Kannada News Update “ಜಗತ್ತಿನ ಮಹಾಪುರುಷರಲ್ಲಿ ಅಗ್ರಗಣ್ಯ ರಾದವರು ಜಗಜ್ಯೋತಿ “ಬಸವೇಶ್ವರರು”.

in ಕನ್ನಡ ಮಾಹಿತಿ 183 views

ಭಕ್ತಿ ಭಂಡಾರಿ ,ಸಾಮಾಜಿಕ ಆಂದೋಲನಕಾರ, ಮಹಾಮಾನವತಾವಾದಿ, ಬಹುಮುಖ ವ್ಯಕ್ತಿತ್ವದ ಅಪೂರ್ವ ವ್ಯಕ್ತಿ ,ಸಮಭಾವದ ಶಕ್ತಿ ,ಬಸವೇಶ್ವರರು. ಹನ್ನೆರಡನೇ ಶತಮಾನದಲ್ಲಿದ್ದ ಪ್ರಸಿದ್ಧ ವಚನಕಾರ ಸಮಾಜ ಸುಧಾರಕ ಅನುಭವ ಮಂಟಪದ ರೂವಾರಿ ಧಾರ್ಮಿಕ ಸಾಮಾಜಿಕ ಮಹಾಕ್ರಾಂತಿಯ ನೇತಾರರಾದ ಬಸವಣ್ಣನವರ ಜೀವನ ಹಾಗೂ ಅವರ ವಿಚಾರಧಾರೆಗಳೇ ಸರ್ವಕಾಲಿಕ ಸತ್ಯಗಳಾಗಿವೆ. ಇವರು 1131ರಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿ ಸಮೀಪದ ಇಂಗಳೇಶ್ವರದಲ್ಲಿ ವೈಶಾಖ ಮಾಸದ ಅಕ್ಷಯ ತೃತೀಯ ದಿನದಂದು ಜನಿಸಿದರು. ತಂದೆ ಮಾದರಸ ಹಾಗೂ ತಾಯಿ ಮಾದಲಾಂಬಿಕೆ. ಮುಂದೆ ವೈದಿಕ ಧರ್ಮವನ್ನು ತೊರೆದು ಹುಟ್ಟಿದಾಗಲೇ ನನಗೆ ಲಿಂಗದೀಕ್ಷೆ ಯಾಗಿದೆ ಎಂದು ಮನೆ , ಸ್ವಜನರನ್ನು ತೊರೆದು ಕಪ್ಪಡಿ (ಸಂಗಮೇಶ್ವರ) ಕ್ಕೆ ತೆರಳಿದರು. ಶೈವ ಸಂತರಾದ ವಿದ್ವನ್ಮಣಿ ಜಾತವೇದ ಮುನಿಗಳಲ್ಲಿ ಶಿಷ್ಯರಾದರು.

Advertisement

Advertisement

ಬಸವಣ್ಣನವರಿಗೆ ಗಂಗಾಂಬಿಕೆ ಹಾಗೂ ನೀಲಾಂಬಿಕೆ ಎಂಬ ಇಬ್ಬರು ಮಡದಿಯರು. “ಅಂಧಶ್ರದ್ಧೆಯ ಕೂಪದ ಮಡುವಿನಲ್ಲಿದ್ದ ಮಾನವ ಜನಾಂಗವನ್ನು ಮೇಲೆತ್ತುವ ದೃಢ ಸಂಕಲ್ಪ ಮಾಡಿದರು” ಕಳಚೂರಿ ಅರಸ ಬಿಜ್ಜಳನ ಆಹ್ವಾನದ ಮೇರೆಗೆ ಕಲ್ಯಾಣವನ್ನು ಸೇರಿ ಮಂತ್ರಿಯಾದರು.ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದುಕೊಂಡು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡರು.೧೨ ನೇ ಶತಮಾನದಲ್ಲಿ ಜಾತಿ ಭೇದ ಧಾರ್ಮಿಕ ಅಂಧಾನುಕರಣೆ ವಿಶೇಷವಾದ ಕಾಲದಲ್ಲಿ ಇಂತಹ ಸಾಮಾಜಿಕ ಅನಿಷ್ಟದ ವಿರುದ್ಧ ಕ್ರಾಂತಿಯನ್ನೇ ಆರಂಭಿಸಿದರು. ಅಂತರ್ಜಾತಿ ವಿವಾಹ ಜಾರಿಗೆ ತಂದರು, ಬಸವೇಶ್ವರರ ದೃಷ್ಟಿಯಲ್ಲಿ ಇಡೀ ಮಾನವ ಜನಾಂಗವೇ ಒಂದು ಕುಟುಂಬವಿದ್ದಂತೆ ಯಾವುದೇ ತಾರತಮ್ಯವಿಲ್ಲದೆ ಜಾತಿಭೇದವನ್ನು ಖಂಡಿಸಿ ಸಕಲರಿಗೂ ಲೇಸನ್ನು ಬಯಸಿದರು.”ಕೊಲುವವನೆ ಮಾದಿಗ ಹೊಲಸು ತಿನ್ನುವವನೆ ಹೊಲೆಯ” ಎಂದರು ಡಾಂಬಿಕತೆ ಯಿಂದ ಕೂಡಿದ ಮುಡಾಚಾರ ಗಳ ವಿರುದ್ಧ ಕ್ರಾಂತಿಯನ್ನು ಹೂಡಿದರು.

