ಐಸ್ ಕ್ಯೂಬ್ ನ ಸೌಂದರ್ಯ ಲೀಲೆಗಳು !

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 187 views

ಸೌಂದರ್ಯ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಒತ್ತಡದ ಜೀವನ, ಚಿಂತೆ, ಈ ಕಲುಷಿತ ವಾತಾವರಣವು ನಮ್ಮ ಸೌಂದರ್ಯದ ಮೇಲೆ ನಿಶ್ಚಿತ ಪರಿಣಾಮ ಬೀರುತ್ತದೆ. ನಮ್ಮ ತ್ವಚ್ಚೆಯ ಮೇಲೆ ಇದರ ಪ್ರಭಾವ ಉಂಟಾಗಿ ಮುಖದಲ್ಲಿ ನೆರಿಗೆ , ಮೊಡವೆ, ಬೊಕ್ಕೆಗಳು, ಕಲೆಗಳು ಉಂಟಾಗಬಹುದು. ಇದರಿಂದ ಕಿರಿಕಿರಿಯೂ ಉಂಟಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಹಲವು ಮದ್ದುಗಳ ಮೊರೆಹೋಗುತ್ತೇವೆ. ಅದು ಇದು ಎಂಬ ಕೈಗೆ ದೊರೆತ ಕ್ರೀಮ್ ಗಳನ್ನೆಲ್ಲಾ ಹಚ್ಚುವುದು ಮಾಮುಲಿ. ಆದರೆ ಮನೆಯಲ್ಲೇ ಇರುವ ಐಸ್ ಕ್ಯೂಬ್ ನ್ನು ಉಪಯೋಗಿಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದ್ದು ಇದು ಹಲವರಿಗೆ ತಿಳಿದಿಲ್ಲ. ಅಂದ ಹಾಗೇ ಐಸ್ ಕ್ಯೂಬ್ ನ ಸೌಂದರ್ಯ ಲೀಲೆಗಳನ್ನು ನಾವಿಂದು ವಿವರವಾಗಿ ತಿಳಿಯೋಣ. ಸೊರಗಿದ ಚರ್ಮದ ಕಾಂತಿಯನ್ನು ಮರಳಿಸುವ ಐಸ್ ಕ್ಯೂಬ್ ಮೊಡವೆ ಹಾಗೂ ಬೊಕ್ಕೆಗಳನ್ನು ನಿವಾರಿಸಿ ಮುಖ ಹೊಳೆಯುವಂತೆ ಮಾಡುತ್ತದೆ. ಚರ್ಮದ ಉರಿಯನ್ನು ಕಡಿಮೆಗೊಳಿಸುವ ಇದು ಸನ್ ಬರ್ನ್ ಗೆ ಹೇಳಿ ಮಾಡಿಸಿದ ಮದ್ದು. ಇದರ ಜೊತೆಗೆ ಡಾರ್ಕ್ ಸರ್ಕಲ್ ನ್ನು ನಿವಾರಣೆ ಮಾಡುವಲ್ಲಿ ಸಹಕರಿಸುತ್ತದೆ. ಜೊತೆಗೆ ಮುಖದಲ್ಲಿನ ಬೊಕ್ಕೆ ಹಾಗೂ ಕಲೆಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಮುಖದಲ್ಲಿನ ನೆರಿಗೆಗಳನ್ನು ಮರೆ ಮಾಚಿಸುವ ಇದು ಚರ್ಮದ ಜಿಡ್ಡಿನಂಶ ಕಡಿಮೆ ಮಾಡುತ್ತದೆ. ಇದರ ಜೊತೆಗೆ ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆದು ಹಾಕುತ್ತದೆ.

Advertisement

Advertisement

ಕಾಂತಿಯುತ ಚರ್ಮಕ್ಕಾಗಿ ಜೇನುತುಪ್ಪವನ್ನು ಬಳಸುವುದು ಅನಾದಿ ಕಾಲದಿಂದಲೂ ತಿಳಿದಿರುವ ವಿಚಾರ. ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ ಆಕ್ಸಿಡೆಂಟ್ ಇರುವ ಜೇನುತುಪ್ಪವನ್ನು ಐಸ್ ಕ್ಯೂಬ್ ಗಳಾಗಿ ಪರಿವರ್ತಿಸಬಹುದು. ಎರಡು ಚಮಚ ಜೇನು ಹಾಗೂ ಬೇಕಾದಷ್ಟು ನೀರನ್ನು ಮಿಶ್ರಣ ಮಾಡಿ ಐಸ್ ಟ್ರೇಗೆ ಹಾಕಿ ಇಡಿ. ಐಸ್ ಕ್ಯೂಬ್ ಗಳಾದ ಮೇಲೆ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ಕಾಂತಿಯುತವಾಗುತ್ತದೆ.

Advertisement

ಬಿರುಬಿಸಿಲಿನಿಂದ ಚರ್ಮ ಸುಟ್ಟ ಹಾಗೇ ಆಗುತ್ತದೆ. ಮತ್ತು ಅದಕ್ಕೆ ಉತ್ತಮ ಪರಿಹಾರ ಎಂದರೆ ಅಲೋವೆರಾ. ಉರಿಯೂತ ಕಡಿಮೆ ಗೊಳಿಸುವ ಶಕ್ತಿ ಹೊಂದಿರುವ ಅಲೋವೇರಾದ ಲೋಳೆಗೆ ಒಂದಷ್ಟು ನೀರು ಹಾಕಿ ಐಸ್ ಕ್ಯೂಬ್ ತಯಾರಿಸಿ, ನಂತರ ಮುಖಕ್ಕೆ ಹಚ್ಚಿದರೆ ಒಳ್ಳೆಯದು. ಇನ್ನು ಮೊಡವೆಗಳ ನಿವಾರಣೆಗೆ ದಾಲ್ಚಿನ್ನಿಯನ್ನು ಬಳಸಿ ತಯಾರಿಸಿದ ಐಸ್ ಕ್ಯೂಬ್ ತುಂಬಾ ಒಳ್ಳೆಯದು.

Advertisement

 

ವಯಸ್ಸಾಗುವ ಲಕ್ಷಣ ಕಳೆಯಲು, ಮುಖದಲ್ಲಿನ ನೆರಿಗೆ ಹೋಗಲಾಡಿಸಲು ಅರ್ಧ ಕಪ್ ಗುಲಾಬಿ ದಳಗಳು ,5-6 ಹನಿ ಗುಲಾಬಿ ತೈಲ ಹಾಗೂ ಬೇಕಾಗುವಷ್ಟು ನೀರನ್ನು ಹಾಕಿ ಮಿಶ್ರಣ ತಯಾರಿಸಿ ಅದರಿಂದ ಐಸ್ ಕ್ಯೂಬ್ ತಯಾರಿಸಬೇಕು. ನಂತರ ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

ಒಟ್ಟಿನಲ್ಲಿ ಅಗ್ಗವಾಗಿ ಸಿಗುವ ಐಸ್ ಕ್ಯೂಬ್ ನ ಸೌಂದರ್ಯ ಲೀಲೆಗಳು ತಿಳಿದಾಯಿತಲ್ಲ. ಅಂದ ಹಾಗೇ ಸೌಂದರ್ಯವರ್ಧಕ ವಾಗಿರುವ ಐಸ್ ಕ್ಯೂಬ್ ಬಳಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮರೆಯದಿರಿ.
– ಅಹಲ್ಯಾ

 

 

Advertisement
Share this on...