ಸ್ತ್ರೀ ಕುಲದ ಆದರ್ಶರತ್ನ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ

in ಕನ್ನಡ ಮಾಹಿತಿ 1,424 views

ಮನುಕುಲದ ಇತಿಹಾಸದಲ್ಲೇ ಇಡೀ ಸ್ತ್ರೀ ಕುಲಕ್ಕೆ ಮಾದರಿಯಾಗಿರುವಂತೆ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡು ಧಾರ್ಮಿಕ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವಾಗಿ ಸ್ವೀಕರಿಸಿ ಸಾಕ್ಷಾತ್ಕರಿಸಿಕೊಂಡ ದಿವ್ಯ ಚೇತನ ಮಲ್ಲಮ್ಮ. ಸುಮಾರು 600 ವರ್ಷಗಳ ಹಿಂದೆ ಆಂಧ್ರಪ್ರದೇಶದ ಶ್ರೀಶೈಲ ಪ್ರಾಂತ್ಯದ ಕರ್ನೂಲ್ ಜಿಲ್ಲೆಯ ಆತ್ಮಾಕೂರ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಮಲ್ಲಮ್ಮನ ಜನನವಾಯಿತು.ತಂದೆ ನಾಗರೆಡ್ಡಿ ಮತ್ತು ತಾಯಿ ಗೌರಮ್ಮ ,ದೊಡ್ಡ ಶ್ರೀಮಂತ ಮನೆತನದಲ್ಲಿ ಬೆಳೆದ ಮಲ್ಲಮ್ಮನಿಗೆ ಹದಿನಾರು ವರ್ಷ ತುಂಬಿದಾಗ ಸಿದ್ದಾಪುರ ಸಂಸ್ಥಾನದ ಒಡೆಯ ಶ್ರೀ ಹೇಮರಡ್ಡಿ ಅವರ ಮೂರನೆ ಮಗನಾದ ಭರಮರೆಡ್ಡಿಯವರಿಗೆ ಕೊಟ್ಟು ಮದುವೆ ಮಾಡಲಾಯಿತು.ನಂತರ ಮಹಾ ಶಿವಶರಣೆ ಮಲ್ಲಮ್ಮ ಸಿದ್ದಾಪುರಕ್ಕೆ ಅವಿಭಕ್ತ ಕುಟುಂಬದ ಸೊಸೆಯಾಗಿ ನಿಷ್ಠೆಯಿಂದ ಕಾಯಕ ಮಾಡುತ್ತಾ ಗುರು ಲಿಂಗ ಜಂಗಮ ಸೇವೆಯಲ್ಲಿ ನಿರತಳಾದಳು. ಆದರೆ ಕೌಟುಂಬಿಕವಾಗಿ ಹಲವಾರು ಸಂಕಷ್ಟದ ಸವಾಲುಗಳನ್ನು ಎದುರಿಸಬೇಕಾಯಿತು.

Advertisement

 

Advertisement

Advertisement

ಡಿವಿಜಿಯವರು ಹೇಳುವಂತೆ
” ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು” -ಮಂಕುತಿಮ್ಮ ಎನ್ನುವಂತೆ ಹೇಮರೆಡ್ಡಿ ಮಲ್ಲಮ್ಮ ಕಷ್ಟಗಳ ಮಳೆಯೇ ಸುರಿದರೂ ಅದೆಲ್ಲವನ್ನೂ ಧೈರ್ಯದಿಂದ ಎದುರಿಸಿ ಸಾಮರಸ್ಯದ ಬಾಳನ್ನು ಬದುಕಿದ ಮಹಾಸಾಧ್ವಿ ಮಲ್ಲಮ್ಮ.
ಮನೆಯಲ್ಲಿ ಮತಿ ಭ್ರಮಣ ಪತಿ ಭರಮರೆಡ್ಡಿ ಅತ್ತೆ ಪದ್ಮಾವತಿ ಹಾಗೂ ನೆಗೆಣ್ಣಿಯರು ದಿನನಿತ್ಯದ ಕಿರುಕುಳ , ಇಲ್ಲಸಲ್ಲದ ಅಪವಾದಗಳು ಹಾಗೂ ಕೆಟ್ಟವರ ಸಹವಾಸಕ್ಕೆ ಒಳಗಾದ ಮೈದುನ ವೇಮನ,
ಈ ತರಹದ ಎಲ್ಲ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಮಲ್ಲಮ್ಮ ಮಲ್ಲಿಕಾರ್ಜುನ ಸ್ವಾಮಿಯನ್ನು ತನ್ನ ತಂದೆ ಎಂದು ನಂಬಿ ಆಧ್ಯಾತ್ಮ ಸಾಧನೆ ಮಾಡಿದ ಮಹಾಶಿವಶರಣೆ.