Advertisement

Advertisement

ಸಮಾಜದಲ್ಲಿ ಅಂತ್ಯಜ ರೆಂದು ದೂರೀಕರಿಸ ಲ್ಪಟ್ಟ ಹರಿಜನರಿಗೆ ಶಿವ ದೀಕ್ಷೆಯನ್ನು ನೀಡಿದರು.ಬಸವಣ್ಣನವರ ಸಾರಥ್ಯದಲ್ಲಿ ಹನ್ನೆರಡನೇ ಶತಮಾನದ ಸಮಾಜದಲ್ಲಿದ್ದ ಅನೇಕ ಅನಿಷ್ಟ ಪದ್ಧತಿಗಳು ಹಾಗೂ ಸಾಮಾಜಿಕ ಅಸಮಾನತೆಗಳನ್ನು ತೊಡೆದು ಹಾಕಲು ಅಂದಿನ ಎಲ್ಲ ಶರಣ ಶರಣೆಯರು ಒಂದೆಡೆ ಸೇರಿ “ಅನುಭವ ಮಂಟಪ”ದಲ್ಲಿ ವಿಚಾರ ಗೋಷ್ಠಿಗಳನ್ನು ನಡೆಸುತ್ತಿದ್ದರು.ಅನುಭವ ಮಂಟಪದ ಕಾರ್ಯ ಕಲಾಪಗಳಿಂದ ಶರಣರ ಸ್ವಾನುಭವ ವಿಚಾರಗಳಾದ ಜಾತಿ ಮತ ಪಂಥಗಳ ಬಂಧನದ ಮೇಲೆ ಹರಿತವಾದ ವಿಚಾರಧಾರೆ ನಡೆದು ದಿವ್ಯಜ್ಞಾನ ಉಂಟಾಗಲು ಕಾರಣವಾಯಿತು.ಮಹಾನುಭಾವಿ ಬಸವೇಶ್ವರರು ಜಗತ್ತಿಗೆ ಕೊಟ್ಟ ಅನೇಕ ಕಾಣಿಕೆಯಲ್ಲಿ ಅನುಭವ ಮಂಟಪವು ಒಂದು .ಇದು ಜಗತ್ತಿನ ಪ್ರಪ್ರಥಮ “ಪಾರ್ಲಿಮೆಂಟ್” ಎಂದು ಕರೆಸಿಕೊಂಡಿದೆ. ಅನುಭವ ಮಂಟಪದಲ್ಲಿ ಸ್ತ್ರೀಯರಿಗೂ ಭಾಗವಹಿಸಲು ಸಮಾನವಾದ ಸ್ಥಾನಮಾನವನ್ನು ಕಲ್ಪಿಸಿ ಕೊಟ್ಟಿರುವುದಕ್ಕೆ ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ ಶರಣೆ ಅಕ್ಕಮಹಾದೇವಿಯವರು ಹಾಗೂ ಇತರ ಶರಣೆಯರು ಸಾಕ್ಷಿಯಾಗಿದ್ದಾರೆ.ಅಂದು ನವ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರು ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ತತ್ವ

