ಅಭಿಮಾನಿ ಮನೆಯ ಗೃಹ ಪ್ರವೇಶಕ್ಕೆ ಹೋಗಿದ್ದ ಪ್ರೇಮ್, ಅಭಿಮಾನಿಯ ಮನೆಯಲ್ಲಿ ‘ಪ್ರೇಮಂ ಪೂಜ್ಯಂ’ ಟೀಸರ್ ಪ್ರದರ್ಶನ

in ಮನರಂಜನೆ/ಸಿನಿಮಾ 559 views

ನೆನಪಿರಲಿ’ ಪ್ರೇಮ್ ಅಭಿಮಾನಿಯೊಬ್ಬರ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಆ ಅಭಿಮಾನಿ ಪ್ರೇಮ್ ಅವರಿಗೆ ಸರ್ಪ್ರೈಸ್ ನೀಡಿ ಅಭಿಮಾನಿಯ ಮನೆಯಲ್ಲಿ ‘ಪ್ರೇಮಂ ಪೂಜ್ಯಂ’ ಚಿತ್ರದ ಟೀಸರ್ ಪ್ರದರ್ಶನದ ಮಾಡಿದ್ದಾರೆ.ನೂತನವಾಗಿ ನಿರ್ಮಿಸಿರುವ ಮನೆಯಲ್ಲಿ ಹೋಮ್ ಥಿಯೇಟರ್ ಇದ್ದು, ಆ ಥಿಯೇಟರ್‌ನಲ್ಲಿ ಪ್ರೇಮ್ ಅವರ 25ನೇ ಚಿತ್ರದ ಟೀಸರ್ ಪ್ರದರ್ಶಿಸಿ ಅಭಿಮಾನ ಮೆರೆದಿದ್ದಾರೆ. ಗೃಹಪ್ರವೇಶದ ದಿನವೇ ತಮ್ಮ ಹೋಮ್ ಥಿಯೇಟರ್‌ನಲ್ಲಿ ನೆಚ್ಚಿನ ನಟನ ಚಿತ್ರದ ಟೀಸರ್ ಪ್ಲೇ ಮಾಡಿ ಅಭಿಮಾನಿ ಖುಷಿಪಟ್ಟಿದ್ದಾರೆ. ಅಭಿಮಾನಿಯ ಮನೆಯಲ್ಲಿ ‘ಪ್ರೇಮಂ ಪೂಜ್ಯಂ’ ಚಿತ್ರದ ಟೀಸರ್ ಪ್ರದರ್ಶನ ಕಂಡು ಪ್ರೇಮ್ ಸಹ ಸಂತಸಗೊಂಡಿದ್ದಾರೆ.
ಈ ಖುಷಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ”ಅಭಿಮಾನಿ ಒಬ್ಬರ ಗೃಹ ಪ್ರವೇಶಕ್ಕೆ ಭೇಟಿ ನೀಡಿದ್ದಾಗ ಅವರ ಹೊಚ್ಚ ಹೊಸ ಮನೆಯ ಹೋಮ್ ಥಿಯೇಟರ್ ನಲ್ಲಿ ಪ್ರೇಮಂ ಪೂಜ್ಯಂ ಚಿತ್ರದ ಟೀಸರ್ ನೋಡಿದ ಕ್ಷಣ…” ಎಂದು ಪೋಸ್ಟ್ ಹಾಕಿ ವಿಡಿಯೋ ತುಣುಕು ಪೋಸ್ಟ್ ಮಾಡಿದ್ದಾರೆ.

