ಖಡಕ್ ಐಎಎಸ್​​ ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಬಗ್ಗೆ ನಿಮಗೆಷ್ಟು ಗೊತ್ತು…?

in ಕನ್ನಡ ಮಾಹಿತಿ 903 views

ರೋಹಿಣಿ ಸಿಂಧೂರಿ, ಇವರು ಐಎಎಸ್​​ ಅಧಿಕಾರಿ ಎಂಬುದನ್ನು ಬಿಟ್ಟರೆ ಬಹಳಷ್ಟು ಜನರಿಗೆ ಇವರ ಬಗ್ಗೆ ಗೊತ್ತಿಲ್ಲ. ಪೋಟೋ ನೋಡಿದ ಕೂಡಲೇ ಈಕೆ ಸಿನಿಮಾ ನಟಿ ಇರಬಹುದು ಎಂದುಕೊಳ್ಳುವವರೇ ಹೆಚ್ಚು. ಏಕೆಂದರೆ ಅವರು ಅಷ್ಟು ಸುಂದರವಾಗಿದ್ದಾರೆ. ಆದರೆ ಇವರು ಸಿನಿಮಾ ನಟಿ ಅಲ್ಲ, ಸದ್ಯಕ್ಕೆ ಹಾಸನದ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಹಿಣಿ ಸಿಂಧೂರಿ ಕರ್ನಾಟಕದವರು ಎಂದು ಎಷ್ಟೋ ಜನರು ತಪ್ಪು ತಿಳಿದಿದ್ದಾರೆ. ಆದರೆ ಅವರು ಮೂಲತ: ಆಂಧ್ರಪ್ರದೇಶಕ್ಕೆ ಸೇರಿದವರು. ಅವರ ಪೂರ್ತಿ ಹೆಸರು ರೋಹಿಣಿ ಸಿಂಧೂರಿ ದಾಸರಿ. ಈಗ ಅವರಿಗೆ 35 ವರ್ಷಗಳಷ್ಟೇ. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡಿರುವ ರೋಹಿಣಿ ಸಿಂಧೂರಿ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೆಮಿಕಲ್ ಇಂಜಿನಿಯರಿಂಗ್​​ನಲ್ಲಿ ಬಿ.ಟೆಕ್ ಮಾಡಿದ ರೋಹಿಣಿ ಸಿಂಧೂರಿ 2009 ಬ್ಯಾಚ್​​ನಲ್ಲಿ ಐಎಎಸ್ ಪಾಸ್ ಮಾಡಿದರು. 2011 ರಲ್ಲಿ ಮೊದಲ ಬಾರಿಗೆ ತುಮಕೂರಿನಲ್ಲಿ ಸಹಾಯಕ ಆಯುಕ್ತರಾಗಿ ನೇಮಕವಾದರು. ರೋಹಿಣಿ ಅವರು ತೆಲುಗು ಸೇರಿದಂತೆ ಇಂಗ್ಲಿಷ್, ತಮಿಳು ಹಾಗೂ ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ.

Advertisement

 

Advertisement

Advertisement

 

Advertisement

ಮಂಡ್ಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ತಾವೇ ಸ್ವತ: ಹಳ್ಳಿ ಹಳ್ಳಿಗಳಿಗೂ ತೆರಳಿ, ಪ್ರತಿ ಮನೆಗಳ ಬಳಿ ತೆರಳಿ ಜನರಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿ ಪ್ರತಿ ಮನೆಯಲ್ಲೂ ಒಂದೊಂದು ಶೌಚಾಲಯ ಕಟ್ಟುವ ಮೂಲಕ ಬಯಲು ಮುಕ್ತ ಶೌಚಾಲಯಕ್ಕೆ ಆದ್ಯತೆ ನೀಡಿದ್ದರು. ಇವರ ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿತ್ತು. ಯಾವ ರಾಜಕೀಯ ಪಿತೂರಿಗೂ ಹೆದರದೆ ತಾವು ಕೈಗೊಂಡ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಖಡಕ್ ಅಧಿಕಾರಿ ಎನಿಸಿಕೊಂಡಿದ್ದಾರೆ ರೋಹಿಣಿ. ಈ ಮೂಲಕ ಜಿಲ್ಲಾಧಿಕಾರಿ ಎಂದರೆ ರೋಹಿಣಿ ಸಿಂಧೂರಿ ರೀತಿ ಇರಬೇಕು ಎಂದು ಜನರು ಮಾತನಾಡಿಕೊಂಡಿದ್ದೂ ಉಂಟು.

