ಶಾಲೆಗಳ ಆರಂಭಕ್ಕೆ ಪೋಷಕರ ವಿರೋಧ; ಮುಂಜಾಗೃತಾ ಕ್ರಮಕೈಗೊಂಡು ಶಾಲೆ ಪುನರಾರಂಭಿಸಬಹುದು ಎಂದ ಮಕ್ಕಳ ಹಕ್ಕುಗಳ ಆಯೋಗ

in ಕನ್ನಡ ಮಾಹಿತಿ 113 views

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಕೊರೊನಾದಂತಹ ಈ ಸಂಕಷ್ಟದ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದೆ. ಇನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ತೆರೆಯಬಹುದು ಎಂದು ಹೇಳಿದೆ. ಕೇಂದ್ರದ ಹೇಳಿಕೆ, ಮಕ್ಕಳ ಹಕ್ಕುಗಳ ಆಯೋಗದ ಸಲಹೆ, ಪೋಷಕರ ವಿರೋಧ, ಜನಪ್ರತಿನಿಧಿಗಳ ಒಂದೊಂದು ರೀತಿಯ ಹೇಳಿಕೆಗಳಿಂದಾಗಿ ರಾಜ್ಯ ಸರ್ಕಾರ, ಶಾಲೆಗಳನ್ನು ತೆರೆಯಬೇಕೋ ಬೇಡವೋ ಎಂಬ ಬಗ್ಗೆ ಸಮರ್ಪಕ ನಿರ್ಧಾರ ಕೈಗೊಳ್ಳಲಾಗದೇ ಇಕ್ಕಟ್ಟಿಗೆ ಸಿಲುಕಿದೆ.

Advertisement

Advertisement

ಈ ನಡುವೆ ರಾಜ್ಯ ಸರ್ಕಾರ ಅಕ್ಟೋಬರ್ 15ರ ಬಳಿಕ ಶಾಲೆ ಆರಂಭಿಸಲು ಮುಂದಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಧ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಶಾಲೆ ತೆರೆಯಲು ಪೋಷಕರ ಒಪ್ಪಿಗೆಬೇಕು. ಅಲ್ಲದೇ ತಜ್ಞರ ವರದಿ ಕೇಳಿದ್ದೇವೆ. ಈ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಹಾಗಾಗಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಕ್ಟೋಬರ್ 15ರ ಬಳಿಕ ಶಾಲೆ ಆರಂಭವಾಗುವ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Advertisement

ಆದರೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳುವುದೇ ಬೇರೆ. ಲಭ್ಯವಿರುವ ಸಂಶೋಧನೆಯ ಪ್ರಕಾರ ಶಾಲೆಗಳನ್ನು ತೆರೆಯುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಪೋಷಕರೊಂದಿಗೆ ಹಾಗೂ ಎಸ್.ಡಿ.ಎಮ್.ಸಿ ಮತ್ತು ಗ್ರಾಮ ಪಂಚಾಯತ್‌ಗಳ ಜೊತೆ ಸಭೆ ನಡೆಸಿ, ಎಲ್ಲಾ ಶಾಲೆಗಳ ಕೊಠಡಿಗಳ ಹಾಗೂ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಶಿಫಾರಸು ಮಾಡಿದೆ. ಬೇರೆ ಕಾಯಿಲೆ ಇತಿಹಾಸ ಇರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಿದೆ. ಅಲ್ಲದೇ ಶಾಲೆ ತೆರೆಯಲು ಹಲವು ಅಂಶಗಳನ್ನು ಪಾಲಿಸಬೇಕು ಎಂದು ಸೂಚಿಸಿದೆ.

Advertisement

* ಶಾಲೆಯಲ್ಲಿರುವ ಶೌಚಾಲಯಗಳನ್ನು ಸ್ವಚ್ಛವಾಗಿಡಬೇಕು
* ನೀರಿನ ತೊಟ್ಟಿ ಮತ್ತು ವಾಷ್ ಬೇಸಿನ್ ಗ್‌ಗಳನ್ನು ಕ್ಲೋರಿನ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು.
* ಕೈ ತೊಳೆಯಲು ಅಗತ್ಯ ಸಾಬೂನು ಮತ್ತು ನೀರಿನ ಸೌಲಭ್ಯವಿರಬೇಕು.
* ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ವಿತರಣೆ ಮಾಡಬೇಕು.
* ದೈಹಿಕ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಿಕ್ಷಕರು ಮಕ್ಕಳಿಗೆ ಜಾಗೃತಿ ಮೂಡಿಸಬೇಕು
* ಶಾಲಾ ಆವರಣಗಳನ್ನು ಸೋಂಕು ನಿವಾರಣೆಗೊಳಿಸಬೇಕು.

* ಮಕ್ಕಳಿಗೆ ಶುಚಿತ್ವದಿಂದ ಕೂಡಿದ ಬೆಳಗಿನ ಬಿಸಿ ಹಾಲು ಮತ್ತು ಮಧ್ಯಾಹ್ನದ ಪೌಷ್ಟಿಕಯುಕ್ತ ಬಿಸಿಯೂಟ ಒದಗಿಸಬೇಕು.
* ಉಚಿತ ಕೋವಿಡ್ ಎಚ್ಚರಿಕೆ ಸಾಧನಗಳನ್ನು ಪೂರೈಕೆ ಮಾಡಬೇಕು.
* ಆಹಾರದ ಜೊತೆ ಮಕ್ಕಳಿಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು.
* ಎಲ್ಲಾ ಮಕ್ಕಳಿಗೆ ಆರೋಗ್ಯ ಪರೀಕ್ಷೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು.
* ರಾಜ್ಯಾದ್ಯಂತ ಶಿಕ್ಷಕರು ಹಾಗೂ ಮಕ್ಕಳಿಗೆ ಕೊವಿಡ್ ಮಾದರಿ ಪರೀಕ್ಷೆ ನಡೆಸಬೇಕು.
* ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆಯಾಗಬೇಕು.

ಇನ್ನು ಶಿಕ್ಷಕರಿಗೂ ಹಲವು ಸೂಚನೆಗಳನ್ನು ನೀಡಿದ್ದು – ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು.
* ಮಾಹಿತಿಯ ಪುಸ್ತಕವನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
* ಶಿಕ್ಷಕರು ಬೋಧನೆ ಮಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.

ಹಾಗಾದರೆ ಕೊರೊನಾದಂತಹ ಈ ಕಠಿಣ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಪುನರಾಂಭಿಸುತ್ತದೆಯೇ ಕಾದು ನೋಡಬೇಕು.

Advertisement
Share this on...