ಸಾಧಿಸುವಾಗ ಎಡರುತೊಡರುಗಳು ಇದ್ದಿದ್ದೇ. ಅದನ್ನು ಮೀರಿ ನಿಂತಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ತನ್ನ ಕಷ್ಟಗಳನ್ನೆಲ್ಲಾ ಮೀರಿ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ತೇಜಸ್ವಿನಿ ಗೌಡ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚರುಲ್ ಧಾರಾವಾಹಿ ನಾಗಿಣಿ 2 ರಲ್ಲಿ ದಿಗ್ವಿಜಯ್ ಮಗಳಾಗಿ ಅಭಿನಯಿಸುತ್ತಿರುವ ತೇಜಸ್ವಿನಿ ಕಿರುತೆರೆ, ಹಿರಿತೆರೆ ನಟಿ ಅನುಪಮಾ ಗೌಡ ಅವರ ಮುದ್ದಿನ ತಂಗಿಯೂ ಹೌದು. ಅಕ್ಕನಂತೆಯೇ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು, ನಟನಾ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಬಯಕೆ ಹೊಂದಿದ್ದ ಈಕೆ ಇಂದು ತುಂಬಾ ಸಂತಸವಾಗಿದ್ದಾರೆ. ಅಕ್ಕನ ಹಾದಿಯಲ್ಲಿಯೇ ಹೆಜ್ಜೆ ಹಾಕಿರುವ ತೇಜಸ್ವಿನಿ ಇದೀಗ ಕಿರುತೆರೆಯಲ್ಲಿ ಬ್ಯುಸಿಮ ತೇಜಸ್ವಿನಿ ಅವರ ತಾಯಿಗೆ ಇದ್ದುದು ಒಂದೇ ಆಸೆ. ಮಕ್ಕಳಿಬ್ಬರು ಏನಾದರೂ ಸಾಧಿಸಬೇಕು, ಯಾವುದಾದರೂ ಕ್ಷೇತ್ರದಲ್ಲಿ ಹೆಸರು ಗಳಿಸಬೇಕು, ಬಹು ಎತ್ತರ ಬೆಳೆಯಬೇಕು ಎಂದೆಲ್ಲಾ ಕನಸು ಕಂಡಿದ್ದ ಅಮ್ಮನ ಕನಸನ್ನು ನನಸು ಮಾಡಿದ ಸಂತಸ ತೇಜಸ್ವಿನಿ ಅವರಿಗಿದೆ. ಅಮ್ಮನಿಗೂ ನಟನಾ ರಂಗದತ್ತ ಒಂದು ರೀತಿಯ ಒಲವಿದ್ದ ಕಾರಣ ಮಕ್ಕಳು ಆ ಲೋಕದಲ್ಲಿ ಗುರುತಿಸಿಕೊಂಡರೆ ಚೆನ್ನ ಎಂದು ಬಯಸಿದ್ದರು. ಆ ಬಯಕೆ ಈಡೇರಿಸಿದ ತೇಜಸ್ವಿನಿ ಅಕ್ಕನಂತೆಯೇ ನಟನಾ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ.
ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ತೇಜಸ್ವಿನಿ ಮೊದಲ ಬಾರಿ ನಟಿಸಿದಾಗ ಕೇವಲ ಹದಿನಾಲ್ಕರ ಹರೆಯ. ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಕೇಳದೇ ನಿಮಗೀಗ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು ತೇಜಸ್ವಿನಿ. ಅವಕಾಶ ತಾನಾಗಿ ಬಂದಾಗ ಬೇಡ ಎನ್ನದ ಆಕೆ ನಟಿಸಿದರು. ಆದರೆ ಮುಂದೆ ಆ ಚಿತ್ರ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ.
ತದ ನಂತರ ಶಿಕ್ಷಣದ ಕಡೆಗೆ ಗಮನಹರಿಸಿದ ತೇಜಸ್ವಿನಿ ಬಿ.ಕಾಂ ಪದವಿ ಮುಗಿಸಿದರು. ಪದವಿ ಮುಗಿದದ್ದೇ ತಡ, ಮನಸು ನಟನೆಯತ್ತ ವಾಲಿತು. ಬಣ್ಣದ ನಂಟಿನ ಸೆಳೆತ ಅಷ್ಟು ಸುಲಭವಾಗಿ ದೂರವಾಗುವುದಕ್ಕೆ ಬಿಡಲಿಲ್ಲ. ಆಡಿಷನ್ ನಲ್ಲಿ ಮೂಲಕ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.
ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಖಳನಾಯಕಿ ನಂದಿನಿಯಾಗಿ ಅಭಿನಯಿಸಿದ್ದ ತೇಜಸ್ವಿನಿ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಯಕಿ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ತಂಗಿಯಾಗ ನಟಿಸಿದ್ದರು. ಮುಂದೆ ತಮಿಳು ಕಿರುತೆರೆಯಿಂದಲೂ ಅವಕಾಶ ಪಡೆದುಕೊಂಡ ತೇಜಸ್ವಿನಿ ಸುಬ್ರಹ್ಮಣ್ಯಪುರಂ ಎಂಬ ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಧಾರಾವಾಹಿ ಎನ್ನುವುದು ಒಂದು ರೀತಿಯ ಶಾಲೆ ಹೌದು. ಆ ಶಾಲೆಗೆ ಕಾಲಿಡುವ ತನಕವಷ್ಟೇ ನಾವು ನಾವಾಗಿರುತ್ತೇವೆ. ಆದರೆ ಆ ಶಾಲೆ ಪ್ರವೇಶಿಸಿದ ನಂತರ ಅದು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಚೆಂದುಳ್ಳಿ ಚೆಲುವೆ ತೇಜಸ್ವಿನಿ ಅವಕಾಶದಿಂದ ದೊರೆತರೆ ಹಿರಿತೆರೆಯಲ್ಲೂ ಮಿಂಚಲು ತಯಾರಾಗಿದ್ದಾರೆ.
– ಅಹಲ್ಯಾ