 

ಇನ್ನು ಸಿನಿಮಾದಲ್ಲಿ ತೋರಿಸುವಂತೆ ರೋಹಿಣಿ ಸಿಂಧೂರಿ ಕೂಡಾ ಭ್ರಷ್ಟಾಚಾರ ತಡೆದಿದ್ದಕ್ಕೆ ರಾಜಕೀಯ ನಾಯಕರ ಪ್ರಭಾವದಿಂದ ವರ್ಗಾವಣೆಗೆ ಒಳಗಾಗಿದ್ದಾರೆ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಲ್ಲಿ ಇರುವಾಗ ಕಾರ್ಮಿಕರಿಗೆ ವಿವಿಧ ಸವಲತ್ತುಗಳನ್ನು ಒದಗಿಸಲು ಮಂಡಳಿಗೆ ಬರುವ ಹಣ ದುರ್ಬಳಕೆಯಾಗುತ್ತಿದ್ದನ್ನು ರೋಹಿಣಿ ಅವರು ತಡೆದಿದ್ದರು. ಇದಾದ ನಂತರ ಅವರನ್ನು ಆ ಸ್ಥಾನದಿಂದ ತೆಗೆಯಲಾಗಿತ್ತು, ಅಲ್ಲದೆ ಕೆಲವು ದಿನಗಳ ಕಾಲ ಯಾವುದೇ ಪೋಸ್ಟ್ ನೀಡಿರಲಿಲ್ಲ, ಇದರಿಂದ ರಾಜ್ಯಾದ್ಯಂತ ಪ್ರತಿಭಟನೆ ಕೂಡಾ ನಡೆದಿತ್ತು.

 

 

ಅಷ್ಟೇ ಅಲ್ಲ 2017 ರಲ್ಲಿ ಹಾಸನದ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕವಾದಾಗ ಅಲ್ಲಿವರೆಗೂ ಹಾಸನ ಜಿಲ್ಲೆ ಎಸ್​​ಎಸ್​​​ಎಲ್​​ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ 31ನೇ ಸ್ಥಾನದಲ್ಲಿತ್ತು. ಆದರೆ ರೋಹಿಣಿ ಅವರು ಅಧಿಕಾರ ವಹಿಸಿಕೊಂಡಾಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಪೋಷಕರೊಂದಿಗೆ ಸಭೆ ನಡೆಸಿ ಸತತ ಪ್ರಯತ್ನ ಮಾಡಿದ ಬಳಿಕ ಕಳೆದ ವರ್ಷ ಹಾಸನ ಎಸ್​ಎಸ್​​​ಎಲ್​​ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ. ಇದು ನಿಜಕ್ಕೂ ಶ್ಲಾಘನೀಯ ಕೆಲಸ. ಕೇವಲ 2 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಬದಲಾವಣೆ ಆಗಿದೆ ಎಂದರೆ ರೋಹಿಣಿ ಅವರ ಕಾರ್ಯವೈಖರಿ ಹೇಗಿದೆ ನೀವೇ ಊಹಿಸಿ.

 

ಇನ್ನು ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇವರ ಪತಿ ಸುಧೀರ್ ರೆಡ್ಡಿ ಸಾಫ್ಟ್​​ವೇರ್ ಎಂಜಿನಿಯರ್. ಈ ದಂಪತಿಗೆ ಒಂದು ಗಂಡು, ಹೆಣ್ಣು ಮಕ್ಕಳಿದ್ದಾರೆ. ರೋಹಿಣಿ ಅವರಿಗೆ ಪ್ರಿಯಾಂಕ ರೆಡ್ಡಿ ಎಂಬ ತಂಗಿ ಕೂಡಾ ಇದ್ದು ಇವರು ಬೆಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ಅವರಂಥ ಖಡಕ್ ಅಧಿಕಾರಿಯ ಸೇವೆ ಎಲ್ಲಾ ಕ್ಷೇತ್ರಗಳಿಗೂ ಎಲ್ಲಾ ಕಡೆಗಳಿಗೂ ಅವಶ್ಯಕತೆ ಇದೆ. ಇವರು ಅಧಿಕಾರ ವಹಿಸಿಕೊಂಡ ಕಡೆಯೆಲ್ಲಾ ಇದೇ ರೀತಿ ಬದಲಾವಣೆ ತರಲಿ ಎಂಬುದೇ ನಮ್ಮ ಆಶಯ.

Advertisement
Share this on...