ಯಾರಿಗೂ ಕೇಡು ಬಯಸದ, ದುರಭ್ಯಾಸ ಯಾವುದೂ ಇಲ್ಲದ ಸುಧೀರ್ ಕಂಡಿದ್ದು ದುರಂತ ಅಂತ್ಯ !

in Uncategorized/ಮನರಂಜನೆ/ಸಿನಿಮಾ 129 views

ಒಂದು ಸಿನಿಮಾ ಹಿಟ್ ಆಗಬೇಕಾದರೆ ಚಿತ್ರದ ನಾಯಕ ಎಷ್ಟು ಮುಖ್ಯವಾಗಿರುತ್ತಾರೋ, ಖಳನಾಯಕರು ಕೂಡ ಅಷ್ಟೇ ಮುಖ್ಯವಾಗಿರುತ್ತಾರೆ. ಒಂದು ಕಾಲದಲ್ಲಿ ವಿಲನ್ ಪಾತ್ರಕ್ಕೆ ಜೀವ ತುಂಬಿ ತಮ್ಮ ಕೆಂಗಣ್ಣು, ಕೆಡಕು ಬುದ್ದಿ, ಕೇಡಿತನದ ಪಾತ್ರಗಳಿಂದ ಹೆಸರುವಾಸಿಯಾದವರು ವಜ್ರುಮುನಿ, ಸುಧೀರ್, ಸುಂದರ್ ಕ್ರಿಷ್ಣ ಅರಸ್, ತೂಗದೀಪ ಶ್ರೀನಿವಾಸ್ , ಟೈಗರ್‌ ಪ್ರಭಾಕರ್, ಧಿರೇಂದ್ರ ಗೋಪಲ್ ಹೀಗೆ ಇನ್ನು ಸಾಕಷ್ಟು ಜನರು ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ನಾಯಕನಿಗೆ ಕಿರುಕುಳ ಹಾಗೂ ತೊಂದರೆ ಕೊಡುತ್ತಿದ್ದರೆ, ಸಿನಿಮಾವನ್ನು ನೋಡುವ ವೀಕ್ಷಕರಿಗೆ ರಕ್ತ ಎಪ್ಪುಕಟ್ಟುತ್ತಿತ್ತು. ಅಷ್ಟರ ಮಟ್ಟಿಗೆ ತಮ್ಮ ಪಾತ್ರಕ್ಕೆ ಈ ಖಳನಾಯಕರು ಜೀವ ತುಂಬುತ್ತಿದ್ದರು. ಎಷ್ಟು ಬಾರಿ ಇವರು ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಜನರು ಕೇಡಿ ಬಂದ ಎಂದು ಶಾಪ ಹಾಕಿದ್ದು ಉಂಟು. ಇದೇ ಅಲ್ಲವೇ ಪರಕಾಯ ಪ್ರವೇಶದ ನಟನೆ ಎಂದರೆ..?ಅದೆಷ್ಟೋ ಖಳನಾಯಕರು ಸಿನಿಮಾರಂಗದ ದಂತಕಥೆಯಂತೆ ಬೆರೆತು ಹೋಗಿದ್ದಾರೆ. ಇಂತಹ ಪ್ರಸಿದ್ಧ ಖಳನಾಯಕ ನಟರಲ್ಲಿ ಸುಧೀರ್ ಅವರು ಕೂಡ ಒಬ್ಬರು. ಇನ್ನು ಸುಧೀರ್ ಅವರ ನೆನಪಿನ ಬುತ್ತಿಯನ್ನು ಹಂಚಿಕೊಂಡಿರುವ ಕನ್ನಡ ಚಿತ್ರರಂಗದ ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸುಧೀರ್ ಅವರ ಬಗ್ಗೆ ಪುಸ್ತಕವನ್ನು ಸಹ ಬರೆದಿದ್ದಾರೆ.

