ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ವಿಷಯವು ಚರ್ಚೆಗೆ ಗುರಿಯಾಗಿದ್ದು, ಪ್ರಕರಣವು ಈಗಾಗಲೇ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ.ಘಟನೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ನಟ ಜಗ್ಗೇಶ್. ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನೇರವಾಗಿ ದರ್ಶನ್ ಅವರನ್ನು ಕುರಿತು ಮಾತನಾಡಿದ್ದಾರೆ. ‘ಇಷ್ಟೇಲ್ಲಾ ಆದ ಬಳಿಕ ದರ್ಶನ್ ನನಗೆ ಒಂದು ಕರೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಇದೇ ನಮ್ಮ ದೌರ್ಬಾಗ್ಯ, ನಮ್ಮಂಥಹಾ ಹಿರಿಯರ ದೌರ್ಬಾಗ್ಯ ಅದು. ಇಂದು ಜನ್ಮ ಕೊಟ್ಟ ತಂದೆಗೆ ಅನ್ನ ಹಾಕದಂತಹಾ ಸಮಾಜ, ನಾನತ್ವದಲ್ಲಿ ಬೀಗುತ್ತಿರುವ ಸಮಾಜ, ಜಗತ್ತು ನಡೆಯುವವರೆಗೂ ಅಷ್ಟೇ ನಾಣ್ಯ. ಆ ನಂತರ ಯಾರೂ ಕಣ್ಣೆತ್ತಿ ನೋಡುವುದಿಲ್ಲ’ ಎಂದು ಮಾರ್ಮಿಕವಾಗಿ ಸುದ್ದಿಗೋಷ್ಠಿ ಯಲ್ಲಿ ಹೇಳಿದರು ಜಗ್ಗೇಶ್.
ನಾನು ದರ್ಶನ್ ನನ್ನು ಬಹಳ ಪ್ರೀತಿಸುತ್ತೀನಿ. ಪೊಲೀಸರು ಅವನನ್ನು ಬಂಧಿಸಿ, ಕಾಲಿನಲ್ಲಿ ಚಪ್ಪಲಿ ಇಲ್ಲದಂತೆ ಅವನನ್ನು ನಿಲ್ಲಿಸಿದಾಗ ಬಂದದ್ದು ನಾನೊಬ್ಬನೇ, ನನಗೆ ಬೆಂಬಲ ಕೊಟ್ಟವನು ಸಾ.ರಾ.ಗೋವಿಂದು. ಅಂದು ಸ್ಟೇಷನ್ ಅಲ್ಲಿ ಕಿರುಚಾಡಿ ಜಗಳ ಮಾಡಿದ್ದೆ. ಅಂದಿನ ಗೃಹ ಸಚಿವ ಅಶೋಕ್ ಅವರೊಟ್ಟಿಗೆ ಮಾತನಾಡಿದ್ದೆ, ಇದನ್ನು ಆತನೂ ನೆನಪು ಮಾಡಿಕೊಳ್ಳಬೇಕು’ ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು ನವರಸ ನಾಯಕ.’ಇವನು ಕನ್ನಡದ ರಜನೀಕಾಂತ್ ಎಂದು ಹೇಳಿದ್ದೆ, ಮೂರು ಕೋಟಿ ಬ್ಯುಸಿನೆಸ್ ಕೊಡ್ತಾನೆ ಎಂದು ಹೇಳಿದ್ದೆ.
ನಾಲ್ಕೈದು ಜನ ನಟರು ಕನ್ನಡದ ತೇರು ಎಳೆಯುತ್ತಿದ್ದಾರೆ ಎಂದು ಹೇಳಿದ್ದೆನಲ್ಲ ಅದು ನಿನಗೆ ನೆನಪಿಗೆ ಬರಲಿಲ್ವಾ?. ಇದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡು ಆ ಹುಡುಗರಿಗೆ ದರ್ಶನ್ ಕರೆ ಮಾಡಿ ಯಾರು ನೀವು ಎಂದು ಕೇಳಬೇಕಿತ್ತು. ನನಗೆ ಒಂದು ಕರೆ ಮಾಡಿ ಕೇಳಬೇಕಿತ್ತು, ನನ್ನೊಂದಿಗೆ ಮಾತನಾಡ ಬೇಕಿತ್ತು’. ‘ಕಲಾವಿದರ ಕೈಲಾಸದಲ್ಲಿರುತ್ತಾರೆ, ಯಾವಾಗ ಕಲಾಭಿಮಾನಿಗಳು ಕೈತಟ್ಟುವುದು ನಿಲ್ಲಿಸುತ್ತಾರೆ ಆವಾಗ ಕಲಾವಿದರಿಗೆ ಕೈಸಾಲ ಕೊಡುವವರು ಸಹ ಇರುವುದಿಲ್ಲ.
ಯಾರು ನಮ್ಮ ದೇವರು, ನಮ್ಮನ್ನು ಬೆಳೆಸುವಂತವವರು, ನಮ್ಮನ್ನು ನೋಡುವವರು, ಚಪ್ಪಾಳೆ ಹಾಕುವವರು ದೇವರು. ನಮಗೆ ನಾವೇ ದೇವರು ಎಂದು ಬೋರ್ಡ್ ಹಾಕಿಕೊಂಡರೆ ಜನ ಮುಖಕ್ಕೆ ಉಗಿಯುತ್ತಾರೆ. ಸತ್ತ ಮೂರೇ ದಿನಕ್ಕೆ ವ್ಯಕ್ತಿಯನ್ನು ಮರೆತುಹೋಗುತ್ತಾರೆ, ಇನ್ನು ಸಿನಿಮಾ ನಟ ಯಾವ ಲೆಕ್ಕ’ ಎಂದರು ಜಗ್ಗೇಶ್. ಅಂದು ಅವರು ಬಂದಾಗ ಸಮಾದಾನದಿಂದ ಸುಮ್ಮನಿದ್ದಿದ್ದರೆ ಆಗಿರುತ್ತಿತ್ತು, ಎಲ್ಲವನ್ನೂ ನಾನೇ ಸ್ಪಷ್ಟನೆ ಕೊಡುತ್ತಿದ್ದೆ.
ಅಂದು ನನಗೆ ಸಿನಿಮಾ ನಿರ್ಮಾಪಕರ ಚಿಂತೆ, ಚಿತ್ರೀಕರಣ ನಿಲ್ಲಬಾರದು, ಅದೇ ದಿನ ನಮ್ಮ ಹುಡುಗನೊಬ್ಬನ ಮದುವೆ ಸಹ ಇತ್ತು, ದರ್ಶನ್ (ವೆಬ್ ಡಿಸೈನರ್) ಅನ್ನು ಪರಿಚಯ ಮಾಡಿಸಿದವ ಅವನೇ, ಅವನ ಮದುವೆ ನಿಲ್ಲಬಾರದು ಎಂಬುದು ತಲೆಯಲ್ಲಿತ್ತು. ಇರಲಿ, ಇದನ್ನು ಇನ್ನು ಮುಂದುವರೆಸುವುದು ಬೇಡ, ಇಲ್ಲಿಗೆ ಇತಿಶ್ರೀ ಹಾಡೋಣ’ ಎಂದು ಹೇಳಿ ಕೈಮುಗಿದ ಜಗ್ಗೇಶ್, ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿದೆ ಸುದ್ದಿಗೋಷ್ಠಿಯಿಂದ ಎದ್ದು ಹೋದರು.