Kannada News ಬದುಕಿನ ಭದ್ರತೆಯ ಭಾವನೆಯೇ ಅಪ್ಪ.

in ಕನ್ನಡ ಮಾಹಿತಿ 135 views

ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು “ವಿಶ್ವ ಅಪ್ಪಂದಿರ ದಿನ” ವನ್ನಾಗಿ ಆಚರಿಸಲಾಗುತ್ತಿದೆ.ಇದು ಕೇವಲ ಆಚರಣೆ ಮಾತ್ರ ಅಲ್ಲ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಸ್ಮರಣೀಯ ಒಡನಾಟವನ್ನು ಕ್ಷಣಗಳನ್ನು ಸ್ಮರಿಸುವ ಆರಾಧಿಸುವ ದಿನ.ನಿಜ, ಅಪ್ಪನ ಪ್ರೀತಿ ವಾತ್ಸಲ್ಯ ಬಾಂಧವ್ಯವನ್ನು ನೆನೆಯಲು ಕೇವಲ ಒಂದು ದಿನ ಸಾಲದು ಇದು ಸಾಂಕೇತಿಕವಷ್ಟೆ, ನಮ್ಮ ಜೀವಮಾನದ ಪ್ರತಿ ದಿನ ಪ್ರತಿ ಕ್ಷಣವೂ ಪ್ರತಿಯೊಬ್ಬ ತಂದೆಯ ಗೌರವಾದರ ಪ್ರೀತಿ ವಾತ್ಸಲ್ಯ ವನ್ನು ಗೌರವ ಪೂರ್ವಕವಾಗಿ ನೆನೆಯುವ ಗಳಿಗೆಯಾಗಿದೆ.ಕಾರಣ ಅಪ್ಪ ಎನ್ನುವ ಪದವೇ ಜೀವನಕ್ಕೆ ಶಕ್ತಿ ತುಂಬುವಂತಹದ್ದು. ಅಪ್ಪ ಎಂದರೆ ಆಕಾಶಕ್ಕೂ ಎತ್ತರ ಭೂಮಿಗಿಂತಲೂ ಆಳ ವಿಶಾಲ ವಿಸ್ಮಯ ರೋಮಾಂಚನಕಾರಿ ತ್ಯಾಗಮಯಿ ದಣಿವರಿಯದ ಶ್ರಮಜೀವಿ ಬಾಳ ಭದ್ರತೆಯ ರೂವಾರಿ ಪ್ರತಿ ಕುಟುಂಬದಲ್ಲಿ ಮನೆಯ ಎಲ್ಲ ಸದಸ್ಯರ ಆಗುಹೋಗುಗಳನ್ನು ಅಗತ್ಯತೆಗಳನ್ನು ಪೂರೈಸುವ ಯಜಮಾನ, ಹೀಗೆ ಅಪ್ಪನ ಕಾರ್ಯ ವೈಖರಿ ಎಷ್ಟು ವರ್ಣಿಸಿದರೂ ಸಹ ಕಡಿಮೆಯೇ.

