ಲವ್ಲಿ ಸ್ಟಾರ್ ಜೊತೆಗೆ ನಟಿಸಿರುವ ಈ ಚೆಲುವೆಯ ಬಣ್ಣದ ಪಯಣ ಶುರುವಾಗಿದ್ದು ಕಿರುತೆರೆಯಿಂದ!

in ಮನರಂಜನೆ/ಸಿನಿಮಾ 1,745 views

ಬಣ್ಣದ ಲೋಕದ ಸೆಳೆತ ಎಷ್ಟರ ಮಟ್ಟಿಗೆ ಇದೆ ಎಂದರೆ ಒಮ್ಮೆ ಓ ಲೋಕಕ್ಕೆ ಕಾಲಿಟ್ಟವರು ಮತ್ತೆ ಹಿಂತಿರುಗಿ ಹೋಗುವ ಆಲೋಚನೆಯೇ ಮಾಡುವುದಿಲ್ಲ. ಎಲ್ಲದಕ್ಕಿಂತಲೂ ಮುಖ್ಯವಾಗಿ ಕಿರುತೆರೆಯ ಮೂಲಕ ಬಣ್ಣದ ಪಯಣ ಶುರು ಮಾಡಿರುವವರು ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ನಟಿಸುತ್ತಾರೆ. ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಅದು ತೀರಾ ಮಾಮೂಲಿ ಸಂಗತಿ. ಕಿರುತೆರೆಯ ಮೂಲಕ ನಟನಾ ರಂಗಕ್ಕೆ ಪರಿಚಿತರಾದ ರಾಧಿಕಾ ಪಂಡಿತ್, ರಚಿತಾ ರಾಮ್, ಅದಿತಿ ಪ್ರಭುದೇವ ಈಗಾಗಲೇ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸುಪ್ರೀತಾ ಸತ್ಯನಾರಾಯಣ, ತೇಜಸ್ವಿನಿ ಶೇಖರ್, ಮೋಕ್ಷಿತಾ ಪೈ, ಮೇಘಾ ಶೆಟ್ಟಿ ಹಿರಿತೆರೆಯತ್ತ ಈಗಾಗಲೇ ಮುಖ ಮಾಡಿದ್ದಾಗಿದೆ. ಇದೀಗ ಆ ಸಾಲಿಗೆ ಹೊಸದಾಗಿ ಸೇರಿದ ಚೆಂದುಳ್ಳಿ ಚೆಲುವೆಯ ಹೆಸರು ಬೃಂದಾ ಆಚಾರ್ಯ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಈ ಸುರಸುಂದರಿ ಇದೀಗ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ‌. ಲವ್ಲಿ ಸ್ಟಾರ್ ಎಂದೇ ಚಂದನವನದಲ್ಲಿ ಜನಪ್ರಿಯರಾಗಿರುವ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬೃಂದಾ ಆಚಾರ್ಯ.

Advertisement

Advertisement

ಚಿಕ್ಕ ವಯಸ್ಸಿನಿಂದಲೂ ಬಣ್ಣದ ಲೋಕದತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಈ ಚೆಲುವೆ ನಟಿಯಾಗಬೇಕು ಎಂಬ ಕನಸು ಕಂಡಿದ್ದರು. ಇಂಜಿನಿಯರಿಂಗ್ ಪದವಿ ಪಡದಿರುವ ಬೃಂದಾ ಆಚಾರ್ಯ ಪ್ರತಿಷ್ಠಿತ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.‌ ಬಣ್ಣದ ಲೋಕದ ಸೆಳೆತ ಅದ್ಯಾವಾಗ ಜಾಸ್ತಿಯಾಯಿತೋ ಆಗ ಕೆಲಸಕ್ಕೆ ಬಾಯ್ ಹೇಳಿ ನಟನೆಗೆ ಹಾಯ್ ಹೇಳಿದರು.

