ಕಾರ್ಮಿಕರ ದಿನಾಚರಣೆ -ಮೇ 1

in ಕನ್ನಡ ಮಾಹಿತಿ 230 views

[4:39 PM, 4/30/2020] Namma Kannada: ” ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ,
ದೊರೆತುದ ಪ್ರಸಾದವೆಂದುಣ್ಣು ಗೊಣಗದಲೆ,
ಧರಿಸು ಲೋಕದ ಬರವ ಪರಮಾರ್ಥವನ್ನು ಬಿಡದೆ,
ಹೊರಡು ಕರೆ ಬರಲ್ ಅಳದೆ “- ಮಂಕುತಿಮ್ಮ.

Advertisement

 

Advertisement

Advertisement

 

Advertisement

ಇಲ್ಲಿ ಡಿವಿಜಿಯವರು ಕೆಲಸದ ಮಹತ್ವವನ್ನು ಹಾಗೂ ಮನುಷ್ಯ ಜೀವನದ ಸರಳತೆಯನ್ನು ಬಹಳಷ್ಟು ಸ್ವಾರಸ್ಯಕರವಾಗಿ ತಿಳಿಸಿಕೊಟ್ಟಿದ್ದಾರೆ.ನಾವು ಮಾಡುವ ಕೆಲಸದಲ್ಲಿ ಮೇಲು ಕೀಳು ಎನ್ನುವುದಿಲ್ಲ ನಮಗೆ ಸಿಕ್ಕ ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು ಹಾಗೂ ನಮಗೆ ಸಿಕ್ಕ ಸಕಲ ಸೌಕರ್ಯ ಸೌಭಾಗ್ಯವನ್ನು ಪ್ರಸಾದವೆಂದು ಸ್ವೀಕರಿಸಬೇಕು ಹೀಗೆ ಲೋಕದ ಎಲ್ಲ ಆಗು ಹೋಗುಗಳನ್ನು ನೀಗಿಸುತ್ತಾ ಪರಮಾರ್ಥವನ್ನು ಸಾಧಿಸುತ್ತಾ ನಮ್ಮ ಆಯುಷ್ಯ ತೀರಿದಾಗ ನಗುತ್ತಾ ಈ ಲೋಕದಿಂದ ಹೋಗಬೇಕೆಂಬುದೇ ಇವರ ಆಶಯ. ಹೌದು ನಾವೆಲ್ಲಾ ಮನುಷ್ಯ ಜೀವನದ ಸಾರ್ಥಕತೆಯನ್ನು ಕಾಣಬೇಕೆಂದರೆ ಒಂದಿಲ್ಲ ಒಂದು ಕಾರ್ಯದಲ್ಲಿ ನಿರತರಾಗಿರಬೇಕು ಕಾಯಕವೇ ಕೈಲಾಸವೆಂಬಂತೆ ಕಾಯಕದಲ್ಲಿ ಸರ್ವವನ್ನು ಕಾಣುವ ಪ್ರವೃತ್ತಿ ನಮ್ಮದಾಗಬೇಕು. ಪ್ರತಿ ವರ್ಷ ಮೇ ಒಂದರಂದು ಕಾರ್ಮಿಕ ದಿನವನ್ನಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಈ ದಿನದ ಉದ್ದೇಶ “ಒಗ್ಗಟ್ಟಿನಲ್ಲಿ ಬಲವಿದೆ “ಎಂಬಂತೆ ವಿಶ್ವ ಕಾರ್ಮಿಕರೆಲ್ಲರೂ ಒಗ್ಗಟ್ಟಾಗಿ ಇರಬೇಕು.

 

 

