ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಈಗಾಗಲೇ ಆರಂಭವಾಗಿದೆ. ಹದಿನೇಳು ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಇನ್ನು ಈ ಹದಿನೇಳು ಜನರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಭಾಗವಹಿಸಿದ್ದಾರೆ.
ಧನುಶ್ರೀ – ಟಿಕ್ ಟಾಕ್ ಮೂಲಕ ಜನಮನ ಗೆದ್ದ ಧನುಶ್ರೀ ಮೂಲತಃ ಹಾಸನದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಜೂನಿಯರ್ ನಿತ್ಯಾ ಮೆನನ್ ಎಂದೇ ಫೇಮಸ್ಸು. ಇನ್ಸ್ಟಾ ಗ್ರಾಂನಲ್ಲಿ 2 ಲಕ್ಷ ಅನುಯಾಯಿಗಳನ್ನು ಹೊಂದಿರುವ ಧನುಶ್ರೀ ಆಗಾಗ ಸೌಂದರ್ಯಕ್ಕೆ ಸಂಬಂಧಿಸಿದ ಟಿಪ್ಸ್ ನೀಡುತ್ತಿರುತ್ತಾರೆ. ಇನ್ನು ಫೋಟೋಗಳನ್ನು ಇಷ್ಟಪಡುವ ಇವರು ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.
ಶುಭಾ ಪೂಂಜ – ಕರಾವಳಿಯ ಬೆಡಗಿ ಶುಭಾ ಪೂಂಜಾ ಬಿಗ್ ಬಾಸ್ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಮಾಡೆಲ್ ಆಗಿರುವ ಇವರು ಕನ್ನಡ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಶುಭಾ ಜಾಕ್ ಪಾಟ್ , ಸ್ಲಂ ಬಾಲ ,ಚಂಡ ,ತಾಕತ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು ಅವರ ತ್ರಿದೇವಿ, ರೈಮ್ಸ್ ಚಿತ್ರಗಳು ಬಿಡುಗಡೆಯಾಗಬೇಕಿವೆ. ಇತ್ತೀಚೆಗಷ್ಟೇ ಸುಮಂತ್ ಮಹಾಬಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಶುಭಾ ಗಾಜಿನಮನೆ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ.
ಶಂಕರ್ ಅಶ್ವಥ್ – ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಕನ್ನಡದಲ್ಲಿ 370ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕ್ಯಾಬ್ ಓಡಿಸುತ್ತಿರುವ ಶಂಕರ್ ಸಿನಿಮಾ ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶಂಕರ್ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಊಬರ್ ಚಾಲನೆ ಮಾಡುವ ಮೂಲಕ ಬದುಕು ನಡೆಸುತ್ತಿದ್ದಾರೆ.
ವಿಶ್ವನಾಥ್ ಹಾವೇರಿ- ಹಾಡು ಕರ್ನಾಟಕ ಶೋ ಮೂಲಕ ಪರಿಚಿತವಾದ ವಿಶ್ವನಾಥ್ ಬಿಗ್ ಬಾಸ್ ಈ ಸೀಸನ್ ನ ಕಿರಿಯ ಸ್ಪರ್ಧಿ. 19 ನೇ ವಯಸ್ಸಿನ ವಿಶ್ವನಾಥ್ ಅವರಿಗೆ ಸಂಗೀತ ಎಂದರೆ ಇಷ್ಟ. ಸದ್ಯ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದಾರೆ. ಹಾಡು ಬರೆದು ಸಂಯೋಜನೆ ಮಾಡುವ ಸಾಮರ್ಥ್ಯ ಹೊಂದಿರುವ ಇವರಿಗೆ ಬ್ಯಾಂಡ್ ಇದೆ. ಹಿಂದೆಯೇ ಬಿಗ್ ಬಾಸ್ ಮನೆಗೆ ಹೋಗುವ ಇಂಗಿತ ಇಟ್ಟುಕೊಂಡಿದ್ದ ವಿಶ್ವನಾಥ್ ಅವರು ಬಿಗ್ ಬಾಸ್ ನ ನೀತಿ ನಿಯಮದಂತೆ ಈಗ ತೆರಳಿದ್ದಾರೆ.
ವೈಷ್ಣವಿ – ದೇವಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ವೈಷ್ಣವಿ ಗೌಡಗೆ ಕಿರುತೆರೆಯಲ್ಲಿ ಬ್ರೇಕ್ ಕೊಟ್ಟಿದ್ದು ಅಗ್ನಿ ಸಾಕ್ಷಿ ಧಾರಾವಾಹಿ. ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಮನೆ ಮಾತಾಗಿದ್ದ ಈಕೆ ಎಂಟು ವರ್ಷಗಳ ಕಾಲ ಕಿರುತೆರೆಯಲ್ಲಿ ಮೋಡಿ ಮಾಡಿದ್ದರು. ವೈಷ್ಣವಿ ಈಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಗಿರ್ ಗಿಟ್ಲೆ, ಬಹುಕೃತ ವೇಷಂ ಸಿನಿಮಾಗಳಲ್ಲಿ ನಟಿಸಿರುವ ಇವರು ಅಗ್ನಿಸಾಕ್ಷಿಯ ನಂತರ ಬಿಗ್ ಬಾಸ್ ಮೂಲಕ ಕಿರುತೆರೆಗೆ ಮರಳಿದ್ದಾರೆ.
