55 ರ ಪಯಣ: ಭ್ರಮೆಯೆಂಬ ವಾಸ್ತವ

in ಕನ್ನಡ ಮಾಹಿತಿ 46 views

ಭಾವನಾ ಲೋಕದ ಸಮೃದ್ಧ ಸುಖ ವಾಸ್ತವದಲಿ
ಇದ್ದರೆ ಬದುಕೆಲ್ಲ ಪುಳಕ.
‘ಅಯ್ಯೋ 55 (12-4-2020) ಮುಗಿಯಿತಾ?’ ಎಂಬ ಪ್ರಶ್ನೆ ಮಧ್ಯೆ ಮುಗಿದೇ ಹೋಯಿತು.

Advertisement

ಎಲ್ಲರಂತೆ ಹುಟ್ಟುತ್ತೇವೆ, ಕಥೆ ಮುಗಿದಾಗ ಹೋಗುತ್ತೇವೆ. ಆದರೆ ಇದ್ದಾಗ ದಕ್ಕುವ ಅನುಭವ ಮತ್ತು ಒದ್ದಾಟ ಇದೆಯಲ್ಲ, ಅದನ್ನು ನಾವು ಯಾವತ್ತೂ ವಾಸ್ತವದ ನೆಲೆಯಲ್ಲಿ ನೋಡುವುದಿಲ್ಲ. ಅದೇ ಭ್ರಮೆಯಲ್ಲಿ ಬದುಕಿನ ಬ್ಯೂಟಿ ಅಡಗಿದೆ.

Advertisement

ವಾಸ್ತವ+ಭಾವಲೋಕ ಎಂಬ ವಿಂಗಡನೆಯಲ್ಲಿ ಭಾವಲೋಕ ಕೊಟ್ಟಷ್ಟು ಖುಷಿ,ಉನ್ಮಾದ ಖುಷಿ ವಾಸ್ತವದಲ್ಲಿ ಸಿಗಲ್ಲ.
ಅದಕ್ಕೆ ಮನುಷ್ಯ ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿ ದುಃಖವನ್ನು ಖುಷಿಯಿಂದ ಅನುಭವಿಸುತ್ತಾನೆ.
ಅಂತಹ ತಪ್ಪಿನಿಂದಾಗಿ ನಾವು ಈ ಭೂಮಿ ಮೇಲೆ ಬಂದದ್ದು.

Advertisement

 

Advertisement

 

ಹಿತಕರವಲ್ಲದ ಪ್ರಸವ ವೇದನೆಯಂತೆ ಹಿತಕಾರಿ ಈ ಬದುಕು. ಹೆಣ್ಣು-ಹೊನ್ನು-ಮಣ್ಣು ಇದರ ಸುತ್ತಲೂ ಗಿರಕಿ ಹೊಡೆಯುತ್ತ ಆಯುಷ್ಯ ಮುಗಿಸಿ ಬಿಡುವ ಕಾರಣದಿಂದ ನಾವು ಬುದ್ಧ,ಅಲ್ಲಮ,ಅಕ್ಕ ಆಗದೇ ಹೋಗಿ ಬಿಡುತ್ತೇವೆ. ನಾವು ಇವರ ಹಾಗೆ ಸಂತರಾಗಿ ಇತಿಹಾಸ ನಿರ್ಮಿಸದಿದ್ದರೂ ನಾವು ಮಾಡುವ ತಪ್ಪುಗಳ ಪರಿಣಾಮ ಗೊತ್ತಿದ್ದೂ ಕಾನ್ಷಿಯಸ್ ಆಗಿ ಮಾಡಿದಾಗ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ.