ಹಾಗೂ ದುಡಿಯುವ ಎಲ್ಲ ಕಾರ್ಮಿಕ ವರ್ಗಕ್ಕೆ ಸುಭದ್ರತೆ ಹಾಗೂ ಎಲ್ಲ ರೀತಿಯ ಸವಲತ್ತುಗಳು ಸಿಗುವಂತಾಗಬೇಕು ಹಾಗೂ ಕಾರ್ಮಿಕ ವರ್ಗದ ಯೋಗಕ್ಷೇಮವನ್ನು ಕಾಪಾಡುವಂತೆ ನೀತಿ ನಿಯಮಗಳು ರೂಪಗೊಳ್ಳಬೇಕು ಹಾಗೂ ಅದು ಕಾರ್ಯ ರೂಪದಲ್ಲಿರಬೇಕು ಎಂಬುದೇ ಉದ್ದೇಶವಾಗಿದೆ. ರಷ್ಯಾದಲ್ಲಿ ಆದ ಮಹಾಕ್ರಾಂತಿಗೆ ಇಡೀ ಮಾನವ ಇತಿಹಾಸದಲ್ಲಿ ವಿಶಿಷ್ಟವಾದ ಸ್ಥಾನವಿದೆ ಕಾರಣ ರಷ್ಯಾ ಕ್ರಾಂತಿಯಿಂದ ಸಮತಾವಾದದ ಸಿದ್ಧಾಂತಕ್ಕೆ ಮನ್ನಣೆ ಸಿಕ್ಕಿತು.ಕಾರ್ಮಿಕರ ಎಲ್ಲರಲ್ಲಿ ಕ್ರಾಂತಿಕಾರಿ ಭಾವನೆಯು ಒಡಮೂಡಲು ಅದು ಸಹ ಒಂದು ಕಾರಣವಾಗಿತ್ತು.19 ನೇ ಶತಮಾನದ ಉತ್ತರಾರ್ಧದಲ್ಲಿ ಕೈಗಾರಿಕೆಗಳು ತಲೆ ಎತ್ತಿ ಕೈಗಾರಿಕಾ ಕ್ರಾಂತಿಯಾದ ಕಾರಣ ಎಷ್ಟೋ ಗ್ರಾಮೀಣ ಪ್ರದೇಶದ ಜನರು ಪಟ್ಟಣಗಳಿಗೆ ವಲಸೆ ಹೋಗಿ ಕಾರ್ಖಾನೆಗಳಲ್ಲಿ ಕೆಲಸಕ್ಕೆ ಸೇರತೊಡಗಿದರು ಆದರೆ ಕಾರ್ಖಾನೆಗಳು ಅಂದು ಹೇಳಿಕೊಳ್ಳುವಂತಹ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ದುಡಿಮೆಗೆ ತಕ್ಕ ಪ್ರತಿಫಲ ಹಾಗೂ ಇನ್ನಿತರ ಸೌಲಭ್ಯಗಳು ಕಾರ್ಮಿಕ ವರ್ಗದವರಿಗೆ ಸಿಗುತ್ತಿರಲಿಲ್ಲ.ಅಂದಿನಿಂದಲೇ ಸ್ವಾಭಾವಿಕವಾಗಿ ಕಾರ್ಮಿಕರಲ್ಲಿ ಕ್ರಾಂತಿಕಾರಿ ಧೋರಣೆಗಳು ತಳೆದು ಬಂದವು.

 

 

ಕಾರ್ಮಿಕರ ಹಿತದೃಷ್ಟಿಯಿಂದ 1918 ರಲ್ಲಿ ಕಮ್ಯೂನಿಸ್ಟ್ ಪಕ್ಷದ ಉದಯವಾಗಿ ಕಾರ್ಮಿಕರ ಭೌತಿಕ ಮತ್ತು ಸಾಂಸ್ಕೃತಿಕ ಮಟ್ಟವನ್ನು ಏರಿಸುವ ಉದ್ದೇಶದಿಂದ ಹಾಗೂ ಇನ್ನೂ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆಯನ್ನು ಸಿದ್ಧಪಡಿಸಿಕೊಂಡು ಕಾರ್ಯರೂಪಕ್ಕೆ ಬಂದವು. ಈ ಎಲ್ಲ ಘಟನಾವಳಿಗಳ ಆಧಾರದಿಂದ ಕಾರ್ಮಿಕರ ಹಿತಾಸಕ್ತಿಗಳನ್ನು ಈಡೇರಿಸುವ ಉದ್ದೇಶದಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಚಿಕ್ಯಾಗೊ ನಗರದ ಹೇಮರಷೆಲ್ ಚೌಕದಲ್ಲಿ 1886 ಮೆ 1 ರಂದು ಬಹಳಷ್ಟು ಕಾರ್ಮಿಕರು ಒಟ್ಟಾಗಿ ಸಭೆ ಸೇರಿ ಕಾರ್ಮಿಕರ ಕುಂದು ಕೊರತೆ ಕಾರ್ಮಿಕರ ಯೋಗ ಕ್ಷೇಮ ಹೀಗೆ ಎಲ್ಲ ವಿಷಯಗಳನ್ನು ಚರ್ಚಿಸಿ ಕಾರ್ಮಿಕರು ದಿನಕ್ಕೆ ಎಂಟು ಗಂಟೆ ಕೆಲಸ ಮಾಡುವ ಪದ್ಧತಿಯನ್ನು ಜಾರಿಗೆ ತರಲು ಒತ್ತಾಯಿಸಿದರು ಈ ಹಿನ್ನೆಲೆಯಲ್ಲೂ ಸಹ ಮೇ ಒಂದನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