ಕೆಪಿ ಅರವಿಂದ್ -ಉಡುಪಿ ಮೂಲದವರಾದ ಕೆಪಿ ಅರವಿಂದ್ ಮೋಟಾರ್ ರೇಸ್ ನಲ್ಲಿ ರಾಷ್ಟ್ರೀಯ ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. 2005 ರಿಂದಲೇ ಬೈಕ್ ರೇಸ್ ನಲ್ಲಿ ಭಾಗಿಯಾಗತೊಡಗಿದ ಅರವಿಂದ್ ರ್ಯಾಲಿ , ಸೂಪರ್ ಕ್ರಾಸ್ ,ಡರ್ಟ್ ಟ್ರ್ಯಾಕ್ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದಾರೆ.
ನಿಧಿ ಸುಬ್ಬಯ್ಯ – ಮಾಡೆಲ್, ನಟಿ ಆಗಿರುವ ನಿಧಿ ಸುಬ್ಬಯ್ಯ ಪಂಚರಂಗಿ ಹಾಗೂ ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳ ಮೂಲಕ ಚಂದನವನದಲ್ಲಿ ಮನೆ ಮಾತಾದರು. ಓ ಮೈ ಗಾಡ್ , ಅಜಬ್ ಗಜಬ್ ಲವ್ ಬಾಲಿವುಡ್ ಚಿತ್ರಗಳಲ್ಲಿಯೂ ನಟಿಸಿರುವ ಈ ಕೊಡಗಿನ ಕುವರಿ ಕ್ರೀಡೆಯಲ್ಲಿಯೂ ಮುಂದು. ವೀರಬಾಹು ,ಅಣ್ಣಾ ಬಾಂಡ್, 5 ಜಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ
ಶಮಂತ್ ಬ್ರೋ ಗೌಡ – ಬ್ರೋ ಗೌಡ ಎಂದೇ ಗುರುತಿಸಿಕೊಳ್ಳುವ ಶಮಂತ್ ಅವರು ಈಗಾಗಲೇ ಸಿನಿಮಾದಲ್ಲಿ ನಟಿಸಿದ್ದು, ಅವರ ಸೀನ್ ಗೆ ಕತ್ತರಿ ಹಾಕಿದ್ದರು. ಹೀಗಾಗಿ ನಾನೇ ಅವಕಾಶ ಸೃಷ್ಟಿಸಿಕೊಳ್ಳುತ್ತೇನೆ ಎಂದು ವೆಬ್ ಸಿರೀಸ್ ಮಾಡಿದ್ದರು. ಬಾ ಗುರು ಖ್ಯಾತಿಯ ಶಮಂತ್ ಹಾಡು ಬರೆದು ಹಾಡುತ್ತಾರೆ. ಜೀವನದಲ್ಲಿ ಸಾಧಿಸುವ ಆಲೋಚನೆ ಹೊಂದಿದ್ದಾರೆ.
ಗೀತಾ ಭಾರತಿ ಭಟ್ – ಕಾರ್ಕಳದ ಈ ಹುಡುಗಿ ಈಗ ಬಿಗ್ ಬಾಸ್ ಮನೆ ಸ್ಪರ್ಧಿ. ಬ್ರಹ್ಮಗಂಟು ಧಾರಾವಾಹಿಯ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಗೀತಾ ಭಾರತಿ ಭಟ್ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ನೋವು ,ಅವಮಾನ ಎದುರಿಸಿದ್ದಾರೆ. ನಟನೆಯ ಹೊರತಾಗಿ ಈಕೆ ಅದ್ಭುತ ಹಾಡುಗಾರ್ತಿಯೂ ಹೌದು.
ಮಂಜು ಪಾವಗಡ – ಮಜಾ ಭಾರತ ಶೋನಲ್ಲಿ ಭಾಗವಹಿಸಿದ್ದ ಮಂಜು ಕಿರುತೆರೆಗೆ ಬಂದುದು ಆಕಸ್ಮಿಕವಾಗಿ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಜಾ ಭಾರತದಲ್ಲಿ ಭಾಗವಹಿಸುವ ಅವಕಾಶ ಬಂತು. ಮಜಾಭಾರತದ ಮೂರು ಸೀಸನ್ ಗಳಲ್ಲಿ ಮಿಂಚಿದ್ದ ಮಂಜು ರಾಮಾರ್ಜುನ , ಭಜರಂಗಿ 2 ಸಿನಿಮಾಗಳಲ್ಲಿ ನಟಿಸಿದ್ದಾರೆ.
