ಎಲ್ಲಿ ನೋಡಿದರಲ್ಲಿ ಶಿವಲಿಂಗ; ಶಾಲ್ಮಲೆಯ ಮಡಿಲಲ್ಲಿ ಸಹಸ್ರಲಿಂಗ

in ಕನ್ನಡ ಮಾಹಿತಿ 285 views

ಉತ್ತರ ಕನ್ನಡ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ ಮಾತ್ರವಲ್ಲ, ಅಗಾಧವಾದ ವನ್ಯಸಂಪತ್ತಿನ ಜೊತೆಗೆ ಹಲವು ಪ್ರವಾಸಿ ತಾಣಗಳನ್ನು, ಅದ್ಭುತವಾದ ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಹೇಳುವ, ವಿಶಿಷ್ಠ ಧಾರ್ಮಿಕ ಸ್ಥಳಗಳನ್ನು ಕೂಡ ತನ್ನೊಡಲಲ್ಲಿ ಅಡಗಿಸಿಟ್ಟಿದೆ. ಅಂತಹ ಕುತೂಹಲಕಾರಿ ಹಾಗೂ ವಿಷೇಷವಾದ ಕ್ಷೇತ್ರಗಳಲ್ಲೊಂದು ಸಹಸ್ರಲಿಂಗ. ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಯಲ್ಲಾಪುರ ತಾಲೂಕುಗಳ ನಡುವೆ ಸಿಗುವ ಈ ಸ್ಥಳದಲ್ಲಿ ಒಂದೇ ಕಡೆ ಸಹಸ್ರ ಶಿವಲಿಂಗಗಳು ಕಾಣಸಿಗುತ್ತವೆ.

Advertisement

ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ ೦.5 ಕಿ.ಮೀ ದೂರದಲ್ಲಿದೆ ಈ ಸಹಸ್ರಲಿಂಗ ಕ್ಷೇತ್ರ. ನಿಜಕ್ಕೂ ಈ ಕ್ಷೇತ್ರ ಅಚ್ಚರಿಯ ಜೊತೆಗೆ ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಎಲ್ಲಿ ನೋಡಿದರಲ್ಲಿ ಶಿವಲಿಂಗಗಳನ್ನು ಕಾಣಬಹುದು. ಶಾಲ್ಮಲಾ ನದಿಯ ಜುಳು ಜುಳು ನಿನಾದ, ಹಕ್ಕಿಗಳ ಕಲರವ, ತಣ್ಣನೆಯ ಗಾಳಿ ಸುತ್ತಲೂ ಪ್ರಕೃತಿಯ ಸೊಬಗು… ನದಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರ, ಕಾಲು ಇಟ್ಟ ಕಡೆಯಲ್ಲೆಲ್ಲಾ ಸಾವಿರ ಸಾವಿರ ಶಿವಲಿಂಗಗಳು, ನಂದಿ ವಿಗ್ರಹಗಳು… ನಿಜಕ್ಕೂ ಈ ಸ್ಥಳದಲ್ಲಿ ಭಕ್ತಿಪರವಶರಾಗದವರೇ ಇಲ್ಲ. ಎಲ್ಲಾ ಶಿವಮಯವು ಜಗದೊಳು ಎಲ್ಲಾ ಶಿವಮಯವು ಎಂಬ ಮಾತು ಹೌದೆನಿಸುತ್ತದೆ.

Advertisement

Advertisement

ಈ ಶಾಲ್ಮಲಾ ನದಿಯ ಹರಿವಿನಲ್ಲಿ ಸಹಸ್ರಾರು ಲಿಂಗಳು ಉದ್ಭವಿಸಲು ಒಂದು ರೋಚಕ ಕಥೆಯಿದೆ. ಸಹಸ್ರಲಿಂಗ ಕ್ಷೇತ್ರದಿಂದ ಸಮೀಪವಿರುವ ಸೋದೆ ಗೆ ಸಂಬಂಧಿಸಿದ ಕಥೆಯದು. ಸೋಧೆ ರಾಜ ಹಲಸಪ್ಪ ನಾಯಕನಿಗೆ ಸಂತಾನವಿರಲಿಲ್ಲವಂತೆ. ಆಗ ರಾಜ ಜ್ಯೋತಿಷಿಗಳ ಬಳಿ ಕೇಳಿದಾಗ, ಶಾಲ್ಮಾಲಾ ನದಿಯಲ್ಲಿರುವ ಕಲ್ಲು ಬಂಡೆಗಳ ಮೇಲೆ ಸಹಸ್ರಾರು ಶಿವಲಿಂಗಗಳನ್ನು ಕೆತ್ತಿಸಿ ಪೂಜಿಸಿದರೆ ಮಕ್ಕಳಾಗುತ್ತವೆ ಎಂದು ಹೇಳಿದರಂತೆ. ಅದರಂತೆ ಮಹಾರಾಜ ಶಾಲ್ಮಲಾ ನದಿಯ ಬಂಡೆಗಳ ಮೇಲೆ ಸಾವಿರಾರು ಶಿವಲಿಂಗ ಹಾಗೂ ನಂದಿಗಳನ್ನು ಕೆತ್ತಿಸಿ ಪೂಜಿಸಿದರಂತೆ. ಹಾಗಾಗಿ ರಾಜ ಹಲಸಪ್ಪ ನಾಯಕನಿಗೆ ಸಂತಾನ ಭಾಗ್ಯವಾಯಿತು ಎಂದು ಹೇಳಲಾಗುತ್ತದೆ.

Advertisement

ಈ ಶಿವಲಿಂಗಗಳಲ್ಲಿ ಕೆಲವು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದೂ ಹೇಳುತ್ತಾರೆ. ಹಾಗೆ ನೋಡಿದರೆ ಈ ನದಿಯಲ್ಲಿನ ಹಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತವೆ. ನದಿ ಸದಾಕಾಲ ಹರಿಯುತ್ತಿರುವುದರಿಂದ ಕಲ್ಲುಗಳಲ್ಲಿ ಲಿಂಗಗಳು ಉದ್ಭವಿಸಿರಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಅದೇನೇ ಇರಲಿ. ಸಹಸ್ರಲಿಂಗ ಸ್ಥಳ ನಿಜಕ್ಕೂ ಒಂದು ಅದ್ಭುತವಾದ ತರ್ಕಕ್ಕೆ ನಿಲುಕದ ಸ್ಥಳವಾಗಿದೆ. ಶಿರಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ.ದಾರಿಯುದ್ದಕ್ಕೂ ಪಕ್ಷಿಗಳ ಕಲರವ, ಮತ್ತೆ ಮತ್ತೆ ಸವಿಯಬೇಕೆನ್ನುವ ಕಾಡು ಹಣ್ಣುಗಳು, ಸುವಾಸಿತ ಹೂವುಗಳು ಜನರನ್ನು ಸೆಳೆಯುತ್ತದೆ.

ಸಹಸ್ರಲಿಂಗ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಕೇವಲ 15 ಕಿ.ಮೀ ದೂರದಲ್ಲಿದ್ದರೆ, ಹುಬ್ಬಳ್ಳಿಯಿಂದ 108 ಕಿ.ಮೀ ದೂರದಲ್ಲಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಿಂದ 411 ಕಿ.ಮೀ ದೂರದಲ್ಲಿದೆ. ಸಹಸ್ರಲಿಂಗ ಪ್ರಕೃತಿಯ ವಿಸ್ಮಯಕಾರಿ ಜಾಗಗಳಲ್ಲಿ ಒಂದಾಗಿದ್ದು, ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ.

Advertisement
Share this on...