ಕೆರೆ ಕಾಮೇಗೌಡರ ಸಾಧನೆಯನ್ನು ತೆರೆ ಮೇಲೆ ತರಲು ಸ್ಯಾಂಡಲ್​​ವುಡ್ ನಿರ್ದೇಶಕ ಸಜ್ಜು !

in ಕನ್ನಡ ಮಾಹಿತಿ/ಸಿನಿಮಾ 152 views

ಕೆರೆ ಕಾಮೇಗೌಡ, ಆಧುನಿಕ ಭಗೀರಥ ಎಂದೆಲ್ಲಾ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಮಂಡ್ಯದ ಕಾಮೇಗೌಡ್ರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇದಕ್ಕೂ ಮುನ್ನ ಕಾಮೇಗೌಡ ಅವರ ಬಗ್ಗೆ ಹೆಚ್ಚು ಜನಕ್ಕೆ ತಿಳಿದಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಕಾಮೇಗೌಡ್ರ ಬಗ್ಗೆ ಬಹಳಷ್ಟು ಜನಕ್ಕೆ ತಿಳಿಯುವಂತಾಯ್ತು.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡರದ್ದು ಬಡ ಕುಟುಂಬ, ಚಿಕ್ಕಂದಿನಲ್ಲೇ ವಿದ್ಯಾಭ್ಯಾಸ ವಂಚಿತರಾದ ಇವರನ್ನು ಮನೆಯವರು ಕುರಿ ಕಾಯಲು ಕಳಿಸುತ್ತಿದ್ದರಂತೆ. ಅಂದಿನಿಂದ ಪ್ರಕೃತಿಯೇ ಅವರ ಸರ್ವಸ್ವ. ಮನುಷ್ಯರಾದರೆ ಹಸಿವು, ದಾಹ ಎಲ್ಲವನ್ನೂ ಹೇಳಿಕೊಳ್ಳುತ್ತಾನೆ. ಆದರೆ ಪ್ರಾಣಿ, ಪಕ್ಷಿಗಳ ಹಸಿವು, ಬಾಯಾರಿಕೆಯನ್ನು ಯಾರು ನೀಗಿಸುತ್ತಾರೆ. ಮನುಷ್ಯರಾದ ನಮ್ಮ ಕೈಯಲ್ಲಿ ಮಾತ್ರ ಅದು ಸಾಧ್ಯ. ಆದ್ದರಿಂದ ಒಬ್ಬನೇ ಕೆರೆ ತೋಡಲು ಆರಂಭಿಸಿದೆ. ನನಗೆ ವೈಯಕ್ತಿಕ ಬದುಕು ಎನ್ನುವುದು ಇಲ್ಲ. ನನಗೆ ಪ್ರಕೃತಿಯೇ ಎಲ್ಲಾ ಎನ್ನುತ್ತಾರೆ 84 ವರ್ಷ ವಯಸ್ಸಿನ ಕಾಮೇಗೌಡ್ರು.