Advertisement

Advertisement

ತಮ್ಮ ಸಾಮಜಿಕಜಾಲತಾಣದ ವಾಲ್ ಮೇಲೆ ಬರೆದುಕೊಂಡಿರುವ ಅವರು ”ಧೂಳಿನಿಂದ ಸುಧೀರ್ ಬದುಕು ಧೂಳೀಪಟವಾದ ಕಥೆ. ಒಂದು ತೊಟ್ಟು ಸಾರಾಯಿ ಕುಡಿಯಲಿಲ್ಲ. ಸಿನಿಮಾದ ಪಾತ್ರಕ್ಕಾಗಿ ಬಿಟ್ಟರೆ ಒಂದೇ ಒಂದು ಸಿಗರೇಟು ಸೇದಿದವರಲ್ಲ. ಇಸ್ಪೀಟಾಟ ಗೊತ್ತೇ ಇಲ್ಲ. ಕುದುರೆ ಬಾಲ ಹಿಡಿದವರಲ್ಲ. ಗುಟ್ಕಾ, ಜರ್ದಾ ಅಂದರೇನೆಂದೇ ಗೊತ್ತಿಲ್ಲ. ಪರಸ್ತ್ರೀಯರ ಮೇಲೆ ಕಣ್ಣು ಹಾಕಿದವರಲ್ಲ…ಇಷ್ಟೆಲ್ಲಾ ಸದ್ಗುಣಗಳಿರುವ ಕನ್ನಡದ ‘ಉತ್ತಮ ವಿಲ್ಲನ್’ ಸುಧೀರ್ ಇವೆಲ್ಲವನ್ನೂ ಕ್ಯಾಮೆರಾ ಮುಂದೆ ಮಾತ್ರ ಸಲೀಸಾಗಿ ಮತ್ತು ಅಷ್ಟೇ ಸಹಜವಾಗಿ ಮಾಡುತ್ತಿದ್ದ ಅಪ್ಪಟ ಕಲಾವಿದ!

Advertisement

Advertisement

ಇಂಥಾ ಒಬ್ಬ ಸಜ್ಜನ ಕಲಾವಿದ ಇದ್ದಕ್ಕಿದ್ದಂತೆಯೇ ತೀರಿಕೊಂಡರು. ಹೆಂಡತಿ, ಮಕ್ಕಳು ಅನಾಥರಾದರು. ಕಂಡ ಕನಸು ನುಚ್ಚುನೂರಾಯಿತು. ಸುಧೀರ್ ತೀರಿಕೊಂಡಾಗ ಹಿರಿಯ ಮಗ ನಂದ ಕಿಶೋರ್ SSLC ಓದುತ್ತಿದ್ದ. ಕಿರಿಯ ಮಗ ತರುಣ್ ಒಂಭತ್ತನೇ ಕ್ಲಾಸು. ಹೆಂಡತಿ ಮಾಲತಿಗೆ ಕೇವಲ ನಲವತ್ತು! ಭವಿಷ್ಯ ಕತ್ತಲು ಕತ್ತಲು…ಇಷ್ಟಕ್ಕೂ ಸುಧೀರ್ ದಿಢೀರೆಂದು ಸಾವಿನ ಬಾಗಿಲು ತಟ್ಟಿದ್ದಾರಾದರೂ ಹೇಗೆ? ಅದೊಂದು ರೋಚಕ ಕಥೆ. ಸಂಕ್ಷಿಪ್ತವಾಗಿ ಹೇಳೋದಿದ್ರೆ : ಆ ದಿನ ಯಾವುದೋ ಸಿನಿಮಾದ ಚಿತ್ರೀಕರಣಕ್ಕೆಂದು ಕಂಠೀರವ ಸ್ಟುಡಿಯೋಕ್ಕೆ ಹೋಗಿದ್ದರು. ಹೀರೋ ಜತೆ ಬಡಿದಾಡುವ ಸನ್ನಿವೇಶದ ಚಿತ್ರೀಕರಣ. ಫ್ಲೋರ್ ತುಂಬಾ ಧೂಳೋ ಧೂಳು. ಎರಡು ದಿನಗಳ ಕಾಲ ಅಲ್ಲೇ ಶೂಟಿಂಗ್. ಬೆಳಗ್ಗಿನಿಂದ ಸಂಜೆ ತನಕ ಆ ಭಯಂಕರ ಧೂಳಿನಲ್ಲೇ ಚಿತ್ರೀಕರಣ. ಸುಧೀರ್’ಗೆ ಡಸ್ಟ್ ಅಲರ್ಜಿ ಇತ್ತು. ಸಾಮಾನ್ಯ ರಸ್ತೆಯಲ್ಲಿ ಓಡಾಡಿದರೂ ನೆಗಡಿಯಾಗಿ ಇಡೀ ವಾರ ಹಾಸಿಗೆ ಹಿಡಿದಿರುತ್ತಿದ್ದರು.