ಆದರೆ ಅನಗತ್ಯ ವಿಪರೀತ ನಿರೀಕ್ಷೆಗಳಿಂದ ದುಃಖ ಅನುಭವಿಸುತ್ತೇವೆ. ವ್ಯಕ್ತಿಗಳನ್ನು ಅರ್ಥ ಮಾಡಿಕೊಂಡು ಅವರೇನು? ಹೇಗೆ? ಎಂದು ನಿರ್ಧರಿಸದೇ ನಿರೀಕ್ಷೆ ಮಾಡುತ್ತಲೇ ಕಾಲಹರಣ ಮಾಡುತ್ತೇವೆ. ಬೇಡವಾದ,ಅನಗತ್ಯ ಸಂಬಂಧಗಳಿಗೆ ಫುಲ್ ಸ್ಟಾಪ್ ಹಾಕಲು ವಿಪರೀತ ಸಮಯ ಹಾಳಾಗುತ್ತದೆ. ಈ ಹೊತ್ತಿಗೆ ಹತ್ತಿರವಾಗುವಾಗ ನಾ ಗಾಢವಾಗಿ ಆರಾಧಿಸಿ ನಂಬಿದ ಕೆಲವರ ಮುಖವಾಡ ಕಳಚಿ ಬಿದ್ದಾಗ ಬೆರಗಾಯಿತು. ಏಕಲವ್ಯನ ಇತಿಹಾಸ ಗೊತ್ತಿದ್ದರೂ ನಾವೂ ಏಕಲವ್ಯರಾಗುತ್ತೇವೆ.

 

 

ಯಾರೋ ಉಗುಳುವ ಎಂಜಲನ್ನು ಅಭಿಪ್ರಾಯ ಎಂಬ ಭ್ರಮೆ ಇಟ್ಟುಕೊಂಡು ನಮ್ಮತನ ಕಳೆದುಕೊಂಡು ಬಿಡುತ್ತೇವೆ. ಮುಂದೆ ಅರ್ಥವಾದ ಸತ್ಯವೆಂದರೆ ನಮಗೆ ಖುಷಿಯಾದದ್ದನ್ನು ನಾವು ಮಾಡುತ್ತಲೇ ಹೋಗಬೇಕು; ಕೇವಲ ನಮ್ಮ ಖುಷಿಗಾಗಿ ಮಾತ್ರ.

ಸಮಾಜ,ಜನ,ಹಿತೈಷಿಗಳು ನಮಗಾಗಿ ಪ್ರತಿಕ್ರಿಯೆ ನೀಡಲು ಕಾಯುತ್ತಾರೆ ಎಂಬ ನಿರೀಕ್ಷೆಯೇ ಭ್ರಮೆ. ಅವರವರು ತಮ್ಮ ಪಾಡಿಗೆ ತಾವು ತಮ್ಮದೇ ಆದ ಸ್ವಾರ್ಥ ಜಗತ್ತನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ.  ಸ್ವಾರ್ಥ ಈಡೇರಿಸುವ ಭರಾಟೆಯಲ್ಲಿ ಕೊಂಚ ಬಿಡುವಾದರೆ, ನಮ್ಮ ಕಡೆ ತಿರುಗಿ ಉಗುಳಿ ಹೋಗುತ್ತಾರೆ. ಆ ಉಗುಳನ್ನೇ ಮಹಾಪ್ರಸಾದ ಎಂಬಂತೆ ಕಾಯುತ್ತ ಕುಳಿತರೆ ಕಾಲ ಓಡಿ ಹೋಗಿರುತ್ತದೆ. ತುಂಬ ತುಂಬಾ ಗಂಭೀರವಾಗಿ ಬದುಕನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ. ನಮ್ಮ ಹಿರಿಯರು, ಸಾಧಕರು ಬದುಕಿನ ಸಾರವನ್ನು ಹೇಳಿ ಹೋಗಿದ್ದಾರೆ.
ನಾವು ಮಾಡುವ ಕೆಲಸಗಳು ಇತಿಹಾಸ ನಿರ್ಮಿಸುತ್ತವೆ ಎಂಬುದು ಅವಾಸ್ತವ‌.

 

 

