಲೆ ಗೊತ್ತಾಯಿತು ನನ್ನ ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಅದಕ್ಕೆ ಕರೆಯುತ್ತಿದ್ದಾರೆ ಎಂದು. ಆ ನಂತರ ಜನ ನನ್ನ ನಟನೆ ನೋಡಿ ಚಪ್ಪಾಳೆ ಹೊಡೆದು ಕನ್ನಡ ಭಾಷೆ ನಿಮ್ಮಿಂದ ಉಳಿಯಬೇಕು ಎಂದರು. ಆಗ ನನಗೆ ರೋಮಾಂಚನವಾಯಿತು. ದೇವರ ಎದುರು ಶರಣಾದ ಹಾಗೆ ಅನುಭವವಾಯಿತು” ಎಂದು ಅಪ್ಪಾಜಿಯವರು ಅಭಿಮಾನಿಗಳು ತಮ್ಮ ಬಗ್ಗೆ ಇಟ್ಟಿದ್ದ ಅಭಿಮಾನದ ರಹಸ್ಯ ಹಂಚಿಕೊಂಡಿದ್ದಾರೆ.

 

 

ಅದೇ ರೀತಿ ನಟನೆಯ ರಹಸ್ಯ ಕುರಿತು ಮಾತನಾಡಿರುವ ಅಪ್ಪಾಜಿಯವರು, “ಮುಖಕ್ಕೆ ಬಣ್ಣ ಬಳಿದುಕೊಂಡು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಅಂದುಕೊಂಡಿರುತ್ತಿದ್ದೆವು. ಆದರೆ ಅಲ್ಲಿ ಹೋದ ಮೇಲೆ ಒಂದು ರೀತಿಯ ಬದಲಾವಣೆಯಾಗುತ್ತಿತ್ತು. ನಿಮಗೆ ಯಾವ ಪಾತ್ರ ಕಷ್ಟ ಅನಿಸುತ್ತದೆಯೋ ಆ ಪಾತ್ರ ಹೇಗೆ ಮಾಡಬೇಕೆಂದು ಅಲ್ಲಿ ಹೊಳೆಯುತ್ತಿರಲಿಲ್ಲ. ಆದರೆ ಯಾವುದೋ ಒಂದು ಶಕ್ತಿ ಅಲ್ಲಿ ನಮ್ಮನ್ನು ಪಾತ್ರದೊಳಗೆ ನೂಕುತ್ತಿತ್ತು. ಹಾಗೆಂದು ನಮ್ಮ ಪ್ರಯತ್ನ ಬಿಡುವ ಹಾಗಿರುತ್ತಿರಲಿಲ್ಲ. ನಮ್ಮ ಪ್ರಯತ್ನ ನಾವು ಮಾಡಬೇಕು ಎಂದು ತಿಳಿಸಿದ್ದಾರೆ.

 

 

“ನಮ್ಮ ಅಪ್ಪಾಜಿ ನನಗೆ ಮುತ್ತುರಾಜ್ ಎಂದು ಹೆಸರಿಟ್ಟಿದ್ದರು. ಮುತ್ತತ್ತಿ ಹನುಮಂತರಾಯನ ದರ್ಶನ ಮಾಡಿದ ಮೇಲೆ ರಾಮನವಮಿ ಸಂದರ್ಭದಲ್ಲಿ ನಾನು ಹುಟ್ಟಿದೆ. ಕೊನೆಗೆ ನನಗೆ ಆ ಹೆಸರು ಹೋಗಿ ಈ ಹೆಸರು ಬಂತು. ತಂದೆಯ ಆಶೀರ್ವಾದ, ದೇವರ ಅನುಗ್ರಹ ಹಾಗಾಗಿ ನಾನು ಮಾತನಾಡಿದ್ದು ನನ್ನ ಅಭಿಮಾನಿಗಳಿಗೆ ಮುತ್ತಿನ ಹಾಗೇ ತೋರುತ್ತದೆ” ಎಂದು ತಮ್ಮ ಮುತ್ತಿನಂಥ ಮಾತಿನ ರಹಸ್ಯವನ್ನು ಈ ಸಂಭಾಷಣೆಯಲ್ಲಿ ಬಿಚ್ಚಿಟ್ಟಿದ್ದಾರೆ ಡಾ. ರಾಜ್.

