ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದ ಹಿಮ ದಾಸ್ ಯಾರಿಗೆ ತಾನೆ ಗೊತ್ತಿಲ್ಲ. ಭಾರತದ ಚಿನ್ನದ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮ ದಾಸ್ ಇದೀಗ ಮತ್ತೊಂದು ಹಿರಿಮೆ ಮುಡಿಗೇರಿಸಿಕೊಂಡಿದ್ದಾರೆ. ಹಿಮ ಇದೀಗ ಅಥ್ಲಿಟ್ ಆಗಿ ಮಾತ್ರ ಉಳಿದಿಲ್ಲ, ಇದೀಗ ಹೆಮ್ಮೆಯ ಪೊಲಿಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹೌದು. 21 ವರ್ಷದ ಕ್ರೀಡಾಪಟು ಹಿಮ ಇದೀಗ ಅಸ್ಸಾಂ ನ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಎಂಬುದು ವಿಶೇಷ. ಕ್ರೀಡಾಲೋಕದಲ್ಲಿ ಸಾಧನೆ ಮಾಡಿದ ಹಲವರಿಗೆ ಕ್ಲಾಸ್ 1 ಮತ್ತು ಕ್ಲಾಸ್ 2 ಮಟ್ಟದ ಹುದ್ದೆಗೆ ನೇಮಿಸಲು ಅಸ್ಸಾಂ ಕೌನ್ಸಿಲ್ ನಲ್ಲಿ ನಿರ್ಧರಿಸಲಾಗಿತ್ತು. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಈ ಹಿಂದೆ ಹಿಮ ದಾಸ್ ಅವರನ್ನು ಡಿಎಸ್ ಪಿಯಾಗಿ ನೇಮಕ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಹಿಮ ದಾಸ್ ಅಸ್ಸಾಂ ಡಿಎಸ್ ಪಿಯಾಗಿ ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಹಿಮ, ತನ್ನ ಬಾಲ್ಯದ ಕನಸು ನನಸಾಗಿದೆ. ಪೊಲೀಸ್ ಅಧಿಕಾರಿಯಾಗಿ ತಾವು ನೇಮಕಗೊಂಡಿದ್ದರೂ ಕೂಡ ತನ್ನ ಅಥ್ಲಿಟ್ ಕೆರಿಯರ್ ನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಹಿಮ ದಾಸ್ ಐಎಎಎಫ್ ವರ್ಲ್ಡ್ ಅಂಡರ್ 20 ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮ ದಾಸ್ 51.46ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 2019ರಲ್ಲಿ ಹಿಮ ದಾಸ್ ಒಟ್ಟು 5 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದರು. 400 ಮಿಟರ್ ಗುರಿಯನ್ನು 52.09 ಸೆಕೆಂಡ್ ಗಳಲ್ಲಿ ಓಡಿದ ಕೀರ್ತಿ ಹಿಮ ದಾಸ್ ಅವರದ್ದು. ಹಿಮ ದಾಸ್ ಅವರನ್ನು ಧಿಂಗ್ ಎಕ್ಸ್ ಪ್ರೆಸ್ ಎಂದೂ ಕೂಡ ಕರೆಯುತ್ತಾರೆ.
ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿರುವ ಹಿಮ, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದವರು. ಹಿಮ ದಾಸ್ ತಂದೆ ರೊನ್ ಜಿತ್ ದಾಸ್ ಮತ್ತು ತಾಯಿ ಜೊನಾಲಿ ದಾಸ್. ನಾಲ್ಕು ಮಕ್ಕಳಲ್ಲಿ ಹಿಮ ಕಿರಿಯರು. ಹಿಮಾ ಬಾಲ್ಯದಿಂದ ಫುಟ್ಬಾಲ್ ಆಟಗಾರ್ತಿ. ತನ್ನ ಶಾಲೆಯಲ್ಲಿ ಹುಡುಗರೊಂದಿಗೆ ಆಟವಾಡುತ್ತಾ ಫುಟ್ಬಾಲ್ನಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಬಯಸಿದ್ದರು. ನಂತರ, ಜವಾಹರ್ ನವೋದಯ ವಿದ್ಯಾಲಯದಿಂದ ಶಾರೀಲ್ ಶಿಕ್ಷಣ ತರಬೇತುದಾರ ಶಮ್ಸುಲ್ ಹೋಕ್ ಅವರ ಸಲಹೆಯ ಮೇರೆಗೆ, ಓಟದಲ್ಲಿ ಆಸಕ್ತಿ ಹೊಂದಿ ರನ್ನಿಂಗ್ ನಲ್ಲಿ ತೊಡಗಿಸಿಕೊಂಡರು. ಅಂತರ-ಜಿಲ್ಲೆಯ ಕ್ರೀಡಾ ಮತ್ತು ಯುವಜನ ಕಲ್ಯಾಣ ನಿರ್ದೇಶನಾಲಯದ ಕ್ರೀಡಾಪಟು ನಿಪಾನ್ ದಾಸ್ ಹಿಮ ದಾಸ್ ಪ್ರತಿಭಯನ್ನು ಕಂಡು ಆಕೆಯನ್ನು ತರಬೇತಿಗಾಗಿ ಗೌಹಾತಿಗೆ ಕರೆದೊಯ್ದರು. ಅಲ್ಲಿ ಹಿಮ ದಾಸ್ ಗೆ ತರಬೇತಿ ನೀಡಲಾಯಿತು.
400 ಮೀಟರ್ ಮತ್ತು 4×400 ಮೀಟರ್ ರಿಲೇನಲ್ಲಿ 2018 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿಮ ದಾಸ್ ಸ್ಪರ್ಧಿಸಿದ್ದರು. 400 ಮೀಟರುಗಳಲ್ಲಿ, ಫೈನಲ್ ಗೆ ಅರ್ಹತೆ ಪಡೆದರು, ಅಲ್ಲಿ ಅವರು 51.32 ಸೆಕೆಂಡುಗಳ ಅವಧಿಯಲ್ಲಿ ಆರನೇ ಸ್ಥಾನ ಗಳಿಸಿದರು, ಅವರು 4×400 ಮೀಟರ್ ರಿಲೇನಲ್ಲಿ ಫೈನಲ್ ನಲ್ಲಿ ಸ್ಪರ್ಧಿಸಿದ ಭಾರತೀಯ ತಂಡದ ಭಾಗವಾದರು. ಹಿಮ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ಹಿಮ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಭಾರತದ ಚಿನ್ನದ ಕುವರಿ ಇದೀಗ ಅಸ್ಸಾಂ ಡಿಎಸ್ ಪಿ ಎಂಬುದು ಮತ್ತೊಂದು ವಿಶೇಷ.