ಇತಿಹಾಸ ಸೃಷ್ಟಿಸಿದ ಮಹನೀಯರು ಇತಿಹಾಸ ಸೃಷ್ಟಿಸುವ ಭ್ರಮೆ ಇಟ್ಟುಕೊಳ್ಳದೇ ಸಾಧಿಸಿ ಹೋದರು. ಉಳಿಯುವುದು ಉಳಿದೇ ಉಳಿಯುತ್ತದೆ, ಹೋಗುವವರು ಹೋಗಿಯೇ ಹೋಗುತ್ತಾರೆ ಎಂದು ಗೊತ್ತಿದ್ದೂ ಕೆಲಸ ಮಾಡಬೇಕು; ಅದೂ ಅಪ್ಪಟ ನಮ್ಮ ಖುಷಿಗಾಗಿ. ನಮಗೆ ಖುಷಿ ಕೊಡುವ ಸಂಗತಿಗಳು ಇತರರಿಗೆ ವಿಕಾರವಾಗಿ ಕಂಡರೆ ನಾವು ಹೊಣೆಯಲ್ಲ.ಬೇಕಾದಾಗ ಒಳ ಹೋಗಿ ಆಳವಾಗಿ ಅನುಭವಿಸಿ, ಹೊರ ಬಂದಾಗ ಅಷ್ಟೇ ನಿರಾಳವಾಗಿ ಬದುಕಿದ ಅಲ್ಲಮ ನನಗೆ ರೋಚಕವೆನಿಸುತ್ತಾನೆ. ನನಗೆ ಖುಷಿ ಕೊಡುವ ಮಾಯೆಯನ್ನು ನಾನೇ ಸೃಷ್ಟಿ ಮಾಡಿಕೊಂಡು ದೌರ್ಬಲ್ಯವೆನಿಸದೇ ಶಕ್ತಿಯಾಗಿ ಸ್ವೀಕರಿಸಿದ್ದೇನೆ.  ಆ ಮಾಯೆಯನ್ನು ವಾಸ್ತವದ ಹೆಸರಿನಲ್ಲಿ ಕಳೆದುಕೊಳ್ಳಲು ನಾ ಸಂತನಲ್ಲ ಕೇವಲ ಮನುಷ್ಯ.

 

 

ಬುದ್ಧನ ಮೌನ, ಅಲ್ಲಮನ ಜ್ಞಾನ, ಓಶೋನ ಧ್ಯಾನ ಅಂತೂ ಕೊಂಚ ಅರ್ಥವಾಗಿದೆ ಅದೇ ನನ್ನ ಪುಣ್ಯ.  ಬರಹಗಾರ ಎಂಬ ಹಿರಿಮೆಯೂ ಇಲ್ಲ,ಗರಿಮೆಯೂ ಇಲ್ಲ ಹಾಗಂತ ಇತರರ ಕಟು,ಕಿಮುಟು ವಿಮರ್ಶೆಗೆ ಹೆದರಿ ಬರೆಯುವುದ ಬಿಡುವುದಿಲ್ಲ. ‘ಆನು ಒಲಿದಂತೆ ಹಾಡುವೆ’ ಎಂಬ ಅಕ್ಕ ನನಗೆ ಮಾದರಿ. ನಿಷ್ಠುರ ಸತ್ಯ ಹೇಳುತ್ತ, ನಿರೀಕ್ಷೆ ಇಟ್ಟುಕೊಳ್ಳದೆ ಪ್ರೀತಿಸುವ ನಿಸ್ವಾರ್ಥ ಜೀವಗಳ ನೇರ,ಮುಕ್ತ ವಿಮರ್ಶೆಯೇ ನನಗೆ ಪ್ರಾಣ ಜೀವಾಳ. ನಾನು ನಂಬಿದ ಇನ್ನರ್ ಸರ್ಕಲ್ ಈಗ ತುಂಬ, ತುಂಬಾ ಚಿಕ್ಕದು. ಸ್ವಾರ್ಥದಾಚೆಗೆ ಜೊತೆಗಿರುವ ಮನಸುಗಳ ಶಕ್ತಿ, ಸಾಮರ್ಥ್ಯ ಅರ್ಥವಾಗಿದೆ.  ಆ ಕೆಲವೇ ಕೆಲವು ಜೀವಗಳು ಸದಾ ಕಾಲ ಜೊತೆಗಿರಲಿ ಎಂಬ ಗಾಢ ಸ್ವಾರ್ಥ! ಆ ಸ್ವಾರ್ಥವೇ ನನ್ನ ಇತಿ ಮಿತಿ, ಕಿರಿಕಿರಿ

 

 

