“ಮೇ 8 ವಿಶ್ವ ರೆಡ್ ಕ್ರಾಸ್ ದಿನ” ಯಾಕೆ ಗೊತ್ತಾ..?

in ಕನ್ನಡ ಆರೋಗ್ಯ 82 views

ಬೇದ ಕಾಟ ಬದುಕೆಲ್ಲ ಅದಕ್ಕಾಗಿ ಇದಕ್ಕಾಗಿ ಮತ್ತೊಂದಕ್ಕಾಗಿ ಬಡಿದಾಡುವ ಮನುಷ್ಯ ಜೀವನ ಒಂದಿಷ್ಟು ಮಾನವೀಯ ಗುಣಗಳನ್ನು ಬೆಳೆಸಿಕೊಂಡರೆ ತಾನು ಬದುಕಿ ಮತ್ತೊಬ್ಬರನ್ನು ಬದುಕಲು ಬಿಡಲು ಸಹಾಯಕವಾಗುತ್ತದೆ.
“ನಮ್ಮಂತೆ ಪರರು” ಎಂಬ ಭಾವನೆ ನಮ್ಮಲ್ಲಿದ್ದಾಗ ಇನ್ನೊಬ್ಬರಿಗೆ ಏನಾದರೂ ಕಷ್ಟ ಕಾರ್ಪಣ್ಯಗಳು ಬಂದಾಗ ಸ್ಪಂದಿಸುವ ಮನೋಭಾವನೆಗಳು ಹಾಗೂ ಪರೋಪಕಾರ ಗುಣ ತಾನಾಗಿಯೇ ನಮ್ಮಲ್ಲಿ ಬೆಳೆದು ಬರುತ್ತದೆ, ಇಂತಹ ಮಾನವೀಯ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿ “ಜಿನ್ ಹೆನ್ರಿ ದ್ಯುನ”(ಡ್ಯುನಾಂಟ್). ಇವರು ಪ್ರಥಮ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರವನ್ನು ಪಡೆದ ಮಹಾನುಭಾವಿಗಳು, ಇವರು 1828 ರ ಮೇ 8 ರಂದು ಜಿನೇವಾ ನಗರದಲ್ಲಿ ಜನಿಸಿದರು. ಇವರ ಜನ್ಮದಿನವಾದ ಮೇ 8 ವಿಶ್ವ ರೆಡ್ ಕ್ರಾಸ್ ದಿನವಾಗಿ ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ.

Advertisement

 

Advertisement

Advertisement

ಬುದ್ಧಿಜೀವಿಗಳು ಆದ ಇವರು ಅಪಾರ ಜ್ಞಾನ ಪಾಂಡಿತ್ಯವನ್ನು ಪಡೆದು ಸ್ವಂತ ಉದ್ಯಮಿಯಾದರು, ಬಹುಮುಖ ವ್ಯಕ್ತಿತ್ವದ ಇವರಲ್ಲಿ ಬಾಲ್ಯದಿಂದಲೂ ಪರೋಪಕಾರ ಬುದ್ಧಿ, ಸಹಕಾರ ಕರುಣೆ ಹಾಗೂ ಏಕತೆಯ ಭಾವನೆಗಳು ಬೆಳೆದು ಬಂದಿದ್ದವು. 1859 ಜೂನ್ ತಿಂಗಳಲ್ಲಿ ತಮ್ಮ ಉದ್ಯಮದ ಅಭಿವೃದ್ಧಿಗಾಗಿ ಪ್ರವಾಸ ಕೈಗೊಂಡರು,ಆಗ ಇಟಲಿಯ ಸೊಲಪರಿನೊ ಪಟ್ಟಣಕ್ಕೆ ಬಂದ ಫ್ರಾನ್ಸ್ ದೇಶದ ಚಕ್ರವರ್ತಿ ಮೂರನೇ ನೆಪೋಲಿಯನ್ ನನ್ನು ಭೇಟಿ ಮಾಡುವ ಉದ್ದೇಶವಿಟ್ಟುಕೊಂಡಿದ್ದರು ಆದರೆ ಅಲ್ಲಿ ಇಟಲಿಯ ಸ್ವಾತಂತ್ರ್ಯಕ್ಕಾಗಿ ಆಸ್ಟ್ರಿಯನ್ ರಿಗೂ ಫ್ರೆಂಚ್ ಮತ್ತು ಸಾರ್ಡಿಯನ್ ರಿಗೂ ಯುದ್ಧ ನಡೆದು ಊರ ತುಂಬೆಲ್ಲಾ ಎಲ್ಲೆಲ್ಲೂ ಮೈತುಂಬಾ ಗಾಯಾಳುಗಳಾದ ಸೈನಿಕರು ಇವರ ಕಣ್ಮುಂದೆ ಗೋಚರಿಸಿದರು,ಆ ದಿನದ ಅಲ್ಲಿಯ ರುದ್ರನರ್ತನದ ದೃಶ್ಯ ಇವರ ಮನ ಕಲುಕುವಂತಿತ್ತು ಆಗ ಆ ಎಲ್ಲಾ ಗಾಯಾಳು ಸೈನಿಕರ ಮೇಲೆ ಕರುಣೆ ತೋರಿದ ಇವರು ಅವರೆಲ್ಲರ ಶುಶ್ರೂಷೆ ಮಾಡಿ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

Advertisement

 

