ವಾಲ್ಮೀಕಿ ಮಹರ್ಷಿಯ ರಾಮಾಯಣ ಮಹಾಕಾವ್ಯದ ಸಂದೇಶಗಳನ್ನು ಸ್ಮರಿಸುತ್ತ

in ಕನ್ನಡ ಮಾಹಿತಿ 523 views

ವಾಲ್ಮೀಕಿ ಜಯಂತಿಯ ಪ್ರಯುಕ್ತ ಈ ಲೇಖನ

Advertisement

ಭಾರತ ಎಂಬ ಪುಣ್ಯ ಭೂಮಿಯಲ್ಲಿ ಅನೇಕ ಸಾಧು ಸಂತರು ದಾಸರು ಶರಣರು ಅತ್ಯಮೂಲ್ಯವಾದ ಜೀವನದ ಮೌಲ್ಯಗಳನ್ನು ಇಡೀ ಜಗತ್ತಿಗೆ ಕೊಡುಗೆಯಾಗಿ ನೀಡಿ ಹೋಗಿದ್ದಾರೆ. ಅಂತಹ ಮಹಾಪುರುಷರನ್ನು ಸ್ಮರಿಸುವ ಮೂಲಕ ಅವರ ಸಂದೇಶಗಳನ್ನು ಮೌಲ್ಯಗಳನ್ನು ಆದರ್ಶಗಳನ್ನು ಮೈಗೂಡಿಸಿಕೊಂಡು ಮನುಷ್ಯ ಜೀವನದ ಸಾರ್ಥಕತೆಯನ್ನು ಸಾಧಿಸಬೇಕಿದೆ.ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ವಿಶೇಷ ಸ್ಥಾನವನ್ನು ಒದಗಿಸಿದ ಕೀರ್ತಿ ವಾಲ್ಮೀಕಿ ಮಹರ್ಷಿ ಅವರಿಗೆ ಸಲ್ಲುತ್ತದೆ.ವಾಲ್ಮೀಕಿಯು ಸರ್ವತೋಮುಖ ಚಿಂತಕ ಬಹು ವೈವಿಧ್ಯಮಯವಾಗಿ ರಾಮಾಯಣ ಎಂಬ ಮಹಾಕಾವ್ಯದ ರಚನಕಾರರಾಗಿ ಜೀವನದ ಸರ್ವ ಶ್ರೇಷ್ಠ ಮೌಲ್ಯಗಳನ್ನು ಸರ್ವಕಾಲಕ್ಕೂ ಸಾರುವ ವಾಲ್ಮೀಕಿಯವರ ಮಹಾಕಾವ್ಯ ಅನೇಕ ಸಾಧಕರಿಗೆ ಮಾರ್ಗಸೂಚಿಯಾಗಿದೆ.ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿರುವಾಗ ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ ಯವರು ರಾಮಾಯಣ ಮಹಾಭಾರತದ ಸಂದೇಶಗಳನ್ನು ಬೋಧಿಸುತ್ತಿದ್ದರು ಆಗ ರಾಮಾಯಣದಲ್ಲಿ ಬರುವ ಸಂದೇಶಗಳು ಆದರ್ಶಗಳು ಮೌಲ್ಯಗಳ ಪ್ರಭಾವದಿಂದ ವಿವೇಕಾನಂದರೂ ಶ್ರೀ ರಾಮನ ಪ್ರತಿಮೆಯನ್ನು ಪೂಜಿಸುತ್ತಾ ಉತ್ತಮ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇಡೀ ಪ್ರಪಂಚಕ್ಕೆ ಭಾರತೀಯ ಸಂಸ್ಕೃತಿ ಧರ್ಮ ಹಾಗೂ ಭಾರತೀಯ ಮಹಾಕಾವ್ಯಗಳನ್ನು ಪರಿಚಯಿಸಿಕೊಟ್ಟ ವೀರ ಸನ್ಯಾಸಿಗಳಾದರು.