Advertisement

ಆಶ್ಚರ್ಯ ಎಂಬಂತೆ ಆ ಸಮಯದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಪೌರಾಣಿಕ ಧಾರಾವಾಹಿ ಮಹಾಕಾಳಿಗೆ ಆಡಿಶನ್ ನಡೆಯುತ್ತಿತ್ತು. ವಿಚಾರ ತಿಳಿದ ಕೂಡಲೇ ತಡ ಮಾಡದೇ ಆಡಿಶನ್ ಗೆ ಹೋಗಿಯೇ ಬಿಟ್ಟರು ಬೃಂದಾ.‌ ಕಾಕತಾಳೀಯವೆಂದರೆ ಅದೃಷ್ಟ ದೇವತೆ ಅಸ್ತು ಎಂದಾಗಿತ್ತು. ಯಾಕೆಂದರೆ ಆಕೆ ಆಯ್ಕೆ ಆಗಿದ್ದರು. ಮಹಾಕಾಳಿಯ ರತಿಯಾಗಿ ನಟನಾ ಪಯಣ ಶುರುವಾಯಿತು.

Advertisement

ಮಹಾಕಾಳಿ ಧಾರಾವಾಹಿಯ ನಂತರ ಮುಂದೇನು ಎಂದು ಯೋಚಿಸುತ್ತಿದ್ದಾಗ ಮಗದೊಂದು ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತು. ಅದು ಕೂಡಾ ಪೌರಾಣಿಕ ಧಾರಾವಾಹಿಯಲ್ಲಿ! ಮಹಾಕಾಳಿಯ ರತಿಯ ಅಭಿನಯ ಕಂಡ ನಿರ್ದೇಶಕ ರಾಘವೇಂದ್ರ ಹೆಗ್ಡೆ ಪೌರಾಣಿಕ ಧಾರಾವಾಹಿ ಶನಿಯಲ್ಲಿ ಮುಖ್ಯ ಪಾತ್ರಕ್ಕೆ ಜೀವ ತುಂಬುವ ಅವಕಾಶ ನೀಡಿದರು. ಶನಿಯ ಪತ್ನಿ ದಾಮಿನಿಯಾಗಿ ನಟಿಸಿ ಸೀರಿಯಲ್ ಪ್ರಿಯರ ಮನ ಸೆಳೆದ ಈಕೆ ಮತ್ತೆ ಮುಖ ಮಾಡಿದ್ದು ಹಿರಿತೆರೆಯತ್ತ.

ಪ್ರೇಮಂ ಪೂಜ್ಯಂ ಚಿತ್ರಕ್ಕೆ ನಾಯಕಿಯ ಪಾತ್ರಕ್ಕೆ ಆಡಿಶನ್ ನಡೆಯುತ್ತಿದೆ ಎಂದು ತಿಳಿದಾಗ ಏನಾದರಾಗಲಿ ಎಂದು ಫೋಟೋ ಕಳುಹಿಸಿಕೊಟ್ಟರು. ಅಲ್ಲೂ ಆಕೆ ಆಯ್ಕೆ ಆದರು. ಅಂತಿಮವಾಗಿ ನಾನು ಪೌರಾಣಿಕ ಪಾತ್ರಗಳಿಂದ ಹೊರಬಂದಿದ್ದೇನೆ. ” ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟಿರುವುದು ಖುಷಿ ತಂದಿದೆ. ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ ತೆರೆ ಹಂಚಿಕೊಳ್ಳುವ ಸುವರ್ಣಾವಕಾಶ ದೊರಕಿದೆ. ಮಹಾಕಾಳಿ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದೆ. ‌ಆ ಸಣ್ಣ ಪಾತ್ರದಿಂದಾಗಿ ಶನಿ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಶನಿ ಧಾರವಾಹಿಯಲ್ಲಿ ದಾಮಿನಿ ಆಗಿ ನಟಿಸಿದೆ. ಅಲ್ಲಿಂದ ಮತ್ತೆ ಅದೃಷ್ಟವೇ ಬದಲಾಯಿತು.‌ ಕೊನೆಗೂ ಪೌರಾಣಿಕ ಪಾತ್ರದಿಂದ ಹೊರಬಂದೆ ” ಎಂದು ಹೇಳುತ್ತಾರೆ ಬೃಂದಾ ಆಚಾರ್ಯ.
– ಅಹಲ್ಯಾ

Advertisement