“ಪರಸ್ಪರ ಅರಿವಿನ ಹಣತೆ ಯೊಂದಿಗೆ ಬೆಳಗುವುದು ವಿಶ್ವ ಕುಟುಂಬದ ಮಹಾಜ್ಯೋತಿ”

in ಕನ್ನಡ ಮಾಹಿತಿ 264 views

(ಮೇ 15 ವಿಶ್ವ ಕುಟುಂಬ ದಿನದ ಪ್ರಯುಕ್ತ ಈ ಲೇಖನ )

Advertisement

ಇಡೀ ವಿಶ್ವವೇ ಒಂದು ಕುಟುಂಬ ಎನ್ನುವುದು ಮನುಷ್ಯ ಧರ್ಮ ವಿಶ್ವದ ಜನರೆಲ್ಲ ಪರಸ್ಪರ ಭ್ರಾತೃತ್ವ ಭಾವನೆಯಿಂದ ನಾವೆಲ್ಲರೂ ಒಂದು ಎಂಬ ಏಕತೆಯ ಭಾವನೆಯೇ ವಿಶ್ವಕುಟುಂಬ ಕಲ್ಪನೆ. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆಗಳು ಸಹಾಯ ಸಹಕಾರ ವಿಶ್ವ ಪ್ರೇಮವೆಂಬ ಮಾನವೀಯ ಮೌಲ್ಯಗಳು ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲಿ ಮೂಡಬೇಕು ಅಂದಾಗ “ವಿಶ್ವ ಭ್ರಾತೃತ್ವ “ಎಲ್ಲರಲ್ಲಿ ಒಡಮೂಡಲು ಸಾಧ್ಯ.ಮಾನವ ಸಂಘ ಜೀವಿ ಸಮಾಜದ ಒಂದು ಅಂಗ ಕುಟುಂಬ,ಹಲವಾರು ಕುಟುಂಬಗಳ ಸಮ್ಮಿಲನವೇ ಒಂದು ಸಮಾಜ . ಪ್ರತಿ ಮನುಷ್ಯನ ಉಸಿರು “ಸಮಾಜ” ಸಮಾಜವನ್ನು ಬಿಟ್ಟು ಮನುಷ್ಯ ಬದುಕಲು ಸಾಧ್ಯವಿಲ್ಲ.ಹಾಗೆಯೇ ಸಮಾಜದಲ್ಲಿ ತನ್ನದೇ ಆದ ಒಂದು ಸ್ಥಾನಮಾನವನ್ನು ಪಡೆಯಲು ಕೌಟುಂಬಿಕ ಹಿನ್ನೆಲೆ ಪ್ರತಿಯೊಬ್ಬ ವ್ಯಕ್ತಿಗೆ ಅನಿವಾರ್ಯ. “ಯಾವುದೇ ಜಾತಿ ಮತ ಧರ್ಮದ ಭೇದ ಭಾವವನ್ನು ಮಾಡದೆ ಇಡೀ ವಿಶ್ವದ ಜನರೆಲ್ಲ ಒಂದೇ ಕುಟುಂಬದ ಸದಸ್ಯರು ಎಂಬುದು ವಿಶಾಲ ದೃಷ್ಟಿಕೋನ” , ಹಾಗೆಯೇ ಸಂಕುಚಿತ ಅರ್ಥದಲ್ಲಿ ನೋಡುವುದಾದರೆ ” ರಕ್ತ ಸಂಬಂಧಿಗಳಿಂದ ಒಡಗೂಡಿದ ಅವಿನಾಭಾವ ಸಂಬಂಧ ಹೊಂದಿರುವ ಒಂದು ವ್ಯವಸ್ಥೆಯೇ ಕುಟುಂಬ” ಕುಟುಂಬ ನಿರ್ವಹಣೆಯ ಮುಖ್ಯ ರೂವಾರಿ ಕುಟುಂಬದ ಯಜಮಾನ, ಅಂದರೆ ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಮಕ್ಕಳು ಮೊಮ್ಮಕ್ಕಳು ಅಜ್ಜಿ ತಾತ ಹೀಗೆ ಮುಂತಾದ ಸಂಬಂಧಗಳ ಒಟ್ಟು ಕೂಡುವಿಕೆ ಯನ್ನು ಕುಟುಂಬದಲ್ಲಿ ಕಾಣುತ್ತೇವೆ.
ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ವಾತ್ಸಲ್ಯ ಕರುಣೆ ಅನುಕಂಪ ಸಹಾಯ ಸಹಕಾರ ಏಕತೆಯ ಭಾವನೆ ಹೀಗೆ ಇವೆಲ್ಲವೂ ಅವಶ್ಯವಾಗಿ ಬೇಕು ಅಂದಾಗ ಒಂದು ಕುಟುಂಬ ಸಂತೋಷವಾದ ಕ್ಷಣಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯ.