Advertisement


ಅಪ್ಪ ಎಂದ ತಕ್ಷಣ ಮನದಲ್ಲಿ ಏನೋ ಭದ್ರತೆಯ ಭಾವನೆ ಮೂಡುವುದು ಜವಾಬ್ದಾರಿಗಳನ್ನು ಹೊತ್ತು ಅಕ್ಕರೆಯಿಂದ ಮಕ್ಕಳ ನಿರಂತರ ಬೆಳವಣಿಗೆಗೆ ಶ್ರಮಿಸುವ ವಾತ್ಸಲ್ಯ ಭರಿತ ಒಲವಿನ ಆಸರೆಯೇ ಅಪ್ಪ.ತಾಯಂದಿರ ದಿನವನ್ನು ಸ್ಮರಿಸುವಂತೆ ತಂದೆಯ ದಿನವನ್ನು ಸ್ಮರಿಸುವುದಕ್ಕೆ ಒಂದು ಹಿನ್ನೆಲೆಯಿದೆ, 1909 ರಲ್ಲಿ ವಾಷಿಂಗ್ಟನ್ ನಗರದ ಸ್ಟೋಕೆನ್ ಎಂಬಲ್ಲಿ ಸ್ಮಾರ್ಟ್ ಡೊಡ್ ಎಂಬುವಳು ತಾಯಂದಿರ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಆಲಿಸುತ್ತಿದ್ದಳು.ಆದರೆ ಉಪನ್ಯಾಸ ಆಲಿಸುವಾಗ ತೀವ್ರತರವಾದ ಮನಸ್ಸಿಗೆ ಆಘಾತ ನೋವು ಕಳವಳ ಉಂಟಾಯಿತು ಕಾರಣ ಅವಳಿಗೆ ತಾಯಿ ಇರಲಿಲ್ಲ. ಅವಳ ತಂದೆಯಾದ ಹೆನ್ರಿ ಜಾಕ್ಸನ್ ಸ್ಮಾರ್ಟ್ ಅವಳನ್ನು ಅತ್ಯಂತ ಪ್ರೀತಿ ವಾತ್ಸಲ್ಯ ಮಮತೆಯಿಂದ ಸಾಕಿ ಬೆಳೆಸಿದ್ದರು ಆ ಕ್ಷಣದಲ್ಲಿ ತಂದೆಯ ತ್ಯಾಗಮಯ ಜೀವನ ತಂದೆಯ ಆದರ್ಶ ಸಿದ್ಧಾಂತಗಳು ಮಗಳಿಗಾಗಿ ತಂದೆಯ ಮಾರ್ಗದರ್ಶನ ಎಲ್ಲವೂ ನೆನಪಾದವು ಆಗ ಸ್ಮಾರ್ಟ್ ತಾಯಂದಿರ ದಿನದಂತೆ ತಂದೆಯ ದಿನವನ್ನು ಸಹ ಆಚರಿಸಲು ಸಿದ್ಧಳಾದಳು.

Advertisement

Advertisement

ತನ್ನ ತಂದೆ ಜಾಕ್ಸನ್ ಸ್ಮಾರ್ಟ್ ಹುಟ್ಟಿದ ದಿನದ ಸ್ಮರಣಾರ್ಥವಾಗಿ ಮೊದಲ ಬಾರಿಗೆ ವಾಷಿಂಗ್ಟನ್ನಲ್ಲಿ 1910 ರಲ್ಲಿ “ಅಪ್ಪಂದಿರ ದಿನ”ವನ್ನು ಆಚರಣೆ ಮಾಡಲಾಯಿತು.ಈ ಎಲ್ಲ ವೈಶಿಷ್ಟ್ಯಗಳ ಹಿನ್ನೆಲೆಯಲ್ಲಿ1924 ರಲ್ಲಿ ಆ ದೇಶದ ಅಧ್ಯಕ್ಷ ಕ್ವಾಲಿನ ಕೊಲಿಜ್ ರವರು ಜೂನ್ ತಿಂಗಳ ಮೂರನೇ ಭಾನುವಾರವನ್ನು ಅಪ್ಪಂದಿರ ದಿನವನ್ನಾಗಿ ಆಚರಿಸಲು ಕರೆ ನೀಡಿದರು ಅಂದಿನಿಂದ ಇಂದಿನವರೆಗೆ ವಿಶ್ವಾದ್ಯಂತ “ವಿಶ್ವ ಅಪ್ಪಂದಿರ ದಿನ” ಅಥವಾ “ಫಾದರ್ಸ್ ಡೇ “ಎಂದು ಆಚರಿಸುವ ಪರಿಪಾಠವಿದೆ.ಒಬ್ಬ ತಾಯಿ ಮಗುವಿಗೆ ನವಮಾಸ ಹೊತ್ತು ಹೆತ್ತು ಜನ್ಮ ನೀಡಿ ಲಾಲನೆ ಪಾಲನೆ ಮಾಡುತ್ತಾಳೆ ಮಗುವಿನ ಬೆಳವಣಿಗೆಯ ವಿಕಾಸದಲ್ಲಿ ಅತ್ಯಮೂಲ್ಯವಾದ ಪಾತ್ರ ವಹಿಸುತ್ತಾಳೆ ತಾಯಿ. ಹಾಗೆಯೇ ತಂದೆ ಇಡೀ ಜೀವನದ ಮಾರ್ಗದರ್ಶಕನಾಗಿ ಮಗುವಿನ ಸರಿ ತಪ್ಪುಗಳನ್ನು ತಿಳಿಸುತ್ತಾ ಭವಿಷ್ಯದ ರೂವಾರಿ ಯಾಗುತ್ತಾನೆ.ಒಂದು ಕುಟುಂಬಕ್ಕೆ ಭದ್ರ ಬುನಾದಿ ಯಂತೆ ಸುತ್ತಲಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಸಮಯೋಚಿತ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಪರೋಪಕಾರಿ ಅಪ್ಪ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ನಿಜ ದೈವವೇ ಸರಿ.ಮಾತೃ ದೇವೋಭವ ಗುರು ದೇವೋಭವ ಎನ್ನುವ ನಾವುಗಳು ಪಿತೃದೇವೋಭವ ಎನ್ನುವುದನ್ನು ಮಾತ್ರ ಮರೆಯುವಂತಿಲ್ಲ ಏಕೆಂದರೆ ತಾಯಿಯ ಹಾಗೆ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ಜವಾಬ್ದಾರಿ ನಿಭಾಯಿಸುವ ತಂದೆ ನಮ್ಮ ತಪ್ಪು ತಡೆಗಳನ್ನು ತಿದ್ದಿ ಬುದ್ಧಿ ಹೇಳುವ ಗುರುವಿನ ಸ್ಥಾನವನ್ನು ನಿಭಾಯಿಸುತ್ತಾನೆ.