Advertisement

Advertisement

ಹೀಗೆ ಅನೇಕ ಮಹನೀಯರಿಗೆ ರಾಮಾಯಣದ ಮೌಲ್ಯಗಳು ಸಾಧನೆ ಸಿದ್ಧಿಗೆ ದಾರಿ ದೀಪವಾಗಿವೆ.ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ ಬುದ್ಧಿ ಮನಸ್ಸು ಕ್ರಿಯೆ ಕರ್ಮಗಳನ್ನು ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗದರ್ಶಿಯಂತಿದೆ ಇಂತಹ ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾಕಾವ್ಯವನ್ನು ರಚನೆಮಾಡಿದ ವಾಲ್ಮೀಕಿ ಮಹರ್ಷಿಯವರು ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರ, ವಾಲ್ಮೀಕಿಯ ಮೂಲ ಹೆಸರು ರತ್ನಾಕರ.ತನ್ನ ಜೀವನವನ್ನು ನಡೆಸಲು ಅಸಮರ್ಥನಾಗಿ ಕಳ್ಳನಾಗಿ ಜನರನ್ನು ಪೀಡಿಸುತ್ತಿದ್ದಾಗ ಒಮ್ಮೆ ನಾರದ ಮಹರ್ಷಿಗಳು ಭೇಟಿಯಾದರು ಆಗ ರತ್ನಾಕರನಿಗೆ “ನಿನ್ನ ಪಾಪವನ್ನೆಲ್ಲಾ ನಿನ್ನ ಕುಟುಂಬದವರು ಹಂಚಿಕೊಳ್ಳುತ್ತಾರೋ ಹೋಗಿ ವಿಚಾರಿಸು” ಎಂದಾಗ ಕುಟುಂಬದಲ್ಲಿ ಯಾರೊಬ್ಬರೂ ರತ್ನಾಕರನ ಪಾಪವನ್ನು ಹಂಚಿಕೊಳ್ಳಲು ತಯಾರಿರಲಿಲ್ಲ ಇದರಿಂದ ವಿಚಲಿತನಾಗಿ ಬಂದು ನಾರದರಲ್ಲಿ ಪರಿಹಾರ ತಿಳಿಸಿ ಎಂದು ಕೇಳಿದಾಗ ನಾರದರು ರಾಮನಾಮವನ್ನು ನಿರಂತರವಾಗಿ ಜಪಿಸುತ್ತ ತಪಸ್ಸು ಮಾಡು ಎಂದು ಸೂಚಿಸಿದರಂತೆ .

Advertisement

ಆಗ ರತ್ನಾಕರನು ನಿರಂತರ ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಬೆಳೆಯಿತು.ಆಗ ನಾರದರು ಕಾಡಿನಲ್ಲಿ ಅದೇ ದಾರಿಯಲ್ಲಿ ಸಾಗುತ್ತಿರಲು ರತ್ನಾಕರನನ್ನು ನೋಡಿ ಭಕ್ತಿಗೆ ಮೆಚ್ಚಿ ಆಶೀರ್ವದಿಸಿ ರತ್ನಾಕರ ನೀನೀಗ ಬ್ರಹ್ಮರ್ಷಿ ನಿನ್ನ ಸುತ್ತ ಹುತ್ತ (ವಾಲ್ಮೀಕ) ಬೆಳೆದಿರುವುದರಿಂದ ಮುಂದೆ ನೀನು “ವಾಲ್ಮೀಕಿ”ಯೆಂದು ಪ್ರಸಿದ್ಧನಾಗು ಎಂದು ಆಶೀರ್ವದಿಸಿದರಂತೆ.

ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಪ್ರತಿಯೊಬ್ಬರಿಗೂ ಧರ್ಮಮಾರ್ಗದಲ್ಲಿ ಧಾರ್ಮಿಕ ಸಾಮಾಜಿಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿದೀಪವಾಗಿ ಜ್ಞಾನದ ದಾರಿ ತೋರಿಸುತ್ತದೆ.ಈ ಕಾವ್ಯವು ಭಾರತೀಯ ಸಂಸ್ಕೃತಿ ಪರಮೋಚ್ಚ ಮೌಲ್ಯಗಳನ್ನು ಪಾತ್ರಗಳು ಹಾಗೂ ಸಂದರ್ಭ ಸನ್ನಿವೇಶಗಳ ಮೂಲಕ ಸಾಕಾರಗೊಳಿಸುವ ಸಮಕಾಲೀನ ಭಾರತೀಯ ಬದುಕಿಗೆ ಮಾತ್ರವಲ್ಲದೆ ಒಟ್ಟಾರೆ ಭಾರತೀಯ ಮನೋಧರ್ಮಕ್ಕೆ ಅದರ ಸುಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ.ಕುಟುಂಬ ವ್ಯವಸ್ಥೆ ಸಮಾಜವೊಂದರ ಮೂಲಘಟಕ .ರಾಮಾಯಣ ಆರಂಭವಾಗುವುದೇ ಕುಟುಂಬದಿಂದ ಅದರಲ್ಲೂ ಅವಿಭಕ್ತ ಕುಟುಂಬದಿಂದ ರಾಜ ಯುವರಾಜ ಮಂತ್ರಿ ರಾಜಪುರೋಹಿತ ರಾಜಸೇವಕ ಸೇನಾನಿ ಮಾತ್ರವಲ್ಲ ತಂದೆ ಮಗ ಸಹೋದರ ತಾಯಿ ಹೆಂಡತಿ ಗೆಳೆಯ ಇತ್ಯಾದಿ ಆತ್ಮೀಯ ಮಾನವೀಯ ಕೌಟುಂಬಿಕ ವ್ಯಕ್ತಿ ಸಂಬಂಧಗಳ ಬಹುಮುಖಿ ಆಯಾಮಗಳನ್ನು ಈ ಕಾವ್ಯವು ತಿಳಿಸುತ್ತದೆ.

ಭಾರತೀಯ ಸಂಸ್ಕೃತಿಯ ಅನನ್ಯತೆ ಜೀವ ಘಟಕವಾದ ಕುಟುಂಬದೊಳಗಿನ ಒಡನಾಟಗಳು ಮತ್ತು ಬಿಕ್ಕಟ್ಟುಗಳು ಯಾವ ಬಗೆಯಲ್ಲಿವೆ ಎಂಬುದಕ್ಕೆ ರಾಮಾಯಣವೇ ಸಾಕ್ಷಿಯಾಗಿದೆ ಕುಟುಂಬದ ಸದಸ್ಯರ ನಡುವೆ ಬಿಕ್ಕಟ್ಟುಗಳು ಎದುರಾದಾಗ ಒಡಕು ಉಂಟಾಗುವ ಸಹಜತೆಗಳನ್ನು ಇಲ್ಲಿ ಬಿಂಬಿಸಲಾಗಿದೆ.ಸತಿ ಪತಿಗೆ, ಪತಿ ಸತಿಗೆ ,ಮಕ್ಕಳು ತಂದೆ ತಾಯಿಗೆ, ಮಕ್ಕಳಿಗೆ ಅಣ್ಣತಮ್ಮಂದಿರ ರಿಗೆ ಹೀಗೆ ಅವರದೇ ಆದಂತಹ ಸ್ಥಾನಮಾನಗಳನ್ನು ರಾಮಾಯಣ ಬಹಳ ನಿರ್ದಿಷ್ಟವಾಗಿ ಗುರುತಿಸಿದೆ. ಉದಾಹರಣೆಗೆ ರಾಮ ಲಕ್ಷ್ಮಣರ ಅನ್ಯೂನ್ಯತೆ ಸಾಕ್ಷಿಯಾಗಿದೆ.