ದಿವ್ಯಾ ಸುರೇಶ್ – ಮಿಸ್ ಇಂಡಿಯಾ ಸೌತ್ ಆಗಿರುವ ದಿವ್ಯಾ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಲ್ಟನ್ ಹೌಸ್ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ದಿವ್ಯಾ ಡಿಗ್ರಿ ಕಾಲೇಜ್ ಮೂಲಕ ಟಾಲಿವುಡ್ ಪ್ರವೇಶಿಸಿದರು. ನನ್ನ ಹೆಂಡ್ತಿ ಎಂಬಿಬಿಎಸ್ ಹಾಗೂ ಜೋಡಿಹಕ್ಕಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಚಂದ್ರಕಲಾ ಮೋಹನ್ – 20 ವರುಷಗಳಿಂದ ನಟಿಸುತ್ತಿರುವ ಇವರು 300ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯ ಅಜ್ಜಮ್ಮ ಪಾತ್ರದಿಂದ ಮನೆಮಾತಾದ ಇವರು ಕಸ್ತೂರಿ ,ಮೂಡಲಮನೆ , ಕೃಷ್ಣ ರುಕ್ಮಿಣಿ , ಕಮಲಿ, ಸೇವಂತಿ ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಚಂದ್ರಕಲಾ ಮೋಹನ್ ಅಲ್ಲೂ ಸೈ ಎನಿಸಿಕೊಂಡಿದ್ದಾರೆ.
ರಘು ಗೌಡ- ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಮೂಡಿಸಿರುವ ರಘು ಗೌಡ ಇಂಜಿನಿಯರಿಂಗ್ ಪದವಿಧರರೂ ಹೌದು. ಮನರಂಜನಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಕೆಲಸಕ್ಕೆ ಬಾಯ್ ಹೇಳಿದ ರಘು ಗೌಡ ವೈನ್ ಸ್ಟೋರ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಮನೆ ಮಾತಾದರು.
ಪ್ರಶಾಂತ್ ಸಂಬರ್ಗಿ – ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಈಗ ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಸಂದರ್ಭದಲ್ಲಿ ಹಲವರ ಹೆಸರನ್ನು ಬಹಿರಂಗಪಡಿಸಿ ಸುದ್ದಿಯಲ್ಲಿದ್ದರು. ರಾಜಕಾರಣಿಯೂ ಆಗಿರುವ ಇವರು ಜಾಹೀರಾತುಗಳಲ್ಲಿಯೂ ಕೆಲಸ ಮಾಡಿದ್ದಾರೆ.
ದಿವ್ಯಾ ಉರುಡುಗ – ಶಿವಮೊಗ್ಗದ ತೀರ್ಥಹಳ್ಳಿಯ ದಿವ್ಯಾ ಅಂಬಾರಿ, ಚಿಟ್ಟೆಹೆಜ್ಜೆ, ಖುಷಿ, ಒಂ ಶಕ್ತಿ ಒಂ ಶಾಂತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೂಪರ್ ಕಬಡ್ಡಿ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿರುವ ದಿವ್ಯಾ ಅರವಿಂದ್ ಕೌಶಿಕ್ ಅವರ ಹುಲಿರಾಯ ಸಿನಿಮಾದಿಂದ ಸಿನಿಪಯಣ ಆರಂಭಿಸಿದರು. ಧ್ವಜ ಹಾಗೂ ಫೇಸ್ 2 ಫೇಸ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ರಾಜೀವ್ – ನಟನಾಗಬೇಕು ಎಂಬ ಕನಸು ಕಂಡಿರುವ ರಾಜೀವ್ ಅತ್ಯುತ್ತಮ ಕ್ರಿಕೆಟ್ ಆಟಗಾರ. ನಟ ಸುದೀಪ್ ನೇತೃತ್ವದಲ್ಲಿ ಆರಂಭವಾದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಆಕರ್ಷಕ ಬ್ಯಾಟ್ಸ್ಮನ್ ಆಗಿ ಹೆಸರು ಮಾಡಿದ್ದರು. ವೃತ್ತಿಪರ ಕ್ರಿಕೆಟರ್ ಆಗಿ ರೂಪುಗೊಳ್ಳುವುದರ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳಬೇಕು ಎನ್ನುವುದು ಅವರ ಆಸೆ.
ನಿರ್ಮಲಾ ಚೆನ್ನಪ್ಪ – ನಟಿಯಾಗಿ ಖ್ಯಾತಿ ಪಡೆದಿರುವ ಇವರು ಈಗ ಧಾರಾವಾಹಿ, ಶೋ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪದ್ಮಾವತಿ ಧಾರಾವಾಹಿಯನ್ನು ನಿರ್ಮಿಸಿದ ನಿರ್ಮಾಲಾ ತಲ್ಲಣ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದರು. ಸಾಯಿ ನಿರ್ಮಲಾ ಪ್ರೊಡಕ್ಷನ್ ಮೂಲಕ ಧಾರಾವಾಹಿ , ರಿಯಾಲಿಟಿ ಶೋ ನಿರ್ಮಾಣ ಮಾಡುತ್ತಿದ್ದಾರೆ. ಪತಿ ಸರ್ದಾರ್ ಸತ್ಯ ಕೂಡಾ ನಟರು.
– ಅಹಲ್ಯಾ