Advertisement

Advertisement

ನೆನಪಿರಲಿ ಪ್ರೇಮ್, ಪ್ರಾಣ’ ಎನ್ನುವ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು, ಮುಂದೆ ‘ನೆನಪಿರಲಿ’ ಪ್ರೇಮ್‌ ಎಂದೇ ಸ್ಟಾರ್‌ ಪಟ್ಟಕ್ಕೇರಿದರು. ಅವರ ಹೆಸರಿನಲ್ಲಿರುವ ‘ನೆನಪಿರಲಿ’ ಎನ್ನುವ ಮಾತಿನಂತೆ ಇಷ್ಟು ವರ್ಷದ ಸಿನಿಜರ್ನಿಯಲ್ಲಿ ಪ್ರೇಮ್‌ ಅವರನ್ನು ಯಾರೂ ಮರೆಯಲಿಲ್ಲ ಎಂಬುದು ಅವರ ಸಿನಿಮಾ ಕೆರಿಯರ್‌ಗೆ ಸಲ್ಲಬಹುದಾದ ಬಹು ದೊಡ್ಡ ಯಶಸ್ಸು ಎಂದರೆ ತಪ್ಪಾಗಲಾರದು.ಪ್ರೇಮ್‌ ಅವರ ಬದುಕಿನ ಗೆಲುವು- ಸೋಲು ಇಷ್ಟು ವರ್ಷದ ಪಯಣದಲ್ಲಿ ಎರಡೂ ಒಟ್ಟಿಗೆ ಬಂದಿವೆ. ಆದರೂ ನಟನಾಗಿ ಎಂದಿಗೂ ಸೋಲದ ಪ್ರೇಮ್‌, ಅವರಿಗೆ ಹೆಸರು ತಂದುಕೊಟ್ಟಸಿನಿಮಾಗಳು ಸಾಕಷ್ಟು ಇವೆ.ಇಲ್ಲಿವರೆಗೂ 24 ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಚಾರ್‌ಮಿನಾರ್‌, ಮಳೆ, ಚೌಕಾ ಮುಂತಾದ ಚಿತ್ರಗಳು. ಇನ್ನೂ ಶತ್ರು ಹಾಗೂ ದಳಪತಿ ಚಿತ್ರಗಳು ಇವರಿಗೆ ಆ್ಯಕ್ಷನ್‌ ಇಮೇಜ್‌ ನೀಡಿದ ಚಿತ್ರಗಳಾಗಿವೆ. ಸವಿ ಸವಿ ನೆನಪು, ಐ ಯಾಮ್‌ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಚಂದ್ರ ಚಿತ್ರಗಳು ಪ್ರೇಮ್‌ ಅವರನ್ನು ಕನ್ನಡದ ಚಾಕ್‌ಲೇಟ್‌ ಬಾಯ್‌ನಂತೆ ಸ್ಕ್ರೀನ್ ಮೇಲೆ ತೋರಿಸಿದವು. ನೆನಪಿರಲಿ, ಚಾರ್‌ಮಿನಾರ್‌ ಚಿತ್ರಗಳು ವೃತ್ತಿ ಬದುಕಿನ ಬಹು ದೊಡ್ಡ ತಿರುವುಗಳಾದವು.

‘ಪ್ರೇಮಂ ಪೂಜ್ಯಂ’ ಸಿನಿಮಾ ಪ್ರೇಮ್ ಅಭಿನಯದ 25ನೇ ಚಿತ್ರ. ಇತ್ತೀಚಿಗಷ್ಟೆ ಟೀಸರ್ ಬಿಡುಗಡೆಯಾಗಿದೆ. ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಜೊತೆಗೆ ಮುನ್ನಾರ್‌ನಿಂದ ಡಾರ್ಜಿಲಿಂಗ್‌ವರೆಗೆ ಭಾರತದ ವಿವಿಧ ಭಾಗಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ವಿಯೆಟ್ನಾಂನಲ್ಲಿ ಎರಡು ಹಾಡುಗಳನ್ನು ಶೂಟ್ ಮಾಡಲಾಗಿದೆ.12 ಕ್ಕೂ ಹೆಚ್ಚು ಹಾಡುಗಳೊಂದಿಗೆ, ಪ್ರೇಮಂ ಪೂಜ್ಯಂ ರವಿಚಂದ್ರನ್ ಅವರ ಪ್ರೇಮ ಲೋಕದಂತೆಯೇ ಸಂಗೀತಮಯ ಚಿತ್ರವಾಗಿದೆ.

ಈ ಸಿನಿಮಾದ ಹಾಡುಗಳನ್ನು ಹರಿಹರನ್, ಮೋಹಿತ್ ಚೌಹಾಣ್, , ವಿಜಯ್ ಪ್ರಕಾಶ್, ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್ ಸೇರಿದಂತೆ ದೇಶದ ಹೆಸರಾಂತ ಗಾಯಕರು ಹಾಡಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಒಂದು ಹಾಡಿಗೆ ಕಂಠ ಸಿರಿ ನೀಡಿದ್ದಾರೆ. ಪ್ರೇಮ್ ನಾಯಕನಾಗಿರುವ ಈ ಚಿತ್ರದಲ್ಲಿ ಬೃಂದಾ ಆಚಾರ್ಯ ಅವರಿಗೆ ಜೋಡಿಯಾಗಿದ್ದು ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್, ಸಾಧು ಕೋಕಿಲಾ, ಅನು ಪ್ರಭಾಕರ್ ತಪಸ್ವಿನಿ ಮಾತ್ರವಲ್ಲ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ ಸಹ ತೆರೆ ಹಂಚಿಕೊಂಡಿದ್ದು ಸಿನಿಮಾದ ಟೀಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Advertisement