ತಾಯಿ ಮತ್ತು ಮಗನ ಒಂದು ಸುಂದರವಾದ ಪ್ರಸಂಗ….”ಜನನಿ ತಾನೆ ಮೊದಲ ಗುರುವು”

in ಕನ್ನಡ ಮಾಹಿತಿ 1,690 views

“ಮಾತೃ ದೇವೋಭವ ” ಎಂಬ ಮೌಲ್ಯಯುತವಾದ ಸಂಸ್ಕೃತಿ ನಮ್ಮದು,ಸಕಲ ಜೀವ ಸೃಷ್ಟಿಯಲ್ಲಿ “ತಾಯಿ” ಎಂಬ ಮಮತೆಯ ಸೃಷ್ಟಿಯೇ ಅದ್ಭುತವಾದದ್ದು,ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಸ್ಥಾನ ಬಹುದೊಡ್ಡದು “ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ” ಎಂಬ ಗಾದೆ ಮಾತಿನಲ್ಲಿ ತಾಯಿಗಿಂತ ಹತ್ತಿರವಾದ ಬಂಧುವು ಈ ಜಗತ್ತಿನಲ್ಲಿ ಬೇರೊಬ್ಬರಿಲ್ಲ. ನಮ್ಮ ನೋವು ನಲಿವು ಕಷ್ಟ ಸುಖ ಹೀಗೆ ಎಲ್ಲಾ ಭಾವನೆಗಳಿಗೆ ಸಮವಾಗಿ ಸ್ಪಂದಿಸುವ ಜೀವ ತಾಯಿ ಹೃದಯ ಮಾತ್ರ.

Advertisement

“ಮನೆಯೇ ಮೊದಲ ಪಾಠಶಾಲೆ
ಜನನಿ ತಾನೇ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನಗಳೆಲ್ಲ ಧನ್ಯರು ”

Advertisement

 

Advertisement

Advertisement

ಹೀಗೆ ಒಂದು ಕುಟುಂಬದ ನಂದಾದೀಪ ಆಶಾಕಿರಣ ತಾಯಿ, “ನೂರು ಜನ ಶಿಕ್ಷಕರಿಗಿಂತ ಒಬ್ಬ ತಾಯಿ ಮೇಲು” ಎನ್ನುವಂತೆ ಈ ಸೃಷ್ಟಿಯಲ್ಲಿ ನಮಗೆ ಮೊದಲು ಪರಿಚಯವಾಗುವ ಹೃದಯವೇ ಅದು ತಾಯಿ ,ಪ್ರೀತಿ ವಾತ್ಸಲ್ಯ ಮಮತೆ ಕರುಣೆ ಎಲ್ಲವನ್ನೂ ಮಗುವಿಗೆ ದಾರೆ ಎರೆದು ಮಗುವಿನ ಲಾಲನೆ ಪಾಲನೆ ಪೋಷಣೆ ಮಾಡುತ್ತಾ ಮಗುವಿನ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಾ ಒಂದು ಸುಂದರ ವ್ಯಕ್ತಿತ್ವ ರೂಪಿಸುವಲ್ಲಿ ತಾಯಿಯ ಪಾತ್ರ ಅಪಾರವಾದುದು.ನಮ್ಮನ್ನು ತಿದ್ದಿ ತೀಡಿ ಒಂದು ಸುಂದರವಾದ ಮೂರ್ತಿಯನ್ನಾಗಿ ಮಾಡುವ ಮೊದಲ ಗುರುವೇ ತಾಯಿ. ಪ್ರತಿಯೊಬ್ಬರ ಬದುಕಿನಲ್ಲಿ ಮೊದಲ ಪ್ರೇರಣಾದಾತೆಯೇ ತಾಯಿ.ತಾಯಿಯಿಂದ ಪ್ರೇರಣೆ ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ಸಹ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ .ಇದಕ್ಕೆ ದೃಷ್ಟಾಂತ ಮಹಾಭಾರತದಲ್ಲಿ ತಾಯಿ ಮತ್ತು ಮಗನ ಒಂದು ಸುಂದರವಾದ ಪ್ರಸಂಗವಿದೆ, ವಿದುಲಾ ಎಂಬ ಒಬ್ಬ ತಾಯಿ ತನ್ನ ಮಗನಾದ ಸಂಜಯನನ್ನು ಯುದ್ಧ ನಡೆದ ಸಂದರ್ಭದಲ್ಲಿ ಯುದ್ಧಭೂಮಿಗೆ ಕಳುಹಿಸಿಕೊಡುತ್ತಾಳೆ ಆದರೆ ಮಗ ಸಂಜಯನ್ನು ಭಯಂಕರವಾದ ಯುದ್ಧದ ಸನ್ನಿವೇಶವನ್ನು ನೋಡಿ ಹೆದರಿ ಭಯಭೀತನಾಗಿ ಶತ್ರುಗಳಿಗೆ ಬೆನ್ನು ತೋರಿಸಿ ರಾಜಧಾನಿಗೆ ಹಿಂದಿರುಗಿ ಬರುತ್ತಾನೆ, ಆಗ ತಾಯಿ ವಿದುಲಾ ಮಗನಿಗೆ ವೀರಯೋಧ ನಾದವನು ರಣರಂಗದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿ ಹೇಳುತ್ತಾಳೆ ಆಗ ತಾಯಿಯ ಪ್ರೇರಣೆಯಿಂದ ಸಂಜಯನು ರಣಭೂಮಿಗೆ ಉತ್ಸಾಹದಿಂದ ತೆರಳುತ್ತಾನೆ ತನ್ನಲ್ಲಿರುವ ಶಕ್ತಿ ಸಾಮರ್ಥ್ಯಗಳಿಂದ ಅದ್ಭುತವಾಗಿ ಶೌರ್ಯದಿಂದ ಕಾದಾಡಿ ಕೊನೆಯಲ್ಲಿ ಯುದ್ಧದಲ್ಲಿ ವಿಜಯಶಾಲಿಯಾಗಿ ಹಿಂದಿರುಗುತ್ತಾನೆ ಆಗ ತಾಯಿ ಮಗನನ್ನು ಸನ್ಮಾನಿಸಿದ ರೀತಿ ಅಪೂರ್ವವಾದುದು. ಅಂದರೆ ಒಬ್ಬ ತಾಯಿಯ ಪ್ರೇರಣೆಯಿಂದ ತಾಯಿ ತೋರಿಸುವ ಸನ್ಮಾರ್ಗದಿಂದ ಎಂತಹದೇ ಸಾಹಸಮಯ ಕಾರ್ಯವನ್ನು ಮಾಡಲು ಸಾಧ್ಯ ಎಂಬುದನ್ನು ಈ ದೃಷ್ಟಾಂತ ನಮಗೆ ತಿಳಿಸಿಕೊಡುತ್ತದೆ.

