ಬ್ಯಾಸರಿಲ್ಲದ ಜೀವ: ಕಾವ್ಯಶ್ರೀ ಮಹಾಗಾಂವಕರ

in ಕನ್ನಡ ಮಾಹಿತಿ 195 views

ಪರಕಾಯ ಪ್ರವೇಶ ಓದಿಗೂ ಅನ್ವಯಿಸುತ್ತದೆ. ಶೂನ್ಯ ಸಂಪಾದನೆ ಮತ್ತು ವಚನಗಳು ಈ ಸಜೆಯಲ್ಲಿ ಕಟ್ಟಿ ಹಾಕಿದ್ದು ಸಹಜ. ಅಂದುಕೊಂಡಂತೆ ಆಗಿದ್ದರೆ ನನ್ನ ಬದುಕಿನ ಅನುಭವದ ಆಧಾರಿತ ಪುಸ್ತಕ ‘ಬ್ಯಾಸರಿಲ್ಲದ ಜೀವ’ ಓದುಗರ ಮನ ಸೇರಿರುತ್ತಿತ್ತು. ‌ ತುಂಬಾ ಆಸ್ಥೆಯಿಂದ ಪುಸ್ತಕ ಬರೆದ ಸಾಹಿತ್ಯ ಸಂಗಾತಿ ‘ಸಿಕಾ’ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರ ಕಾಳಜಿ ಮತ್ತು ಪರಿಶ್ರಮ ಬರೀ ಅಭಿನಂದನೀಯ ಅಲ್ಲ. ಬಿರುಗಾಳಿ ಬೀಸುವಾಗಲೂ ಮನಸು ತಂಗಾಳಿಯನ್ನು ಬಯಸುವುದು ಸಹಜ. ಆದರೆ… ನಿರಾಶಾವಾದದ ಆಚೆಗೂ ಕೆಲವು ಮನಸುಗಳು ತಂಗಾಳಿಯಂತೆ ಸುಳಿದಾಗ ಮಹದಾನಂದ.

Advertisement

 

Advertisement

Advertisement

 

Advertisement

ಪಿಸುಮಾತುಗಳ ಜುಗಲ್ ಕಾವ್ಯಾನುಸಂಧಾನಕೆ ಧ್ವನಿಯಾದ ಸಿಕಾ ಬ್ಯಾಸರಿಲ್ಲದ ಜೀವ ಬರೆಯಲು ನಿರ್ಧರಿಸಿದಾಗ ಖುಷಿ ಎನಿಸಿತು. ಯಾರಾದರು ನಮ್ಮನ್ನು ಪ್ರೀತಿಸಿ, ಹೊಗಳಿ ಗೌರವಿಸಲಾರಂಭಿಸಿದರೆ ಮನಸು ಉಬ್ಬಿ ಹೋಗುವುದು ನಮ್ಮ ಮಿತಿ; ಆ ಮಿತಿಯನ್ನೂ ಕೆಲ ಕಾಲ ಸಂಭ್ರಮಿಸಬಹುದು, ಇತರರಿಗೂ ಆ ಸಂಭ್ರಮವನ್ನು ಹಂಚಬಹುದು.

 

 

‘ಇದರ ಅಗತ್ಯ ಇದೆಯಾ? ಜೀವನ ಚರಿತ್ರೆ ಬರೆಸಿಕೊಳ್ಳುವಷ್ಟು ದೊಡ್ಡವರಾ?’ ಇತ್ಯಾದಿ ಇತ್ಯಾದಿ ಆತ್ಮೀಯರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಬೀಳಲಿಲ್ಲ. ಕಾವ್ಯಶ್ರೀ ಬರೆಯುತ್ತೇನೆ ಅಂದರು, ನನಗೆ ಬರೆಯಲಿ ಅನಿಸಿತು ಇದು ಮಾತ್ರ ನಮ್ಮ ಖುಷಿ ಮತ್ತು ಅಪ್ಪಟ ಸತ್ಯ, ಮಿಕ್ಕದ್ದನ್ನು ಕಾಲ ಮತ್ತು ಓದುಗರು ನಿರ್ಧರಿಸುತ್ತಾರೆ. ನೂರಾರು ಪ್ರಶ್ನೆಗಳನ್ನು ಕೇಳಿ ನನ್ನ ಮನದ ಮೂಲೆಯಲ್ಲಿ ಮನೆ ಮಾಡಿಕೊಂಡಿದ್ದ ಅನೇಕ ಅಪ್ರಿಯ ಸತ್ಯಗಳನ್ನು ತುಂಬಾ ಸಹನೆಯಿಂದ ಆಲಿಸಿ, ಅಷ್ಟೇ ಶ್ರದ್ಧೆಯಿಂದ ದಾಖಲಿಸಿದ ಮಾತೃ ಹೃದಯಿ ಕಾವ್ಯಶ್ರೀ ಅವರಿಗೆ ಚಿರ ಋಣಿ.