ಸ್ತ್ರೀ ಸಮಾನತೆ ವೈಚಾರಿಕ ಚಿಂತನೆ ಜಾತ್ಯತೀತ ಸಮಾಜದ ಕಲ್ಪನೆ ,ದಯವೇ ಧರ್ಮದ ಮೂಲ ನಡೆ ನುಡಿಯೇ ಸಮನ್ವಯತೆ ಸಮಾಜದ ನೈಜ ದರ್ಶನ ದೇಹವೇ ದೇವಾಲಯ ಹೀಗೆ ಹಲವಾರು ಪರಿಕಲ್ಪನೆಗಳ ಮೇಲೆ ಬಸವಣ್ಣನವರು ವಚನಗಳ ಕ್ರಾಂತಿಯನ್ನೇ ಮಾಡಿದ್ದಾರೆ.  ಕೂಡಲ ಸಂಗಮದೇವ ಎಂಬ ವಚನಾಂಕಿತ ದಿಂದ ಇವರ ವಚನಗಳು ಎಲ್ಲರ ಮನದ ಪರಿವರ್ತನೆಗೆ ಹಾಗೂ ಸದೃಢ ಸಮಾಜದ ನಿರ್ಮಾಣಕ್ಕೆ ದಾರಿದೀಪಗಳಾಗಿವೆ.

“ದಯೆವಿಲ್ಲದ ಧರ್ಮ ಯಾವುದಯ್ಯ ದಯೆವೆ ಬೇಕು ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯಾ ”

” ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ”

“ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲ ಸಂಗಮದೇವ ”

ಹೀಗೆ ಬಸವಣ್ಣನವರು ಹಲವಾರು ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮನುಷ್ಯನ ಮನಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಯತ್ನಿಸಿದ್ದಾರೆ.

ಇಂತಹ ಒಬ್ಬ ಮಹಾ ಮಾನವತಾವಾದಿ ಬಸವಣ್ಣನವರ ಕೀರ್ತಿ ದಿನೇ ದಿನಕ್ಕೂ ಉತ್ತುಂಗ ಶಿಖರಕ್ಕೆ ಏರುತ್ತಾ ಹೋದಾಗ ಕಲ್ಯಾಣದಲ್ಲಿ ಅನುಭವ ಮಂಟಪದ ಕೀರ್ತಿ ಯಿಂದ ಕಲ್ಯಾಣವೇ ಬಸವೇಶ್ವರರು ಬಸವೇಶ್ವರರೆ ಕಲ್ಯಾಣ ಎನ್ನುವಂತಾಯಿತು.ಆದರೆ ಕೆಲವು ಆಸ್ಥಾನಿಕರು ಈ ಏಳಿಗೆಯನ್ನು ಸಹಿಸದೆ ಬಿಜಳ್ಳನಲಿ ಬಂದು ಬಸವಣ್ಣನವರ ಕುರಿತು ಆರೋಪಿಸಿದರು ಆಗ ಬಸವಣ್ಣನವರನ್ನು ಆಸ್ಥಾನದಿಂದ ಹೊರಹಾಕಲಾಯಿತು.ಕಲ್ಯಾಣದಿಂದ ಹೊರ ಬಂದ ಬಸವೇಶ್ವರರು ಕೂಡಲ ಸಂಗಮವನ್ನು ಸೇರಿದರು. ಇವರ ನಿರ್ಗಮನದಿಂದ ನೊಂದ ಜನ ಕ್ಷೋಭೆಗೊಂಡು ಬಿಜ್ಜಳನ ಕೊಲೆಯಾಯಿತು.

ಆದರೆ ಬಸವಣ್ಣನವರು ಈ ಸುದ್ದಿಯನ್ನು ಕೇಳಿ ನೊಂದು ಕೂಡಲ ಸಂಗಮೇಶ್ವರ ನಲ್ಲಿ ಐಕ್ಯರಾದರು ಎಂಬುದು ಐಹಿತ್ಯ ಮೂಲಕ ನಮಗೆ ತಿಳಿದು ಬರುತ್ತದೆ. ಜಗತ್ತಿನ ಇತಿಹಾಸದಲ್ಲೇ ಅವರ ಮಹಾನ್ ವ್ಯಕ್ತಿತ್ವ ಎಲ್ಲ ಕಾಲ ಎಲ್ಲ ಸಮಾಜ ಎಲ್ಲಾ ಜನಕ್ಕೂ ಆದರಣೀಯ ವಾಗಿರುವಂ ತಹದ್ದು. ಬಸವಣ್ಣನವರ ಬದುಕು ವಿಚಾರಧಾರೆಗಳು ಮೌಲ್ಯಗಳು ಆದರ್ಶಗಳು ಸಿದ್ಧಾಂತಗಳು ತತ್ವಗಳು ಎಲ್ಲವೂ ಮನುಕುಲದ ಏಳಿಗೆಗೆ ಅವಶ್ಯವಾಗಿವೆ.
ಸಕಲರಿಗೂ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನದ ಶುಭಾಶಯಗಳು.

ಲೇಖಕರು
ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ .
All Rights Reserved Namma Kannada Entertainment.

Advertisement
Share this on...