ಆ ಭೀಕರ ಯುದ್ಧದಲ್ಲಿ ಯೋಧರು ನಾಗರಿಕರು ಸುಮಾರು ಸಂಖ್ಯೆಯಲ್ಲಿ ಗಾಯಾಳುಗಳಾದ ದೃಶ್ಯ ಘನ ಘೋರವಾಗಿತ್ತು, ಈ ಎಲ್ಲ ಸನ್ನಿವೇಶವನ್ನು ಗಮನಿಸಿದ ಹೆನ್ರಿ ದ್ಯುನ್ ಭಾವುಕರಾಗಿ ಈ ತರಹದ ಪ್ರಪಂಚದಲ್ಲಿ ಭೀಕರ ಯುದ್ಧಗಳು ಜರುಗಿದಾಗ ಸಾವು ನೋವು ಸಂಕಟ ಸಾಮಾನ್ಯವಾಗಿರುತ್ತದೆ ಇಂಥವರ ಸಹಾಯ ಸಹಕಾರಕ್ಕೆ ಬರುವವರು ಯಾರು? ಇವರ ಉಪಚಾರ ಮಾಡುವವರು ಯಾರು? ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಂಡು ಇಂಥವರಿಗೆಂದೇ ಸಹಾಯ ಸಹಕಾರ ನೀಡಲು ಒಂದು ಸಂಸ್ಥೆ ಇದ್ದರೆ ಉತ್ತಮ ಎಂದು ಆಲೋಚಿಸಿ 1864 ರಲ್ಲಿ “ರೆಡ್ ಕ್ರಾಸ್ ಸೇವಾ ಸಂಸ್ಥೆ”ಯನ್ನು ಸ್ಥಾಪಿಸುತ್ತಾರೆ. ಹೆನ್ರಿ ದ್ಯುನ್ ಅವರು ತಾವು ಉದ್ಯಮಿಯಾಗಿ ಗಳಿಸಿದ ಎಲ್ಲ ಸಂಪತ್ತನ್ನು ಈ ಸಂಸ್ಥೆಗೆ ಕಾಣಿಕೆಯಾಗಿ ನೀಡುತ್ತಾರೆ, ಮುಂದೆ ಒಂದೇ ವರ್ಷದಲ್ಲಿ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿಯೂ ಈ ತರಹದ ರೆಡ್ ಕ್ರಾಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದವು.

 

ರೆಡ್ ಕ್ರಾಸ್ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಯಾವುದೇ ರಾಷ್ಟ್ರಗಳಲ್ಲಿ ನೈಸರ್ಗಿಕ ಪ್ರಕೋಪಗಳು ಸಂಭವಿಸಿದಾಗ ಹಾಗೂ ಯಾವುದಾದರೂ ಹೋರಾಟದ ಸಂದರ್ಭದಲ್ಲಿ ಸಾವು ನೋವುಗಳು ನಡೆದಂತಹ ಸಂದರ್ಭದಲ್ಲಿ ಈ ಸಂಸ್ಥೆಯು ಸ್ವಯಂ ಪ್ರೇರಿತವಾಗಿ ಅಂತವರ ನೆರವಿಗೆ ಬರುತ್ತದೆ. ವಿಶೇಷ ಸಂದರ್ಭಗಳಲ್ಲಿ ರಕ್ತದಾನ ಹಾಗೂ ಪ್ರಥಮ ಚಿಕಿತ್ಸೆಗಳನ್ನು ಈ ಸಂಸ್ಥೆ ಕೈಗೊಳ್ಳುತ್ತದೆ.ಹೀಗೆ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಮೂಲ ರೂವಾರಿಯಾದ ಹೆನ್ರಿ ದ್ಯುನ್ ಅವರು ಮಾನವೀಯ ಸೇವಾ ಕಾರ್ಯಗಳಲ್ಲಿ ತಮ್ಮ ಜೀವನವನ್ನು ತಾವು ಸಂಪೂರ್ಣ ತೊಡಗಿಸಿಕೊಂಡರು.ನಂತರ ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ಕೆಲವೊಂದು ಸಂಕಷ್ಟಗಳನ್ನು ಸಹ ಅನುಭವಿಸಬೇಕಾಯಿತು.ಕೊನೆಗೆ ತಮಗೆ ಬಂದ ನೊಬೆಲ್ ಪ್ರಶಸ್ತಿಯ ದೊಡ್ಡ ಮೊತ್ತವನ್ನು ಸಹ ಸಾಮಾಜಿಕ ಕಾರ್ಯಕ್ಕೆ ದಾನ ಮಾಡಿದರು.
ಇಂತಹ ಮಹಾನ್ ವ್ಯಕ್ತಿ ಎಷ್ಟು ನೋವು ಸಂಕಟಗಳನ್ನು ಸಾಮಾಜಿಕ ಬದುಕಿನಲ್ಲಿ ಎದುರಿಸಿದರೂ ಕೂಡ ಧೃತಿಗೆಡದೆ ಮಾನವೀಯ ಮೌಲ್ಯಗಳಿಂದ ಮನುಕುಲದ ಉದ್ಧಾರಕ್ಕಾಗಿ ಹೋರಾಡಿದರು.ಇಂತಹ ಮಹಾನ್ ವ್ಯಕ್ತಿಯ ನೆನೆಯುವುದು, ಅವರು ಸ್ಥಾಪಿಸಿದ ಸಂಸ್ಥೆ ,ಆ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಸ್ಮರಿಸುವ ದಿನವೇ “ವಿಶ್ವ ರೆಡ್ ಕ್ರಾಸ್ ದಿನ”.

 

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ :ಗದಗ .

Advertisement
Share this on...