ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಮಹಿಳಾ ನಿರ್ದೇಶಕಿಯರು ಇವರೆಲ್ಲಾ…!

in ಸಿನಿಮಾ 85 views

ಸ್ಯಾಂಡಲ್​​ವುಡ್​​ ನಿರ್ದೇಶಕರು ಬಹಳಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅದೇ ರೀತಿ ಮಹಿಳಾ ನಿರ್ದೇಶಕಿಯರು ಕೂಡಾ ನಾವೂ ಯಾರಿಗೇನು ಕಡಿಮೆ ಇಲ್ಲ ಎಂಬಂತೆ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿ ನಿರ್ದೇಶಕಿಯರು ಎನಿಸಿಕೊಂಡಿದ್ದಾರೆ. ಆ ನಿರ್ದೇಶಕಿಯರ ಬಗ್ಗೆ ಪುಟ್ಟದೊಂದು ಮಾಹಿತಿ.

Advertisement

 

Advertisement

Advertisement

 

Advertisement

ಪ್ರೇಮಾ ಕಾರಂತ್​

ಸ್ಯಾಂಡಲ್​​ವುಡ್​​​ನಲ್ಲಿ ಪ್ರೇಮಾ ಕಾರಂತ್ ಮೊದಲ ಮಹಿಳಾ ನಿರ್ದೇಶಕಿಯಾಗಿ ಹೆಸರು ಮಾಡಿದ್ದಾರೆ. ಇವರು ಬಿ.ವಿ. ಕಾರಂತ್ ಅವರ ಪತ್ನಿ. 1983 ರಲ್ಲಿ ‘ಫಣಿಯಮ್ಮ’ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದರು ಪ್ರೇಮಾ ಕಾರಂತ್. ಚಿಕ್ಕ ವಯಸ್ಸಿಗೆ ಮದುವೆಯಾಗಿ ಗಂಡನನ್ನು ಕಳೆದುಕೊಂಡ ವಿಧವೆ , ಸಂಪ್ರದಾಯಸ್ಥ ಕುಟುಂಬದಲ್ಲಿ ಹಾಗೂ ಸಮಾಜದ ನಡುವೆ ಹೇಗೆಲ್ಲಾ ಕಷ್ಟ ಪಡುತ್ತಾಳೆ ಎಂಬುದು ಚಿತ್ರದ ಕಥೆ. ಚಿತ್ರಕ್ಕೆ ಒಳ್ಳೆ ಹೆಸರು ಬಂದರೂ ಪ್ರೇಮಾ ಕಾರಂತ್ ಮತ್ತೆ ಯಾವ ಸಿನಿಮಾವನ್ನು ನಿರ್ದೇಶಿಸಲಿಲ್ಲ. ಆದರೂ ಮಹಿಳಾ ನಿರ್ದೇಶಕಿಯರಲ್ಲಿ ಅವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.

 

 

ಕವಿತಾ ಲಂಕೇಶ್​

ಪಿ. ಲಂಕೇಶ್ ಪುತ್ರಿ ಕವಿತಾ ಲಂಕೇಶ್ ‘ದೇವೀರಿ’ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶನಕ್ಕೆ ಇಳಿದರು. ಇದರೊಂದಿಗೆ ‘ತನನಂ ತನನಂ’, ‘ಪ್ರೀತಿ ಪ್ರೇಮ ಪಣಯ’, ‘ಅವ್ವ’, ‘ಕ್ರೇಜಿಲೋಕ’ ಸೇರಿ ಕೆಲವೊಂದು ಸಿನಿಮಾಗಳನ್ನು ನಿರ್ದೇಶಿಸಿದರು. ಬರಹಗಾರ್ತಿ ಮಾತ್ರವಲ್ಲ, ನಿರ್ದೇಶನವೂ ಗೊತ್ತು ಎಂಬುದನ್ನು ಕವಿತಾ ಲಂಕೇಶ್ ಕೂಡಾ ಪ್ರೂವ್ ಮಾಡಿದ್ದಾರೆ.

