ಬೆಂಗಳೂರು: ಪರ ವಿರೋಧ ಚರ್ಚೆಗಳ ನಡುವೆ ಶಾಲಾ, ಕಾಲೂಜು ಆರಂಭಕ್ಕೆ ಸರ್ಕಾರ ನಿರ್ಧರಿಸಿದೆ. ಜನವರಿ 1 ನೇ ತಾರೀಖಿನಿಂದ 10 ನೆ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದ್ದು, 6 ರಿಂದ 9ನೇ ತರಗತಿ ವರೆಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಳೊಂದಿಗೆ ಚರ್ಚೆ ನಡೆಸಲಾಯಿತು. ಶಾಲಾ ಪ್ರಾರಂಭ, ಕಾಲೇಜು ಪ್ರಾರಂಭದ ಕುರಿತು ಸುದೀರ್ಘ ವಾಗಿ ಚರ್ಚೆ ನಡೆಸಲಾಯಿತು. ತರಗತಿಗಳನ್ನು ಪ್ರಾರಂಭಿಸಿ, 15 ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಇತರ ತರಗತಿಗಳನ್ನು ಪ್ರಾರಂಭಿಸುವ ಕುರಿತು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಶಾಲೆಗಳನ್ನು ಮರುಪ್ರಾರಂಭಿಸುವ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ 2021ರ ಜನವರಿ 1 ರಿಂದ 10 ನೆ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಹಾಗೂ 6 ರಿಂದ 9ನೇ ತರಗತಿ ವರೆಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಪೋಷಕರ ಅನುಮತಿ ಪತ್ರ ಕಡ್ಡಾಯ
ರಾಜ್ಯ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ 19 ಸೋಂಕಿನ ಲಕ್ಷಣಗಳಿಲ್ಲವೆಂದು ದೃಢೀಕರಿಸಬೇಕು. ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು, ಪ್ರವೇಶ ಪಡೆಯುವ 72 ಗಂಟೆಗಳ ಅಂತರದಲ್ಲಿ ಕೋವಿಡ್ 19 ರ ಪರೀಕ್ಷೆ ಮಾಡಿಸಿ, ನೆಗೇಟಿವ್ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
“ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯವಲ್ಲ”
ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ,
ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯವಲ್ಲ. ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್ ಲೈನ್, ಯುಟ್ಯೂಬ್ ಚಾನೆಲ್ ಮತ್ತು ಇತರ ಮೂಲಗಳಿಂದಲೂ ಅಭ್ಯಾಸ ಮಾಡಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಶಾಲೆ-ಕಾಲೇಜುಗಳಲ್ಲಿ ತರಗತಿ ಕೊಠಡಿಗಳನ್ನು ಡಿಸ್-ಇನ್ಫೆಕ್ಷನ್ ಮಾಡಿಸುವ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳಿಗೆ ಅರ್ಧ ದಿನ ಮಾತ್ರ ತರಗತಿ ನಡೆಯಲಿದೆ. ಒಂದು ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗೆ ತರಗತಿ ನಡೆಸಬೇಕು. ಬಿಸಿಯೂಟ ವಿತರಣೆ ಇರುವುದಿಲ್ಲ. ಬದಲಿಗೆ ಪ್ರಸ್ತುತ ಜಾರಿಯಲ್ಲಿರುವಂತೆ ಆಹಾರ ಸಾಮಗ್ರಿಯನ್ನು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು.
ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ವಾರಕ್ಕೆ ಎರಡು ಬಾರಿ ಶಾಲೆಗೆ ಹಾಜರಾಗಬೇಕಾಗುವುದು ಎಂದು ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.