Advertisement

 

Advertisement

 

Advertisement

“ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬಂತೆ ಒಂದು ಮಗುವಿಗೆ ಉತ್ತಮ ಸಂಸ್ಕಾರವನ್ನು ನಡವಳಿಕೆಯನ್ನು ತಿಳಿಸಿಕೊಡುವಲ್ಲಿ ಕುಟುಂಬದಲ್ಲಿ ತಾಯಿಯ ಪಾತ್ರ ಅಪಾರ, ಒಂದು ಕುಟುಂಬದ ಕಣ್ಗಾವಲಾಗಿ ಆ ಕುಟುಂಬದ ಎಲ್ಲ ಸದಸ್ಯರ ಬೇಕು ಬೇಡಿಕೆಗಳನ್ನು ದಣಿವರಿಯದೆ ಸಮಚಿತ್ತದಿಂದ ನಿಭಾಯಿಸುವ ಜೀವ ಅದು ಮಾತೃ ಹೃದಯ. ಹಾಗಾಗಿಯೇ ನಮ್ಮ ಜನನಿಯೆ ನಮಗೆ ಮೊದಲ ಗುರು. “ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ “ಎಂಬಂತೆ ಬಾಲ್ಯದಲ್ಲಿ ನಮಗೆ ಮೊದಲು ಪರಿಚಯವಾಗುವ ಮುಖಗಳೇ ಕುಟುಂಬದ ಸದಸ್ಯರು,ಶಾಲಾ ಜೀವನಕ್ಕಿಂತ ಪೂರ್ವದಲ್ಲಿ ನಮಗೆ ನಡೆ ನುಡಿಗಳನ್ನು ಸಂಸ್ಕಾರವನ್ನು ಕಲಿಸುವ ಕೇಂದ್ರಬಿಂದುವೇ ಕುಟುಂಬ , ತಾಯಿ, ಮನೆಯ ಸದಸ್ಯರು. ಅನಾದಿ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬ ಪದ್ಧತಿಗೆ ಬಹಳಷ್ಟು ಹಿರಿಮೆ ಗರಿಮೆಗಳಿವೆ, ಅದರಲ್ಲೂ ಅವಿಭಕ್ತ ಕುಟುಂಬಗಳ ಪಾತ್ರ ಮುಖ್ಯವಾದುದು. ಆದರೆ ಇಂದು ಇಡೀ ಜಗತ್ತು ಜಾಗತೀಕರಣ ನಗರೀಕರಣ ಆಧುನೀಕರಣ ಹೀಗೆ ಹಲವಾರು ಪರಿಕಲ್ಪನೆಗಳಿಗೆ ಒಳಗಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇಂದು ಮನುಷ್ಯ ಕಾಲಕ್ಕಿಂತಲೂ ತಾನೇ ಮುಂದು ಎನ್ನುವ ರೀತಿಯಲ್ಲಿ ಓಡುವ ಅವಸರದಲ್ಲಿ ಇದ್ದಾನೆ, ಸಹನೆ ತಾಳ್ಮೆ ಪ್ರೀತಿ ಮಮತೆ ಸ್ವಾರ್ಥ ಅಹಂಭಾವ ಸಂಬಂಧಗಳ ಮರೀಚಿಕೆ ಹೆಚ್ಚಾಗುತ್ತಲೇ ಸಾಗಿದೆ, ಅವಿಭಕ್ತ ಕುಟುಂಬದ ಸೊಬಗನ್ನು ಪ್ರೀತಿ ವಿಶ್ವಾಸವನ್ನು ಇಂದಿನ ಯುವ ಪೀಳಿಗೆ ಕಾಣುತ್ತಿಲ್ಲ ಕಾರಣ ಉದ್ಯೋಗವನ್ನು ಅರಸಿ ನಗರಕ್ಕೆ ಹೋಗುವವರ ಪ್ರಮಾಣ ಒಂದು ಕಡೆಯಾದರೆ ಮತ್ತೊಂದು ಕಡೆ ತಾಳ್ಮೆ ಸಹಕಾರ ಪ್ರೀತಿ ವಿಶ್ವಾಸ ಕಳೆದುಕೊಂಡು ದೂರ ದೂರ ಇರುವ ಮನಸ್ಥಿತಿಗಳು ಹೆಚ್ಚಾಗಿರುವುದರಿಂದ ಇಂದು ಅವಿಭಕ್ತ ಕುಟುಂಬಗಳು ಛಿದ್ರವಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ.ಆಧುನೀಕರಣ ಹಾಗೂ ಪಾಶ್ಚಾತ್ಯೀಕರಣದ ಪ್ರಭಾವದಿಂದ ಎಷ್ಟೋ ಕೌಟುಂಬಿಕ ಸಂಸ್ಕಾರಗಳು ಇಂದು ಮರೆಮಾಚಿ ಹೋಗಿವೆ.