ನಮ್ಮ ಭಾವನೆಗಳ ಸಾಕ್ಷಿಪ್ರಜ್ಞೆಯಾಗಿದ್ದ ಪೂಜ್ಯ ತೋಂಟದಾರ್ಯ ಅಜ್ಜಾ ಅವರು ಇರಬೇಕಿತ್ತು. ಸಹನಶೀಲ ಅಪ್ಪನದೂ ಹೋಗುವ ವಯಸ್ಸಲ್ಲ ಅನಿಸುತ್ತದೆ. ಉಳಿದ ಕಾಟಾಚಾರದ ಮನಸುಗಳ ಸ್ಕ್ಯಾನ್ ರಿಪೋರ್ಟ್ ಲಭ್ಯವಿದೆ. ಅವರಿರುವದೇ ಹೀಗೆ ಅಂದ ಮೇಲೆ ಬೇಸರ ಯಾಕೆ? ಬಾಯಿ ಚಪಲಕೆ ಮಾತು, ಒಂದಿಷ್ಟು ಕೃತಕ ನಗು ಇರದಿದ್ದರೆ ಹೇಗೆ? ಸಮಾಜ ಜೀವಿಯಾದ ಮನುಷ್ಯ ಈ ಕೃತಕತೆಯನ್ನು ಅಷ್ಟೇ ಕೃತಕವಾಗಿ ಜೀರ್ಣಿಸಿಕೊಳ್ಳಬೇಕು.

 

 

ಇತರರು ಏನಾದರೂ ಉಪಯೋಗಕ್ಕೆ ಬರಬಹುದೆಂಬ ಭರವಸೆ ಬೇಡ. ಅದೂ ನೋಡಿಯಾಗಿದೆಯಲ್ಲ!  ಪೂರ್ವಾಗ್ರಹ ಪೀಡಿತ ನಂಜಿನ ಮಾತುಗಳನ್ನು ಸಿಹಿಯಂತೆ ನುಂಗಿದ್ದು ಯಾಕೋ ಅತಿಯಾಯ್ತು.  ಇನ್ನೂ ನಂಬುವ ಮುಠ್ಠಾಳತನ ಸಾಕಪ್ಪ ಸಾಕು. ಮೂರು ದಶಕಗಳ ವೃತ್ತಿ ಬದುಕಿನಲ್ಲಿ ಖುಷಿ ಕೊಟ್ಟವರು ಮುಗ್ಧ ವಿದ್ಯಾರ್ಥಿಗಳು ಆದರೆ ವ್ಯವಸ್ಥೆ ತುಂಬ ಬರೀ ನಿರ್ಲಜ್ಯತನ, ಅವಮಾನ, ಆತ್ಮ ವಂಚನೆ. ಕೃತಕ ಜೀವನೋಪಾಯದ ರಣ ಹೇಡಿತನ. ನಯವಂಚಕರ ಜೊತೆಗಿನ ಹುಸಿ ಪಯಣ. ನಾಚಿಕೆ, ಮಾನ ಮರ್ಯಾದೆ ಬಿಟ್ಟ ಹೇಡಿತನ. ಬಿಡಲಾಗದ,ಹಿಡಿಯಲಾಗದ ಅವಿವೇಕ. ಪ್ರೇಮ-ಧ್ಯಾನ-ಬರಹ ವೃತ್ತಿಯಾದರೆ ಬದುಕು ಇನ್ನೂ ಸುಂದರ. ಜೊತೆಗೆ‌ ಪ್ರೇಮಿಸಿ,ಪ್ರೇಮಿಸಲ್ಪಟ್ಟರೆ ಮಹದಾನಂದ. ವಾಸ್ತವವನ್ನು ಧೈರ್ಯದಿಂದ ಸ್ವೀಕರಿಸಿ, ಸಿಕ್ಕಷ್ಟು ಖುಷಿ ಅನುಭವಿಸಿ ಹೋಗುವಾಗ ಸಮಾಧಾನದಿಂದ ಹೋದರೆ ಸಾಕು. ತಲೆಮಾರಿನ ತಲ್ಲಣಗಳ ಜನರೇಷನ್ ಗ್ಯಾಪ್ ರೋಗ ಅಂಟಿಸಿಕೊಳ್ಳದೇ ಸ್ವೀಕರಿಸಬೇಕು.

 

 

ಏಕಾಂತದ ಧ್ಯಾನ, ಓದು-ಬರಹ‌ ಹೆಚ್ಚುತ್ತ ಹೋಗಬೇಕು.
ಸುಖ,ದುಃಖ,ಸೋಲು,ಅವಮಾನ, ಆತಂಕಗಳಿಗೆ ನಾನೇ ಹೊಣೆ. ನೀವಲ್ಲ… ನೀನೂ ಅಲ್ಲ… ದೇವ!

#ಸಿದ್ದುಯಾಪಲಪರವಿಕಾರಟಗಿ.

Advertisement
Share this on...