Advertisement

Advertisement

ಯಾರ ಬಳಿಯೂ ಕೈ ಚಾಚದೆ ತಮ್ಮ ಸ್ವಂತ ಖರ್ಚಿನಲ್ಲೇ ಈ ಮಹಾನುಭಾವ 14 ಕೆರೆಗಳನ್ನು ನಿರ್ಮಿಸಿದ್ದಾರೆ. ಆ ಕೆರೆಯಲ್ಲಿ ಪ್ರಾಣಿ, ಪಕ್ಷಿಗಳು ಬಂದು ನೀರು ಕುಡಿಯುವುದನ್ನು ನೋಡುತ್ತಿದ್ದರೆ ನನ್ನ ಮನಸ್ಸಿಗೆ ಏನೋ ಒಂದು ರೀತಿಯ ಸಂತೃಪ್ತಿ ಎನ್ನುತ್ತಾರೆ ಈ ಹಿರಿಯರು. ಒಂದು ಕೈಯಲ್ಲಿ ಕೋಲು, ಮತ್ತೊಂದು ಕೈಯಲ್ಲಿ ಒಂದು ಚೀಲ, ಹೆಗಲ ಮೇಲೆ ಸದಾ ಒಂದು ಹಸಿರು ಟವೆಲ್ ಹಾಕಿಕೊಳ್ಳುವ ಇವರನ್ನು ನೋಡಿದರೆ ಎಂತವರಿಗಾದರೂ ನಮಸ್ಕರಿಸಿ ಕೈ ಮುಗಿಯಬೇಕು ಎನಿಸದೆ ಇರದು.ಇನ್ನು ಕಾಮೇಗೌಡ ಅವರ ಬಗ್ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿಳಿಸಬೇಕು ಎಂಬ ಉದ್ದೇಶದಿಂದ ಸ್ಯಾಂಡಲ್​ವುಡ್ ನಿರ್ದೇಶಕ ದಯಾಳ್ ಪದ್ಮನಾಭನ್, ಒಂದು ಸಾಕ್ಷ್ಯಚಿತ್ರ ತಯಾರಿಸುತ್ತಿದ್ದಾರೆ.

Advertisement

Advertisement

ಇದಕ್ಕೆ ‘ದಿ ಗುಡ್ ಶೆಪರ್ಡ್’ ಎಂದು ಹೆಸರಿಟ್ಟಿದ್ಧಾರೆ ದಯಾಳ್. ಈಗಾಗಲೇ ಕಾಮೇಗೌಡ ಅವರೊಂದಿಗೆ ಈ ಬಗ್ಗೆ ಮಾತಾಡಿದ್ದೇನೆ. ಅವರೂ ಕೂಡಾ ಒಪ್ಪಿದ್ದಾರೆ. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ದಯಾಳ್ ಹೇಳಿದ್ದಾರೆ.2018 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್​.ಡಿ. ಕುಮಾರಸ್ವಾಮಿ ಕಾಮೇಗೌಡ ಅವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ಪ್ರಶಸ್ತಿ ಹಣವನ್ನು ಕೂಡಾ ಕಾಮೇಗೌಡರು ಕೆರೆ ಕಟ್ಟಲು ವಿನಿಯೋಗಿಸಿದ್ದರು.

ಕಾಮೇಗೌಡ ಅವರ ಪರಿಸರ ಕಾಳಜಿಯನ್ನು ಮೆಚ್ಚಿ ಕೆಎಸ್​​​ಆರ್​​ಟಿಸಿ ಇಂದು ಅವರಿಗೆ ಜೀವಿತಾವಧಿಯವರೆಗೆ ಉಚಿತ ಪಾಸ್ ನೀಡಿದ್ದಾರೆ. ವೇಗದೂತ, ರಾಜಹಂಸ, ವೋಲ್ವೋ ಸೇರಿ ಎಲ್ಲಾ ಬಗೆಯ ಬಸ್​​​ಗಳಲ್ಲಿ ಕಾಮೇಗೌಡ ಅವರು ಪ್ರಯಾಣಿಸುವಂತೆ ಅನುಕೂಲ ಮಾಡಿಕೊಡಲಾಗಿದೆ. ಒಟ್ಟಿನಲ್ಲಿ ಕಾಮೇಗೌಡ ಅವರ ಮಹತ್ಕಾರ್ಯಕ್ಕೆ ಅವರಿಗೆ ಯಾವ ಉಡುಗೊರೆ ನೀಡಿದರೂ ಕಡಿಮೆಯೇ. ಶೀಘ್ರದಲ್ಲೇ ತೆರೆ ಮೇಲೆ ಕಾಮೇಗೌಡ ಅವರ ಸಾಧನೆಯನ್ನು ನೋಡುವ ಭಾಗ್ಯ ನಮ್ಮದಾಗಲಿದೆ.

Advertisement
Share this on...