 

 

ವಿಜಯಲಕ್ಷ್ಮಿ ಸಿಂಗ್

ಜೈಜಗದೀಶ್ ಪತ್ನಿ ವಿಜಯಲಕ್ಷ್ಮಿ ಸಿಂಗ್ ಇತ್ತೀಚೆಗೆ ತಮ್ಮ ಮೂವರೂ ಪುತ್ರಿಯರು ನಟಿಸಿದ್ದ ‘ಯಾನ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಅದಕ್ಕೂ ಮುನ್ನ ಅವರು ‘ಈ ಬಂಧನ’, ‘ಸ್ವೀಟಿ’ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಮಹಿಳಾ ನಿರ್ದೇಶಕಿ ಪಟ್ಟ ಅಲಂಕರಿಸಿದ್ಧಾರೆ.

 

 

ಪ್ರಿಯಾ ಹಾಸನ್

ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಪ್ರಿಯಾ ಹಾಸನ್ ನಂತರ ನಿರ್ದೇಶನಕ್ಕೂ ಇಳಿದರು. ‘ಬಿಂದಾಸ್ ಹುಡುಗಿ’, ‘ಸ್ಮಗ್ಲರ್’ ಚಿತ್ರಗಳನ್ನು ಪ್ರಿಯಾ ನಿರ್ದೇಶಿಸಿದರು.

 

 

ಸುಮನಾ ಕಿತ್ತೂರು

ದುನಿಯಾ ವಿಜಯ್ ಅಭಿನಯದ ‘ಸ್ಲಮ್ ಬಾಲ’ ಚಿತ್ರದಿಂದ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶಿಸಿದ ಸುಮನಾ ಕಿತ್ತೂರು, ಯಶ್ ಅಭಿನಯದ ‘ಕಳ್ಳರ ಸಂತೆ’ ಆದಿತ್ಯ ಅಭಿನಯದ ‘ಎದೆಗಾರಿಕೆ’ , ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧಾರಿತ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರವನ್ನು ನಿರ್ದೇಶಿಸಿ ಸಕ್ಸಸ್​​​​ಫುಲ್ ನಿರ್ದೇಶಕಿ ಎನಿಸಿಕೊಂಡಿದ್ದಾರೆ.

 

 

ರೂಪಾ ಅಯ್ಯರ್​

ನಟಿಯಾಗಿದ್ದ ರೂಪಾ ಅಯ್ಯರ್ ಕೂಡಾ ನಿರ್ದೇಶನಕ್ಕೆ ಇಳಿಯುವ ಸಾಹಸ ಮಾಡಿದರು. ಹೆಚ್​​​​ಐವಿ ಪೀಡಿತರ ಬಗ್ಗೆ ಮಾಡಿದ ‘ಮುಖಪುಟ’, ‘ಚಂದ್ರ’ ಎಂಬ ಸಿನಿಮಾ ಮಾಡಿ ಇದೀಗ ಪ್ರಧಾನಿ ಮೋದಿ ಅವರ ಬಯೋಪಿಕ್ ಮಾಡುವುದಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

 

 

ಇವರೊಂದಿಗೆ ಅಭಿನಯ ಶಾರದೆ ಎಂದು ಹೆಸರಾದ ಜಯಂತಿ ಕೂಡಾ ವಿಜಯ್ , ‘ನೋಡಿ ಸ್ವಾಮಿ ಅಳಿಯಂದ್ರೆ’ ಎಂಬ ಚಿತ್ರ ನಿರ್ದೇಶಿಸಿ ತಾವೊಬ್ಬ ನಟನೆ ಮಾತ್ರವಲ್ಲ ನಿರ್ದೇಶನಕ್ಕೂ ಸೈ ಎಂದು ತೋರಿಸಿಕೊಟ್ಟರು. ಆರತಿ ಕೂಡಾ ‘ಮಿಠಾಯಿ ಮನೆ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ‘ರಿಂಗ್ ರೋಡ್’ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ, ‘ಕ್ವಾಟ್ಲೆ’ ನಿರ್ದೇಶಕಿ ಚಂದ್ರಕಲಾ, ‘ಕಾಜಿ’ ಚಿತ್ರದ ನಿರ್ದೇಶಕಿ ಐಶಾನಿ ಶೆಟ್ಟಿ, ‘ಟ್ರಂಕ್’ ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ, ‘ಗಂಟುಮೂಟೆ’ ಚಿತ್ರದ ನಿರ್ದೇಶಕಿ ರೂಪಾ ರಾವ್ ಸೇರಿದಂತೆ ಬಹಳಷ್ಟು ಮಹಿಳಾ ನಿರ್ದೇಶಕಿಯರು ತಾವು ಪುರುಷರಷ್ಟೇ ಸಮಾನರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Advertisement
Share this on...