 

 

“ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನನ್ನ ಯಶಸ್ಸಿನ ಹಿಂದೆ ಪತ್ನಿ ಪಾರ್ವತಿ ಇದ್ದಾಳೆ. ನಿಮಗೆ ಇನ್ನೊಂದು ಮಾತು ಹೇಳಲೇಬೇಕು. ಅವತ್ತಿನ ಚಿತ್ರರಂಗದ ಪರಿಸ್ಥಿತಿ ಬರಗಾಲದ ತರಹ ಇತ್ತು. ಆದರೆ ಇದ್ದಕ್ಕಿದ್ದಂತೆ ಮಳೆ ಸುರಿದರೆ ಹೇಗಿರುತ್ತದೆಯೋ ಹಾಗಾಯಿತು ಇಂಡಸ್ಟ್ರಿ. ಒಟ್ಟಿನಲ್ಲಿ ಜೀವನಕ್ಕೆ ದಾರಿ ಸಿಕ್ಕಿತ್ತು. ಆಗ ಕನ್ನಡ ಚಿತ್ರಗಳು ಕಡಿಮೆ. ವರ್ಷದಲ್ಲಿ 4-5 ಚಿತ್ರಗಳು ಇರುತ್ತಿದ್ದವು. ನಾನು ‘ಬೇಡರ ಕಣ್ಣಪ್ಪ’ ಚಿತ್ರೀಕರಣದ ಸಮಯದಲ್ಲಿ ಕ್ಯಾಮೆರಾದ ಎದುರಿಗೆ ನಿಂತರೆ ಹೆಚ್ಚು ಎಕ್ಸ್ ಪ್ರೆಶನ್ ಕೊಡುತ್ತಿದ್ದೆ.

 

 

ಆದರೆ ನಿಮ್ಮ ಎಕ್ಸ್ ಪ್ರೆಶನ್ ಮನಸ್ಸಿನಲ್ಲಿರಲಿ. ಹೊರಗಡೆ ತೋರಿಸಬೇಡಿ ಅವಲಕ್ಷಣದ ತರಹ ಕಾಣುತ್ತೆ ಅಂದ್ರು. ರೆಕಾರ್ಡಿಂಗ್ ಮಾಡೋರು ಜೋರು ಧ್ವನಿಯಲ್ಲಿ ಮಾತನಾಡಿದರೆ ಕಷ್ಟವಾಗುತ್ತಿತ್ತು ಎನ್ನುತ್ತಿದ್ದರು. ಆಗ ಇದೆಲ್ಲದರ ಟೆಕ್ನಿಕ್, ಸಿಂಹ ಅವರು ಹೇಳಿಕೊಟ್ಟರು. ಫಂಡರಿಬಾಯಿ ಸಹ ನಮಗೆ ಇಂಗ್ಲಿಷ್ ಭಾಷೆ ಮಾತನಾಡುವ ಬಗ್ಗೆ ಸಹಕಾರ ಮಾಡುತ್ತಿದ್ದರು.ಅವರು ತುಂಬಾ ದೊಡ್ಡತನದ ಹೆಂಗಸು. ಹೀಗೆ ಆ ಕಾಲದಲ್ಲಿ ಬಹಳಷ್ಟು ಜನರು ನಮಗೆ ಸಹಾಯ ಮಾಡಿದ್ದಾರೆ” ಎಂದು ತಮಗೆ ಸಹಾಯ ಮಾಡಿದವರನ್ನು ಸ್ಮರಿಸಿಕೊಂಡಿದ್ದಾರೆ ಡಾ.ರಾಜ್.

Advertisement
Share this on...