ನಟಿ ಮಿಲನಾ ನಾಗರಾಜ್ ಮದುವೆ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮಾಲ್ಡೀವ್ಸ್ ಹನಿಮೂನ್ ಪ್ರವಾಸದಿಂದ ವಾಪಸ್ ಆಗುತ್ತಿದ್ದಂತೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಮಿಲನಾ ನಾಗರಾಜ್ ಸದ್ಯ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿರುವ ‘ಫಾರ್ Regn’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಸದ್ಯ ‘ಫಾರ್ Regn’ ಚಿತ್ರೀಕರಣದ ಒಂದಿಷ್ಟು ಫೋಟೋಗಳು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಡಲ ಕಿನಾರೆಯಲ್ಲಿ ಪೃಥ್ವಿ ಮತ್ತು ಮಿಲನಾ ಇಬ್ಬರು ಫೋಟೋಶೂಟ್ ಮಾಡುತ್ತಿರುವ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ. ಅಂದಹಾಗೆ ಇದು ‘ಫಾರ್ Regn’ ಸಿನಿಮಾದ ಹಾಡಿನ ಚಿತ್ರೀಕರಣದ ಫೋಟೋಗಳು ಇದೀಗ ಅಭಿಮಾನಿಗಳ ಚಿತ್ತವನ್ನು ಸೆಳೆಯುತ್ತಿದೆ. ಮಿಲನಾ ನಾಗರಾಜ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದ ಇವರು ರಾಜ್ಯಮಟ್ಟದ ಈಜುಗಾರ್ತಿ.
2013 ರಲ್ಲಿ ತೆರೆಕಂಡ `ನಮ್ ದುನಿಯಾ ನಮ್ಮ ಸ್ಟೈಲ್’ ಚಿತ್ರದಿಂದ ನಾಯಕನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಬೃಂದಾವನ’ ಚಿತ್ರದಲ್ಲಿ ನಟಿಸಿದರು. ಒಂದು ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಕಿರುತೆರೆಯಲ್ಲಿ ಇವರು ರಾಧಾ ಕಲ್ಯಾಣ, ಲವಲವಿಕೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ದಿಯಾ ಸಿನಿಮಾದ ಮೂಲಕ ಸಿನಿಪ್ರಿಯ ಮನಗೆದ್ದ ಈ ನಟನ ಮುಂಚಿನ ಹೆಸರು ನಾಗರಾಜ್ ಅಂಬರ್.ಕೇವಲ ನಟ ಮಾತ್ರನಲ್ಲದೇ ಉತ್ತಮ ನಿರೂಪಕ ಮತ್ತು ನೃತ್ಯಗಾರ ಕೂಡ ಹೌದು. ಇದೀಗ ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಹಾಡು ಇದಾಗಿದ್ದು, ಮಿಲನಾ ಮತ್ತು ಪೃಥ್ವಿ ರೊಮ್ಯಾಂಟಿಕ್ ಮೂಡ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಉಡುಪಿ, ಮಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ.’
ಫಾರ್ Regn’ ಚಿತ್ರಕ್ಕೆ ನವೀನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ಯಾಡೋ, ಹರಿವಿನ ಹಾದಿ, ಎಲ್ಲೋ ಬೋರ್ಡ್ ಮುಂತಾದ ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ನವೀನ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದು, ಮೊದಲ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊತ್ತಿದ್ದು, ಈ ಸಿನಿಮಾ ಚಿತ್ರ ಮಂದಿರದಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಈ ಚಿತ್ರಕ್ಕೆ ಹರಿಷ್ ಆರ್ ಸಂಗೀತ ನೀಡುತ್ತಿದ್ದಾರೆ. ದಿಯಾ ಸಿನಿಮಾ ಬಳಿಕ ನಟ ಪೃಥ್ವಿ ಅಂಬರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್, ಶುಗರ್ ಲೆಸ್, ಶಿವಪ್ಪ ಮತ್ತು ದಿಯಾ ಹಿಂದಿ ರಿಮೇಕ್ ನಲ್ಲೂ ನಟಿಸುತ್ತಿದ್ದಾರೆ.
ಇನ್ನು ನಟಿ ಮಿಲನಾ ನಾಗರಾಜ್ ಲವ್ ಮಾಕ್ ಟೇಲ್-2 ಸಿನಿಮಾದಲ್ಲಿ ನಿರತರಾಗಿದ್ದಾರೆ.ದಿಯಾ ಸಿನಿಮಾದ ಮೂಲಕ ಈ ಪೃಥ್ವಿ ಅಂಬರ್ ಹೆಸರು ಮಾಡಿದರೆ, ಲವ್ ಮೊಕ್ಟೇಲ್ ಸಿನಿಮಾದಲ್ಲಿ ನಿಧಿಮಾ ಆಗಿ ಎಲ್ಲರ ಮನಸ್ಸನ್ನು ಮಿಲನ ನಾಗರಾಜ್ ಗೆದ್ದಿದ್ದರು. ಇದೀಗ ಸಿನಿ ಪರದೆಯ ಮೇಲೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಲವ್ ಮೊಕ್ಟೇಲ್ ಖ್ಯಾತಿಯ ಮಿಲನ ನಾಗರಾಜ್ ಸದ್ದು ಮಾಡಲಿದ್ದಾರೆ. ಹಾಡಿನ ಚಿತ್ರೀಕರಣದ ಒಂದಷ್ಟು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.