“ಒಗ್ಗಟ್ಟಿನಲ್ಲಿ ಬಲವಿದೆ” ವೆಂಬಂತೆ ಅವಿಭಕ್ತ ಕುಟುಂಬದಲ್ಲಿ ಬಲವಿದೆ ಶಕ್ತಿಯಿದೆ ಎಂಬ ಸತ್ಯವನ್ನು ಇಂದು ಯಾರೂ ಅರಿಯುತ್ತಿಲ್ಲ,ಬದಲಾವಣೆ ಬೆಳವಣಿಗೆ ತಾಂತ್ರಿಕತೆ ಅಭಿವೃದ್ಧಿ ಪ್ರಗತಿಪರತೆ ಎನ್ನುವ ನೆಪದಲ್ಲಿ ಮೂಲ ಸಂಸ್ಕೃತಿಯೇ ಮರೆ ಮಾಚುತ್ತಿದೆ. ಸಾಧಕ ಬಾಧಕಗಳನ್ನು ಅವಿಭಕ್ತ ಹಾಗೂ ವಿಭಕ್ತ ಎರಡೂ ಕುಟುಂಬದಲ್ಲಿ ಕಾಣಬಹುದು, ಪರಸ್ಪರ ಸಾಮರಸ್ಯ ಇಲ್ಲದಿರುವಿಕೆ, ಪ್ರೀತಿ ವಿಶ್ವಾಸದ ಕೊರತೆ, ತಾರತಮ್ಯ ಮನೋಭಾವನೆ ಹೀಗೆ ಈ ತರದ ಭಾವನೆಗಳು ಇದ್ದಾಗ ಅವಿಭಕ್ತ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಹಾಗೆಯೇ ಕುಟುಂಬದಲ್ಲಿ ಹಿರಿಯರ ಬುದ್ಧಿ ಮಾತುಗಳು ದೊಡ್ಡವರ ಪ್ರೀತಿ ವಾತ್ಸಲ್ಯ ಆರೈಕೆ ಮಮತೆ ಈ ಥರದ ಭಾವನೆಗಳು ಇಲ್ಲದಾಗ ವಿಭಕ್ತ ಕುಟುಂಬಗಳು ಜೀವನದ ಸಾರವನ್ನು ಅರಿಯಲು ಸಾಧ್ಯವಿಲ್ಲ .ಹೀಗೆ ಯಾವ ಕುಟುಂಬ ವ್ಯವಸ್ಥೆ ಇರಲಿ ಅದರಲ್ಲಿ ಹೊಂದಾಣಿಕೆ ಅವಶ್ಯ. ಸಾಮರಸ್ಯ ಪರಸ್ಪರ ತಿಳಿವಳಿಕೆ ಕುಟುಂಬದ ಪ್ರತಿ ಸದಸ್ಯರಲ್ಲಿ ಬೇಕು ಅಂದಾಗ ಕುಟುಂಬ ನಂದನವನವಾಗುತ್ತದೆ.

 

ಪ್ರತಿ ವರ್ಷ “ಮೇ15 ರಂದು ಅಂತಾರಾಷ್ಟ್ರೀಯ ಕುಟುಂಬ ದಿನ “ಎಂದು ಆಚರಿಸಲಾಗುತ್ತಿದೆ ಉದ್ದೇಶವಿಷ್ಟೇ “ಮಾನವ ಜೀವನ ಅತ್ಯಮೂಲ್ಯವಾದುದು” ಬದುಕಿದಷ್ಟು ದಿವಸ ಸಾರ್ಥಕವಾದ ರೀತಿಯಲ್ಲಿ ಬದುಕಬೇಕು, ಮನುಷ್ಯ ಭೂಮಿಗೆ ಬರುವಾಗಲೂ ಏನನ್ನು ತರಲಿಲ್ಲ ಹಾಗೆಯೇ ಇಲ್ಲಿಂದ ಆಯುಷ್ಯ ಮುಗಿಸಿ ಹೋಗುವಾಗಲೂ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಇದ್ದಷ್ಟು ದಿವಸ ಪ್ರೀತಿ ವಿಶ್ವಾಸದಿಂದ ಬದುಕಬೇಕು, ಸುಮ್ಮನೆ “ಹುಟ್ಟಿದ್ದೇನೆ, ಬದುಕಿದ್ದೇನೆ ,ಮುಂದೊಂದು ದಿನ ಸಾಯುತ್ತೇನೆ” ಎಂದು ಬಾಳುವುದಕ್ಕಿಂತ ಏನಾದರೂ ವಿಶೇಷವಾದಂಥ ಕೊಡುಗೆಯನ್ನು ಸಮಾಜಕ್ಕೆ ಕೊಟ್ಟು ಹೋಗುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆ ವ್ಯಕ್ತಿತ್ವ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕುವುದೇ ಕುಟುಂಬ ವ್ಯವಸ್ಥೆ. ಕುಟುಂಬದಲ್ಲಿ ಆಚಾರ ವಿಚಾರಗಳು ಉತ್ತಮವಾಗಿದ್ದಾಗ ಒಂದು ಮಗುವಿನಲ್ಲಿಯೂ ಉತ್ತಮ ಸಂಸ್ಕಾರಗಳು ಬೆಳೆದು ಬರಲು ಪೂರಕವಾಗಿರುತ್ತವೆ.ಈ ತರಹದ ಎಲ್ಲ ಕೌಟುಂಬಿಕ ಮೌಲ್ಯಗಳನ್ನು ಜಾಗೃತಗೊಳಿಸುವ ಉದ್ದೇಶದಿಂದ ಪ್ರತಿ ವರ್ಷ ಕುಟುಂಬ ದಿನವನ್ನು ಆಚರಿಸಲಾಗುತ್ತಿದೆ.ಕುಟುಂಬ ಒಂದು ಜವಾಬ್ದಾರಿಯುತವಾದ ಸಾಮಾಜಿಕ ಅಂಗವಾಗಿದೆ.ಸಾಮಾಜಿಕ ಮೌಲ್ಯಯುತ ಬದಲಾವಣೆಯನ್ನು ಕಾಣಬೇಕಾದರೆ ಕುಟುಂಬದಲ್ಲಿ ಮೌಲ್ಯಗಳ ಅಳವಡಿಕೆ ಅವಶ್ಯ.

