ಬಣ್ಣದ ಲೋಕದ ಸೆಳೆತ ಎಂತಹುದು ಎಂಬುದನ್ನು ಒಂದೆರಡು ವಾಕ್ಯದಲ್ಲಿ ಉತ್ತರಿಸಲು ನಿಜಕ್ಕೂ ತುಂಬಾ ಕಷ್ಟ. ಯಾಕೆಂದರೆ ಬಣ್ಣದ ಲೋಕಕ್ಕೆ ಬರಬೇಕು ಎಂದು ಕನಸು ಕಂಡಿರುವವರಿಗೆ ಕೆಲವೊಮ್ಮೆ ಅವಕಾಶ ಸಿಗುವುದು ಕಷ್ಟವಾಗಿ ಬಿಡುತ್ತದೆ. ಆದರೆ ಇದರ ಹೊರತಾಗಿ ಯಾರು ಬಣ್ಣದ ಲೋಕಕ್ಕೆ ಬರುವ ಆಸೆಯೇ ಇಟ್ಟುಕೊಂಡಿಲ್ಲವೋ, ಅವರಿಗೆ ಅವಕಾಶ ತಾನಾಗಿಯೇ ಅರಸಿ ಬರುತ್ತದೆ. ಈಕೆಯೂ ಅಷ್ಟೇ! ಬಣ್ಣದ ಲೋಕದ ಬಗ್ಗೆ ಯಾವುದೇ ರೀತಿಯ ಬಯಕೆಗಳನ್ನು ಹೊಂದಿದವಳಲ್ಲ. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟ ಮಲೆನಾಡ ಸುಂದರಿ ಪ್ರಿಯಾಂಕಾ ಇದೀಗ ಹಿರಿತೆರೆಯಲ್ಲೂ ಮೋಡಿ ಮಾಡುತ್ತಿದ್ದಾರೆ. ಹೌದು, ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮಾನರ್ಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸೀದಾ ಹಿರಿತೆರೆಗೂ ಹಾರಿದ್ದಾರೆ ಪ್ರಿಯಾಂಕಾ ಕುಮಾರ್.
ಮಲೆನಾಡು ಶಿವಮೊಗ್ಗದ ಹೊಸನಗರದಲ್ಲಿ ಹುಟ್ಟಿ ಬೆಳೆದ ಪ್ರಿಯಾಂಕಾ ಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಕೂಡಾ ಅಲ್ಲೇ ಮುಗಿಸಿದರು. ಪ್ರಿಯಾಂಕಾ ತಂದೆ ವಸಂತಕುಮಾರ ಬಿ. ಇ.ಓ ಆಗಿದ್ದು ಮೈಸೂರಿಗೆ ವರ್ಗವಾದ ನಂತರ ಎಲ್ಲರೂ ಅಲದಲೊಗೆ ಹೋಗಿದ್ದು ಇದೀಗ ಸಾಂಸ್ಕೃತಿಕ ನಗರಿಯಲ್ಲೇ ಸೆಟಲ್ ಆಗಿದ್ದಾರೆ. ಓದುವುದರಲ್ಲಿ ಸದಾ ಮುಂದಿದ್ದ ಪ್ರಿಯಾಂಕಗೆ ಎಂದು ನಟನೆಯ ಬಗ್ಗೆ ಯೋಚಿಸಿದವರೇ ಅಲ್ಲ.
ಓದಿನ ಹೊರತಾಗಿ ಶಾಲಾದಿನಗಳಲ್ಲಿ ಡ್ಯಾನ್ಸ್ ನ ಆಸಕ್ತಿ ಹೊಂದಿದ್ದ ಪ್ರಿಯಾಂಕ ಕುಮಾರ್ ಮುಂದೆ ಶಾಸ್ತ್ರೋಕ್ತವಾಗಿ ನೃತ್ಯ ಕಲಿಯುವ ನಿರ್ಧಾರ ಮಾಡಿದರು. ಲಕ್ಷ್ಮಿ ಅವರ ಬಳಿ ಭರತನಾಟ್ಯ ಕಲಿತ ಮಲೆನಾಡ ಬೆಡಗಿ ಪ್ರಿಯಾಂಕಾ ಕುಮಾರ್ ಮುಂದೆ ಜೂನಿಯರ್ ಪರೀಕ್ಷೆ ಪಾಸ್ ಮಾಡಿದರು.