Advertisement

 

ತನ್ನ ಮಗುವಿನ ಆಸೆ ಕನಸುಗಳನ್ನು ಈಡೇರಿಸುವಲ್ಲಿ ಆ ಮಗುವಿಗಿಂತ ಹೆಚ್ಚು ಆತ್ಮ ತೃಪ್ತಿ ಸಂತೋಷವನ್ನು ಪಡುವವರೇ ಅಪ್ಪ. ಕೆಲವೊಮ್ಮೆ ಮಕ್ಕಳು ತಪ್ಪು ದಾರಿ ಹಿಡಿದಾಗಲೂ ಸಹ ಸರಿದಾರಿಗೆ ತರುವಲ್ಲಿ ತಂದೆಯ ಪಾತ್ರ ಅಪಾರವಾದುದು.ಅಪ್ಪ ಎಂದಾಕ್ಷಣ ಕೆಲವೊಮ್ಮೆ ಭಯ ಹೆದರಿಕೆಯ ಭಾವನೆಯು ಸಹ ಮನಸ್ಸಲ್ಲಿ ಮಾಡಲೂಬಹುದು ಕಾರಣ ಮಗುವಿಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಕೆಲವೊಮ್ಮೆ ತಂದೆ ಗದರಿಕೆಯ ಭಾವನೆಯನ್ನು ಸಹ ತೋರಬೇಕಾಗುತ್ತದೆ.ಆದರೆ ಆ ಗದರಿಕೆಯ ಹಿನ್ನೆಲೆಯಾಗಿ ಅಪಾರವಾದ ಪ್ರೀತಿ ವಾತ್ಸಲ್ಯ ತಂದೆಯ ಅಂತರಾಳದಲ್ಲಿರುತ್ತದೆ.ಈ ಪ್ರೀತಿಯುತ ಭಾವನೆಯನ್ನು ವಾಸ್ತವವನ್ನು ಪ್ರತಿಯೊಬ್ಬ ಮಕ್ಕಳು ಅರ್ಥೈಸಿಕೊಂಡರೆ ಬಹುಶಃ ಭವಿಷ್ಯದಲ್ಲಿ ಉತ್ತಮ ಮಾನವೀಯ ಮೌಲ್ಯಗಳನ್ನು ಒಳಗೊಂಡ ವ್ಯಕ್ತಿಯಾಗಿ ಬದುಕಲು ಸಾಧ್ಯವಾಗುತ್ತದೆ.