Advertisement

 

ಲೌಕಿಕ ಆಸೆ ಆಮಿಷಗಳಿಗೆ ಒಳಗಾಗಿದ್ದ ಮೈದುನ ವೇಮನ ನಿಗೆ ಮಲ್ಲಮ್ಮ ತನ್ನ ಆಧ್ಯಾತ್ಮಿಕ ಚಿಂತನೆಯ ಮೂಲಕ ನೀತಿ ಬೋಧನೆಯನ್ನು ಮಾಡಿ ಬೋಗಿ ಯಾಗಿದ್ದ ಮೈದುನನನ್ನು “ಯೋಗಿ ವೇಮನ “ನನ್ನಾಗಿ ಪರಿವರ್ತಿಸಿದ ಗುರುಮಾತೆ ಹೇಮರೆಡ್ಡಿ ಮಲ್ಲಮ್ಮ. “ಕಾಯಕದಿಂದಲೇ ಮುಕ್ತಿ” ಎಂಬ ಶರಣ ಸಿದ್ಧಾಂತದಂತೆ ಕೃಷಿ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಂಸಾರಿಕ ಬದುಕನ್ನು ಜಯಿಸಿದ ಮಹಾಶರಣೆ. ಹೇಮರೆಡ್ಡಿ ಮಲ್ಲಮ್ಮ ತನ್ನ ಕೊನೆಯ ದಿನಗಳನ್ನು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಗುಡ್ಡದಲ್ಲಿ ಆಶ್ರಮ ನಿರ್ಮಿಸಿಕೊಂಡು ಪತಿ ಭರಮರೆಡ್ಡಿ ಹಾಗೂ ತಾನು ಮಲ್ಲಿಕಾರ್ಜುನ ಸ್ವಾಮಿಯನ್ನು ನೆನೆಯುತ್ತ ತಪಸ್ಸು ಮಾಡುತ್ತಾ ಜೀವನವನ್ನು ಸಾಗಿಸಿದಳು.ಮಲ್ಲಮ್ಮನ ಭಕ್ತಿಗೆ ಮೆಚ್ಚಿದ ಸಾಕ್ಷಾತ್ ಮಲ್ಲಿಕಾರ್ಜುನ ಸ್ವಾಮಿಯೆ ಪ್ರತ್ಯಕ್ಷನಾಗಿ ಮಲ್ಲಮ್ಮ ನಿನ್ನ ಆಯುಷ್ಯ ಮುಗೀಯುತಾ ಬಂದಿತು ನಿನಗೆ ಏನು ವರ ಬೇಕು? ಎಂದು ಕೇಳಿದಾಗ , ಮಲ್ಲಮ್ಮ ತನಗೆ ಮೋಕ್ಷ ಬೇಕು ಎಂದು ಕೇಳಲಿಲ್ಲ ಬದಲಿಗೆ “ರೆಡ್ಡಿ ಕುಲಕ್ಕೆ ಎಂದಿಗೂ ಬಡತನ ಬರಬಾರದೆಂದು” ಕೇಳಿಕೊಂಡಳು.

 

ಮಲ್ಲಿಕಾರ್ಜುನ ಸ್ವಾಮಿಯೆ ಮಲ್ಲಮ್ಮನ ಭಕ್ತಿಗೆ ಮೆಚ್ಚಿ ಆಶೀರ್ವದಿಸಿದನು ಆಗ ಮಲ್ಲಮ್ಮನ ಕಣ್ಣಲ್ಲಿ ಆನಂದ ಭಾಷ್ಪ ಗಳು ಸುರಿದವು ಇಂದು ಅದೇ ಮಲ್ಲಮ್ಮನ ಕಣ್ಣೀರು ಪವಿತ್ರ ಝರಿಯಾಗಿ ಹರಿಯುತ್ತಿದೆ ಮಲ್ಲಮ್ಮ ಐಕ್ಯಳಾದ ಆ ಸ್ಥಳಕ್ಕೆ “ಮಲ್ಲಮ್ಮನ ಕಣ್ಣೀರು” ಎಂದು ಕರೆಯಲಾಗುತ್ತಿದೆ.ಕರ್ನಾಟಕ ರೆಡ್ಡಿ ಸಮಾಜವು ಶ್ರೀಶೈಲದ ಲಿಂಗಕ್ಕೆ ಜಗದ್ಗುರು ಶ್ರೀ ಉಮಾಪತಿ ಪಂಡಿತಾರಾಧ್ಯ ಭಗವತ್ಪಾದರ ಮಾರ್ಗದರ್ಶನದಲ್ಲಿ ಸುಂದರ ದೇವಾಲಯವನ್ನು ನಿರ್ಮಾಣ ಮಾಡಿ ದೇವಸ್ಥಾನವನ್ನು ಆಡಳಿತ ಮಂಡಳಿಯವರಿಗೆ ಒಪ್ಪಿಸಿದೆ. ನಿವೃತ್ತ ಡಿ ಎಸ್ಪಿ ವೈ ಬಿ ಆಲೂರು ಮತ್ತಿತರ ಹಿರಿಯರ ಶ್ರಮದಿಂದ ನಿರ್ಮಾಣಗೊಂಡ ದೇವಾಲಯಕ್ಕೆ ಇಂದು ನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.ಸರಕಾರದ ನಿರ್ಣಯದಂತೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ “ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಪೀಠ” ಸ್ಥಾಪಿಸಲಾಗಿದೆ. ಹಾಗೂ ಸರ್ಕಾರದಿಂದ ಪ್ರತಿ ವರ್ಷ “ಹೇಮರೆಡ್ಡಿ ಮಲ್ಲಮ್ಮ ಜಯಂತಿ” ಆಚರಣೆಗೆ ಆದೇಶಿಸಲಾಗಿದೆ.

 

ಪ್ರೊ ಸುಧಾ ಹುಚ್ಚಣ್ಣವರ
ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ .

Advertisement
Share this on...