ಕೈ ಗಾಯವಾದ್ರೂ ವರನಟನ​​​ ಚಿತ್ರ ಬರೆಯುವುದನ್ನು ನಿಲ್ಲಿಸಲಿಲ್ಲ ಈ ಅಭಿಮಾನಿ

in ಮನರಂಜನೆ/ಸಿನಿಮಾ 138 views

ಅಭಿಮಾನಿಗಳನ್ನು ದೇವರಿಗೆ ಹೋಲಿಸಿದರು ಡಾ. ರಾಜ್​ಕುಮಾರ್. ಅದೇ ರೀತಿ ಅಭಿಮಾನಿಗಳು ಕೂಡಾ ಡಾ. ರಾಜ್​ಕುಮಾರ್ ಅವರನ್ನು ಅಷ್ಟೇ ಆರಾಧಿಸುತ್ತಿದ್ದರು, ಅಷ್ಟೇ ಗೌರವಿಸುತ್ತಿದ್ದರು. ಅವರ ಸಿನಿಮಾಗಳು ಹಿಟ್ ಆದಾಗ ಖುಷಿಯಿಂದ ಸಂಭ್ರಮಿಸುವ ಅಭಿಮಾನಿಗಳು, ಅವರು ಕಿಡ್ನಾಪ್ ಆದಾಗಲೂ ಅವರು ಸುರಕ್ಷಿತವಾಗಿ ವಾಪಸ್ ಬರಲೆಂದು ದೇವರಿಗೆ ಹರಕೆ ಹೊತ್ತಿದ್ದರು. ಅಣ್ಣಾವ್ರ ಯಾವುದೇ ಸಿನಿಮಾ ಬಿಡುಗಡೆಯಾದರೂ ಬ್ಲಾಕ್​​​ನಲ್ಲಾದರೂ ಸಿನಿಮಾ ನೋಡಬೇಕು ಎಂದು ಆಸೆ ಪಡುವ ಅಭಿಮಾನಿಗಳು. ಮತ್ತೆ ಕೆಲವು ಅಭಿಮಾನಿಗಳು ಅವರ ಪೇಂಟಿಂಗ್​​​​ ಬರೆಯುವ ಮೂಲಕ ಅಭಿಮಾನ ತೋರಿಸುತ್ತಾರೆ. ಮಂಡ್ಯದ ಚಿತ್ರಕಲೆ ಶಿಕ್ಷಕರೊಬ್ಬರೂ ಕೂಡಾ ಅದೇ ರೀತಿ ಡಾ. ರಾಜ್​ಕುಮಾರ್ ಅವರ ಚಿತ್ರಗಳನ್ನು ಬಿಡಿಸಿದ್ದಾರೆ. ಆದರೆ ಇವರದ್ದು ವಿಭಿನ್ನ ಕಲೆ. ಡಾ. ರಾಜ್​ಕುಮಾರ್​ ನಟಿಸಿರುವ ಒಟ್ಟು ಚಿತ್ರಗಳ ಸಂಖ್ಯೆ 206. ಈ ಅಭಿಮಾನಿ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಹಿಡಿದು ಡಾ. ರಾಜ್ ಕೊನೆಯ ಚಿತ್ರ ‘ಶಬ್ಧವೇದಿ’ ವರೆಗೂ ಪ್ರತಿ ಸಿನಿಮಾಗಳ ಚಿತ್ರ ಬಿಡಿಸಿದ್ದಾರೆ.

