amrutha serial actress

ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಈಕೆಗೆ ಬೆಳ್ಳಿತೆರೆಯಲ್ಲಿ ಗುರುತಿಸಿಕೊಳ್ಳುವ ಬಯಕೆ !

in ಮನರಂಜನೆ/ಸಿನಿಮಾ 539 views

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಾಯಕಿ ಮೃದುಲಾ ಆಗಿ ಅಭಿನಯಿಸುತ್ತಿರುವ ಗುಂಗುರು ಕೂದಲಿನ ಚೆಲುವೆಯ ಹೆಸರು ಅಮೃತಾ ರಾಮಮೂರ್ತಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯ ವಚನಾ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಅಮೃತಾ ಆಕಸ್ಮಿಕವಾಗಿ ನಟನಾ ಜಗತ್ತಿಗೆ ಕಾಲಿಟ್ಟವರು. ಮುಂದೊಂದು ದಿನ ಬಣ್ಣದ ಲೋಕಕ್ಕೆ ಬರುತ್ತೇನೆ, ಇಲ್ಲಿ ನೆಲೆ ಕಂಡುಕೊಳ್ಳುತ್ತೇನೆ ಎಂದು ಭಾವಿಸಿರದ ಇಂದು ನಟನಾ ರಂಗದಲ್ಲಿ ಮಿಂಚುತ್ತಿದ್ದಾರೆ. ಬಯಸದೇ ದೊರೆತ ಅವಕಾಶ ಬದುಕು ಹಾಗೂ ಭವಿಷ್ಯವನ್ನೇ ಬದಲಿಸಿತು ಎಂದು ನಗುತ್ತಾ ಹೇಳುತ್ತಾರೆ ಮುದ್ದುಮುಖದ ಚೆಲುವೆ ಅಮೃತಾ ರಾಮಮೂರ್ತಿ. ಜರ್ನಲಿಸಂ ಜೊತೆ ಜೊತೆಗೆ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡಾ ಮಾಡಿರುವ ಅಮೃತಾ ಓದು ಮುಗಿದ ಬಳಿಕ ಸಮಯ ಟಿವಿ ಗೆ ಸೇರಿದರು. ಫಿಲಂ ಬ್ಯೂರೋದಲ್ಲಿ ಸೆಕೆಂಡ್ ಷೋ ಎಂಬ ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ಚೆನ್ನಾಗಿ ನಡೆಸಿಕೊಟ್ಟ ಈಕೆಗೆ ತಾನು ಯಾಕೆ ನಟಿಸಬಾರದು ಎಂದೆನಿಸಿತು. ಮುಂದೆ ಅದಕ್ಕೆ ಬೇಕಾದ ತಯಾರಿಯೂ ಮಾಡಿಕೊಂಡರು. ಫೋಟೋಶೂಟ್ ಮಾಡಿಸಿಕೊಂಡ ಆಕೆ ಫೋಟೋಗಳನ್ನು ಕಳುಹಿಸಿಕೊಟ್ಟರು. ಅದೃಷ್ಟ ಎಂಬಂತೆ ಸುವರ್ಣ ವಾಹಿನಿಯಿಂದ ಧಾರಾವಾಹಿಯಲ್ಲಿ ನಟಿಸುವ ಅವಕಾಶವೂ ದೊರೆಯಿತು. ಅದು ಕೂಡಾ ನಾಯಕಿ ಪಾತ್ರ!

Advertisement

Advertisement

ಎಸ್ . ಗೋವಿಂದ್ ನಿರ್ದೇಶನದ ಸರಸ್ವತಿ ಲಕ್ಷ್ಮಿ ಪ್ರಿಯೆ ಧಾರಾವಾಹಿಯಲ್ಲಿ ಲಕ್ಷ್ಮಿ ಆಗಿ ನಟಿಸಿದ ಅಮೃತಾ ಗೆ ಅ ಪಾತ್ರ ಜನಪ್ರಿಯತೆಯನ್ನು ತಂದುಕೊಟ್ಟಿತು. 250 ಎಪಿಸೋಡ್ ಪ್ರಸಾರವಾದ ಈ ಧಾರಾವಾಹಿಯಲ್ಲ ಸಿಕ್ಕ ಜನಪ್ರಿಯತೆಯಿಂದ ಅಮೃತಾ ಮುಂದೆ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದರು‌.