ಕಾಲ ಕಳೆದಂತೆ ನಮ್ಮಲ್ಲಿನ ಅಭಿರುಚಿಗಳು ಬದಲಾಗುವುದು ಸಹಜ. ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ನತ್ತ ಆಕರ್ಷಿತರಾದ ಪ್ರಿಯಾಂಕ ಮನೆಯವರ ಬೆಂಬಲವೂ ಪಡೆದು ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು. ಮಾಡೆಲಿಂಗ್ ಲೋಕದ ಆಗು ಹೋಗುಗಳನ್ನು ತಿಳಿದುಕೊಂಡ ಪ್ರಿಯಾಂಕಾ ಎಲಿಡ್ ಮಾಡೆಲ್ ಲುಕ್ ನಲ್ಲಿ ಗುರುತಿಸಿಕೊಂಡರು. ಮುಂದೆ ಒಂದಷ್ಟು ಶೋಗಳಲ್ಲಿ ರ್ಯಾಂಪ್ ವಾಕ್ ಮಾಡಿದ ಪ್ರಿಯಂಕಾ ಮುಂಬೈಯಿಂದ ಯುರೋಪ್ ಗೆ ತೆರಳುವ ಅವಕಾಶ ಪಡೆದುಕೊಂಡರು. ಫ್ಯಾಷನ್ ಶೋವಿನಲ್ಲಿ ಭಾರತವನ್ನು ಪ್ರತಿನಿಧಿಸಿದ ಈಕೆ ಮುಂದೆ ಟಾಪ್ 30 ರೊಳಗೆ ಗುರುತಿಸಿಕೊಂಡರು.
ಮಾಡೆಲಿಂಗ್ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಈಕೆಗೆ ನಟನಾ ಲೋಕದಿಂದ ಅವಕಾಶಗಳು ದೊರೆಯಿತು. ಸ್ಟಾರ್ ಸುವರ್ಣ ವಾಹಿನಿಯಿಂದ ಪ್ರಸಾರವಾಗಲಿರುವ ಧಾರಾವಾಹಿ ತಂಡದಿಂದ ಕರೆ ಬಂದಿದ್ದು, ಆಡಿಶನ್ ಅಟೆಂಡ್ ಮಾಡುವಂತೆ ಹೇಳಿದ್ದರು. ಆಡಿಷನ್ ನಲ್ಲಿ ಸೆಲೆಕ್ಟ್ ಆದ ಪ್ರಿಯಾಂಕಾ ನಟಿಯಾಗಿ ಛಾಪು ಮೂಡಿಸುವ ಮೊದಲು ತರಬೇತಿ ಪಡೆಯುವ ನಿರ್ಧಾರ ಮಾಡಿದರು.
ಅಂತೆಯೇ ಹಿರಿಯ ಕಲಾವಿದೆ ಉಷಾ ಭಂಡಾರಿ ಅವರ ಗರಡಿಯಲ್ಲಿ ನಟನೆಯ ಎಬಿಸಿಡಿ ಕಲಿತ ಪ್ರಿಯಾಂಕಾ ಸ್ಟಾರ್ ಸುವರ್ಣ ವಾಹಿನಿಯ ಕೃಷ್ಣ ತುಳಸಿ ಧಾರಾವಾಹಿಯಲ್ಲಿ ತುಳಸಿಯಾಗಿ ನಟಿಸುವ ಮೂಲಕ ನಟನಾ ಪಯಣ ಶುರು ಮಾಡಿದರು. ನಂತರ ತೆಲುಗಿನ ಚಾಕಲೇಟ್ ಧಾರಾವಾಹಿಯಲ್ಲಿ ನಟಿಸುವ ಮೂಲಕ ತೆಲುಗು ಕಿರುತೆರೆಯಲ್ಲಿಯೂ ಸೈ ಎನಿಸಿಕೊಂಡಿರುವ ಇದೀಗ ಮೊದಲ ಬಾರಿಗೆ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಗೆ ನಾಯಕಿಯಾಗಿ ನಟಿಸಲಿರುವ ಈಕೆ ಸಿನಿಪ್ರಿಯರ ಮನ ಸೆಳೆಯುತ್ತಾರಾ ಎಂದು ಕಾದು ನೋಡಬೇಕಾಗಿದೆ.
– ಅಹಲ್ಯಾ