Advertisement

Advertisement

ಅಂದ ಹಾಗೆ ಈ ಅಭಿಮಾನಿ ಹೆಸರು ನರಸಿಂಹಾಚಾರ್​​​​​​. ಮಂಡ್ಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲೆ ಶಿಕ್ಷಕರು. ಇವರು ಚಿಕ್ಕಂದಿನಿಂದ ಡಾ. ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ. ತಾವು ಆರಾಧಿಸುವ ವರನಟನ ಚಿತ್ರ ಬರೆಯಲು ನಿರ್ಧರಿಸಿದ್ದೇ ತಡ ಅದರಲ್ಲೇ ಸಂಪೂರ್ಣ ತೊಡಗಿಸಿಕೊಂಡರು. ಫೇಸ್​​ಬುಕ್, ಗೂಗಲ್, ಯೂಟ್ಯೂಬ್​​ನಲ್ಲಿ ಹುಡುಕಿ ನಟಸಾರ್ವಭೌಮ ನಟಿಸಿರುವ ಪ್ರತಿ ಚಿತ್ರದ ಪೋಸ್ಟರ್ ಚಿತ್ರ ಬಿಡಿಸಿದ್ದಾರೆ. ಇದರಲ್ಲಿ ಕೆಲವೊಂದು ಕಪ್ಪು-ಬಿಳುಪು ಚಿತ್ರಗಳಾದರೆ ಮತ್ತೆ ಕೆಲವು ಬಣ್ಣದ ಚಿತ್ರಗಳು.

Advertisement

ಕಳೆದ ವರ್ಷ ಏಪ್ರಿಲ್​​​ನಲ್ಲಿ ಈ ಚಿತ್ರಕಲೆ ಆರಂಭಿಸಿ ಈ ವರ್ಷ ಸೆಪ್ಟೆಂಬರ್​​​ನಲ್ಲಿ ಮುಗಿಸಿದ್ದಾರೆ. ಒಂದು ಚಿತ್ರ ಬರೆಯಲು 5 ಗಂಟೆ ಸಮಯ ಬೇಕಾಗಿತ್ತಂತೆ. ಚಿತ್ರ ಬರೆಯುತ್ತಾ ಬೆರಳು ಗಾಯವಾದರೂ ಬರೆಯುವುದನ್ನು ಮಾತ್ರ ಬಿಟ್ಟಿಲ್ಲ. ಎಷ್ಟೋ ಬಾರಿ ನರಸಿಂಹಾಚಾರ್ ಅವರ ಪತ್ನಿ ಚಿತ್ರ ಬಿಡಿಸುವುದನ್ನು ನಿಲ್ಲಿಸಿ ಎಂದರೂ ನರಸಿಂಹಾಚಾರ್ ತಮ್ಮ ಪ್ರಯತ್ನವನ್ನು ಬಿಟ್ಟಿಲ್ಲ. ತಾವು ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿದ್ದಾರೆ ನರಸಿಂಹಾಚಾರ್. ಮುಂದಿನ ವರ್ಷ ಏಪ್ರಿಲ್ 24 ರಂದು ಮಂಡ್ಯದಲ್ಲಿ ಒಂದು ಕಾರ್ಯಕ್ರಮ ಮಾಡಿ ಆಗ ಅಣ್ಣಾವ್ರ ಈ ಸುಂದರ ಚಿತ್ರಗಳನ್ನು ಪ್ರದರ್ಶಿಸಲಿದ್ದೇನೆ ಎನ್ನುತ್ತಾರೆ ನರಸಿಂಹಾಚಾರ್. ಆ ದಿನ ಡಾ. ರಾಜ್​ಕುಮಾರ್ ಅವರ ಹುಟ್ಟುಹಬ್ಬ.

Advertisement

ಅಂದುಕೊಂಡಿದ್ದನ್ನು ಸಾಧಿಸಿದ ಸಂತೋಷವಿದೆ. ಈ ಚಿತ್ರಗಳನ್ನು ಬರೆಯಲು ಹೆಚ್ಚೇನೂ ಖರ್ಚಾಗಿಲ್ಲ. ಸಮಯ ಹಾಗೂ ಸುಮಾರು 10 ಸಾವಿರ ರೂಪಾಯಿಗಳ ಸಾಮಗ್ರಿಗಳು ಖರ್ಚಾಗಿರಬಹುದು ಎನ್ನುತ್ತಾರೆ ನರಸಿಂಹಾಚಾರ್. ಅಭಿಮಾನಿಯ ಈ ವಿಭಿನ್ನ ಚಿತ್ರಕಲೆಯನ್ನು ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement
Share this on...