ಒಬ್ಬ ರಾಜ ಮತ್ತು ಆತನ ಮೌಲ್ಯ ಪ್ರಜೆಗಳಿಗಾಗಿ ಇರಬೇಕೆ ಹೊರತು ತನ್ನ ವೈಯಕ್ತಿಕ ಆಶೆ ಆಮಿಷ ಗಾಗಿ ಅಲ್ಲ ಎಂಬ ರಾಜಕೀಯ ನೀತಿ ಇಲ್ಲಿ ಕಂಡುಬರುತ್ತದೆ.ದಶರಥನ ನಿಲುವು ರಾಮನ ಪಾಲನೆ ಭರತನ ವೇದನೆ ರಾವಣನ ಆಕ್ರಮಣ ವಾಲಿಸುಗ್ರೀವರ ಕಥನ ಹನುಮನ ಸಹಕಾರ ಹೀಗೆ ಎಲ್ಲಾ ಸಂದರ್ಭಗಳನ್ನು ರಾಮಾಯಣ ಮಹಾ ಕಾವ್ಯದಲ್ಲಿ ಕಾಣುತ್ತೇವೆ.ಮಹರ್ಷಿ ವಾಲ್ಮೀಕಿಯವರು ಮಹಾಕಾವ್ಯದಲ್ಲಿ ಪ್ರಕೃತಿ ಮೌಲ್ಯವನ್ನು ಬಹಳಷ್ಟು ಮನಮೋಹಕವಾಗಿ ಚಿತ್ರಿಸಿದ್ದಾರೆ.ರಾಮನಿಗೆ ಬೆಂಬಲವಾಗಿ ನಿಲ್ಲುವ ಕಪಿಸೈನ್ಯ ಸೀತೆಯನ್ನು ರಾವಣನಿಂದ ಬಿಡಿಸಲು ಹೋರಾಡುವ ಜಟಾಯು ಅದರ ಸಹೋದರ ಸಂಪಾತಿ ಹೀಗೆ ಸಕಲ ಜೀವ ಸಂಕುಲವು ಪ್ರಕೃತಿ ಸಮಸ್ತವೂ ಅನನ್ಯವಾದ ಜೀವಪರತೆ ಯಿಂದ ಸುಳಿದುಹೋಗುತ್ತವೆ. ಹದಿನಾಲ್ಕು ವರ್ಷಗಳ ವನವಾಸದ ಅವಧಿಯಲ್ಲಿ ರಾಮ ಸೀತೆ ಲಕ್ಷ್ಮಣರಿಗೆ ಪ್ರಕೃತಿಯೇ ಜೊತೆಯಾಗಿ, ತಾಯಿಯ ಮಡಿಲನ್ನು ಬಿಟ್ಟು ಅವರು ಸೇರಿದ್ದು ಪ್ರಕೃತಿ ಮಾತೆಯ ಮಡಿಲನ್ನು ಪ್ರಕೃತಿಯೊಂದಿಗೆ ಅವರು ಹೊಂದಿರುವ ಭಾವನಾತ್ಮಕ ಬೆಸುಗೆ ಮುಂತಾದ ಅಂಶಗಳು ಈ ಮಹಾಕಾವ್ಯದಲ್ಲಿ ಬಿಂಬಿತವಾಗಿದೆ.ಹೀಗೆ ವಾಲ್ಮೀಕಿ ರಚನೆಯ ರಾಮಾಯಣ ಮಹಾಕಾವ್ಯದಲ್ಲಿ ಕಾವ್ಯದುದ್ದಕ್ಕೂ ನೈತಿಕ ಮೌಲ್ಯವು ಪ್ರಧಾನವಾಗಿ ಬಿಂಬಿತವಾಗಿದೆ. ಇಂತಹ ಮಹಾ ಕಾವ್ಯ ನೀಡುವ ಸಂದೇಶಗಳು ಸರ್ವರಿಗೂ ಸರ್ವಕಾಲಕ್ಕೂ ಜೀವನದ ಮಾರ್ಗದರ್ಶಿಯಾಗಿವೆ.


ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು ಹಾಗೂ ಲೇಖಕರು
ಎಫ್ ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ.

Advertisement
Share this on...