 


ನಾವೆಲ್ಲರೂ ಒಂದು ಎನ್ನುವ ವಿಶ್ವ ಭ್ರಾತೃತ್ವ ಭಾವನೆ, ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಮನೋಭಾವನೆಗಳು,ನಾ ಹೆಚ್ಚು ನೀ ಹೆಚ್ಚು ಎನ್ನುವ ಅಹಮಿಕೆಯ ಪಾತ್ರವನ್ನು ದೂರ ಮಾಡುವುದು,ಗುರು ಹಿರಿಯರಿಗೆ ಗೌರವ, ವೃದ್ಧಾಪ್ಯದಲ್ಲಿ ತಂದೆ ತಾಯಿಗಳ, ಹಿರಿಯರ ಆರೈಕೆ, ಜೀವನದಲ್ಲಿ ಯಾವುದೂ ಶಾಶ್ವತವಲ್ಲವೆಂಬ ವಾಸ್ತವತೆ ಹೀಗೆ ಮುಂತಾದ ವಾಸ್ತವಿಕತೆಯ ಮೌಲ್ಯಗಳನ್ನು ಪ್ರತಿಯೊಬ್ಬ ಮನುಷ್ಯ ಅರಿಯುತ್ತಾ ಹಾಗೂ ತನ್ನ ಜೀವನದಲ್ಲಿ ಅವುಗಳನ್ನು ಪಾಲಿಸುತ್ತ ಸಾಗಿದಾಗ “ವಿಶ್ವ ಕುಟುಂಬ ದಿನ”ಕ್ಕೆ ನಿಜವಾದ ಅರ್ಥ ದೊರೆಯುತ್ತದೆ.ಜಾಗತಿಕವಾಗಿ ವಿಶ್ವಪ್ರೇಮ ಹಾಗೂ ವಿಶ್ವ ಭ್ರಾತೃತ್ವ ವೆಂಬ ಭಾವನೆಗಳು ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಮೂಡಬೇಕು, ಏಕತೆಯ ಮನೋಭಾವನೆಯಿಂದ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಪರಸ್ಪರ ಸಹಕಾರ ಸಹಬಾಳ್ವೆ, ಜಾಗತಿಕ ಸಂಕಷ್ಟಗಳು ಬಂದಾಗ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರಕ್ಕೆ ಮಾನವೀಯತೆಯಿಂದ ಅವಶ್ಯಕ ಸಹಾಯವನ್ನು ಮಾಡುವಂತಿರಬೇಕು.ಪ್ರತಿ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಗತಿಪರ ವಿಚಾರಗಳಲ್ಲಿ ಎಲ್ಲ ರಾಷ್ಟ್ರಗಳು ಕೈ ಜೋಡಿಸು ವಂತಿರಬೇಕು,”ವಸುದೈವ ಕುಟುಂಬಕಂ” ಎನ್ನುವಂತೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ವಿಶಾಲ ದೃಷ್ಟಿಕೋನ ಪ್ರತಿಯೊಬ್ಬರಲ್ಲಿ ಒಡಮೂಡಬೇಕು.

 


ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ ಜಿಲ್ಲೆ: ಗದಗ.

Advertisement
Share this on...