ನಿಶಾ ರವಿಕೃಷ್ಣನ್ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು ಹೌದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ದಲ್ಲಿ ನಾಯಕಿ ಅಮೂಲ್ಯ ಆಲಿಯಾಸ್ ರೌಡಿಬೇಬಿಯಾಗಿ ಸೀರಿಯಲ್ ವೀಕ್ಷಕರ ಅದರಲ್ಲೂ ಗಂಡ್ ಹೈಕ್ಕಳ ಮನ ಗೆದ್ದ ಚೆಂದುಳ್ಳಿ ಚೆಲುವೆ ನಿಶಾ ರವಿಕೃಷ್ಣನ್ ಅವರ ಅಭಿನಯಕ್ಕೆ ಮನಸೋಲದವರಿಲ್ಲ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಿಶಾ ಇದೀಗ ಹಿರಿತೆರೆಗೆ ಕಾಲಿಡಲಿದ್ದಾರೆ. ಕೀರ್ತಿ ನಿರ್ದೇಶನದ ಅದೊಂದಿತ್ತು ಕಾಲ ಸಿನಿಮಾದಲ್ಲಿ ನಾಯಕಿಯಾಗಿ ಮೋಡಿ ಮಾಡಲಿದ್ದಾರೆ ನಿಶಾ. ವಿನಯ್ ರಾಜ್ ಕುಮಾರ್ ಅಭಿನಯದ ಅದೊಂದಿತ್ತು ಕಾಲ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಲಿರುವ ವಿಚಾರ ಈಗಾಗಲೇ ಸಿನಿಪ್ರಿಯರಿಗೆ ತಿಳಿದಿತ್ತು. ಇದೀಗ ಮತ್ತೋರ್ವ ನಾಯಕಿಯಾಗಿ ರೌಡಿಬೇಬಿಯ ಎಂಟ್ರಿಯಾಗಿದೆ.”ಇದೇ ಮೊದಲ ಬಾರಿಗೆ ನಾಯಕಿಯಾಗಿ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವಿನಯ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಹಿರಿತೆರೆಗೆ ಕಾಲಿಟ್ಟಿರುವುದು ನನಗೆ ಅತ್ಯಂತ ಖುಷಿ ತಂದಿದೆ. ಈ ಸಿನಿಮಾ ಮೂರು ಕಾಲಘಟ್ಟದಲ್ಲಿ ನಡೆಯಲಿದ್ದು ಒಂದೇ ಸಿನಿಮಾದಲ್ಲಿ ನಿರ್ದೇಶಕರು ಬಾಲ್ಯದ ತುಂಟತನದ ಜೊತೆಗೆ ಯೌವ್ವನದ ಜೀವನವನ್ನು ವೀಕ್ಷಕರ ಮುಂದೆ ತರಲಿದ್ದಾರೆ. ಇದರಲ್ಲಿ ನಾನು ಶಾಲಾ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎನ್ನುತ್ತಾರೆ ನಿಶಾ.
“ಇದು ತುಂಬಾ ವಿಭಿನ್ನವಾದ ಕಥೆಯಾದ ಕಾರಣ ನಾನು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ” ಎಂದು ನಗುನಗುತ್ತಾ ಹೇಳುವ ನಿಶಾ ರವಿಕೃಷ್ಣನ್ ರೌಡಿಬೇಬಿ ಎಂದೇ ಕಿರುತೆರೆಯಾದ್ಯಂತ ಫೇಮಸ್ಸು. ಚಿಂಟು ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ನಿಶಾ ಮುಂದೆ ನಟನೆಯತ್ತ ಆಸಕ್ತಿ ಮೂಡಿದ ಕಾರಣ ನಟನಾ ರಂಗಕ್ಕೆ ಕಾಲಿಡುವ ಯೋಚನೆ ಮಾಡಿದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ನಿಶಾ ರವಿಕೃಷ್ಣನ್ ಖಳನಾಯಕಿಯಾಗಿ ಸೈ ಎನಿಸಿಕೊಂಡರು.
ಮುಂದೆ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯಳಾಗಿ ಕಾಣಿಸಿಕೊಂಡ ನಿಶಾ ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದಾರೆ. ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಫೇವರೆಟ್ ಆ್ಯಕ್ಟರ್ ಇನ್ ಲೀಡ್ ರೋಲ್ ಫೀಮೇಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಮುದ್ದು ಮುಖದ ಚೆಲುವೆ ನಿಶಾ ರವಿಕೃಷ್ಣನ್ ಇಂದು ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ಅವರ ತಂದೆ ರವಿಕೃಷ್ಣನ್.
ಹೌದು, ಈಕೆಯ ತಂದೆ ರವಿಕೃಷ್ಣನ್ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದುವೇ ನಿಶಾಳ ನಟನಾ ಪಯಣಕ್ಕೆ ಪ್ರೇರಣೆ ಹೌದು! ಮಂಡ್ಯ ರಮೇಶ್ ಅವರ ತಂಡದಲ್ಲಿ ಒಬ್ಬರಾದ ರವಿಕೃಷ್ಣನ್ಒಂದಷ್ಟು ವೇದಿಕೆಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು. ಅಪ್ಪನ ನಟನೆಯಿಂದ ಪ್ರೇರಣೆ ಪಡೆದ ಮಗಳು ಇದೀಗ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ನಟಿಯಾಗಿ ಮೋಡಿ ಮಾಡುತ್ತಿದ್ದಾರೆ.
– ಅಹಲ್ಯಾ