 

 

ಇಂಥಾ ಸುಧೀರ್ ಎರಡು ದಿನಗಳ ಕಾಲ ಸತತ ಧೂಳಿನಿಂದ ಕೂಡಿದ ಫ್ಲೋರ್’ನಲ್ಲಿ ಅಭಿನಯಿಸುವುದೆಂದರೆ ಅವರ ಆರೋಗ್ಯದ ಪರಿಸ್ಥಿತಿ ಹೇಗಾಗಿರಬೇಡ ನೀವೇ ಹೇಳಿ ? ಎರಡನೇ ದಿನದ ಸಂಜೆ ಹೊತ್ತಿಗೆ ಅವರ ಶ್ವಾಸಕೋಶದ ತುಂಬಾ ಧೂಳೋ ಧೂಳು! ಇನ್ಫೆಕ್ಷನ್ ಆಗಿ ಆಸ್ಪತ್ರೆ ಸೇರಿಕೊಂಡ ಸುಧೀರ್ ಮತ್ತೆ ಮನೆ ಸೇರಿಕೊಳ್ಳಲಿಲ್ಲ. ಹಲವು ಬಡ ಕಲಾವಿದರಿಗೆ ಅಕ್ಷರಶಃ ಉಸಿರು ನೀಡಿದ ಸುಧೀರ್ ಉಸಿರಾಟದ ತೀವ್ರ ತೊಂದರೆಯಿಂದಾಗಿ ಅಸ್ವಸ್ಥರಾದರು. ಬಾಳಸಂಗಾತಿ ಮಾಲತಿಯವರು ನೋಡನೋಡುತ್ತಿರುವಂತೆಯೇ ಸುಧೀರ್ ಕೊನೆಯುಸಿರೆಳೆದಿದ್ದರು.

ಇದು ಒಬ್ಬ ಕಲಾವಿದನ ಅಂತ್ಯವಾದರೆ, ಇವರನ್ನೇ ನಂಬಿಕೊಂಡಿದ್ದ ಕುಟುಂಬದ ನೋವಿನ ವ್ಯಥೆ ಆರಂಭ. ನಾಟಕ ಕಂಪೆನಿಯಿತ್ತು. ಇದರ ಜವಾಬ್ದಾರಿಯನ್ನು ಮಾಲತಿ ಮೇಡಂ ಹೊತ್ತುಕೊಂಡರು. ಮಕ್ಕಳು ಚಿಕ್ಕಪುಟ್ಟ ಸಹಾಯಕ್ಕಿದ್ದರು. ಊರಿಂದೂರಿಗೆ ಪಯಣ. ಸಾವಿರ ಅನುಭವಗಳು. ಹಿರಿಯ ಮಗ ನಂದ ವಿಪರೀತ ದಢೂತಿ ಆಸಾಮಿ! ಓಮ್ನಿ ಕಾರಿನಲ್ಲಿ ಡ್ರೈವ್ ಮಾಡಲು ಹೊರಟರೆ ಸ್ಟೇರಿಂಗ್’ಗೆ ಹೊಟ್ಟೆ ತಡೆಯುತ್ತಿತ್ತು.

