ಮಾಸ್ಕ್​ನಂತೆ ಪಕ್ಷಿಗೂಡು ಧರಿಸಿ ಬಂದ ವೃದ್ಧ…ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಅಂದ್ರು ನೆಟಿಜನ್ಸ್​​​​​​​​​​..!

in Kannada News/News 484 views

ಸಾಮಾಜಿಕ ಅಂತರ, ಮಾಸ್ಕ್​ ಧರಿಸುವುದು, ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು, ಬಿಸಿನೀರು ಕುಡಿಯುವುದು…ಹೀಗೆ ಇನ್ನಿತರ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೊನಾ ಸೋಂಕಿಗೆ ಒಳಗಾಗುವ ಯಾವುದೇ ಭಯವಿಲ್ಲ ಎಂದು ವೈದ್ಯರು ಹೇಳುತ್ತಾ ಬಂದಿದ್ದಾರೆ. ಆದರೆ ಬಹಳಷ್ಟು ಜನರು ಇದ್ಯಾವುದನ್ನೂ ಲೆಕ್ಕಿಸದೆ ಸೋಂಕಿಗೆ ಒಳಗಾಗಿ ಇತರರಿಗೂ ಸೋಂಕು ಹರಡಲು ಕಾರಣರಾಗುತ್ತಿದ್ದಾರೆ. ಕಳೆದ 2 ತಿಂಗಳಿಂದ ಮತ್ತೆ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು 2ನೇ ಅಲೆಗೆ ಬಹಳಷ್ಟು ಜನರು ಬಲಿಯಾಗುತ್ತಿದ್ದಾರೆ. ಬೆಂಗಳೂರು ರಣರಂಗವಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲ ಹೆಚ್ಚಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳದ ಸೆಲಬ್ರಿಟಿಗಳು ಕೂಡಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಸೋಂಕಿಗೆ ಒಳಗಾದವರಿಗೆ ಬೆಡ್​​​​​​, ಆಕ್ಸಿಜನ್, ಸೂಕ್ತ ಚಿಕಿತ್ಸೆ ದೊರೆಯದ ಪರಿಸ್ಥಿತಿ ಬಂದೊದಗಿದೆ. ಸಾಮಾಜಿಕ ಅಂತರ ಇರಲಿ ಕನಿಷ್ಠ ಮಾಸ್ಕ್ ಕೂಡಾ ಧರಿಸಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ಮಾಸ್ಕ್​​ ಖರೀದಿಸಲು ಹಣ ಇಲ್ಲದೆ ಪಕ್ಷಿಯ ಗೂಡನ್ನು ಮಾಸ್ಕ್​​​ನಂತೆ ಧರಿಸಿಕೊಂಡು ಸರ್ಕಾರಿ ಕಚೇರಿಗೆ ಬಂದಿದ್ದಾರೆ.

Advertisement

Advertisement

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈಗಾಗಲೇ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲಾಕ್​ಡೌನ್ ಘೋಷಿಸಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ತೆಲಂಗಾಣಗಳಲ್ಲಿ ನೈಟ್​ ಕರ್ಫ್ಯೂ ವಿಧಿಸಲಾಗಿದೆ. ಮಾಸ್ಕ್​ ಧರಿಸದವರಿಗೆ 1000 ರೂಪಾಯಿ ದಂಡ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ತೆಲಂಗಾಣದ ಮಹಬೂಬ್​​ ನಗರದ ಮೇಕಲ ಕುರ್ಮಯ್ಯ ಎಂಬ ವೃದ್ಧ ಸರ್ಕಾರದ ಸಲಹೆ, ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಕನಿಷ್ಠ 20 ರೂಪಾಯಿ ಖರ್ಚು ಮಾಡಿ ಮಾಸ್ಕ್​​ ಖರೀದಿಸಲು ಕೂಡಾ ಹಣ ಇಲ್ಲದ ಕುರ್ಮಯ್ಯ ಪಕ್ಷಿಯ ಗೂಡನ್ನು ಮಾಸ್ಕ್​​​ನಂತೆ ಧರಿಸಿಕೊಂಡು ಸರ್ಕಾರಿ ಕಚೇರಿಗೆ ಪಿಂಚಣಿ ಪಡೆಯಲು ಬಂದಿದ್ದಾರೆ.

Advertisement

ಮೇಕಲ ಕುರ್ಮಯ್ಯ ಹೀಗೆ ಪಕ್ಷಿ ಗೂಡನ್ನು ಮಾಸ್ಕ್​ನಂತೆ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕುರ್ಮಯ್ಯ ಅವರ ಈ ಕಾರ್ಯಕ್ಕೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೇವತಿ ಎಂಬುವವರು ಕುರ್ಮಯ್ಯ ಅವರ ಫೋಟೋವನ್ನು ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಇವರನ್ನು ನೋಡಿಯಾದರೂ ಸರ್ಕಾರ ಬಡಜನರಿಗೆ ಮಾಸ್ಕ್ ವಿತರಣೆ ಮಾಡಿದರೆ ಸಾಕು ಎಂದು ಮನವಿ ಮಾಡಿದ್ದಾರೆ. ಕುರ್ಮಯ್ಯ ವಿಳಾಸ ನೀಡಿದರೆ ನಾವೇ ಅವರಿಗೆ ಅಗತ್ಯ ವಸ್ತುಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Advertisement

ಸರ್ಕಾರ ಸದ್ಯಕ್ಕೆ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿಷೇಧ ಹೇರಿದೆ. ಮದುವೆ, ಶವಸಂಸ್ಕಾರ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಇಂತಿಷ್ಟೇ ಜನರು ಇರಬೇಕು ಎಂದು ಸೂಚಿಸಿದ್ದರೂ ಜನರು ಮಾತ್ರ ಜಾತ್ರೆಯಂತೆ ಸೇರುತ್ತಿದ್ದಾರೆ. ವಿದ್ಯಾವಂತರಾದರೂ ಕೊರೊನಾ ಬಗ್ಗೆ ಎಷ್ಟೇ ತಿಳುವಳಿಕೆ ಹೇಳಿದರೂ ಮೂಗು ಮುರಿಯುವವರಿಗೆ, ಮಾಸ್ಕ್ ಇದ್ದರೂ ಧರಿಸದೆ ಅಹಂ ಪ್ರದರ್ಶಿಸುವವರಿಗೆ ಈ ಅವಿದ್ಯಾವಂತರಾದ ಕುರ್ಮಯ್ಯ ಮಾದರಿಯಾಗಿದ್ದಾರೆ. ಇವರನ್ನು ನೋಡಲು ಕಲಿಯುವುದು ಸಾಕಷ್ಟಿದೆ.

Advertisement