 

 

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ದುಡಿಯುವ ಮಹಿಳೆಯರ ಮತ್ತು ಪುರುಷರ ಸ್ವಾತಂತ್ರ್ಯ ಸಮಾನತೆ ಭದ್ರತೆ ಮತ್ತು ಘನತೆಯಿಂದ ಕೆಲಸ ಮಾಡಲು ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಲು ಉತ್ತೇಜಿಸುತ್ತಿದೆ.ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಕಾರ್ಮಿಕರ ಕ್ಷೇಮವನ್ನು ನೋಡಿಕೊಂಡು ಉತ್ತಮ ಪಡಿಸುತ್ತದೆ.
ಹಿಂದಿಗಿಂತಲೂ ಇಂದು ಸಾಕಷ್ಟು ಪ್ರಮಾಣದಲ್ಲಿ ಉದ್ದಿಮೆಗಳು ಕಾರ್ಖಾನೆಗಳು ಸ್ಥಾಪನೆಯಾಗಿದ್ದರೂ ಕೂಡಾ ಕೆಲವೊಂದು ಸಣ್ಣ ಪ್ರಮಾಣದ ಉದ್ದಿಮೆಗಳಲ್ಲಿ ಕಾರ್ಮಿಕರ ಸ್ಥಿತಿ ಇನ್ನೂ ಶೋಚನೀಯವಾಗಿದೆ.ಹೆಚ್ಚು ಕೆಲಸ ಕಡಿಮೆ ವೇತನ, ಜೀವನ ಭದ್ರತೆಯಿಲ್ಲ ಹೀಗೆ ಹತ್ತು ಹಲವಾರು ಸಮಸ್ಯೆಗಳಲ್ಲಿ ಇನ್ನೂ ಎಷ್ಟೋ ಕಾರ್ಮಿಕ ವರ್ಗ ಶ್ರಮಿಸುತ್ತಿದೆ. ಒಂದು ದೇಶ ಇಡೀ ವಿಶ್ವ ಒಂದು ಸಮಾಜ ಸದೃಢವಾಗಬೇಕಾದರೆ ಉತ್ತಮ ಕೆಲಸ ಕಾರ್ಯಗಳು ನಡೆಯಲೇಬೇಕು.

 

 

ಮಕ್ಕಳನ್ನು ಉದ್ದಿಮೆಗಳಲ್ಲಿ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವುದು ಅಪರಾಧ ಎಂಬ ಕಾನೂನಿದ್ದರೂ ಸಹ ಇಂದು ಹಲವಾರು ಕಾರಣಗಳಿಂದ ಮಕ್ಕಳು ಶಿಕ್ಷಣ ವಂಚಿತರಾಗಿ ಕಾರ್ಖಾನೆ ಉದ್ದಿಮೆಗಳಲ್ಲಿ ದುಡಿಯುತ್ತಿರುವುದನ್ನು ನಾವು ಕಾಣುತ್ತೇವೆ. ಈ ಸುಂದರ ಸಮಾಜದಲ್ಲಿ ಸಂವಿಧಾನದ ಆಶಯದಂತೆ ಸಮಾನತೆ ಸರ್ವರಿಗೂ ಸಮಬಾಳು ಸಮಾನ ಅವಕಾಶಗಳು ಸಿಗುವಂತೆ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿ ವಹಿಸಬೇಕು. ಇಡೀ ಕಾರ್ಮಿಕ ವರ್ಗದವರ ದುಡಿಮೆ ಶ್ಲಾಘನೀಯವಾದುದು. ಅವರಿಗೆ ಸಿಗಬೇಕಾದ ದುಡಿಮೆಗೆ ತಕ್ಕ ಪ್ರತಿಫಲ ಜೀವನ ಭದ್ರತೆ ಎಲ್ಲವೂ ಸಿಗುವಂತಾಗಲಿ ಎಂಬುದೇ ನಮ್ಮ ಆಶಯ.

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ .

Advertisement
Share this on...