ಈ ಕಾರಣಕ್ಕಾಗಿ ಸ್ಟೇರಿಂಗ್ ವ್ಯವಸ್ಥೆಯನ್ನೇ ಬದಲಿಸಿಕೊಳ್ಳಲಾಯಿತು! ಬದುಕು ಹೀಗೆಯೇ ಸಾಗುತ್ತಿರುವಂತೆಯೇ ದೂರದಲ್ಲೆಲ್ಲೋ ನಿರೀಕ್ಷೆಯ ನಕ್ಷತ್ರ ಮಿನುಗ ತೊಡಗಿತು! ಮಾಲತಿ ಮೇಡಂ ನಾಟಕ ಅಕಾಡೆಮಿ ಅಧ್ಯಕ್ಷೆಯಾದರು. ಮಕ್ಕಳು ಚಿತ್ರರಂಗದಲ್ಲೇ ತಳವೂರುವ ಲಕ್ಷಣ ಕಂಡು ಬಂತು. ಒಂದೊಂದೇ ಮೆಟ್ಟಿಲು ಏರುತ್ತಿರುವಂತೆಯೇ ಅದೃಷ್ಟವೂ ಕೈಹಿಡಿಯಿತು. ನಂದ ಕಿಶೋರ್ ನಿರ್ದೇಶಿಸಿದ ಚಿತ್ರಗಳೆಲ್ಲವೂ ಹಿಟ್ ಆದವು. ಜತೆಗೆ ತರುಣ್ ಕಿಶೋರ್. ಈ ಜೋಡಿ ಸೋದರರು ಈಗ ಏನೇನಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು…


ಒಂದು ಕಾಲದಲ್ಲಿ ಬಳಲಿ ಬಸವಳಿದ ಕುಟುಂಬ ಈಗ ತೃಪ್ತಿಯ ಬದುಕಿನ ಬೆಳಕನ್ನು ಕಾಣುತ್ತಿದೆ. ಇದೆಲ್ಲವೂ ನನ್ನ ಕಣ್ಣ ಮುಂದೆಯೇ ನಡೆದ ಪವಾಡ. ಯೋಗ್ಯತೆಯ ಜತೆಗೆ ಅವಿರತ ಶ್ರಮ, ಶ್ರದ್ಧೆ, ಶಿಸ್ತು ಮತ್ತೊಂದಿಷ್ಟು ಯೋಗ ಸೇರಿಕೊಂಡು ಸುಧೀರ್ ಕುಟುಂಬ ಸಾರ್ಥಕ ಬದುಕಿನ ಸವಿಯನ್ನುಣ್ಣುತ್ತಿದೆ. ಅವರಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ.. ಇಂಥಾ ಬದುಕಿನ ಸೂಕ್ಷ್ಮ ವಿಷಯಗಳೆಲ್ಲಾ ನಾನು ಬರೆದಿರುವ ‘ಶುಭಂ’ ಪುಸ್ತಕದಲ್ಲಿವೆ. ಒಟ್ಟು 900 ಪುಟಗಳ ಬೃಹತ್ ಗ್ರಂಥವಿದು! ಬರೋಬ್ಬರಿ 170 ಅಧ್ಯಾಯಗಳ ಭರಪೂರ ಓದಿನ ಮೃಷ್ಟಾನ್ನ ಭೋಜನ ನಿಮಗಾಗಿ ಕಾದಿದೆ! ‘ಕರೋನಾ ರಜಾ’ ಒಂದು ಹಂತಕ್ಕೆ ಬಂದಿರುವುದರಿಂದ ಕೊರಿಯರ್ ವ್ಯವಸ್ಥೆ ಶುರುವಾಗಿದೆ. ನೀವು ಬಯಸಿದರೆ ‘ಶುಭಂ’ ನಿಮ್ಮ ಮನೆ-ಮನ ಸೇರಲಿದೆ. ‘ಶುಭಂ’ ಪುಸ್ತಕ ಬೇಕಿದ್ದವರು ವಾಟ್ಸಾಪ್ ಮೂಲಕ ನನ್ನನ್ನು ಸಂಪರ್ಕಿಸ ಬಹುದು : 7899945653.. ಹೀಗೆಂದು ಖಳನಾಯಕ ಸವಿ ನೆನಪನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.

Advertisement
Share this on...