 

 

ಜೀವನ ಚರಿತ್ರೆ ಬರೆಯುವುದೆಂದರೆ ನಮ್ಮ ಎದೆ ಬಗೆದು ಇಣುಕಿದಂತೆ. ಅಲ್ಲಿ ಬರೀ ಬೆಳಕಿರುವುದಿಲ್ಲ; ಹತ್ತಾರು ಮನೋ ವಿಕಾರಗಳು ಮನೆ ಮಾಡಿರುತ್ತವೆ, ಅಸಹನೀಯ ಸಂಗತಿಗಳು ಸುಳಿದಾಡುತ್ತವೆ.ತಾಯಿ ಮಗುವಿನ ಹೇಸಿ ದೇಹವನ್ನು ಶುಚಿಗೊಳಿಸುವಾಗ ಅಸಹ್ಯ ಮಾಡಿಕೊಳ್ಳುವುದಿಲ್ಲ ,ಸ್ವಚ್ಛ ಮಾಡಿ ಅಂದಗೊಳಿಸಿ ಮುದ್ದು ಮಾಡುತ್ತಾಳೆ. ಸಹನಶೀಲ ಅವ್ವನಂತೆ ಹೊಲಸು ಬದಿಗಿರಿಸಿ ತಮ್ಮ ಕ್ರಿಯಾಶೀಲ ಲೇಖನಿಯಿಂದ ಬ್ಯಾಸರಿಲ್ಲದ ಜೀವಕ್ಕೆ ಚೈತನ್ಯ ತುಂಬಿದ್ದಾರೆ. ಅವರ ಎದೆಯೊಳಗಿದ್ದ ಅವ್ವನ ಕಕ್ಕುಲತೆಯ ನಿಸ್ವಾರ್ಥ,ನಿಷ್ಕಲ್ಮಷ ಸಹನೆಯನ್ನು ಅನುಭವಿಸಿ ಆನಂದಿಸಿದ್ದೇನೆ.

 

 

ಅನುಭವ ಮಂಟಪದ ಶರಣರು ತಮ್ಮ ವಚನಗಳ ಮೂಲಕ ಇತರ ತಮ್ಮ ಸಮಕಾಲೀನ ಶರಣರ ಸಾಮರ್ಥ್ಯವನ್ನು ದಾಖಲಿಸಿರುವುದು ನಮಗೆ ಅರ್ಥಪೂರ್ಣ ಮಾದರಿ, ಅದೇ ಮಾರ್ಗದಲ್ಲಿ ನಾವು ನಮ್ಮ ಸಮಕಾಲೀನರ ಸಾಮರ್ಥ್ಯವನ್ನು ಗುರುತಿಸಿ ವಿಮರ್ಶೆಯ ಒರೆಗೆ ಹಚ್ಚುವುದು ತಪ್ಪಲ್ಲ. ದಾಖಲಿಸಲೇ ಬೇಕಾದ ಸಾಧನೆ ನಮ್ಮದಾಗಿರುವುದಿಲ್ಲ. ಆದರೆ ಹೊಸ ತಲೆಮಾರಿನ ಯುವಕರಿಗೆ ಕೊಂಚ ಹುಮ್ಮಸ್ಸು ನೀಡಿದರೆ ಅದಷ್ಟೇ ಸಾಕಲ್ಲ? ನನ್ನ ಬದುಕಿನ ನೂರಾರು ಘಟನೆಗಳನ್ನು ಸುಂದರವಾಗಿ ಕಟ್ಟಿಕೊಟ್ಟ ಹಿರಿಯ ಲೇಖಕಿ ಕಾವ್ಯಶ್ರೀ ಅವರ ಜನುಮ ದಿನ ಅವರನ್ನು ಹಾರೈಸುವ ನೆಪದಲ್ಲಿ ಇಷ್ಟೆಲ್ಲಾ ಹೇಳಬೇಕಾಯಿತು.

ನಿಮ್ಮನ್ನು ನೋಡಿದಾಗ ‘ A boy is a boy but a girl is a Lady ‘ ಎಂಬ ಮಾತು ನೆನಪಾಗುತ್ತದೆ. ಇರುವಷ್ಟು ಕಾಲ ಆರೋಗ್ಯ ಮತ್ತು ನೆಮ್ಮದಿಯಿಂದ ಖುಷಿ ಖುಷಿಯಿಂದ ಬಾಳಿರಿ.

 

ಓದು,ಬರಹ,ಮಾತು ಮತ್ತು ಆದರ್ಶ ಬಾಳಿನೊಂದಿಗೆ ಸುತ್ತಲಿನ ಮನಸುಗಳಿಗೆ ಪ್ರೇರಣೆ ನೀಡಿರಿ ಎಂದು ಹಾರೈಸುತ್ತೇನೆ. ನಿಮ್ಮ ಪ್ರೀತಿ, ವಿಸ್ವಾಸ ಮತ್ತು ನಂಬಿಗೆ ಸದಾ ನಳ ನಳಿಸಲಿ ಎಂಬ ಹಾರೈಕೆ ನನ್ನದು.

#ಸಿದ್ದುಯಾಪಲಪರವಿಕಾರಟಗಿ.

Advertisement
Share this on...