Advertisement

ನಂತರ ಆರು ತಿಂಗಳು ನಟಿಸದೇ ಇದ್ದ ಅವರಿಗೆ ಹೈಟ್ ಪ್ರಾಬ್ಲಮ್ ಎದುರಾಗಿತ್ತು‌. ಕುಳ್ಳಿ ಎಂಬ ಕಾರಣಕ್ಕೆ ಆಕೆಗೆ ಪಕ್ಕನೇ ನಟಿಸುವ ಅವಕಾಶ ದೊರೆಯಲಿಲ್ಲ. ಮುಂದೆ ಮೇಘಮಯೂರಿ ಧಾರಾವಾಹಿಯಲ್ಲಿ ಮಯೂರಿಯಾಗಿ ಮತ್ತೆ ಕಿರುತೆರೆಗೆ ಕಾಲಿಟ್ಟ ಚೆಲುವೆ ನಂತರ ರವಿ. ಆರ್ ಗರಣಿ ನಿರ್ದೇಶನದ ಮಿಸ್ಟರ್ ಆಂಡ್ ಮಿಸ್ಸಸ್ ರಂಗೇಗೌಡ ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಅಮೃತಾ ರೀಲ್ ಲೈಫ್ ಮಾತ್ರವಲ್ಲದೇ ರಿಯಲ್ ಲೈಫ್ ಗೂ ಮಹತ್ತರವಾದ ತಿರುವು ನೀಡಿತು. ಮಿಸ್ಟರ್ ರಂಗೇಗೌಡ ಪಾತ್ರಧಾರಿ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆಯಾದರು.

Advertisement

ಮುಂದೆ ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ಕಾಣಿಸಿಕೊಂಡ ಅಮೃತಾ ಇಂದಿಗೂ ಕುಲವಧುವಿನ ವಚನಾ ಆಗಿಯೇ ಫೇಮಸ್ಸು! ಮೂರೂವರೆ ವರ್ಷಗಳ ಕಾಲ ವಚನಾ ಪಾತ್ರದಲ್ಲಿ ವೀಕ್ಷಕರನ್ನು ರಂಜಿಸಿದ ಅಮೃತಾ ಈಗ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮೃದುಲಾ ಆಗಿ ಪ್ರೇಕ್ಷಕರಿಗೆ ಮನರಂಜನೆ ನೀಡಿರುವ ಈಕೆ ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ನಟಿಸಿದ್ದಾರೆ. ತೆಲುಗಿನ ಕುಟುಂಬ ಗೌರವಂ ಧಾರಾವಾಹಿಯಲ್ಲಿ ನಟಿಸುವ ಮೂಲಕ ಅಲ್ಲೂ ನಟನಾ ಕಂಪನ್ನು ಪಸರಿಸಿದ್ದಾರೆ.

ನಟನೆಯ ಜೊತೆಗೆ ಮಾಡೆಲಿಂಗ್ ಲೋಕದಲ್ಲಿಯೂ ಕಮಾಲ್ ಮಾಡಿರುವ ಅಮೃತಾ ಕಾಂಪ್ಲಾನ್ ,ಸಿಂಫಾಲ್, ಫಾರ್ಚೂನ್ ಲೈಟ್ ಆಯಿಲ್ ಗಳ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ “99” ಸಿನಿಮಾದಲ್ಲಿಯೂ ನಟಿಸಿರುವ ತುರ್ತು ನಿರ್ಗಮನದಲ್ಲಿ ಸುನೀಲ್ ರಾವ್ ಅವರ ತಂಗಿಯಾಗಿ ನಟಿಸಿದ್ದಾರೆ.

ಈಗಾಗಲೇ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅಮೃತಾಗೆ ಸಿನಿಮಾ ಜಗತ್ತಿನಲ್ಲಿಯೂ ಹೆಸರು ಮಾಡುವ ಹಂಬಲ ಇದೆ. ಅಮೃತಾ ಹಾಗೂ ಅವರ ಪತಿ ಇಬ್ಬರು ನಟನೆಯ ಕ್ಷೇತ್ರದಲ್ಲಿರುವುದರಿಂದ ಯಾವ ಕನ್ ಫ್ಯೂಷನ್ ಇಲ್ಲ ಎನ್ನುವ ಅಮೃತಾ ಒಳ್ಳೆ ಜನಕ್ಕೆ ಹಿತವೆನಿಸುವ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.
– ಅಹಲ್ಯಾ

Amrutha Rammurthy

Advertisement
Share this on...