ನಟ, ನಿರ್ದೇಶಕ, ಬರಹಗಾರ ಆಗಿ ಫೇಮಸ್ಸು ಆದ ಈತ ಇಂದು ಕಿರುತೆರೆಯಲ್ಲಿ ಬ್ಯುಸಿ !

in ಮನರಂಜನೆ/ಸಿನಿಮಾ 278 views

ಬೆಳ್ಳಿತೆರೆಯ ಮೂಲಕ ನಟನಾ ಪಯಣ ಆರಂಭಿಸಿರುವ ಅನೇಕರು ಇಂದು ಕಿರುತೆರೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ಅವರ ಪೈಕಿ ಮೋಹನ್ ಶಂಕರ್ ಕೂಡಾ ಒಬ್ಬರು ಎಂದರೆ ತಪ್ಪಿಲ್ಲ. ನಟ, ನಿರ್ದೇಶಕ, ಬರಹಗಾರ ಆಗಿ ಹಿರಿತೆರೆಯಲ್ಲಿ ಗುರುಗಿಸಿಕೊಂಡಿರುವ ಮೋಹನ್ ಶಂಕರ್ ಯಾರಿಗೆ ಸಾಲುತ್ತೆ ಸಂಬಳ ಸಿನಿಮಾದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಸದ್ಯ ದಿಗ್ವಿಜಯ್ ರಾಯ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಇವರು ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮ್ ಜೀ ನಿರ್ದೇಶನದ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ನಾಯಕ ತ್ರಿವಿಕ್ರಮ್ ತಂದೆ ದ್ವಿಗಿಜಯ್ ಆಗಿ ಮೋಹನ್ ಶಂಕರ್ ಬಣ್ಣ ಹಚ್ಚಿದ್ದಾರೆ. ಯಾರಿಗೆ ಸಾಲುತ್ತೆ ಸಂಬಳ ಸಿನಿಮಾದ ನಂತರ ಕೋತಿಗಳು ಸಾರ್ ಕೋತಿಗಳು, ಕುರಿಗಳು ಸಾರ್ ಕುರಿಗಳು, ಮಲ್ಲ, ಓಳು ಸಾರ್ ಬರೀ ಓಳು, ಕೋದಂಡರಾಮ, ರಾಮಸ್ವಾಮಿ ಕೃಷ್ಣಸ್ವಾಮಿ, ಶುಕ್ಲಾಂಭರದರಂ, ಉಗ್ರನರಸಿಂಹ, ತಮಾಷೆಗಾಗಿ, ಸತ್ಯವಾನ್ ಸಾವಿತ್ರಿ, ಅಕ್ಕ ತಂಗಿ, ಆಕ್ಸಿಡೆಂಟ್, ಶಿಕಾರಿ, ಛತ್ರಿಗಳು ಸಾರ್ ಛತ್ರಿಗಳು ಸಾಲು ಸಾಲು ಸಿನಿಮಾಗಳಲ್ಲಿ ನಟರಾಗಿ ಮಿಂಚಿದ್ದ ಮೋಹನ್ ಶಂಕರ್ ಮುಂದೆ ನಿರ್ದೇಶಕರಾಗಿ ಪ್ರಮೋಷನ್ ಪಡೆದರು.

Advertisement

Advertisement

ಕೃಷ್ಣ ನೀ ಲೇಟಾಗಿ ಬಾರೋ ಸಿನಿಮಾದ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡ ಮೋಹನ್ ಶಂಕರ್ ತದ ನಂತರ ನರಸಿಂಹ, ಮಂಜುನಾಥ ಬಿಎ ಎಲ್ ಎಲ್ ಬಿ, ಸಚಿನ್.. ತೆಂಡೂಲ್ಕರ್ ಅಲ್ಲ, ಹಲೋ ಮಾಮ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕರಾಗಿ ಕಾಣಿಸಿಕೊಂಡಿರುವ ಮೋಹನ್ ಶಂಕರ್ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಪ್ರತಿಭೆ.

Advertisement

ಮಿಸ್ಟರ್ ಹರಿಶ್ಚಂದ್ರ ಸಿನಿಮಾಕ್ಕೆ ಕತೆ ಬರೆದಿರುವ ಮೋಹನ್ ಮುಂದೆ ಶುಕ್ಲಾಭರದರಂ, ಲವಕುಶ, ಹೆಂಡ್ತೀರ್ ದರ್ಬಾರ್ ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ನಟ, ನಿರ್ದೇಶಕ ಜೊತೆಗೆ ಬರಹಗಾರರಾಗಿ ಚಂದನವನದಲ್ಲಿ ಕಮಾಲ್ ಮಾಡಿರುವ ಮೋಹನ್ ಇದೀಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

Advertisement

ಅಷ್ಟಕ್ಕೂ ದಿಗ್ವಿಜಯ ಪಾತ್ರವೇನು?
ನಾಯಕ ತ್ರಿವಿಕ್ರಮ್ ಅವರ ತಂದೆ ದಿಗ್ವಿಜಯ್ ಆಗಿ ಮೋಹನ್ ಶಂಕರ್ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಗೋಮುಖ ವ್ಯಾಘ್ರ ದಿಗ್ವಿಜಯ್ ತನ್ನಲ್ಲಿರುವ ಕೆಟ್ಟತನವನ್ನು ಹೊರಗೆ ಎಲ್ಲಿಯೂ ತೋರಿಸುವುದಿಲ್ಲ. ದುರಾಸೆಯಿಂದ ಕೂಡಿದ್ದ ದಿಗ್ವಿಜಯ್ ಮಂತ್ರವಾದಿಯ ಸಹಾಯದಿಂದ ನಾಗಲೋಕಕ್ಕೆ ಹೋಗಿದ್ದ ದಿಗ್ವಿಜಯ್ ನಾಗರಾಜನನ್ನು ಕೊಂದು ನಾಗಮಣಿಯನ್ನು ವಶ ಪಡಿಸಿಕೊಳ್ಳುತ್ತಾನೆ. ಇದರ ಜೊತೆಗೆ ತನ್ನ ಬಳಿ ಇರುವ ನಾಗಮಣಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಲುವಾಗಿ ದಿಗ್ವಿಜಯ್ ಸ್ವತಃ ನಾಗಿಣಿಯೊಂದಿಗೆ ಹೋರಾಡಲು ತಯಾರಿರುತ್ತಾನೆ.

ಒಟ್ಟಿನಲ್ಲಿ ಇಷ್ಟು ದಿನ ಸಿನಿರಂಗದಲ್ಲಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಮೋಹನ್ ಶಂಕರ್ ಇದೀಗ ಕಿರುತೆರಯ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ.
– ಅಹಲ್ಯಾ

Advertisement
Share this on...