ಕಲ್ಲೊಳಗೆ ಹೊನ್ನುಂಟು ಉದಕದೊಳಗೆ ಅಗ್ನಿ ಯುಂಟು ಹಾಲೊಳಗೆ ತುಪ್ಪ ಉಂಟು ಅಂತರ್ಯಾಮಿ ಯಲ್ಲಿ ಶಿವ ನಿಹನು ಎಂಬಂತೆ ಕಲ್ಲಿನಲ್ಲಿ ಕನಕವಿದೆ ನೀರಿನಲ್ಲಿ ಬೆಂಕಿ ಇದೆ ಹಾಲಿನಲ್ಲಿ ತುಪ್ಪವಿದೆ ಅದೇ ರೀತಿ ಜೀವನದಲ್ಲಿ “ಅಪ್ಪ ಎಂಬ ದೇವನ ದಿವ್ಯ ಚೇತನ ಶಕ್ತಿ ಹುದುಗಿರುತ್ತದೆ. ಇಂತಹ ಅಪ್ಪ ಎಂಬ ದಿವ್ಯಚೇತನ ಶಕ್ತಿಯಿಂದ ಮಗುವಿನ ವ್ಯಕ್ತಿತ್ವದಲ್ಲಿ ಮೌಲ್ಯಯುತವಾದ ಆದರ್ಶ ಗುಣ ವಿಚಾರಧಾರೆಗಳನ್ನು ಹೊರಹೊಮ್ಮುತ್ತ ಸಾಗುತ್ತವೆ. ಅಪ್ಪನ ಆದರ್ಶಯುತ ಬದುಕೇ ಮಗುವಿಗೆ ಕನ್ನಡಿ ಇದ್ದಂತೆ ಹಾಗಾಗಿ ಪ್ರತಿಯೊಬ್ಬ ಮಕ್ಕಳ ಜೀವನದಲ್ಲಿ ಮೊದಲ ಮಾದರಿ ವ್ಯಕ್ತಿ ,ರೋಲ್ ಮಾಡೆಲ್ ಒಬ್ಬ ತಂದೆಯಾಗಿರುತ್ತಾನೆ. ಈ ವಿಶಾಲ ಸುಂದರ ಸೃಷ್ಟಿಯಲ್ಲಿ ಪ್ರತಿ ಮಗುವಿನ ಬದುಕಿನಲ್ಲಿ ಮೊದಲ ಹೀರೋ ಅಪ್ಪನೇ ಆಗಿರುತ್ತಾನೆ.ಇಂದಿನ ಆಧುನಿಕತೆಯ ಭರದಲ್ಲಿ ತಂದೆ ತಾಯಿಗಳ ಮಾತನ್ನು ಆಲಿಸುವ ಪಾಲಿಸುವ ಗುಣಧರ್ಮ ಪ್ರತಿಯೊಬ್ಬ ಮಕ್ಕಳಿಗೂ ಬೇಕಾಗಿದೆ.ಬಾಲ್ಯದಲ್ಲಿ ಮಕ್ಕಳಿಗೆ ಅಪ್ಪ ಆಸರೆಯಾದರೆ, ಮುಪ್ಪಿನಲ್ಲಿ ಅದೇ ಅಪ್ಪನಿಗೆ ಮಕ್ಕಳು ವಾತ್ಸಲ್ಯದ ಆಸರೆ ಯಾದಾಗ ಮಾತ್ರ ಈ ಬಾಂಧವ್ಯದ ಬೆಸುಗೆ ಸಾರ್ಥಕವಾಗುತ್ತದೆ.

(ವಿಶ್ವ ಅಪ್ಪಂದಿರ ದಿನದ ಪ್ರಯುಕ್ತ ಈ ಲೇಖನ)

ಪ್ರೊ ಸುಧಾ ಹುಚ್ಚಣ್ಣವರ
ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ .
ph:9241585423.
All rights Reserved Namma Kannada Entertainment.

Advertisement
Share this on...