 

ಈ ಜೀವ ಸೃಷ್ಟಿಯಲ್ಲಿ ಮೊಟ್ಟ ಮೊದಲು ಕಣ್ತೆರೆದು ನಿಂತಾಗ ನಮಗೆ ಪರಿಚಯವಾದ ಮೊದಲ ಭಾಷೆಗೆ ಅದು ತಾಯಿ ಭಾಷೆ. ಅದಕ್ಕೆ ಕವಿಗಳು ತಾಯಿನಾಡು ತಾಯಿ ನುಡಿ ಹೀಗೆ ಭಾಷಾ ಪ್ರಪಂಚವನ್ನು ವರ್ಣಿಸುತ್ತಾರೆ. ಕವಿ ಬಿ ಎಂ ಶ್ರೀಕಂಠಯ್ಯನವರು ಹೇಳುವ ಹಾಗೆ
” ಮೊದಲ ತಾಯ ಹಾಲು ಕುಡಿದು
ನಲ್ಮೆಯಿಂದ ನಲಿದು ಕುಣಿದು
ಗೆಳೆಯರೊಡನೆ ಕಲಿತು ಬಂದ
ಮಾತದಾವುದು ? ಅದೇ ತಾಯಿ ಭಾಷೆ ಎಂದು ವರ್ಣಿಸುತ್ತಾರೆ.
ಒಂದು ಕಡೆ ತಾಯಿ ಮಗುವಿಗೆ ಹೇಳುತ್ತಾಳೆ
“ಆಡಿ ಬಾ ನನ ಕಂದ
ಅಂಗಾಲ ತೊಳೆದೇನ
ತೆಂಗಿನಕಾಯಿ ತಿಳಿನೀರ ತಕ್ಕೊಂಡು
ಬಂಗಾರದ ಮೋರೆ ತೊಳೆದೇನ”

 

ಎಂತಹ ಅದ್ಭುತವಾದ ಮಮತೆಯ ಮಡಿಲು ತಾಯಿಯದು.ಪ್ರೀತಿ ವಾತ್ಸಲ್ಯದ ಸಂಕೇತವಾಗಿ, ತವರಿನ ಸಿರಿಯಾಗಿ, ಮನೆಯ ಸಂಸ್ಕಾರದ ಕೇಂದ್ರವಾಗಿ ನಮ್ಮ ನಾಡು ನುಡಿಯ ಪ್ರತೀಕವಾಗಿ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸುತ್ತಾ ದಿಟ್ಟತನದಿಂದ
ಎಲ್ಲರನ್ನು ಮುನ್ನಡೆಸುವ ಸ್ಫೂರ್ತಿಯ ಸೆಲೆಯೇ “ತಾಯಿ”. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ಸವಿ ನೆನಪಿಗಾಗಿ ಮದರ್ಸ್ ಡೇ ಎಂದು ಆಚರಿಸಲಾಗುತ್ತಿದೆ ಆದರೆ ಇದು ಸಾಂಕೇತಿಕವಷ್ಟೇ ಪ್ರತಿದಿನವೂ ಅಮ್ಮನ ದಿನ.ತಾಯಿಯ ಸಹನೆ ತಾಳ್ಮೆ ಪ್ರೀತಿ ವಾತ್ಸಲ್ಯ ಮಮತೆಗೆ ಸರಿಸಾಟಿ ಮತ್ತೊಂದಿಲ್ಲ.

 

ಪ್ರೊ ಸುಧಾ ಹುಚ್ಚಣ್ಣವರ
ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ.

Advertisement
Share this on...